ಬೆಂಗಳೂರು ಜ 28 : ಸಿಂದಗಿ ಕ್ಷೇತ್ರದ ಶಾಸಕ ಎಂ.ಸಿ.ಮನಗೂಳಿ(85) ಅನಾರೋಗ್ಯದಿಂದ ನಿಧನರಾಗಿದ್ದಾರೆ. ಇವರ ನಿಧನಕ್ಕೆ ಮಾಜಿ ಪ್ರಧಾನಿ ದೇವೆಗೌಡ ಸೇರಿದಂತೆ ಅನೇಕರು ಕಂಬನಿ ಮಿಡಿದಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮನಗೂಳಿ ಉಸಿರಾಟದ ಸಮಸ್ಯೆಯಿಂದ ಜನವರಿ 9ರಂದು ಏರ್ ಲಿಪ್ಟ್ ಮುಖಾಂತರ ಕಲಬುರ್ಗಿಯ ಏರ್ಪೋರ್ಟ್ ನಿಂದ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ತಡರಾತ್ರಿ 1 ಗಂಟೆಗೆ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಿಂದಗಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಎಂ.ಸಿ.ಮನಗೂಳಿ ಐವರು ಮಕ್ಕಳನ್ನು ಅಗಲಿದ್ದಾರೆ. ಪಾರ್ಥಿವ ಶರೀರವನ್ನು ಆಂಬ್ಯುಲೆನ್ಸ್ ಮೂಲಕ ಸಿಂದಗಿಗೆ ರವಾನಿಸಲಾಗುತ್ತಿದೆ. ಎರಡು ಬಾರಿ ಸಚಿವರು ಹಾಗೂ ಎರಡು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ ಖ್ಯಾತಿ ಮನಗೂಳಿಯವರದ್ದಾಗಿದೆ.
1994 ರಲ್ಲಿ ಮೊಟ್ಟ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿ, ಮೊದಲ ಬಾರಿಗೆ ಸಚಿವರೂ ಆಗಿದ್ದರು ಎಂ ಸಿ ಮನಗೂಳಿ. ಅಂದು ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಜೆ ಎಚ್ ಪಟೇಲ್ ನೇತೃತ್ವದ ಸರ್ಕಾರದಲ್ಲಿ ಪಂಚಾಯತ್ ರಾಜ್ ಇಲಾಖೆಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಸುಮಾರು 12 ತಿಂಗಳುಗಳ ಕಾಲ ಪಂಚಾಯತ್ ರಾಜ್ ಇಲಾಖೆಯ ಸಚಿವರಾಗಿ ಎಂಸಿ ಮನಗೂಳಿ ಕಾರ್ಯನಿರ್ವಹಣೆಯ ಮಾಡಿದ್ದರು. 2018 ರಲ್ಲಿ ಎರಡನೆಯ ಬಾರಿಗೆ ಶಾಸಕರಾಗಿ ಎಂಸಿ ಮನಗೂಳಿ ಆಯ್ಕೆಯಾದರು. ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರದ ಕುಮಾರಸ್ವಾಮಿ ನೇತೃತ್ವದಲ್ಲಿ ಎರಡನೇ ಬಾರಿಗೆ ಸಚಿವರಾಗಿದ್ದರು. ತೋಟಗಾರಿಕಾ ಇಲಾಖೆ ಸಚಿವರಾಗಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. 14 ತಿಂಗಳುಗಳ ಕಾಲ ಸಚಿವರಾಗಿ ಸೇವೆ ಸಲ್ಲಿಸಿದ್ದರು.