– ಡಿ.7ರವರೆಗೆ ಹಿಂಡಲಗಾ ಜೈಲೇ ಗತಿ
ಧಾರವಾಡ : ಮಾಜಿ ಸಚಿವ ವಿನಯ ಕುಲಕರ್ಣಿಗೆ ಇಂದು ಕೂಡ ರಿಲೀಫ್ ಸಿಕ್ಕಿಲ್ಲ. ಧಾರವಾಡ ಜಿಲ್ಲಾ ಪಂಚಾಯತಿ ಸದಸ್ಯ ಯೋಗೀಶ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ವಿನಯ ಕುಲಕರ್ಣಿಯ ವಿಚಾರಣೆ ನಡೆಸಿದ ಧಾರವಾಡದ ಮೂರನೇ ಹೆಚ್ಚುವರಿ ಸೆಷನ್ ನ್ಯಾಯಾಧೀಶರು ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತೆ 14 ದಿನಗಳಿಗೆ ವಿಸ್ತರಿಸಿದ್ದಾರೆ. ಇದರೊಂದಿಗೆ ವಿನಯ್ ಕುಲಕರ್ಣಿ ಡಿ. 7ವರೆಗೆ ನ್ಯಾಯಾಂಗ ಬಂಧನದಲ್ಲಿ ಇರಲಿದ್ದಾರೆ.
ಧಾರವಾಡದ ಜಿಲ್ಲಾ ಪಂಚಾಯತಿ ಸದಸ್ಯ ಯೋಗೀಶಗೌಡ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಬಂಧನವಾಗಿ ಇಂದಿಗೆ 18 ದಿನಗಳೇ ಕಳೆದಿವೆ. ಆರಂಭದಲ್ಲಿ ಮೂರು ದಿನಗಳ ಸಿಬಿಐ ಕಸ್ಟಡಿಗೆ ನೀಡಲಾಗಿತ್ತು, ಬಳಿಕ 14 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದ ವಿನಯ ಕುಲಕರ್ಣಿಗೆ ಇಂದು ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸಲಾಗಿದೆ.
ಧಾರವಾಡದ ಮೂರನೇ ಹೆಚ್ಚುವರಿ ಸೆಷನ್ ನ್ಯಾಯಾಲಯಕ್ಕೆ ಆಗಮಿಸಿದ ಸಿಬಿಐ ಅಧಿಕಾರಿಗಳ ತಂಡ ಕೋರ್ಟ್ ಗೆ ನ್ಯಾಯಾಂಗ ಅವಧಿಯನ್ನು ವಿಸ್ತರಿಸುವಂತೆ ಮನವಿ ಸಲ್ಲಿಸಿತು. ವಿನಯ ಕುಲಕರ್ಣಿ ಪ್ರಭಾವಿ ವ್ಯಕ್ತಿಯಾಗಿದ್ದು, ಅವರು ಹೊರಗೆ ಬಂದರೆ ವಿಚಾರಣೆ ಹಾಗೂ ತನಿಖೆಗೆ ತೊಂದರೆಯಾಗುತ್ತೆ ಎಂದ ಸಿಬಿಐ ಅಧಿಕಾರಿಗಳು, ಇನ್ನೂ 14 ದಿನಗಳ ಕಾಲ ವಿನಯ ಕುಲಕರ್ಣಿ ನ್ಯಾಯಾಂಗ ಬಂಧನ ಮುಂದುವರೆಸುವಂತೆ ನ್ಯಾಯಾಲಯವನ್ನು ಕೋರಿದರು ಎನ್ನಲಾಗಿದೆ.
ಇನ್ನು ವಿನಯ ಕುಲಕರ್ಣಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಇರೋದ್ರಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲು ನ್ಯಾಯಾಲಯ ತೀರ್ಮಾನಿಸಿ. ವಿಚಾರಣೆಯನ್ನು ಮಧ್ಯಾಹ್ನ 1:50 ಕ್ಕೆ ನಿಗದಿಪಡಿಸಿತು. ಈ ವೇಳೆ ಜೈಲಿನಿಂದಲೇ ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ವಿನಯ ಕುಲಕರ್ಣಿ ಹಾಜರಾದರು.
ವಿಚಾರಣೆ ನಡೆಸಿದ ನ್ಯಾಯಾಧೀಶರು ಸಿಬಿಐ ಅರ್ಜಿಯನ್ನು ಪುರಸ್ಕರಿಸಿ, ವಿನಯ ಕುಲಕರ್ಣಿ ಅವರಿಗೆ 14 ದಿನಗಳವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಿ, ಆದೇಶ ನೀಡಿದರು. ನ್ಯಾಯಾಲಯದ ಈ ಆದೇಶದಿಂದಾಗಿ ವಿನಯ ಕುಲಕರ್ಣಿ ಡಿ. 7ರವರೆಗೆ ಮತ್ತೆ ಹಿಂಡಲಗಾ ಜೈಲಿನಲ್ಲಿಯೇ ಇರಬೇಕಾಗಿದೆ.
ಈ ಮಧ್ಯೆ ವಿನಯ ಕುಲಕರ್ಣಿ ಪರ ವಕೀಲರು ನವೆಂಬರ್ 9 ಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ಸಿಬಿಐ ತಕರಾರು ಅರ್ಜಿ ಸಲ್ಲಿಸುವ ಮೊದಲೇ ನವೆಂಬರ್ 19 ರಂದು ಜಾಮೀನು ಅರ್ಜಿ ಮರಳಿ ಪಡೆದು, ಮತ್ತೊಮ್ಮೆ ಅರ್ಜಿ ಸಲ್ಲಿಸೋದಾಗಿ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ಇಂದು ಜಾಮೀನು ಅರ್ಜಿ ಸಲ್ಲಿಸೋ ಸಾಧ್ಯತೆ ಇತ್ತು. ಅಚ್ಚರಿಯ ಸಂಗತಿ ಅಂದರೆ ಇಂದು ಕೂಡ ಜಾಮೀನು ಅರ್ಜಿ ಸಲ್ಲಿಸಲೇ ಇಲ್ಲ. ಇನ್ನೂ ಎರಡು ದಿನ ಬಿಟ್ಟು ಜಾಮೀನು ಅರ್ಜಿ ಸಲ್ಲಿಸಲು ವಿನಯ ಕುಲಕರ್ಣಿ ಪರ ವಕೀಲರು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
ಈ ಮಧ್ಯೆ ಯೋಗೀಶ್ ಹತ್ಯೆಯಾದಾಗ ತನಿಖಾಧಿಕಾರಿಯಾಗಿದ್ದ ಚೆನ್ನಕೇಶವ ಟಿಂಗರಿಕರ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಧಾರವಾಡ ಹೈಕೋರ್ಟ್ ನವೆಂಬರ್ 30 ಕ್ಕೆ ಮುಂದೂಡಿದೆ. ಇಂದು ಟಿಂಗರಿಕರ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗೆ ಸಿಬಿಐ ಪರ ವಕೀಲರು ತಕರಾರು ಅರ್ಜಿ ಸಲ್ಲಿಸಿದರು.
ನವೆಂಬರ್ 5 ಕ್ಕೆ ವಿಚಾರಣೆಗೆ ಹಾಜರಾಗುವಂತೆ ಟಿಂಗರಿಕರ್ ಅವರಿಗೆ ಸಿಬಿಐ ನೋಟಿಸ್ ನೀಡಿತ್ತು. ಆದರೆ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಇದನ್ನು ಅರ್ಜಿಯಲ್ಲಿ ನಮೂದಿಸಿರೋ ಸಿಬಿಐ ಪರ ವಕೀಲರು, ತಕರಾರು ಅರ್ಜಿಯನ್ನು ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಕೋರ್ಟ್ ವಿಚಾರಣೆಯನ್ನು ನವೆಂಬರ್ 30 ಕ್ಕೆ ಮುಂದೂಡಿದೆ.