ಮೊಹುವಾ ಮೈತ್ರ ಉಚ್ಛಾಟನೆ:ಮಹಿಳೆಯನ್ನು ಲೈಂಗಿಕ ಪ್ರಹಾರಕ್ಕೆ ಗುರಿಪಡಿಸುವಲ್ಲಿ ಹೊಸ ದಾಖಲೆ-ಬೃಂದಾ ಕಾರಟ್

ಕಳೆದ ಅಧಿವೇಶನದಲ್ಲಿ, ಮಹಿಳೆಯರ ನಿರಂತರ ಹೋರಾಟದ ಫಲವಾದ ಮಹಿಳಾ ಮೀಸಲಾತಿ ಮಸೂದೆಯ ಅಂಗೀಕಾರದ ಕೀರ್ತಿ ತನ್ನದು ಎಂದು ಸರ್ಕಾರ ತಪ್ಪಾಗಿ ಹೇಳಿಕೊಂಡಿತ್ತು. ಆದರೆ ಅಧಿವೇಶನದಲ್ಲಿ, ಅದು ಖಂಡಿತವಾಗಿಯೂ ಮಹಿಳೆಯನ್ನು ಲೈಂಗಿಕ ಪ್ರಹಾರಕ್ಕೆ ಗುರಿಪಡಿಸುವಲ್ಲಿ ಹೊಸ ದಾಖಲೆಯನ್ನು ಸ್ಥಾಪಿಸಿದ ಕೀರ್ತಿ ತನ್ನದು ಎಂದು ಹೇಳಿಕೊಳ್ಳಬಹುದು” – ಇದು ಕಳೆದ ವಾರ ಟಿಎಂಸಿಯ ಸಂಸತ್ ಸದಸ್ಯೆ ಮೊಹುವಾ ಮೈತ್ರ ಅವರನ್ನು ಸಂಸತ್ತಿನಿಂದ ಉಚ್ಛಾಟಿಸಿರುವುದರ ಬಗ್ಗೆ ಸಿಪಿಐ(ಎಂ) ಪೊಲಿಟ್ಬ್ಯುರೊ ಸದಸ್ಯರಾದ ಬೃಂದಾ ಕಾರಟ್ ಡಿಸೆಂಬರ್ 9ರಂದು ಇಂಡಿಯನ್ ಎಕ್ಸ್ ಪ್ರೆಸ್ಪತ್ರಿಕೆಯಲ್ಲಿ ಪ್ರಕಟವಾಗಿರುವ ತಮ್ಮ ಲೇಖನದಲ್ಲಿ ಹೇಳಿರುವ ಮಾತು.

“ಮೊಹುವಾ ಮೈತ್ರ ನನ್ನ ಒಬ್ಬ ರಾಜಕೀಯ ವಿರೋಧಿ. ಒಬ್ಬ ಮಹಿಳೆಯಾಗಿ ನಾನು ಅವರ ಜತೆ ನಿಲ್ಲುತ್ತೇನೆ” -ಇದು ಅವರ ಆ ಲೇಖನದ ಶಿರೋನಾಮೆ.

ಪಕ್ಕಾ ಲೈಂಗಿಕ ಭೇದಭಾವ, ಚಾರಿತ್ರ್ಯ ಹನನ, ಹೊಲಸು ಟಿಪ್ಪಣಿಗಳು, ದುರ್ಭಾವನೆಯ ಹರಟೆ ಇವು ನಮ್ಮ ದೇಶದ ಅನೇಕ ಮಹಿಳಾ ನಾಯಕರು, ಅವರು ಆಳುವ ಪಕ್ಷಗಳಿಗೆ ಸೇರಿರಲಿ, ಪ್ರತಿಪಕ್ಷಗಳಿಗೆ ಸೇರಿರಲಿ, ಎದುರಿಸಬೇಕಾದ ವಾಸ್ತವ. ಮಹುವಾ ಮೈತ್ರ ವಿಷಯದಲ್ಲಿ ಅದು ವಾಸ್ತವವನ್ನೂ ಮೀರಿ ಹೋಗಿದೆ. ಲೈಂಗಿಕ ಭೇದಭಾವ ಮತ್ತು ಸ್ರ್ತೀದ್ವೇಷವನ್ನು ಆಕೆಯನ್ನು ಸಂಸತ್ತಿನಿಂದ ಹೊರಹಾಕುವುದಕ್ಕೆ ಬಳಸಲಾಗಿದೆ. ಪ್ರಕರಣದಲ್ಲಿ ಸರಕಾರ ನಡೆದುಕೊಂಡ ರೀತಿಯನ್ನು ಖಂಡಿಸಲು ಮಹಿಳೆಯರಾಗಿ ಒಗ್ಗಟ್ಟಾಗದೇ ಹೋದರೆ ನಮ್ಮ ಮೌನವೇ ಸಾರ್ವಜನಿಕ ಜೀವನಕ್ಕೆ ಬರುವ ಕನಸು ಹೊತ್ತಿರುವ ನಮ್ಮ ನಂತರದ ತಲೆಮಾರುಗಳ ಹೆಂಗಸರಿಗೆ ಮಾರಕವಾಗಿ ಪರಿಣಮಿಸುತ್ತದೆ. ಇದು ಪ್ರಜಾಪ್ರಭುತ್ವದ ಮಾತೆ ಎಂಬ ಹೆಸರಿಗೆ ಶೋಭೆ ತರುವಂತದ್ದಲ್ಲ ಎಂದಿರುವ ಬೃಂದಾ ಕಾರಟ್, ಮೊಹುವಾ ಅವರು ನಮ್ಮ ದೇಶದ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳ ಬೆಂಬಲದೊಂದಿಗೆ ನಡೆದಿರುವ ವಿಷಕಾರುವ ಅಪಪ್ರಚಾರದ ಎದುರು ವೈಯಕ್ತಿಕ ಧೈರ್ಯ ಮತ್ತು ಶಕ್ತಿಯನ್ನು ಪ್ರದರ್ಶಿಸಿದ್ದಾರೆ, ದೃಢವಾಗಿ ನಿಂತಿದ್ದಾರೆ, ಎಳ್ಳಷ್ಟೂ ಹಿಂದೆ ಸರಿಯಲಿಲ್ಲ ಎಂದು ಶ್ಲಾಘಿಸಿದ್ದಾರೆ.

ಆಕೆ ಸಂಸತ್ತಿನಲ್ಲಿ ಅಡಾಣಿಯ ಬಗ್ಗೆ ಪ್ರಶ್ನೆ ಕೇಳಲು ಯಾರಿಂದಲೋ ಹಣಪಡೆದಿದ್ದಾರೆ ಮತ್ತು ತನ್ನ ಪಾಸ್‌ವರ್ಡನ್ನು ಬೇರೆಯವರಿಗೆ ಕೊಟ್ಟು ರಾಷ್ಟ್ತೀಯ ಭದ್ರತೆಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪಕ್ಕೆ ಉತ್ತರ ಕೊಡಲೂ ಬಿಡದೆ ಇಂತಹ ಕ್ರಮ ತಗೊಂಡಿರುವ ಬಗ್ಗೆ ಪ್ರಶ್ನಿಸಿದಾಗ ಆಳುವ ಮಂದಿ ಯುಪಿಎ ಆಳ್ವಿಕೆಯಲ್ಲಿ “ಪ್ರಶ್ನೆ ಕೇಳಲು ನಗದು” ಪ್ರಕರಣದಲ್ಲಿ ಆರೋಪಿಗಳಿಗೆ ತಮ್ಮ ಸಮರ್ಥನೆಗೆ ಅವಕಾಶ ಕೊಟ್ಟಿರಲಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ ಆಗ 11 ಸಂಸದರು ಹಣ ಪಡೆದಿದಕ್ಕೆ ಸ್ಪಷ್ಟ ಪುರಾವೆಗಳು ದೊರೆತಿದ್ದವು ಎಂಬುದನ್ನು ಮರೆಮಾಚಿದ್ದಾರೆ.

ಡಿಸೆಂಬರ್ 2005 ರಲ್ಲಿ, ಆಜ್ ತಕ್‌ನಲ್ಲಿ ಪ್ರಸಾರವಾದ ಆನ್‌ಲೈನ್ ಸುದ್ದಿ ಸೈಟ್ ಕೋಬ್ರಾಪೋಸ್ಟ್ ನ ಕುಟುಕು ಕಾರ್ಯಾಚರಣೆಯು ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಎತ್ತುವುದಕ್ಕೆ 11 ಸಂಸದರು ನಗದು ಸ್ವೀಕರಿಸುವುದನ್ನು ತೋರಿಸಿತ್ತು. ಇವರ ಪೈಕಿ ಆರು ಬಿಜೆಪಿ, ಮೂವರು ಬಿಎಸ್‌ಪಿ ಮತ್ತು ತಲಾ ಒಬ್ಬರು ಆರ್‌ಜೆಡಿ ಮತ್ತು ಕಾಂಗ್ರೆಸ್‌ ಸದಸ್ಯರು. ಅಂದಿನ ಲೋಕಸಭಾಧ್ಯಕ್ಷ ಸೋಮನಾಥ್ ಚಟರ್ಜಿ ಆರೋಪಗಳ ವಿಚಾರಣೆಗೆ ಸಮಿತಿಯನ್ನು ರಚಿಸಿದರು, ಅದರಲ್ಲಿ ಆಗ ವಿರೋಧ ಪಕ್ಷವಾಗಿದ್ದ ಬಿಜೆಪಿಯ ಪ್ರತಿನಿಧಿಗಳೂ ಇದ್ದರು. ಆ 11 ಸದಸ್ಯರನ್ನು ಹೊರಹಾಕಲು ಸಮಿತಿ ಶಿಫಾರಸು ಮಾಡಿತು. ಅದರ ಮೇಲೆ ಲೋಕಸಭೆ ಮತದಾನಕ್ಕೆ ಮುಂದಾದಾಗ ಬಿಜೆಪಿ ಸಭಾತ್ಯಾಗ ನಡೆಸಿತ್ತು. ಆಗ ವಿರೋಧ ಪಕ್ಷದ ನಾಯಕರಾಗಿದ್ದ ಎಲ್‌ ಕೆ ಅಡ್ವಾಣಿ, ಸಂಸದರು ಮಾಡಿದ್ದು ಭ್ರಷ್ಟಾಚಾರ ಆದರೆ “ಅದಕ್ಕಿಂತ ಹೆಚ್ಚಾಗಿ ಅದು ಮೂರ್ಖತನ”, ಆದರೆ ಉಚ್ಚಾಟನೆಯ ಶಿಕ್ಷೆ ತುಂಬಾ ಕಠಿಣವಾಯಿತು ಎಂದು ಹೇಳಿದ್ದಾಗಿ ಪತ್ರಿಕಾ ವರದಿಗಳು ಉಲ್ಲೇಖಿಸಿವೆ ಎಂದು ನೆನಪಿಸಿರುವ ಬೃಂದಾ ಕಾರಟ್, ಅದು ಸ್ಪಷ್ಟ ಪುರಾವೆಂಯ ಪ್ರಕರಣ, ಆದರೂ ಇದೇ ಬಿಜೆಪಿ ಆರೋಪಿಗಳ ರಕ್ಷಣೆಗೆ ನಿಂತಿತ್ತು. ಎಂಬುದನ್ನು ನೆನಪಿಸಿದ್ದಾರೆ.

ಮೊಹುವಾ ಮೈತ್ರರವರ ಈ ಪ್ರಕರಣದಲ್ಲಿ ಪ್ರಶ್ನೆ ಕೇಳಲು ಹಣ ಪಡೆದರು ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಆದ್ದರಿಂದಲೇ ತಾನೇ ಸಿಬಿಐ ತನಿಖೆಗೆ ಶಿಫಾರಸು? ಹಾಗಾದರೆ ಸಿಬಿಐ ವಿಚಾರಣೆ ಮುಗಿದು ಆಕೆ ತಪ್ಪಿತಸ್ಥರೆಂದು ಸಾಬೀತಾಗುವವರೆಗೂ ಸರ್ಕಾರ ಏಕೆ ಕಾಯಲಿಲ್ಲ? ಆಕೆಯನ್ನು ಹೊರಹಾಕಲು ಏಕೆ ಆತುರ?” ಎಂದು ಬೃಂದಾ ಪ್ರಶ್ನಿಸುತ್ತಾರೆ.

ಆಕೆ ಪಡೆದಿರುವ ‘ಬೆಲೆಬಾಳುವ’ ಉಡುಗೊರೆಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಆಳುವ ಮಂದಿ, ಅವರ ಮಡಿಲ ಮಾಧ್ಯಮಗಳು ಭಾರೀ ಪ್ರಚಾರ ಮಾಡಿವೆ. ಆದರೆ ಪ್ರಧಾನಿಗಳು ತಮ್ಮ ಹಣವಂತ ವಜ್ರ ವ್ಯಾಪಾರಿ “ಮಿತ್ರ” ನಿಂದ ಸ್ವೀಕರಿಸಿದ ಹೆಸರು ಹೆಣೆದ ಸೂಟು ಕಡಿಮೆ ಬೆಲೆಯದ್ದೇನೂ ಅಲ್ಲ. ಆ ಬಗ್ಗೆ ತನಿಖೆ ನಡೆಸಲಾಗಿದೆಯೇ? ತನಿಖೆ ಮಾಡದಿರುವುದು ಅದನ್ನು ಅವರು ನಂತರ ದಾನ ಮಾಡಿದರು ಎಂಬ ಕಾರಣಕ್ಕೋ ಅಥವ ಮಹುವಾ ಒಬ್ಬ ಮಹಿಳೆಯಾಗಿ ಒಬ್ಬ ಪುರುಷನಿಂದ ಉಡುಗೊರೆ ಸ್ವೀಕರಿಸಿದರು ಎಂಬ ಕಾರಣಕ್ಕೋ ಎಂದು ಬೃಂದಾ ತಮ್ಮ ಲೇಖನದಲ್ಲಿ ಮತ್ತೊಂದು ಪ್ರಶ್ನೆ ಹಾಕಿದ್ದಾರೆ.

ನಾಚಿಕೆಗೇಡಿನ ಸಂಗತಿಯೆಂದರೆ ಇಂತಹ ಮನೋಭಾವ ಸಂಸತ್ತಿನ ‘ನೈತಿಕ ಸಮಿತಿ’ಯಲ್ಲೂ ಕಂಡು ಬಂತು ಎಂಬುದು ಎನ್ನುತ್ತಾರೆ ಬೃಂದಾಕಾರಟ್. ಅಲ್ಲಿ ಮಹುವಾಗೆ ಆಳುವ ಪಕ್ಷದ ಸದಸ್ಯರು ನೈತಿಕವಾಗಿ ಅತ್ಯಂತ ಆಕ್ಷೇಪಾರ್ಹ ಪ್ರಶ್ನೆಗಳನ್ನು ಹಾಕಿದರು ಎಂದು ಆಕೆ ಮತ್ತು ಪ್ರತಿಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಬೇಕಾಯಿತು ಎಂದು ವರದಿಯಾಗಿದೆ. ಒಬ್ಬ ಪುರುಷ ಸದಸ್ಯರ ಮೇಲೆ ಇಂತಹ ಆರೋಪ ಬಂದಿದ್ದರೆ, ಇಂತಹುದೇ ಪ್ರಶ್ನೆಗಳನ್ನು ಕೇಳುತ್ತಿದ್ದರೇ?

ಆಕೆಯ ವಿರುದ್ಧ ಹೊಲಸು ಅಪಪ್ರಚಾರ ಇದಕ್ಕೆ ಮೊದಲೇ ಆರಂಭವಾಗಿತ್ತು. “ಎಂದೂ ಟೀಕಿಸಬಾರದ ವ್ಯಕ್ತಿಯನ್ನು ಟೀಕಿಸಿದವರು ಅದರ ಪರಿಣಾಮಗಳನ್ನು ಎದುರಿಸಬೇಕು ತಾನೇ?” ಎಂದು ಈ ಬಗ್ಗೆ ವ್ಯಂಗ್ಯವಾಗಿ ಟಿಪ್ಪಣಿ ಮಾಡಿದ್ದಾರೆ.

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಆಳುವ ಮಂದಿಯ ಮತ್ತು ಮಡಿಲ ಮಾಧ್ಯಮಗಳು ಹರಡಿದ ಗದ್ದಲದ ನಡುವೆ ನಿಜಸಂಗತಿಗಳು ಮರೆಯಾಗಿ ಬಿಟ್ಟಿವೆ ಅಥವ ತಿರುಚಲ್ಪಟ್ಟಿವೆ. ಮೊಹುವಾ ಮೈತ್ರ ಅಡಾನಿ ಉದ್ದಿಮೆಗಳ ಬಗ್ಗೆ ತೀಕ್ಷ್ಣವಾದ ಪ್ರಶ್ನೆಗಳನ್ನು ಎತ್ತಿದ್ದರು. ಈ ಉದ್ದಿಮೆ ಸಮೂಹದ ಬಗ್ಗೆ ಸರಕಾರದ ದ್ವಂದ್ವನೀತಿಯನ್ನು ಬಯಲಿಗೆ ತಂದಿದ್ದರು. ಅವರಷ್ಟೇ ಅಲ್ಲ, ಸಂಸತ್ತಿನ ಒಳಗೆ ಮತ್ತು ಹೊರಗೆ ಹೆಚ್ಚಿನ ಪ್ರತಿಪಕ್ಷಗಳ ಮುಖಂಡರು ಇಂತಹ ಪ್ರಶ್ನೆಗಳನ್ನು ಎತ್ತಿದ್ದಾರೆ.

ಬಂಟ ಬಂಡವಾಳಶಾಹಿಯ ಬೆಳವಣಿಗೆ ಒಂದು ರಾಷ್ಟ್ರೀಯ ಹಿತದ ಮತ್ತು ಆತಂಕದ ವಿಷಯ. ಮೊಹುವಾ ಮೈತ್ರ ಅವರನ್ನು ಉಚ್ಛಾಟಿಸಿದ ಮಾತ್ರಕ್ಕೆ ಪ್ರಶ್ನೆಗಳು ಹೋಗಿ ಬಿಡುವುದಿಲ್ಲ ಎಂದು ಬೃಂದಾ ಕಾರಟ್ ತಮ್ಮ ಲೇಖನದಲ್ಲಿ ಮಾರ್ಮಿಕವಾಗಿ ಹೇಳಿದ್ದಾರೆ.

                                                                     ರಾಷ್ಟ್ರೀಯ ಭದ್ರತೆ?            ಎಲ್ಲವೂ ಚೆನ್ನಾಗಿದೆ!

ಕೃಪೆ: ಸತೀಶ ಆಚಾರ್ಯ, ಸೌತ್‍ ಫಸ್ಟ್

 

 

Donate Janashakthi Media

Leave a Reply

Your email address will not be published. Required fields are marked *