-ಪ್ರೊ.ಪ್ರಭಾತ್ ಪಟ್ನಾಯಕ್
–ಅನು:ಕೆ ಎಂ ನಾಗರಾಜ್
ಮುಖ್ಯಧಾರೆಯ ಅರ್ಥಶಾಸ್ತ್ರವು, ಸಾಮ್ರಾಜ್ಯಶಾಹಿ ಎಂಬ ವಿದ್ಯಮಾನವನ್ನು ಉದ್ದೇಶಪೂರ್ವಕವಾಗಿ ನಿರಾಕರಿಸುತ್ತದೆ. ಮೂರನೇ ಜಗತ್ತಿನಲ್ಲಿ ಕಂಡುಬರುವ ಸಾಮೂಹಿಕ ಬಡತನವನ್ನು ಮುಂದುವರೆದ ದೇಶಗಳೊಂದಿಗಿನ ಅವುಗಳ ವ್ಯಾಪಾರದಿಂದ ಬೇರ್ಪಡಿಸಿ ಸಾಮ್ರಾಜ್ಯಶಾಹಿ ವಹಿಸಿದ ಪಾತ್ರ ವನ್ನು ಮುಚ್ಚಿಡುವ ಒಂದು ಕುಟಿಲ ಪ್ರಯತ್ನ ನಡೆಯುತ್ತ ಬಂದಿದೆ. ಮುಖ್ಯಧಾರೆಯ ಅರ್ಥಶಾಸ್ತ್ರದ ಸಂಪ್ರದಾಯದೊಳಗೆ ಅನೇಕ ವೃತ್ತಿಪರ ಅರ್ಥಶಾಸ್ತ್ರಜ್ಞರು ವಾಸ್ತವವನ್ನು ಮರೆಮಾಚುವಲ್ಲಿ ಪ್ರಜ್ಞಾಪೂರ್ವಕವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವವರು ಎಂದು ಹೇಳುವುದು ಸರಿಯಲ್ಲವಾದರೂ, ಬಹುತೇಕ ಮಂದಿಗೆ ಆಳುವ ವ್ಯವಸ್ಥೆಯ ‘ಲಕ್ಷ್ಮಣ ರೇಖೆ’ಯನ್ನು ದಾಟದಿರುವುದು ಒಂದು ಸುಲಭದ ಆಯ್ಕೆಯಾಗಿದೆ. ಮತ್ತು, ವೈಯಕ್ತಿಕವಾಗಿ ಈ ವಿಷಯದ ಅಧ್ಯಯನದಲ್ಲಿ ತೊಡಗಿರುವ ಯಾರೊಬ್ಬರೂ ಉದ್ದೇಶಪೂರ್ವಕವಾಗಿ ಅಪ್ರಾಮಾಣಿಕರಲ್ಲದಿದ್ದರೂ ಸಹ, ಸಾಮ್ರಾಜ್ಯಶಾಹಿಯು ವಹಿಸುವ ಪಾತ್ರವನ್ನು ಹೊರತುಪಡಿಸುವ ಒಂದಿಡೀ ಕಥನವೇ ಹೆಣೆದುಕೊಳ್ಳುತ್ತದೆ.
ಯಾವುದನ್ನು ಮುಖ್ಯಧಾರೆಯ ಅರ್ಥಶಾಸ್ತ್ರ ಎಂದು ಕರೆಯಲಾಗುತ್ತದೆಯೋ ಅದು ಒಂದು ಆಳವಾದ ಸೈದ್ಧಾಂತಿಕ ನೆಲೆಗಟ್ಟನ್ನು ಹೊಂದಿದೆ. ಈ ರಾಜಕೀಯ-ತಾತ್ವಿಕ ನೆಲೆಗಟ್ಟು ಹೊಂದಿರುವ ಉದ್ದೇಶವು ಸತ್ಯವನ್ನು ಬಹಿರಂಗಪಡಿಸುವುದು ಅಲ್ಲ, ಬದಲಿಗೆ ಅದನ್ನು ಮರೆಮಾಚುವುದು. ಕಾರ್ಲ್ ಮಾರ್ಕ್ಸ್, ಅರ್ಥಶಾಸ್ತ್ರವು ಹೊಂದಬಹುದಾದ ಸೈದ್ಧಾಂತಿಕ ಗುಣ-ಲಕ್ಷಣಗಳ ಬಗ್ಗೆ ಅಪಾರ ಅರಿವು ಹೊಂದಿದ್ದರು ಮತ್ತು ಶಾಸ್ತ್ರೀಯ ರಾಜಕೀಯ ಅರ್ಥಶಾಸ್ತ್ರ ಮತ್ತು ಒರಟು ಅರ್ಥಶಾಸ್ತ್ರದ ನಡುವಿನ ವ್ಯತ್ಯಾಸವನ್ನು ಗುರುತಿಸಿದ್ದರು. ಈ ಒರಟು ಅರ್ಥಶಾಸ್ತ್ರವು ತನ್ನ ಗಮನವನ್ನು ವಿಶೇಷವಾಗಿ ವಿನಿಮಯ ವಲಯದ ಮೇಲೆ ಕೇಂದ್ರೀಕರಿಸಿದೆ. ಅದು ಉತ್ಪಾದನಾ ವಲಯದತ್ತ ದೃಷ್ಟಿ ಹರಿಸುವುದಿಲ್ಲ. ಅದು ಮಾರುಕಟ್ಟೆಯಲ್ಲಿ ಭಾಗವಹಿಸುವ ಎಲ್ಲ ಘಟಕಗಳನ್ನೂ ಒಂದೇ ನೆಲೆಯಲ್ಲಿ ನೋಡುವುದರಿಂದಾಗಿ, ಉತ್ಪಾದನಾ ವಲಯದಲ್ಲಿ ನಡೆಯುತ್ತಿದ್ದ ಶೋಷಣೆಯ ಸಂಗತಿಯು ಸಂಪೂರ್ಣವಾಗಿ ಮರೆಮಾಚಿಕೊಂಡಿತು.
ಅರ್ಥಶಾಸ್ತ್ರದ ಸೈದ್ಧಾಂತಿಕ ಗುಣ-ಲಕ್ಷಣಗಳ ಕುರಿತಂತೆ ಮಾರ್ಕ್ಸ್ ರವರ ವಾಗ್ವಾದವು ಅವರ ಕೇಂದ್ರ ಕಾಳಜಿಯಾದ ಬಂಡವಾಳಶಾಹಿಯ ಅಡಿಯಲ್ಲಿ ಕಂಡುಬರುವ ಮಿಗುತಾಯ ಮೌಲ್ಯದ ಮೂಲಕ್ಕೆ ಸಂಬಂಧಿಸಿದೆ. ಆದರೂ ಸಿದ್ಧಾಂತವು ಮತ್ತೊಂದು ಮಟ್ಟದಲ್ಲಿಯೂ ಒಳಹೊಕ್ಕು ಚಾಚಿಕೊಳ್ಳುತ್ತದೆ. ಅದು, ಮುಖ್ಯಧಾರೆಯ ಅರ್ಥಶಾಸ್ತ್ರವು ಮಾಡುವಂತೆ, ವ್ಯವಸ್ಥೆಯನ್ನು ಸಂಪೂರ್ಣವಾಗಿ ಪ್ರತ್ಯೇಕಿಸಿ ನೋಡುತ್ತದೆ, ಮೇಲು-ಮೇಲಿನಲ್ಲಿ ಮಾತ್ರವಲ್ಲ, ಬದಲಾಗಿ ಸಾಮ್ರಾಜ್ಯಶಾಹಿಯ ವಿದ್ಯಮಾನವನ್ನು ಸೂಚ್ಯವಾಗಿ ಮತ್ತು ಉದ್ದೇಶಪೂರ್ವಕವಾಗಿ ನಿರಾಕರಿಸುತ್ತದೆ. ಈ ಅಂಶವನ್ನು ಒತ್ತಿಹೇಳುತ್ತಿರುವುದು, ಮುಖ್ಯಧಾರೆಯ ಸಂಪ್ರದಾಯದೊಳಗೆ ಅನೇಕ ವೃತ್ತಿಪರ ಅರ್ಥಶಾಸ್ತ್ರಜ್ಞರು ಉದ್ದೇಶಪೂರ್ವಕವಾಗಿ ಅಪ್ರಾಮಾಣಿಕರು ಮತ್ತು ವಾಸ್ತವವನ್ನು ಮರೆಮಾಚುವಲ್ಲಿ ಪ್ರಜ್ಞಾಪೂರ್ವಕವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದು ಸೂಚಿಸುವ ಉದ್ದೇಶದಿಂದ ಅಲ್ಲ. ಅವರು ಆ ರೀತಿ ತೊಡಗಿಕೊಂಡಿದ್ದಾರೆ ಎನ್ನುವುದು ಸತ್ಯಕ್ಕೆ ದೂರವಾದ ಮಾತಾಗುತ್ತದೆ.
ಇದನ್ನೂ ಓದಿ: ದಂಪತಿ ವಾಸಿಸುತ್ತಿದ್ದ ಮನೆ ಧ್ವಂಸ; ದಯಾಮರಣ ಅನುಮತಿಗಾಗಿ ರಾಷ್ಟ್ರಪತಿಗೆ ಪತ್ರ
ಬದಲಿಗೆ, ಅವರು ವೃತ್ತಿಯ ದಬ್ಬಾಳಿಕೆಗೆ ಒಳಗಾಗಿದ್ದಾರೆ ಎಂದು ಹೇಳಬಹುದು. ಅನೇಕ ವೃತ್ತಿಪರ ಅರ್ಥಶಾಸ್ತ್ರಜ್ಞರಲ್ಲಿ ಕಂಡುಬರುವ ಈ ವಿದ್ಯಮಾನವನ್ನು ಅಕೆಡೆಮಿಕ್ ಜೀವನಕ್ಕೆ ಸಂಬಂಧಿಸಿ ಪ್ರತ್ಯೇಕವಾಗಿ ಒಂದು ಸಮಾಜಶಾಸ್ತ್ರೀಯ ಅಧ್ಯಯನದ ಭಾಗವಾಗಿ ಅಧ್ಯಯನ ಮಾಡಬೇಕಾಗಿದೆ: ನಿಮ್ಮ ಸಮಾನ-ಸ್ಕಂದರಿಂದ ನಿಮಗೆ ಸಿಗುವ ಮನ್ನಣೆ, ನಿಮ್ಮ ವೃತ್ತಿ ಜೀವನ, ನಿಮ್ಮ ಮುಂಬಡ್ತಿ, ನಿಮ್ಮ ಕೃತಿಗಳ ಪ್ರಕಟಣೆ ಮತ್ತು ನೀವು ಪಡೆವ ಪ್ರಶಸ್ತಿಗಳು, ಇವೆಲ್ಲದಕ್ಕೂ ನೀವು ಅಕೆಡೆಮಿಕ್ ಉದ್ದೇಶದ ‘ಲಕ್ಷ್ಮಣ ರೇಖೆ’ಯ ಒಳಗೇ ಇರಬೇಕಾಗುತ್ತದೆ. ಈ ಲಕ್ಷ್ಮಣ ರೇಖೆಯನ್ನು ಒಂದು ವೇಳೆ ನೀವು ದಾಟಿದ್ದೇ ಆದರೆ ಮತ್ತು ಸಾಮ್ರಾಜ್ಯಶಾಹಿಯಂತಹ ವಿಷಯಗಳ ಬಗ್ಗೆ ಮಾತನಾಡಿದರೆ ಅದಕ್ಕೆ ಭಾರೀ ಬೆಲೆಯನ್ನೇ ತೆರಬೇಕಾಗುತ್ತದೆ. ಆದ್ದರಿಂದ, ಅರ್ಥಶಾಸ್ತ್ರ ಸಂಬಂಧಿತ ವೃತ್ತಿಯಲ್ಲಿರುವ ಬಹುತೇಕ ಮಂದಿಗೆ ಲಕ್ಷ್ಮಣ ರೇಖೆಯನ್ನು ದಾಟದಿರುವುದು ಒಂದು ಸುಲಭದ ಆಯ್ಕೆಯಾಗಿದೆ. ಮತ್ತು, ವೈಯಕ್ತಿಕವಾಗಿ ಈ ವಿಷಯದ ಅಧ್ಯಯನದಲ್ಲಿ ತೊಡಗಿರುವ ಯಾರೊಬ್ಬರೂ ಉದ್ದೇಶಪೂರ್ವಕವಾಗಿ ಅಪ್ರಾಮಾಣಿಕರಲ್ಲದಿದ್ದರೂ ಸಹ, ಸಾಮ್ರಾಜ್ಯಶಾಹಿಯು ವಹಿಸುವ ಪಾತ್ರವನ್ನು ಹೊರತುಪಡಿಸುವ ಒಂದಿಡೀ ಕಥನವೇ ಹೆಣೆದುಕೊಳ್ಳುತ್ತದೆ.
ಚಾರಿತ್ರಿಕ ಅಂಶದ ನಿರಾಕರಣೆ
ನಾನು ಇಲ್ಲಿ ಈ ವಿದ್ವಜ್ಜನರ ಕಾರ್ಯ-ವಿಧಾನದ ಸಮಾಜಶಾಸಸ್ತ್ರದ ಬೆನ್ನಟ್ಟಿ ಹೋಗುವುದಿಲ್ಲ. ಆದರೆ, ಮುಖ್ಯಧಾರೆಯ ಅರ್ಥಶಾಸ್ತ್ರವು ಸಾಮ್ರಾಜ್ಯಶಾಹಿಯ ಪಾತ್ರವನ್ನು ಹೇಗೆ ಮರೆಮಾಚುತ್ತದೆ ಎಂಬುದನ್ನು ತೋರಿಸಲು ಒಂದೆರಡು ಉದಾಹರಣೆಗಳನ್ನು ಮಾತ್ರ ನೀಡುತ್ತೇನೆ. ಮೊದಲ ಉದಾಹರಣೆಯು ಬೆಳವಣಿಗೆಯ ಸಿದ್ಧಾಂತಕ್ಕೆ ಸಂಬಂಧಿಸಿದೆ. ಇಲ್ಲಿ ಪ್ರಧಾನ ದೃಷ್ಟಿಕೋನವು ಒಂದು ಬಂಡವಾಳಶಾಹಿ ಅರ್ಥವ್ಯವಸ್ಥೆಯ ಆರ್ಥಿಕ ಬೆಳವಣಿಗೆಯ ದರವನ್ನು ಅದರ ಶ್ರಮ-ಪಡೆಯ ಬೆಳವಣಿಗೆಯ ನೈಸರ್ಗಿಕ ದರದೊಂದಿಗೆ ಮತ್ತು ಆ ಕಾರಣದಿಂದ ಅಂತಿಮವಾಗಿ ಬೆಳವಣಿಗೆಯು ಜನಸಂಖ್ಯೆಯ ಬೆಳವಣಿಗೆಯ ನೈಸರ್ಗಿಕ ದರದೊಂದಿಗೆ ಕಟ್ಟಿಹಾಕಿಕೊಂಡಿದೆ ಎಂದು ನೋಡುತ್ತದೆ.
ಅರ್ಥಶಾಸ್ತ್ರಜ್ಞ ಸೇ ಅವರ ನಿಯಮ (ಈ ನಿಯಮವನ್ನು ಮಾರ್ಕ್ಸ್ ಖಂಡಿಸಿದ್ದರು)ವನ್ನು ನಂಬುವ ಈ ದೃಷ್ಟಿಕೋನವು ಒಂದು ಅರ್ಥವ್ಯಸ್ಥೆಯಲ್ಲಿ ಒಟ್ಟು ಬೇಡಿಕೆಯು ವಹಿಸುವ ಪಾತ್ರವನ್ನೇ ತಳ್ಳಿಹಾಕುತ್ತದೆ. ಈ ಸೇ ನಿಯಮದ ಪ್ರಕಾರ, ಒಟ್ಟಾರೆಯಾಗಿ ಎಷ್ಟು ಉತ್ಪತ್ತಿಯಾಗುತ್ತದೆಯೋ (ಸಣ್ಣ ಪುಟ್ಟ ಹೊಂದಾಣಿಕೆಗಳು ಮಾತ್ರ ಇರಬಹುದಾದರೂ ಅತಿ-ಉತ್ಪಾದನೆಯ ಸಾಧ್ಯತೆ ಇಲ್ಲ) ಅದಷ್ಟೂ ಮಾರುಕಟ್ಟೆಯಲ್ಲಿ ತಂತಾನೇ/ಸ್ವಯಂಚಾಲಿತವಾಗಿ ಬೇಡಿಕೆಯನ್ನು ಪಡೆಯುತ್ತದೆ. ಇದು, ಎಲ್ಲಕ್ಕಿಂತ ಮಿಗಿಲಾಗಿ, ಸ್ಪಷ್ಟವಾಗಿ ಕಾಣುವ ಒಂದು ಚಾರಿತ್ರಿಕ ಅಂಶದ ನಿರಾಕರಣೆಯಾಗುತ್ತದೆ.
ಹತ್ತೊಂಬತ್ತನೇ ಶತಮಾನದ ಆರಂಭದ ವರೆಗಿನ ಅವಧಿಯಲ್ಲಿ ಗಣಿಗಳು ಮತ್ತು ತೋಟಗಳಲ್ಲಿ
ಕೆಲಸ ಮಾಡಿಸಲು ಬಂಡವಾಳಶಾಹಿಗೆ ಅಗತ್ಯವಾದ ಮಾನವ-ಶಕ್ತಿಯನ್ನು ಪೂರೈಸಲು ಆಫ್ರಿಕಾದಿಂದ ಇಪ್ಪತ್ತು ಮಿಲಿಯನ್ ಗುಲಾಮರನ್ನು ಹೊಸ ಜಗತ್ತಿಗೆ ಸಾಗಿಸಲಾಯಿತು. ಅಂತೆಯೇ, ಗುಲಾಮರ ವ್ಯಾಪಾರ ಅಂತ್ಯಗೊಂಡ ನಂತರ, ಬಂಡವಾಳಶಾಹಿಯ ಮಾನವ-ಶಕ್ತಿಯ ಅಗತ್ಯವನ್ನು ಪೂರೈಸಲು ಅಂದಾಜು ಐವತ್ತು ಮಿಲಿಯನ್
ಭಾರತೀಯ ಮತ್ತು ಚೀನೀ ಕಾರ್ಮಿಕರನ್ನು ಮೊದಲ ವಿಶ್ವಯುದ್ಧದವರೆಗಿನ ಅವಧಿಯಲ್ಲಿ ಒಪ್ಪಂದ ಅಥವಾ ಕೂಲಿ ಕಾರ್ಮಿಕರಾಗಿ ವಿವಿಧ ಉಷ್ಣವಲಯದ ಅಥವಾ ಅರೆ- ಉಷ್ಣವಲಯದ ಸ್ಥಳಗಳಿಗೆ ಸಾಗಿಸಲಾಯಿತು (ಅದೇ ಅವಧಿಯಲ್ಲಿ ಐವತ್ತು ಮಿಲಿಯನ್ ಯುರೋಪಿಯನ್ನರು ತಮ್ಮ ಸ್ವಂತ ಇಚ್ಛೆಯ ಮೇಲೆ ‘ಹೊಸ ಜಗತ್ತಿಗೆ’ ವಲಸೆ ಹೋದರು, ಮತ್ತು ಬಲ ಪ್ರಯೋಗ ನಡೆಸಿ ಸ್ಥಳೀಯರಿಂದ ಅವರ ಸ್ವಾಧೀನದಲ್ಲಿದ್ದ ಭೂಮಿಯನ್ನು ಕಸಿದುಕೊಂಡರು).
ಅಸಂಬದ್ಧ ನಂಬಿಕೆ
ಮಾನವಶಕ್ತಿಯ ಅಗತ್ಯಗಳನ್ನು ಪೂರೈಸಲು ಬಂಡವಾಳಶಾಹಿಯ ಆಶ್ರಯದಲ್ಲಿ ಇಷ್ಟೊಂದು ಬೃಹತ್ ಸಂಖ್ಯೆಯ ಜನರ ಸ್ಥಳಾಂತರವಾದರೂ, ಬಂಡವಾಳಶಾಹಿಯು ತನ್ನ ಗಡಿಯೊಳಗಿನ ಜನಸಂಖ್ಯೆಯ ಬೆಳವಣಿಗೆಯ ನೈಸರ್ಗಿಕ ದರಕ್ಕೆ ವಿನಮ್ರವಾಗಿ ಹೊಂದಿಕೊಳ್ಳುತ್ತದೆ ಎಂದು ನಂಬುವುದು ಒಂದು ಅಸಂಬದ್ಧವೇ ಸರಿ. ಆದಾಗ್ಯೂ, ಮುಖ್ಯಧಾರೆಯ ಅರ್ಥಶಾಸ್ತ್ರವು ಬಂಡವಾಳಶಾಹಿಯು ಆರ್ಥಿಕ ಬೆಳವಣಿಗೆಯು ಜನಸಂಖ್ಯೆಯ ಬೆಳವಣಿಗೆಯ ನೈಸರ್ಗಿಕ ದರಕ್ಕೆ ಹೊಂದಿಕೊಳ್ಳುತ್ತದೆ ಎಂಬುದಾಗಿಯೇ ಪ್ರಚಾರ ಮಾಡುತ್ತದೆ.
ಈ ಸಿದ್ಧಾಂತವು, ಸಾಮ್ರಾಜ್ಯಶಾಹಿ ಎಂಬುದೊಂದು ಇರಲಿಲ್ಲವೆಂದಾದರೆ ಏನಾಗುತ್ತದೆ ಎಂಬುದನ್ನು ಮಾತ್ರ ತೋರಿಸುತ್ತದೆ ಮತ್ತು ಆ ಮೂಲಕ ಬಂಡವಾಳಶಾಹಿಯು ಎದುರಿಸುತ್ತಿರುವ ಕಾರ್ಮಿಕರ ಕೊರತೆಯನ್ನು ನೀಗಿಸುವ ಸಲುವಾಗಿ ಸಾಮ್ರಾಜ್ಯಶಾಹಿಯ ಅಗತ್ಯವಿದೆ ಎಂಬುದನ್ನು ಒತ್ತಿಹೇಳುತ್ತದೆ ಎಂದು ವಾದ ಹೂಡಬಹುದು; ಆಸ್ಟ್ರಿಯನ್ ಮಾರ್ಕ್ಸ್ ವಾದಿ ಒಟ್ಟೊ ಬಾಯರ್ಸ್ ಇದನ್ನೇ ಆಧರಿಸಿ ಸಾಮ್ರಾಜ್ಯಶಾಹಿ ಕುರಿತ ಒಂದು ಸಿದ್ಧಾಂತವನ್ನು ಅಭಿವೃದ್ಧಿಪಡಿಸಿದರು. ಆದರೆ ಮುಖ್ಯಧಾರೆ ಅರ್ಥಶಾಸ್ತ್ರದ ಉದ್ದೇಶ ಇದಲ್ಲ. ಬಂಡವಾಳಶಾಹಿಯ ಮಾನವಶಕ್ತಿಯ ಅವಶ್ಯಕತೆಗಳನ್ನು ಪೂರೈಸಲು ಜಗತ್ತಿನಾದ್ಯಂತ ಬೃಹತ್ ಸಂಖ್ಯೆಯ ಜನರ ಚಲನೆ ಸಂಭವಿಸಿತ್ತು ಎಂಬುದನ್ನು ಬಂಡವಾಳಶಾಹಿ ಗುರುತಿಸಿದೆ ಎಂಬುದರ ಸುಳಿವು ಕೂಡ ಈ ಅರ್ಥಶಾಸ್ತ್ರದೊಳಗೆ ಇಲ್ಲ.
ಅದಕ್ಕಿಂತಲೂ ಮಿಗಿಲಾಗಿ, ಯಾವುದೇ ನಿರ್ದಿಷ್ಟ ಅವಧಿ ಅಥವಾ ಅವಧಿಗಳು ಒಂದು ನಿರ್ದಿಷ್ಟ ಪರಿಮಾಣದ ಕಾರ್ಮಿಕ ಬಲವನ್ನು ಹೊಂದಿಲ್ಲದಿದ್ದರೆ ಈ
ಸಿದ್ಧಾಂತವು ತಾರ್ಕಿಕವಾಗಿಯೂ ಸಮರ್ಥನೀಯವಲ್ಲ. (ಏಕೆಂದರೆ ಎಲ್ಲ ಉತ್ಪಾದನಾ ಅಂಶಗಳ ನಿರ್ದಿಷ್ಟ ಪೂರೈಕೆಗಳ ಪೂರ್ಣಬಳಕೆ ಪ್ರತಿ ಅವಧಿಯಲ್ಲೂ ಆದಾಯದ ವಿತರಣೆಯನ್ನು ನಿರ್ಧರಿಸುತ್ತವೆ). ನಾನು ಈಗ ಯಾವುದೇ ಪ್ರಭಾವ ಹೊಂದಿರದ ಒಂದು ಸಿದ್ಧಾಂತದ ಬಗ್ಗೆ ಮಾತನಾಡುವ ಮೂಲಕ ಒಂದು ಸತ್ತ
ಕುದುರೆಯನ್ನು ಥಳಿಸುತ್ತಿದ್ದೇನೆ ಎಂದು ಭಾವಿಸಲಾಗದು. ಏಕೆಂದರೆ ಥಾಮಸ್ ಪಿಕೆಟ್ಟಿ 2013ರಲ್ಲಿ ಪ್ರಕಟವಾದ ʼಕ್ಯಾಪಿಟಲ್ ಇನ್ ದಿ ಟ್ವೆಂಟಿ ಫಸ್ಟ್ ಸೆಂಚುರಿʼ (ಇಪ್ಪತ್ತೊಂದನೇ ಶತಮಾನದಲ್ಲಿ ಬಂಡವಾಳ) ಎಂಬ ತಮ್ಮ ಪ್ರಭಾವಶಾಲಿ ಕೃತಿಯಲ್ಲಿ ವರಮಾನ ವಿತರಣೆಯಲ್ಲಿ ಗಮನಿಸಿದ ಚಲನೆಗಳಿಗೆ ಸಂಬಂಧಿಸಿದ ತಮ್ಮ ಎಲ್ಲ ವಿವರಣೆಗಳನ್ನು ಖಂಡ ಖಂಡಗಳ ನಡುವೆ ಜರುಗಿದ, ಬಹುಪಾಲು ಬಲವಂತದಿಂದ ನಡೆದ ಶ್ರಮಿಕರ ಐತಿಹಾಸಿಕ ಚಲನೆಗಳನ್ನು ನಿರ್ಲಕ್ಷಿಸಿದ ಇದೇ ಈ ಸಿದ್ಧಾಂತವನ್ನು ಆಧರಿಸಿ ಮಂಡಿಸುತ್ತಾರೆ.
ಮುಕ್ತ ವ್ಯಾಪಾರ ಸಿದ್ದಾಂತ
ನನ್ನ ಎರಡನೇ ಉದಾಹರಣೆಯು ವ್ಯಾಪಾರ ಸಿದ್ಧಾಂತಕ್ಕೆ ಸಂಬಂಧಿಸಿದೆ. ಮುಕ್ತ ವ್ಯಾಪಾರದ ಮೂಲಕ ಪ್ರತಿಯೊಂದು ದೇಶದ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುತ್ತದೆ ಎಂದು ವಾದಿಸುವ ಒಂದು ದೀರ್ಘ ಪರಂಪರೆಯೇ ಇದೆ. ಈ ವಾದವು, ಒಂದು ದೇಶವು ಮುಕ್ತ ವ್ಯಾಪಾರಕ್ಕೆ ತೆರೆದುಕೊಳ್ಳುವ ಮೊದಲು ಮತ್ತು ನಂತರ, ಈ ಎರಡೂ ಸಂದರ್ಭಗಳಲ್ಲೂ ತನ್ನ ಎಲ್ಲ ಉತ್ಪಾದನೆಯ ಅಂಶಗಳನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಂಡಿರುತ್ತದೆಯಾದರೂ ಅದು ಉತ್ಪಾದಿಸುವ ವಸ್ತುಗಳ ಸಂಯೋಜನೆ ಬದಲಾಗಿರುತ್ತದೆ ಎಂಬ ಒಂದು ಪ್ರತಿಪಾದನೆಯನ್ನು ಆಧರಿಸಿದೆ.
ಮತ್ತು, ಎಲ್ಲ ದೇಶಗಳೂ ಅವುಗಳು ಉತ್ಪಾದಿಸುವ ವಸ್ತುಗಳ ಸಂಯೋಜನೆಯನ್ನು ಬದಲಿಸಿಕೊಂಡರೆ, ಒಟ್ಟಾರೆಯಾಗಿ ಒಂದು ಅಗಾಧ ಪ್ರಮಾಣದ ಸರಕುಗಳನ್ನು ಉತ್ಪಾದಿಸುವ ಇಡೀ ವಿಶ್ವವೇ ತನ್ನ ಸಂಪನ್ಮೂಲಗಳನ್ನು ಅತ್ಯುತ್ತಮ ರೀತಿಯಲ್ಲಿ ಬಳಸಿಕೊಂಡಂತಾಗುತ್ತದೆ ಮತ್ತು ಅದರಿಂದಾಗಿ ಪ್ರತಿಯೊಂದೂ ದೇಶದ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳಬಹುದು. ಈ ರೀತಿಯಲ್ಲಿ ವ್ಯಾಪಾರವು, ಸೀಮಿತ ಸಂಪನ್ಮೂಲಗಳನ್ನು ಬಾಚಿಕೊಳ್ಳುವ ಡಾರ್ವಿನ್ -ಮಾದರಿ ಪೈಪೋಟಿಯಲ್ಲಿ ದೇಶ ದೇಶಗಳು ಪರಸ್ಪರ ಹೋರಾಡುವುದರ ಬದಲು ಅವುಗಳ ನಡುವೆ ಸಹಕಾರವನ್ನು ಉಂಟುಮಾಡುತ್ತದೆ ಎಂದು ಈ ಸಿದ್ಧಾಂತ ಹೇಳುತ್ತದೆ.
ಆದರೆ, ಪ್ರತಿಯೊಂದು ದೇಶವೂ ವ್ಯಾಪಾರದ ಮೊದಲು ಮತ್ತು ನಂತರದ ಎರಡೂ ಸಂದರ್ಭಗಳಲ್ಲೂ ತನ್ನ ಎಲ್ಲ ಉತ್ಪಾದನೆಯ ಅಂಶಗಳನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಂಡಿರುತ್ತದೆ ಎಂದು ಭಾವಿಸಿಕೊಳ್ಳಬೇಕಾದರೆ,
‘ಸೇ ನಿಯಮ’ ಹೇಳುವಂತೆ, ಒಟ್ಟಾರೆಯಾಗಿ ಬೇಡಿಕೆಯ ಕೊರತೆಯ ಸಮಸ್ಯೆ ಎಂಬುದೇ ಇಲ್ಲ ಎಂದು ಊಹಿಸಿಕೊಳ್ಳಬೇಕಾಗುತ್ತದೆ. ಇದು ನಿಸ್ಸಂಶಯವಾಗಿಯೂ ಒಂದು ಅಸಂಬದ್ಧವೇ ಹೌದು. ಸೇ ಅವರ ನಿಯಮವೇ
ಸರಿಯಲ್ಲ, ವಿಶ್ವದ ಒಟ್ಟು ಉತ್ಪತ್ತಿಯು ವಿಶ್ವದ ಬೇಡಿಕೆಯ ಮಟ್ಟವನ್ನು ಅವಲಂಬಿಸಿರುತ್ತದೆ. ಈ ಬೇಡಿಕೆಗಿಂತ ಹೆಚ್ಚಿನದನ್ನು ಉತ್ಪಾದಿಸುವುದು ಉತ್ಪನ್ನವು ಮಾರಾಟವಾಗದಿರಲು ಕಾರಣವಾಗುತ್ತದೆ ಮತ್ತು ಪ್ರತಿಕೂಲ ಪರಿಣಾಮವನ್ನು ಉಂಟುಮಾಡುತ್ತದೆ. ಆದ್ದರಿಂದ ಒಂದು ದೇಶವು ಒಂದು ವೇಳೆ ಹೆಚ್ಚು ಉತ್ಪಾದಿಸಿದರೆ, ಆಗ ಅದು ಈ ಹೆಚ್ಚುವರಿ ಉತ್ಪಾದನೆಯನ್ನು ಬೇರೆ ಯಾವುದಾದರೂ ದೇಶಕ್ಕೆ ತನಗೆ ನಷ್ಟ ಮಾಡಿಕೊಂಡು ಮಾತ್ರ ಮಾರಾಟ ಮಾಡಬಹುದು. ಮುಕ್ತ ವ್ಯಾಪಾರವು ಪ್ರತಿಯೊಂದೂ ದೇಶದ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸುವುದರ ಬದಲು, ಬೇರೆ ಬೇರೆ ದೇಶಗಳಿಗೆ ನಷ್ಟವನ್ನುಂಟುಮಾಡಿ ಕೆಲವೇ ಕೆಲವು ದೇಶಗಳ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಬಹುದು.
ಇದು ಮಾರುಕಟ್ಟೆಗಳಿಗಾಗಿ ದೇಶ ದೇಶಗಳ ನಡುವೆ ನಡೆಯುವ ಹೋರಾಟಗಳಿಗೆ ಕಾರಣವೂ ಆಗಿದೆ ಮತ್ತು ಆಧಾರವೂ ಆಗಿದೆ. ಮಾರುಕಟ್ಟೆಗಳಿಗಾಗಿ ದೇಶ ದೇಶಗಳ ನಡುವೆ ನಡೆಯುತ್ತಿರುವ ಹೋರಾಟಗಳ ತಳದಲ್ಲಿರುವ ಅಂಶವೇ ಸಾಮ್ರಾಜ್ಯಶಾಹಿ. ಆದ್ದರಿಂದ ಈ ಅಂಶವನ್ನು ಮರೆ ಮಾಡುವುದು ಮತ್ತು ಮುಕ್ತ ವ್ಯಾಪಾರವನ್ನು ಮಾರುಕಟ್ಟೆಯ ಹೋರಾಟವಾಗಿ ಪ್ರಸ್ತುತಪಡಿಸುವುದರ ಬದಲು ಪ್ರತಿಯೊಂದು ದೇಶವನ್ನೂ ಉತ್ತಮಗೊಳಿಸುವ ಸಹಕಾರದ ಒಂದು ಸೂಚ್ಯ ರೂಪವಾಗಿ ಪ್ರಸ್ತುತಪಡಿಸುವ ಕ್ರಮವು ಸಾಮ್ರಾಜ್ಯಶಾಹಿ ವಿದ್ಯಮಾನವನ್ನೇ ಮುಚ್ಚಿಡುತ್ತದೆ.
ವಿದೇಶಿ ಉತ್ಪಾದಕರ ಹಾವಳಿಯ ವಿರುದ್ಧ ರಕ್ಷಣೆ
ಕುತೂಹಲದ ಸಂಗತಿಯೆಂದರೆ, ಬಂಡವಾಳಶಾಹಿಯ ಒಬ್ಬ ರಕ್ಷಕರೂ ಮತ್ತು ಸಮಾಜವಾದದ ಒಬ್ಬ ಕಟ್ಟಾ ವಿರೋಧಿಯೂ ಆಗಿದ್ದ ಜಾನ್ ಮೇನಾರ್ಡ್ ಕೇನ್ಸ್ ಕೂಡ ಸೇ ನಿಯಮವನ್ನು ತಿರಸ್ಕರಿಸುವ ಮೂಲಕ ಮಾರುಕಟ್ಟೆಗಳ ಅನ್ವೇಷಣೆಯ ಪ್ರಾಮುಖ್ಯತೆಯನ್ನು ಮತ್ತು ಆ ಮೂಲಕ ಸಾಮ್ರಾಜ್ಯಶಾಹಿಯ ಪ್ರಾಮುಖ್ಯತೆಯನ್ನು ಗುರುತಿಸಿದ್ದರು. ಅವರ ʼದಿ ಜನರಲ್ ಥಿಯರಿ ಆಫ್ ಎಂಪ್ಲಾಯ್‌ಮೆಂಟ್, ಇಂಟರೆಸ್ಟ್ ಅಂಡ್ ಮನಿʼ ಎಂಬ ಮೇರು ಕೃತಿಯಲ್ಲಿ ಅವರು ಹೀಗೆ ಬರೆದಿದ್ದಾರೆ: “… ವ್ಯಕ್ತಿಗಳ ವ್ಯವಹಾರದಲ್ಲಿ ಸರ್ಕಾರದ ಹಸ್ತಕ್ಷೇಪವಿರಬಾರದು ಎಂ(laissez-faire) ವ್ಯವಸ್ಥೆಯನ್ನು ದೇಶೀಯವಾಗಿ ಹೊಂದಿದ್ದ ಮತ್ತು ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಲ್ಲಿ ಒಂದು ಸಂಪ್ರದಾಯವಾಗಿದ್ದ ಅಂತಾರಾಷ್ಟ್ರೀಯ ಚಿನ್ನದ ಮಾನದಂಡದ ಅಡಿಯಲ್ಲಿ, ದೇಶದ ಆರ್ಥಿಕ
ಸಂಕಷ್ಟವನ್ನು ತಗ್ಗಿಸುವ ಸಲುವಾಗಿ ಮಾರುಕಟ್ಟೆಗಳಿಗಾಗಿ ಸ್ಪರ್ಧಾತ್ಮಕ ಹೋರಾಟ ಮಾಡುವ ಮಾರ್ಗವನ್ನು ಹೊರತುಪಡಿಸಿ ಸರ್ಕಾರಕ್ಕೆ ಯಾವ ದಾರಿಯೂ ಇರುವುದಿಲ್ಲ.
ಇದನ್ನೂ ನೋಡಿ: ಗೃಹ ಸಚಿವ ಡಾ.ಜಿ ಪರಮೇಶ್ವರ್’ ಸ್ವಕ್ಷೇತ್ರದಲ್ಲೇ ‘ಮಲ ಹೋರುವ ಪದ್ಧತಿ’ ಇನ್ನೂ ಜೀವಂತ Janashakthi Media
ನಿರುದ್ಯೋಗವನ್ನು ನಿವಾರಿಸುವ ಸಲುವಾಗಿ ಸರ್ಕಾರದ ಮಧ್ಯಪ್ರವೇಶದ ವಿಧಾನವನ್ನು ಒಂದು ವೇಳೆ ಬಳಸಬಹುದಾದರೆ, ಆಗ ಹೊರಗಿನ ಮಾರುಕಟ್ಟೆಗಳ ಅನ್ವೇಷಣೆಯ ಅಗತ್ಯವೇ ಇರುವುದಿಲ್ಲ ಮತ್ತು ಅದರಿಂದಾಗಿ ಸಾಮ್ರಾಜ್ಯಶಾಹಿ ಯುದ್ಧಗಳ ಅಗತ್ಯವೂ ಇರುವುದಿಲ್ಲ ಎಂಬುದನ್ನು ಕೀನ್ಸ್ ಇಲ್ಲಿ ಸೂಚ್ಯವಾಗಿ ಹೇಳಿದ್ದಾರೆ. ಆದರೆ, ಸರ್ಕಾರದ ವೆಚ್ಚಗಳು ದೇಶೀಯ ಉತ್ಪಾದಕರಿಗಾಗಿ ದೇಶೀಯ ಮಾರುಕಟ್ಟೆಯನ್ನು ವಿಸ್ತಾರಗೊಳಿಸಬೇಕು ಎಂದಾದರೆ, ಮೊದಲು ದೇಶೀಯ
ಮಾರುಕಟ್ಟೆಯನ್ನು ವಿದೇಶಿ ಉತ್ಪಾದಕರ ಹಾವಳಿಯ ವಿರುದ್ಧ ರಕ್ಷಿಸಬೇಕಾಗುತ್ತದೆ. ಆದ್ದರಿಂದ, ಸರ್ಕಾರದ ಮಧ್ಯಪ್ರವೇಶ ಇದ್ದಾಗಲೂ ಸಹ ಮುಕ್ತ ವ್ಯಾಪಾರವು ದೇಶೀಯ ಉತ್ಪಾದಕರಿಗೆ ಪ್ರಯೋಜನಕಾರಿಯಾಗುವುದಿಲ್ಲ. ಇಂದಿನವರೆಗೂ ಮತ್ತೆ-ಮತ್ತೆ ತಲೆ ಚಿಟ್ಟು ಹಿಡಿಯುವ ಮಟ್ಟಿಗೆ ಮುಂದಿಡುತ್ತಿರುವ ಈ ಮುಕ್ತ ವ್ಯಾಪಾರ ವಾದವು, ಒಟ್ಟಾರೆ ಬೇಡಿಕೆಯ ಕೊರತೆಯ ಸಾಧ್ಯತೆಯನ್ನು ನಿರ್ಲಕ್ಷಿಸುವುದರ ಮೇಲೆ ಆಧರಿತವಾಗಿದೆ. ಆದ್ದರಿಂದ, ಮಾರುಕಟ್ಟೆಯ ಅನ್ವೇಷಣೆಯು ಒಂದು ಅತ್ಯಂತ ವಾಸ್ತವ ಸಂಗತಿಯೂ ಹೌದು ಮತ್ತು ಅದು ಸಾಮ್ರಾಜ್ಯಶಾಹಿ ವಿದ್ಯಮಾನದ ಹಿಂದಿರುವ ಒಂದು ಮುಖ್ಯವಾದ ಕಾರಣವೂ ಹೌದು.
ಮುಕ್ತ ವ್ಯಾಪಾರದ ವಾದವು, ಅಸಂಬದ್ಧವಾಗಿರುವ ಸೇ ನಿಯಮದ ಊಹನೆಯ ಮೇಲೆ ನಿಂತಿದೆ. ಆದ್ದರಿಂದ, ಮುಕ್ತ ವ್ಯಾಪಾರವು ಎಲ್ಲರಿಗೂ ಪ್ರಯೋಜನಕಾರಿ ಎಂದು ಬಿಂಬಿಸುವ ಮೂಲಕ ಸಾಮ್ರಾಜ್ಯಶಾಹಿಯ ಉದ್ದೇಶವನ್ನು ಮರೆಮಾಚಲಾಗುತ್ತದೆ. ವಿಶೇಷವಾಗಿ ಗಮನಿಸಬೇಕಾದ ಒಂದು ಸಂಗತಿಯೆಂದರೆ, ಯಂತ್ರದಿಂದ ತಯಾರಿಸಿದ ವಸ್ತುಗಳನ್ನು ಮುಂದುವರೆದ ದೇಶಗಳಿಂದ ಆಮದು ಮಾಡಿಕೊಳ್ಳುವ ಮೂಲಕ ದೇಶೀಯ ಕರಕುಶಲ ಉತ್ಪಾದನೆಗೆ ಧಕ್ಕೆಯುಂಟಾಗಿ ವಸಾಹತುಶಾಹಿ ಅರ್ಥವ್ಯವಸ್ಥೆಗಳು ಅಪ- ಕೈಗಾರಿಕೀಕರಣಕ್ಕೊಳಗಾದವು ಎಂಬ ಐತಿಹಾಸಿಕ ಅಂಶವು ಎಲ್ಲರಿಗೂ ಗೊತ್ತಿದ್ದರೂ ಸಹ, ಈ ಮುಕ್ತ ವ್ಯಾಪಾರದ ವಾದವನ್ನು
ಮುಂದೊಡ್ಡಲಾಗುತ್ತಿದೆ ಮತ್ತು ಅದು ಪ್ರಚಲಿತವೂ ಆಗಿದೆ.
ಮೂರನೇ ಜಗತ್ತಿನಲ್ಲಿ ಕಂಡುಬರುವ ಸಾಮೂಹಿಕ ಬಡತನವನ್ನು ಮುಂದುವರೆದ ದೇಶಗಳೊಂದಿಗಿನ ಅವುಗಳ ವ್ಯಾಪಾರದಿಂದ ಬೇರ್ಪಡಿಸಿ, ಮುಕ್ತ ವ್ಯಾಪಾರವು ಎಲ್ಲರಿಗೂ ಪ್ರಯೋಜನಕಾರಿ ಎಂದು ಸೈದ್ಧಾಂತಿಕವಾಗಿ ಪ್ರಸ್ತುತಪಡಿಸುವ ಮೂಲಕ ವಸಾಹತುಗಳ ಅಪ-ಕೈಗಾರಿಕೀಕರಣದ ಅಂಶವನ್ನು ನಿರ್ಲಕ್ಷಿಸುವುದೇ ಮುಖ್ಯಧಾರೆಯ ಅರ್ಥಶಾಸ್ತ್ರದ ಪ್ರಯತ್ನವಾಗಿದೆ. ಆದ್ದರಿಂದ ಮುಖ್ಯಧಾರೆಯ ಆರ್ಥಿಕ ಸಿದ್ಧಾಂತದಲ್ಲಿ ಸಾಮ್ರಾಜ್ಯಶಾಹಿಯ ಅಗತ್ಯ ಮತ್ತು ಅದು ವಹಿಸಿದ ಪಾತ್ರ ಈ ಎರಡನ್ನೂ ಮುಚ್ಚಿಡುವ ಒಂದು ಕುಟಿಲ ಪ್ರಯತ್ನವಿದೆ. ಮತ್ತು ಇದು ಒಂದು ಸೈದ್ಧಾಂತಿಕ ಯೋಜನೆ.
ಇದನ್ನೂ ಓದಿ: ವಿದ್ಯಾರ್ಥಿ ನಿಲಯಗಳಲ್ಲಿ ಅವ್ಯವಸ್ಥೆ; ಆಕ್ರೋಶ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ