ಕೊರೊನಾ ನಿಯಮ ಪಾಲಿಸಿ, ಇಲ್ಲದಿದ್ದರೆ ಚುನಾವಣಾ ಪ್ರಚಾರಕ್ಕೆ ತಡೆ: ಆಯೋಗ

ನವದೆಹಲಿ: ಕೋವಿಡ್‌ ಸಾಂಕ್ರಾಮಿಕ ರೋಗ ಹರಡುವಿಕೆಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ರಾಜಕಾರಣಿಗಳಿಗೆ ಸೋಂಕು ನಿವಾರಣೆಗಾಗಿ ಮುಂಜಾಗ್ರತ ಕ್ರಮಗಳನ್ನು ಅಳವಡಿಸಿಕೊಳ್ಳಲು ಚುನಾವಣಾ ಆಯೋಗ ಆದೇಶಿಸಿದೆ.

ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಕಾಪಾಡದೆ ರಾಜಕೀಯ ಪಕ್ಷದ ಹಲವು ಪ್ರಚಾರಕರು, ರಾಜಕಾರಣಿಗಳು ಚುನಾವಣಾ ರ‍್ಯಾಲಿಗಳಲ್ಲಿ ಪ್ರಚಾರ ಮಾಡುತ್ತಿರುವ ಬಗ್ಗೆ ಚುನಾವಣಾ ಆಯೋಗ ಆಕ್ಷೇಪ ವ್ಯಕ್ತಪಡಿಸಿತು.

ಇದನ್ನು ಓದಿ : ಪ.ಬಂ. 4ನೇ ಹಂತದ ಮತದಾನ: ಗುಂಡಿನ ಧಾಳಿಗೆ ನಾಲ್ವರು ಬಲಿ-ಮತದಾನ ಮುಂದೂಡಿಕೆ

ನಿನ್ನೆ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರಕ್ಕೆ ನೊಟೀಸ್ ನೀಡಿದ್ದ ದೆಹಲಿ ಹೈಕೋರ್ಟ್ ರಾಜಕೀಯ ರ‍್ಯಾಲಿಗಳಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಬಗ್ಗೆ ಪ್ರತಿಕ್ರಿಯೆ ಕೇಳಿತ್ತು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಮೇಲಿನಂತೆ ಆದೇಶಿಸಿದೆ.

ಪಶ್ಚಿಮ ಬಂಗಾಳದಲ್ಲಿ ನಾಲ್ಕನೇ ಹಂತದ ಮತದಾನ ಪ್ರಕ್ರಿಯೆ ಇಂದು ನಡೆಯುತ್ತಿದ್ದು, ನೆನ್ನೆ ಈ ಎಚ್ಚರಿಕೆ ಬಂದಿದೆ. ಆದರೆ ಈ ಹಿಂದೆ ನಡೆದ ಮೂರು ಹಂತದ ಚುನಾವಣೆ ಪ್ರಕ್ರಿಯೆಯಲ್ಲಿ ಮೂರು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಚುನಾವಣೆಗಳು ನಡೆದಾಗ ಈ ಎಚ್ಚರಿಕೆಯನ್ನು ಆಯೋಗ ನೀಡಿರಲಿಲ್ಲ.

ಕೋವಿಡ್ ನಿಯಮ ಉಲ್ಲಂಘಿಸಿದರೆ ಚುನಾವಣಾ ರ‍್ಯಾಲಿಗಳನ್ನು ನಿಷೇಧಿಸುವುದಕ್ಕೆ ಹಿಂದೇಟು ಹಾಕುವುದಿಲ್ಲ ಎಂದು ಸಹ ಎಚ್ಚರಿಕೆ ನೀಡಿರುವ ಚುನಾವಣಾ ಆಯೋಗ ಈ ಬಗ್ಗೆ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳ ನಾಯಕರುಗಳಿಗೆ ಪತ್ರ ಬರೆದಿದೆ.

ಇದನ್ನು ಓದಿ : ಕೊವೀಡ್ -19 ಎರಡನೇ ಅಲೆಗೆ ‘ಸರಕಾರದ ನಿದ್ದೆ’ ಕಾರಣವಾಯ್ತಾ?

ಇತ್ತೀಚಿನ ಕೆಲವು ದಿನಗಳಿಂದ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೆ ಚುನಾವಣಾ ರ‍್ಯಾಲಿಗಳು, ಪ್ರಚಾರಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯವಾಗಿ ಧರಿಸುವ ನಿಯಮವನ್ನು ಗಾಳಿಗೆ ತೂರಲಾಗುತ್ತಿದೆ, ಚುನಾವಣಾ ಆಯೋಗದ ನಿಯಮಗಳನ್ನು ಧಿಕ್ಕರಿಸಲಾಗುತ್ತಿದೆ. ಕೋವಿಡ್-19 ಶಿಷ್ಠಾಚಾರಗಳನ್ನು ಉಲ್ಲಂಘಿಸಲಾಗುತ್ತಿದೆ, ವೇದಿಕೆಗಳಲ್ಲಿ ಇರುವಾಗಲೂ ನಾಯಕರು ಮಾಸ್ಕ್ ಧರಿಸುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದೆ.

ಇನ್ನು ಮುಂದೆ ನಿಯಮ ಉಲ್ಲಂಘಿಸಿದರೆ ಸಾರ್ವಜನಿಕ ಸಭೆ, ರ‍್ಯಾಲಿಗಳನ್ನು ನಿಷೇಧಿಸುವುದಕ್ಕೆ ಹಿಂದೇಟು ಹಾಕುವುದಿಲ್ಲ, ಶಿಷ್ಠಾಚಾರ ಉಲ್ಲಂಘಿಸುವವರ ಮೇಲೆ ಹೆಚ್ಚಿನ ಉಲ್ಲೇಖಗಳಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಆಯೋಗ ಸ್ಪಷ್ಟಪಡಿಸಿದೆ.

Donate Janashakthi Media

Leave a Reply

Your email address will not be published. Required fields are marked *