ಮಹಿಳೆಯರಿಗೆ ಪ್ರತ್ಯೇಕ ಆರ್ಥಿಕ ಸಂಸ್ಥೆ ರಚನೆಗೆ ಚಿಂತನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಮಹಿಳೆಯರು ಉದ್ಯಮದಲ್ಲಿ ತೊಡಗಿಕೊಳ್ಳಬೇಕು. ಅದಕ್ಕಾಗಿ ಪ್ರತ್ಯೇಕ ಸಂಸ್ಥೆ ಸ್ಥಾಪಿಸುವ ಚಿಂತನೆ ಇದೆ. ಗ್ರಾಮಗಳ ಸ್ತ್ರೀಶಕ್ತಿ ಸಂಘಗಳಿಂದ ಹಿಡಿದು ಬೃಹತ್ ಮಟ್ಟದ ಉದ್ಯಮಗಳಿಗಾಗಿಯೇ ಉತ್ತಮ ಆರ್ಥಿಕ ವ್ಯವಸ್ಥೆ ಕಲ್ಪಿಸಲು ಇದು ಅನುಕೂಲವಾಗಲಿದೆ. ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರದಲ್ಲಿ ನಡೆದ ‘ಉಬುಂಟು’- ಮಹಿಳಾ ಉದ್ಯಮಿಗಳ ಸಂಘದಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ಉದ್ಯಮಿಗಳ ದಿನಾಚರಣೆಯ ‘ಒಗ್ಗಟ್ಟಾಗಿ ಬೆಳೆಯೋಣ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮನೆಯಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳು ಕೂಡ ಉದ್ಯಮಿಗಳೇ. ಭಾರತೀಯ ಮಹಿಳೆಯರು ಬಹುರಾಷ್ಟ್ರೀಯ ಬ್ಯಾಂಕ್‌ಗಳಿಗಿಂತಲೂ ಹೆಚ್ಚಿನ ಉಳಿತಾಯವನ್ನು ಮಾಡಿದ್ದಾರೆ ಎಂಬ ವರದಿ ಇದೆ. ಉದ್ಯಮಶೀಲತೆ ಎಂದರೆ ಮಹಿಳೆ ಎಂದಾಗಬೇಕು. ಮಹಿಳಾ ಉದ್ಯಮಿ ಎನ್ನುವುದರಿಂದ ಹೊರಗೆ ಬರಬೇಕು. ಮನೆ ನೋಡಿಕೊಳ್ಳುವುದು ಎನ್ನುವುದೇ ವಿಶ್ವದಲ್ಲಿಯೇ ಅತಿ ದೊಡ್ಡ ಉದ್ಯಮ. ಅದರಲ್ಲಿಯೇ ವಿವಿಧ ಶಾಖೆಗಳಿವೆ ಎಂದರು.

ಸರ್ಕಾರಕ್ಕೆ ಸ್ತ್ರೀ ಶಕ್ತಿಯ ಬಗ್ಗೆ ವಿಶ್ವಾಸವಿದೆ. ಮಹಿಳಾ ಶಕ್ತಿಯನ್ನು ಬೆಂಬಲಿಸಿ, ಬೆಳೆಸಿ, ಪ್ರತಿಯೊಬ್ಬ ಕನ್ನಡದ ಮಹಿಳೆ ಆರ್ಥಿಕವಾಗಿ ಸಬಲವಾಗಿ, ಕುಟುಂಬ ಹಾಗೂ ಅದರೊಂದಿಗೆ ರಾಜ್ಯದ ಆರ್ಥಿಕ ಬೆಳವಣಿಗೆಗೆ ಅವರೂ ಕೊಡುಗೆ ನೀಡಬೇಕೆಂಬ ಚಿಂತನೆ ಸರ್ಕಾರದ್ದು. ಈ ನಿಟ್ಟಿನಲ್ಲಿ ಎಲ್ಲ ಕಾರ್ಯಕ್ರಮಗಳನ್ನೂ ಸ್ತ್ರೀ ಶಕ್ತಿಯ ಪರವಾಗಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಉಬುಂಟು ಸಂಸ್ಥೆಯಲ್ಲಿ ಮಾದರಿ ಮಹಿಳೆಯರಿದ್ದು, ಮತ್ತೊಬ್ಬರು ಬೆಳೆಯಲು ಸಹಾಯ ಮಾಡಿದಾಗ ಯಶಸ್ಸು ಸಂಪೂರ್ಣವಾಗುತ್ತದೆ. 400 ಸದಸ್ಯರಿರುವ ಉಬುಂಟು ಸಂಸ್ಥೆಯ ಪ್ರತಿಯೊಬ್ಬರೂ ಮುಂದಿನ ವರ್ಷದಲ್ಲಿ ಒಬ್ಬೊಬ್ಬರನ್ನು ಬೆಳೆಯಲು ಸಹಾಯ ಮಾಡಿದರೆ, ಸಮಾಜಕ್ಕೆ ನೀಡುವ ಬಹು ದೊಡ್ಡ ಕೊಡುಗೆ ಎಂದರು.

ಅಂಧ ಮಹಿಳೆಯರಿಗೆ ವಿಶೇಷ ಕಾರ್ಯಕ್ರಮವನ್ನು ಒಂದು ವಾರದೊಳಗೆ ರೂಪಿಸಿ, ಅಂಧ ಮಹಿಳೆಯರು ಉದ್ಯೋಗ ಹೊಂದುವಂತೆ ಅನುಕೂಲ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದರು.

ಈ ಘೋಷಣೆಯ ಹಿಂದಿನ ಕಾರಣವನ್ನು ವಿವರಿಸಿದ ಮುಖ್ಯಮಂತ್ರಿಗಳು “ಕಡುಬಡವರಾದ ಮೂರು ಅಂಧ ಮಹಿಳೆಯರು ತಮ್ಮ ಹೆಣ್ಣುಮಕ್ಕಳೊಂದಿಗೆ ಇಂದು ನನ್ನನ್ನು ಭೇಟಿಯಾದರು. ನನ್ನಿಂದ ಯಾವ ಸಹಾಯ ಬೇಕೆಂದು ಕೇಳಿದಾಗ ‘ನನಗೆ ಸಹಾಯ ಬೇಕಿಲ್ಲ, ಆದರೆ ನನಗೆ ನಾನೇ ಸಹಾಯ ಮಾಡಿಕೊಳ್ಳಲು ಕೆಲಸ ಬೇಕು’ ಎಂದು ಕೇಳಿದರು. ತಕ್ಷಣವೇ ಈ ತೀರ್ಮಾನವನ್ನು ಕೈಗೊಂಡೆ” ಎಂದರು.

ಉಬುಂಟು ಎಂಬ ಸೂರಿನಡಿ 30ಕ್ಕೂ ಹೆಚ್ಚು ಸಂಸ್ಥೆಗಳು ಇವೆ. ಇದು ಇನ್ನೂ ಹೆಚ್ಚಬೇಕು. ಹಿಂದುಳಿದ, ಎಸ್.ಸಿ/ ಎಸ್.ಟಿ ಮಹಿಳೆಯರು ಆರ್ಥಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತಾಗಬೇಕು. ಈ ನಿಟ್ಟಿನಲ್ಲಿ ಉಬುಂಟು ಕಾರ್ಯನಿರ್ವಹಿಸಬೇಕು. ಮಹಿಳಾ ಸಮುದಾಯ ಉದ್ಯಮ ಸಮುದಾಯವಾಗಿ ಪರಿವರ್ತನೆಗೊಳ್ಳಬೇಕು ಎಂದರು.

ಕೈಗಾರಿಕಾ ನೀತಿಯಲ್ಲಿ ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ

2019ರ ಕೈಗಾರಿಕಾ ನೀತಿ ಒಳಗೊಂಡಿದ್ದ ಮಹಿಳಾ ಉದ್ಯಮಿಗಳಿಗೆ ನೀಡುವ ಪ್ರೋತ್ಸಾಹಕಗಳ ಅಧ್ಯಾಯವನ್ನು 2020- 2025 ರ ನೀತಿಯಲ್ಲಿ ಸೇರ್ಪಡೆಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದರು. ಮಹಿಳಾ ಉದ್ಯಮಿಗಳಿಗೆ ನೀಡುವ ಅನುದಾನದಲ್ಲಿ ರಿಯಾಯಿತಿ ಈಗಾಗಲೇ ನೀಡಲಾಗುತ್ತಿದ್ದು, ಜಮೀನು ಖರೀದಿಗೆ ರಿಯಾಯಿತಿ ಒದಗಿಸಲು ಚಿಂತನೆ ನಡೆಸಲಾಗುವುದು ಎಂದರು. ಐಟಿ ಬಿಟಿಗೆ ಇರುವ ರೀತಿಯಲ್ಲಿಯೇ ಕಾರ್ಯಕ್ರಮವನ್ನು ಮಹಿಳಾ ಉದ್ಯಮಿಗಳಿಗೆ ರೂಪಿಸಲಾಗುವುದು ಎಂದು ತಿಳಿಸಿದರು.

Donate Janashakthi Media

Leave a Reply

Your email address will not be published. Required fields are marked *