ಮುಖ್ಯ ನ್ಯಾಯಾಧೀಶರಿಗೆ ಪತ್ರದ ವಿರುದ್ಧ ಬಾರ್ ಕೌನ್ಸಿಲ್ ನಿರ್ಣಯದ ಬಗ್ಗೆ ಬೃಂದಾ ಕಾರಟ್
ಎರಡು ಮೊಕದ್ದಮೆಗಳಲ್ಲಿ ಸುಪ್ರಿಂ ಕೋರ್ಟಿನ ಮುಖ್ಯ ನ್ಯಾಯಾಧೀಶರ ಟಿಪ್ಪಣಿಗಳ ಬಗ್ಗೆ ಸಿಪಿಐ(ಎಂ) ಪೊಲಿಟ್ ಬ್ಯುರೊ ಸದಸ್ಯರಾದ ಬೃಂದಾ ಕಾರಟ್ ಅವರು ಬರೆದ ಪತ್ರದ ವಿರುದ್ಧ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಒಂದು ನಿರ್ಣಯವನ್ನು ಅಂಗೀಕರಿಸಿ ಮಾರ್ಚ್ 4ರಂದು ಪತ್ರಿಕೆಗಳಿಗೆ ಬಿಡುಗಡೆ ಮಾಡಿದೆ. ಇದೊಂದು ಅಭೂತಪೂರ್ವ ನಡೆ. ಇದರಲ್ಲಿ ಬೃಂದಾ ಅವರ ಮೇಲೆ ಹಲವು ವೈಯಕ್ತಿಕ ಆರೋಪಗಳನ್ನೂ ಹಾಕಲಾಗಿದೆ.ಈ ನಿರ್ಣಯದ ಕುರಿತು ಬೃಂದಾ ಕಾರಟ್ ಬಾರ್ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ ಎಂ.ಕೆ.ಮಿಶ್ರ ಅವರಿಗೆ ಪತ್ರ ಬರೆದಿದ್ದಾರೆ.
ಬಾರ್ ಕೌನ್ಸಿಲ್‍ನ ಈ ನಿರ್ಣಯದಲ್ಲಿ ಅದೇಕೋ ಕೆಲವು ವಾಕ್ಯಗಳನ್ನು ಬ್ಲಾಕ್ ಔಟ್ ಮಾಡಲಾಗಿದೆ. ಇದರಲ್ಲಿ ಬೃಂದಾ ಕಾರಟ್ ಹೆಸರನ್ನು ಅತ್ಯಂತ ಹೀನಾಯ ರೀತಿಯಲ್ಲಿ ಹಲವೆಡೆಗಳಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ ತಾನು ಬಾರ್ ಕೌನ್ಸಿಲ್‍ನ ಅಧ್ಯಕ್ಷರಿಗೆ ಈ ಪತ್ರ ಬರೆಯುತ್ತಿರುವುದು ಇಂತಹ ಅಲ್ಪತನದ ವೈಯಕ್ತಿಕ ಆರೋಪಗಳಿಗೆ ಉತ್ತರಿಸಲು ಅಲ್ಲ, ಬದಲಾಗಿ, ಈ ನಿರ್ಣಯದಲ್ಲಿ ಎತ್ತಿರುವ ಹಲವು ಪ್ರಶ್ನೆಗಳು ನ್ಯಾಯಕ್ಕಾಗಿ ಹೋರಾಟದ ಮೇಲೆ ಹೆಚ್ಚಿನ ಪರಿಣಾಮ ಬಿರುವಂತದ್ದು ಎಂಬ ಕಾರಣಕ್ಕಾಗಿ. ಮಹಿಳೆಯರ ಹಕ್ಕುಗಳು ಮತ್ತು ದಮನಿತರಿಗೆ ನ್ಯಾಯಕ್ಕಾಗಿ ಒಬ್ಬ ವ್ಯಕ್ತಿಯ ಕೆಲಸದ ದಾಖಲೆಯೇ ತಾನಾಗಿ ಬಹಳಷ್ಟು ಹೇಳುತ್ತದೆ. ಆದರೂ ಒಂದು ಶಾಸನಬದ್ಧ ಸಂಸ್ಥೆಯಾದ ಬಾರ್ ಕೌನ್ಸಿಲ್ ನ ಪಾತ್ರದ ಸಂದರ್ಭದಲ್ಲಿ ಇದನ್ನು ಪರೀಕ್ಷಿಸಬೇಕಾಗಿದೆ ಎಂಬುದನ್ನು ತಮ್ಮ ಪತ್ರದ ಆರಂಭದಲ್ಲಿ ಅವರು ಕೌನ್ಸಿಲ್‍ನ ಅಧ್ಯಕ್ಷರ ಗಮನಕ್ಕೆ ತಂದಿರುವ ಬೃಂದಾ ಕಾರಟ್, ಬಾರ್ ಕೌನ್ಸಿಲ್ ನ ಈ ನಿರ್ಣಯದ ಕೆಲವು ಪದಗಳು ಭಯಪಡಿಸುವುದಕ್ಕಾಗಿ ಎಂದು ಭಾವಿಸಬಹುದು, ಒಬ್ಬ ವ್ಯಕ್ತಿ ಅಥವ ವ್ಯಕ್ತಿಗಳನ್ನು ಭಯಪಡಿಸುವುದು ಮತ್ತು ಬೆದರಿಸುವುದು ಬಾರ್ ಕೌನ್ಸಿಲ್‍ನ ವಿಧಿ-ವಿಧಾನದೊಳಗೆ ಇದೆಯೇ ಎಂದು ಪತ್ರದ ಕೊನೆಯಲ್ಲಿ ತೀವ್ರ ಸಂದೇಹ ವ್ಯಕ್ತಪಡಿಸಿದ್ದಾರೆ.
ಈ ಪತ್ರದಲ್ಲಿ ಬೃಂದಾ ಅವರು ಮುಖ್ಯವಾಗಿ ನಾಲ್ಕು ಅಂಶಗಳನ್ನು ಎತ್ತಿದ್ದಾರೆ. ಅವು ಹೀಗಿವೆ:
- ನ್ಯಾಯಾಧೀಶರ ಟಿಪ್ಪಣಿಗಳಿಗ ಕಾನೂನಾತ್ಮಕ ಪಾವಿತ್ರ್ಯ ಇದ್ದಿರಲಿಕ್ಕಿಲ್ಲ, ಆದರೆ ಪ್ರತಿಗಾಮಿ ಸಾಮಾಜಿಕ ನಿಲುವುಗಳಿಗೆ ಅವು ನ್ಯಾಯಬದ್ಧತೆ ಒದಗಿಸುತ್ತವೆ.
ಮುಖ್ಯ ನ್ಯಾಯಾಧೀಶರರಿಗೆ ಬರೆದ ಪತ್ರದಲ್ಲಿ ಪ್ರಸ್ತಾಪಿಸಿದ ಟಿಪ್ಪಣಿಗಳು ಒಂದು ತೀರ್ಪಿನ ಭಾಗವೇನೂ ಅಲ್ಲ, ಅವು ನ್ಯಾಯಾಲಯದ ಆದೇಶದ ಭಾಗವಾಗಿ ಬಂದಿರದಿರುವಾಗ ಏಕಿಷ್ಟು ಬೊಬ್ಬೆ ಎಂದು ಈ ನಿರ್ಣಯ ಅಬ್ಬರದಿಂದ ಪ್ರಶ್ನಿಸುತ್ತದೆ. ಆದರೆ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರಗೊಂಡಿರುವ ಮುಖ್ಯ ನ್ಯಾಯಾಧೀಶರ ಟಿಪ್ಪಣಿಗಳ ಕುರಿತ ವರದಿಗಳನ್ನೇನೂ ಈ ನಿರ್ಣಯ ಎಲ್ಲೂ ನಿರಾಕರಿಸಿಲ್ಲ. ಅವು ಒಂದು ತೀರ್ಪಿನ ಭಾಗವಾಗಿವೆಯೋ ಇಲ್ಲವೋ ಎಂಬುದು ಇಲ್ಲಿ ಗೌಣ. ಇಂತಹ ಟಿಪ್ಪಣಿಗಳನ್ನು ನ್ಯಾಯಾಲಯದಲ್ಲಿ ಬಹಿರಂಗವಾಗಿ ಮಾಡಲಾಗಿದೆ, ಮತ್ತು ಅವು ವ್ಯಾಪಕವಾಗಿ ವರದಿಯಾಗಿವೆ ಎಂಬ ಸಂಗತಿಯೇ ಸಮಾಜದ ಮೇಲೆ ತನ್ನದೇ ಪರಿಣಾಮವನ್ನು ಬೀರುತ್ತದೆ. ಅತ್ಯಾಚಾರದ ಆರೋಪಿಯೊಬ್ಬನಿಗೆ ಸಂತ್ರಸ್ತೆಯನ್ನು ಮದುವೆಯಾಗುತ್ತೀಯಾ ಎಂಬಂತಹ ಉನ್ನತ ಅಧಿಕಾರಸ್ಥರ ಟಿಪ್ಪಣಿಗಳು ಕ್ರಿಮಿನಲ್ ಗಳಿಂದ ಸಂತ್ರಸ್ತರಾದವರ ಮೇಲೆ, ವಿಶೇಷವಾಗಿ ಈ ಪ್ರಕರಣದಲ್ಲಿ ಒಬ್ಬ ಅಪ್ರಾಪ್ತ ವಯಸ್ಕಳ ವಿರುದ್ಧ ಅಪರಾದದ ಅಗಾಧತೆಯನ್ನು ದುರ್ಬಲಗೊಳಿಸುವಲ್ಲಿ ಅತ್ಯಂತ ಹಾನಿಕಾರಕ ಪರಿಣಾಮವನ್ನು ಬೀರುತ್ತದೆ. ಟಿಪ್ಪಣಿಗಳಿಗ ಕಾನೂನಾತ್ಮಕ ಪಾವಿತ್ರ್ಯ ಇದ್ದಿರಲಿಕ್ಕಿಲ್ಲ, ಆದರೆ ಪ್ರತಿಗಾಮಿ ಸಾಮಾಜಿಕ ನಿಲುವುಗಳಿಗೆ ಅವು ನ್ಯಾಯಬದ್ಧತೆ ಒದಗಿಸುತ್ತವೆ. ಇದನ್ನೇ ಮುಖ್ಯ ನ್ಯಾಯಾಧೀಶರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿರುವುದು. ಬಾರ್ ಕೌನ್ಸಿಲ್ ನಿಜವಾಗಿಯೂ ಪ್ರತಿಕ್ರಿಯಿಸ ಬಯಸಿದ್ದರೆ, ಅದು ಇದುವರೆಗಿನ ಅತ್ಯುತ್ತಮ ನ್ಯಾಯಾಂಗ ಆಚರಣೆಗಳನ್ನು ಮತ್ತು ಮಾನಕಗಳನ್ನು ಎತ್ತಿ ಹಿಡಿಯಬೇಕಾಗಿತ್ತು ಮತ್ತು ಇಂತಹ ಟಿಪ್ಪಣಿಗಳ ನಕಾರಾತ್ಮಕ ಪರಿಣಾಮಗಳನ್ನು ಸಂಬಂಧಪಟ್ಟ ಕೋರ್ಟಿನೊಂದಿಗೆ ಎತ್ತಬೇಕಾಗಿತ್ತು.
- ನ್ಯಾಯಾಂಗ ಪ್ರಕ್ರಿಯೆಗಳು ಅಪರಾಧ ಸಂತ್ರಸ್ತರ ಹಿತಗಳನ್ನು ನ್ಯಾಯ ಪ್ರಕ್ರಿಯೆಯ ಕೇಂದ್ರದಲ್ಲಿಡಬೇಕಾದ ಅಗತ್ಯವಿದೆಯೇ ಹೊರತು, ಅಪರಾಧ ಎಸಗಿದವರ ಹಿತವನ್ನಲ್ಲ ಎಂಬುದನ್ನು ಇಂತಹ ಹಿರಿಯ ವಕೀಲರುಗಳ ಒಂದು ಮಂಡಳಿಗೆ ಕಂಡಿಲ್ಲ ಏಕೆ ಎಂಬುದು ಪರೀಕ್ಷಿಸಬೇಕಾದ ಸಂಗತಿ
ಬಾರ್ ಕೌನ್ಸಿಲ್ ನಿರ್ಣಯ ಅತ್ಯಾಚಾರಿಯ ತಂದೆ-ತಾಯಿ ಮತ್ತು ಅಪ್ರಾಪ್ತವಯಸ್ಕಳ ನಡುವೆ ಒಂದು ʼಲಿಖಿತ ಒಪ್ಪಂದʼದ ಮಾತಾಡುತ್ತದೆ. ಇಂತಹ ಒಂದು ಒಪ್ಪಂದ ಯಾವುದೇ ರೀತಿಯಲ್ಲಿ ಕಾನೂನಾತ್ಮಕವೇ? ಯಾವ ಕಾನೂನಿನ ಅಡಿಯಲ್ಲಿ? ಆ ಹುಡುಗಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದಳು ಎಂದು ಬಾರ್ ಕೌನ್ಸಿಲ್‍ಗೆ ತಿಳಿದಿಲ್ಲವೇ? ಮದುವೆಯ ಆಹ್ವಾನವನ್ನು ಆಕೆ ತಿರಸ್ಕರಿಸಿದಳು ಎಂದು ಬಾರ್ ಕೌನ್ಸಿಲ್ ಗೆ ತಿಳಿದಿಲ್ಲವೇ? ಮತ್ತು ಅತ್ಯಂತ ಮಹತ್ವದ ಪ್ರಶ್ನೆಯೆಂದರೆ, ಆಕೆ ಅಪ್ರಾಪ್ತವಯಸ್ಕಳಾಗಿದ್ದಾಗ ಆಕೆಯ ಪರವಾಗಿ ಇಂತಹದೊಂದು ಒಪ್ಪಂದವನ್ನು ಮಾಡಿಕೊಂಡಿದ್ದರೂ, ಆಕೆ ಈಗ ವಯಸ್ಕಳಾಗಿರುವಾಗ, ಅತ್ಯಾಚಾರಿಯನ್ನು ಮದುವೆಯಾಗುತ್ತೀಯಾ ಎಂದು ಕೇಳುವ ಮೊದಲು, ಆಕೆಯ ಅಭಿಪ್ರಾಯವನ್ನು ಕೇಳುವುದು ನ್ಯಾಯಾಲಯದ ಕರ್ತವ್ಯವಾಗಿರಲಿಲ್ಲವೇ? ಅಪ್ರಾಪ್ತವಯಸ್ಕ ಸಂತ್ರಸ್ತೆಯ ಬಗ್ಗೆ ಯಾವುದೇ ರೀತಿಯ ಸಂವೇದನೆಯನ್ನು ಬಾರ್ ಕೌನ್ಸಿಲ್ ನಿರ್ಣಯ ತೋರಿಸುತ್ತಿಲ್ಲ ಎಂಬುದು ನಿಜಕ್ಕೂ ವ್ಯಥೆ ಪಡಬೇಕಾದ ಸಂಗತಿ. ನ್ಯಾಯಾಂಗ ಪ್ರಕ್ರಿಯೆಗಳು, ವಿಶೇಷವಾಗಿ ಅಪ್ರಾಪ್ತವಯಸ್ಕಳ ಮೇಲೆ ಅತ್ಯಾಚಾರದ ಪ್ರಕರಣಗಳಲ್ಲಿ, ಸಂತ್ರಸ್ತರ ಹಿತಗಳನ್ನು ನ್ಯಾಯ ಪ್ರಕ್ರಿಯೆಯ ಕೇಂದ್ರದಲ್ಲಿಡಬೇಕಾದ ಅಗತ್ಯವಿದೆಯೇ ಹೊರತು, ಅಪರಾಧ ಎಸಗಿದವರ ಹಿತವನ್ನಲ್ಲ ಎಂಬುದನ್ನು ಇಂತಹ ಹಿರಿಯ ವಕೀಲರುಗಳ ಒಂದು ಮಂಡಳಿಗೆ ಕಂಡಿಲ್ಲ ಏಕೆ ಎಂಬುದು ಪರೀಕ್ಷಿಸಬೇಕಾದ ಸಂಗತಿ.
- ಒಂದು ಅಭಿಪ್ರಾಯ ʼದುರುದ್ದೇಶಪೂರಿತʼ ಎಂದು ಕಳಂಕ ಹಚ್ಚುವ ಹಕ್ಕು ಬಾರ್ ಕೌನ್ಸಿಲ್ ಗೆ ಇದೆಯೇ?
ಔರಂಗಾಬಾದ್ ಹೈಕೋರ್ಟ್ ಕೆಳಗಿನ ಕೋರ್ಟ್ ನೀಡಿದ್ದ ಜಾಮೀನನ್ನು ತಿರಸ್ಕರಿಸಿತು. ಆತ ಅಪೀಲು ಹೋಗಿರದಿದ್ದರೆ ಬಂಧಿತನಾಗುತ್ತಿದ್ದ. ಆದರೆ ಸುಪ್ರಿಂ ಕೋರ್ಟ್ ಆತನಿಗೆ ʼರೆಗ್ಯುಲರ್ ಜಾಮೀನಿʼಗೆ ಅರ್ಜಿ ಸಲ್ಲಿಸಲು ಒಂದು ತಿಂಗಳ ರಕ್ಷಣೆ ಕೊಟ್ಟಿದೆ. ಇದನ್ನು ʼಮೆಚ್ಚಬೇಕಾಗಿದೆʼ ಎಂದು ಬಾರ್ ಕೌನ್ಸಿಲ್ ನಿರ್ಣಯ ಹೇಳುತ್ತದೆ. ಒಂದು ತಿಂಗಳ ಸಮಯ ಕೊಟ್ಟಿರುವುದು ತಕ್ಷಣ ಬಂಧನದ ವಿರುದ್ಧ ಎಂಬುದೊಂದು ಖಚಿತ ಅಭಿಪ್ರಾಯ. ಈ ವಿಷಯದಲ್ಲಿ ಒಂದು ಅಭಿಪ್ರಾಯ ʼದುರುದ್ದೇಶಪೂರಿತʼ ಎಂದು ಕಳಂಕ ಹಚ್ಚುವ ಹಕ್ಕು ಬಾರ್ ಕೌನ್ಸಿಲ್ ಗೆ ಇಲ್ಲ.
- ಅರ್ಜಿದಾರಳ ವಿರುದ್ಧ ಮಾನಹಾನಿಕರ ಟಿಪ್ಪಣಿಗಳನ್ನು ಮಾಡುವುದು ಆಕ್ಷೇಪಣೀಯ
ಮುಖ್ಯ ನ್ಯಾಯಾಧೀಶರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ ಎರಡನೇ ಪ್ರಕರಣದಲ್ಲಿ, ಬಾರ್ ಕೌನ್ಸಿಲ್ ಸುಪ್ರೀಂ ಕೋರ್ಟಿಗೆ ಅಪೀಲು ಸಲ್ಲಿಸಿರುವ ಅರ್ಜಿದಾರಳ ವಿರುದ್ಧ ಮಾನಹಾನಿಕರ ಟಿಪ್ಪಣಿಗಳನ್ನು ಮಾಡಿದೆ. ಆಕೆಯ ಪ್ರತಿಷ್ಠೆಯ ಮೇಲೆ ದಾಳಿ ಮಾಡಿದೆ. ಇದು ಆಕ್ಷೇಪಣೀಯ ಎನ್ನಬೇಕಾಗುತ್ತದೆ. ಇಲ್ಲಿರುವ ಪ್ರಶ್ನೆ ಒಂದು ನಿರ್ದಿಷ್ಟ ಪ್ರಕರಣ ತಪ್ಪೋ ಸರಿಯೋ ಎಂಬುದಲ್ಲ. ಇಲ್ಲಿರುವುದು ಕೋರ್ಟ್ ಮಾಡಿರುವ ಸಾಮಾನ್ಯ ಸ್ವರೂಪದ ಟಿಪ್ಪಣಿಗಳ, ಗಂಡ ಮತ್ತು ಹೆಂಡತಿ ನಡುವೆ ಅಥವ ಒಟ್ಟಿಗೆ ಇರುವವರ ನಡುವಿನ ಸಂಬಂಧಗಳನ್ನು ಕುರಿತ ವಿಷಯ. ಇಲ್ಲಿಯೂ ಕೂಡ ನ್ಯಾಯಾಲಯ ʼಗಂಡ ಎಷ್ಟೇ ಪಾಶವಿಕನಾಗಿದ್ದರೂ..ʼ ಎಂಬಿತ್ಯಾದಿ ಟಿಪ್ಪಣಿಗಳನ್ನು ಮಾಡಿಲ್ಲ ಎಂದೇನೂ ಹೇಳುವುದಿಲ್ಲ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಇದು ಗಂಡಂದಿರನ್ನು ಕುರಿತ ಒಂದು ಸಾರ್ವತ್ರಿಕ ಟಿಪ್ಪಣಿ, ವೈವಾಹಿಕ ಅತ್ಯಾಚಾರವೂ ಸೇರಿದಂತೆ ಕೌಟುಂಬಿಕ ಹಿಂಸಾಚಾರದ ಪ್ರಕರಣಗಳ ಮೇಲೆ ಗಂಭೀರ ಪರಿಣಾಮ ಬೀರುವಂತದ್ದು. ಅತ್ಯಾಚಾರ ಎಂಬುದು ಮಹಿಳೆಯ ಒಪ್ಪಿಗೆಯಿಲ್ಲದ ಲೈಂಗಿಕ ಸಂಭೋಗದ ಒಂದು ಬಲಾತ್ಕಾರದ ಕೃತ್ಯ. ನಿಜ, ಪ್ರಸ್ತುತ ಭಾರತದಲ್ಲಿ ವೈವಾಹಿಕ ಅತ್ಯಾಚಾರದ ವಿರುದ್ಧ ಕಾನೂನು ಇಲ್ಲ. ಅರ್ಜಿ ನ್ಯಾಯಾಲಯದ ಮುಂದಿದೆ. ಆದರೆ ʼಗಂಡ ಎಷ್ಟೇ ಪಾಶವಿಕನಾಗಿದ್ದರೂʼ ಎಂಬಂತಹ ಟಿಪ್ಪಣಿಗಳನ್ನು ಸರ್ವೋಚ್ಚ ನ್ಯಾಯಾಲಯ ಮಾಡುವುದು ಪಾಶವೀಯತೆಗೆ ಪರವಾನಿಗೆ ಕೊಡುತ್ತದೆ.
ಬಾರ್ ಕೌನ್ಸಿಲ್ ಭಾರತದ ಮುಖ್ಯ ನ್ಯಾಯಾಧೀಶರಿಗೆ ಬೃಂದಾ ಕಾರಟ್ ಪತ್ರ ಮತ್ತು ಅದನ್ನು ಮಾಧ್ಯಮಗಳಲ್ಲಿ ವರದಿ ಮಾಡಿರುವುದು ʼಅನುಚಿತ ನಿಂದನೆʼ ಎಂದು ವರ್ಣಿಸಿದೆ. ʼಇಂತಹ ದ್ವೇಷಪೂರ್ಣ ದಾಳಿ ಮಾಡುವ ಅಭ್ಯಾಸವನ್ನು ನಿಲ್ಲಿಸಲು ತಕ್ಷಣದ ಕ್ರಮಗಳನ್ನು ಕೈಗೊಳ್ಳಬೇಕುʼ ಎಂದೂ ನಿರ್ಣಯ ಹೇಳಿದೆ. ತನ್ನ ಪತ್ರದಲ್ಲಾಗಲೀ, ಮಾಧ್ಯಮಗಳಲ್ಲಿ ಅದರ ವರದಿಯಲ್ಲಾಗಲೀ ನಿಂದನೆಯೂ ಇಲ್ಲ, ದ್ವೇಷವೂ ಇಲ್ಲ, ತದ್ವಿರುದ್ಧವಾಗಿ ಬಾರ್ ಕೌನ್ಸಿಲ್ ನ ನಿರ್ಣಯದ ಕೆಲವು ಪದಗಳು ಭಯಪಡಿಸುವುದಕ್ಕಾಗಿ ಎಂದು ಭಾವಿಸಬಹುದು. ಈ ರೀತಿ ಒಬ್ಬ ವ್ಯಕ್ತಿ ಅಥವ ವ್ಯಕ್ತಿಗಳನ್ನು ಈ ರೀತಿ ಭಯಪಡಿಸುವುದು ಮತ್ತು ಬೆದರಿಸುವುದು ಬಾರ್ ಕೌನ್ಸಿಲ್‍ನ ವಿಧಿ-ವಿಧಾನದೊಳಗೆ ಇದೆಯೇ ಎಂದು ಬಾರ್ ಕೌನ್ಸಿಲ್‍ನ ಅಧ್ಯಕ್ಷರಿಗೆ ಬರೆದ ಪತ್ರದ ಕೊನೆಯಲ್ಲಿ ಬೃಂದಾ ಕಾರಟ್ ತೀವ್ರ ಸಂದೇಹ ವ್ಯಕ್ತಪಡಿಸಿದ್ದಾರೆ.