ಚಿಕ್ಕಮಗಳೂರು: ಕೋಮು ವಿವಾದಕ್ಕೆ ಸದಾ ಸುದ್ದಿಯಲ್ಲಿರುವ ಶ್ರೀ ಗುರು ದತ್ತಾತ್ರೇತ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಇದೀಗ ಹೊಸದೊಂದು ವಿವಾದ ಹುಟ್ಟಿಕೊಂಡಿದೆ. ದತ್ತಪೀಠ ಪೂಜೆಗಾಗಿ ಹಿಂದೂ ಅರ್ಚಕರ ನೇಮಕವಾಗಿದ್ದು, ಅರ್ಚಕರು ಮೈಲಿಗೆ ಆಗುತ್ತೆ ಎಂದು ಮೌಲ್ವಿಗಳಿಗೆ ಪೂಜೆ ಮಾಡಲು ನಿರಾಕರಣೆ ಮಾಡುತ್ತಿದ್ದಾರೆ. ಫಾತ್ಯ (ಮುಸ್ಲಿಂ ಸಮುದಾಯದ ಪೂಜಾ ಪದ್ಧತಿ) ನಡೆಸಲು ಮುಜರಾಯಿ ಇಲಾಖೆಯಿಂದ ಅಖಿಲ್ ಪಾಷಾ ಹಾಗೂ ಮಹಮದ್ ಇಸ್ಲಾಮಿಲ್ ಅವರನ್ನು ನೇಮಕ ಮಾಡಲಾಗಿದೆ.
ಚಿಕ್ಕಮಗಳೂರು ತಾಲ್ಲೂಕಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ಶ್ರೀಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದ ಪೂಜಾ ವಿಧಾನದಲ್ಲಿ ಯಾವುದೇ ಬದಲಾವಣೆ ಮಾಡಬಾರದು. ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟ ಆದೇಶವನ್ನು ನೀಡಿದೆ.
ಶ್ರೀ ಬಾಬಾಬುಡನ್ ದತ್ತಾತ್ರೇಯಸ್ವಾಮಿ ದರ್ಗಾದ ವ್ಯವಸ್ಥಾಪನಾ ಸಮಿತಿ ನೇಮಕವಾದ ಬಳಿಕ ಹಿಂದೂ ಅರ್ಚಕರ ನೇಮಕವಾಗಿದ್ದು, ಅದೇ ಅರ್ಚಕರು ಇದೀಗ ಮೌಲ್ವಿಗಳ ಆಚರಣೆಗೆ ಅಡ್ಡಿಪಡಿಸುತ್ತಿದ್ದಾರೆ. ನ್ಯಾಯಾಲಯದ ಆದೇಶದ ಪ್ರಕಾರ ದತ್ತಪೀಠದ ಹೊರಾಂಡದಲ್ಲಿ ಪೂಜೆ ಮಾಡಬೇಕು ಎಂದು ತಿಳಿಸಲಾಗಿದೆ. ಆದರೆ, ಗುಹೆಯೊಳಗೆ ಪೂಜೆ ಮಾಡಲಾಗಿದೆ. ಜೊತೆಗೆ ಕಲ್ಲಪ್ಪ ಹಂಡೀಭಾಗ್ ಆತ್ಮಹತ್ಯೆ ಪ್ರಕರಣದ ಮುಖ್ಯ ಆರೋಪಿ ಖಾಂಡ್ಯ ಪ್ರವೀಣ್ ಕೂಡ ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಯಾಗಿದೆ.
ಅರ್ಚಕರ ಹೊಸ ನಡೆಯ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರೆ, ಈ ಸಮಿತಿಗೂ ನನಗೂ ಯಾವುದೇ ಸಂಬಂಧವೇವಿಲ್ಲ ಎಂದು ಹೇಳುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ ಎಚ್ಚೆತ್ತು ಅರ್ಚಕರನ್ನ ವಾಪಸ್ಸು ಕಳುಹಿಸಬೇಕು. ನ್ಯಾಯಾಲಯದ ಆದೇಶದ ಪ್ರಕಾರ ಕೇವಲ ಮೂರು ದಿನಕ್ಕೆ ಮಾತ್ರ ಅರ್ಚಕರು ಪೂಜೆ ಮಾಡಬೇಕು. ಆದರೆ ದತ್ತಜಯಂತಿ ಮುಗಿದರೂ ಅರ್ಚಕರು ಮುಂದುವರೆದಿದ್ದಾರೆ ಎಂಬುದು ಮುಸ್ಲಿಂ ಮುಖಂಡರ ಆರೋಪವಾಗಿದೆ.
ದತ್ತ ಜಯಂತಿ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಇಬ್ಬರು ಅರ್ಚಕರನ್ನು ನೇಮಕ ಮಾಡಲಾಗಿತ್ತು. ಮೂರು ದಿನಗಳ ದತ್ತಜಯಂತಿಗೆ ಡಿಸೆಂಬರ್ 8ರಂದು ತೆರೆಬಿದ್ದರೂ ಸಹ ತಾತ್ಕಾಲಿಕ ಅರ್ಚಕರಿಂದ ಪೂಜೆ ವಿಧಿಗಳು ನಡೆಯುತ್ತಿವೆ. ಅರ್ಚಕರ ನೇಮಕಾತಿ ಸಂಬಂಧಿಸಿ ರಚಿಸಲಾದ ಶ್ರೀ ಬಾಬಾಬುಡನ್ ದತ್ತಾತ್ರೇಯಸ್ವಾಮಿ ದರ್ಗಾದ ವ್ಯವಸ್ಥಾಪನಾ ಸಮಿತಿಯ ಕೆಲ ಸದಸ್ಯರು, ಅರ್ಚಕರು ಹಾಗೂ ಮುಜಾವರ್ ಭದ್ರತೆಗೆ ಗನ್‌ಮ್ಯಾನ್ ಸೌಲಭ್ಯ ನೀಡಲಾಗಿದೆ.