ಮಂಡ್ಯ: ಸಚಿವ ಸ್ಥಾನಮಾನ ದುರುಪಯೋಗಪಡಿಸಿಕೊಂಡು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಘನತೆಗೆ ಕುಂದುಂಟು ಮಾಡುತ್ತಿರುವ ಮಹೇಶ್ ಜೋಶಿಯವರ ಸಚಿವ ಸ್ಥಾನಮಾನವನ್ನು ಹಿಂಪಡೆಯಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಮಂಡ್ಯ ಜಿಲ್ಲಾ ಸಮಿತಿ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದೆ.
ಜಿಲ್ಲಾ ಕಾರ್ಯದರ್ಶಿ ಟಿ.ಎಲ್. ಕೃಷ್ಣೇಗೌಡ, ಹಾಗೂ ಸದಸ್ಯರಾದ ಎಂ.ಪುಟ್ಟಮಾದು, ದೇವಿ, ಟಿ.ಯಶವಂತ, ಸಿ.ಕುಮಾರಿ, ಎನ್.ಎಲ್. ಭರತ್‌ರಾಜ್ ಜಂಟಿ ಪ್ರಕಟಣೆ ನೀಡಿದ್ದು, ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನ ಸಾಹಿತ್ಯ ಪರಿಚಾರಿಕೆ ಮಾಡಲೇ ಹೊರತು ಅಧಿಕಾರ ಚಲಾವಣೆಗಲ್ಲ, ಈ ಹಿಂದಿನ ಸರ್ಕಾರ ರಾಜಕೀಯ ಕಾರಣಗಳಿಗಾಗಿ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸಚಿವರ ಸ್ಥಾನಮಾನ ದಯಪಾಲಿಸಿದೆ. ಇದನ್ನು ಕೂಡಲೇ ಹಿಂಪಡೆದು ಪರಿಷತ್ತಿನ ಘನತೆಯನ್ನು ಎತ್ತಿ ಹಿಡಿಯಬೇಕೆಂದು ಒತ್ತಾಯಿಸಿದ್ದಾರೆ.
ಹಾಲಿ ಅಧ್ಯಕ್ಷರಾಗಿರುವ ಮಹೇಶ್ ಜೋಶಿಯವರು ಪರಿಷತ್ತಿನ ಅಧ್ಯಕ್ಷ ಸ್ಥಾನ ಪರಿಚಾರಿಕೆಯ ಸ್ಥಾನ ಎಂಬುದನ್ನು ಮರೆತು ತಮ್ಮ ಸಚಿವ ಸ್ಥಾನಮಾನವನ್ನು ದುರುಪಯೋಗಪಡಿಸಿಕೊಂಡು ಹಿರಿಯ ಸಾಹಿತಿಗಳು, ಜಿಲ್ಲಾಡಳಿತ ಮತ್ತು ಸ್ಥಳೀಯ ಜನ ಪ್ರತಿನಿಧಿಗಳು ಸೇರಿದಂತೆ ಎಲ್ಲರ ಮೇಲೂ ಅಧಿಕಾರ ಚಲಾಯಿಸುವ, ಅಹಂಕಾರ ಮೆರೆಯುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಸಾಹಿತಿಗಳು ಮತ್ತು ಸಾಹಿತ್ಯ ಪ್ರೇಮಿಗಳು ಮುಜುಗರ ಪಡುವಂತಾಗಿದೆ ಎಂದು ಸಿಪಿಐಎಂ ಮಂಡ್ಯ ಜಿಲ್ಲಾ ಸಮಿತಿ ಅಭಿಪ್ರಾಯ ಪಟ್ಟಿದೆ.
ಪಂಪನಿಂದ ದೇವನೂರು ಮಹಾದೇವ ವರೆಗಿನ ಕನ್ನಡ ಸಾಹಿತ್ಯ ಪರಂಪರೆ ಬಹಳ ದೊಡ್ಡದು ಮತ್ತು ಘನತೆಯದು. ಅದು ಎಲ್ಲರನ್ನೂ ಒಳಗೊಂಡ, ಅಪ್ಪಿಕೊಂಡ ಪರಂಪರೆ. ಆದರೆ ಈಗಿನ ಅಧ್ಯಕ್ಷ ಜೋಶಿಯವರು ತಮ್ಮ ಜಾತಿ ಶ್ರೇಷ್ಠತೆ ಮತ್ತು ಅಧಿಕಾರದ ಅಹಂನಿಂದ ಎಲ್ಲರನ್ನೂ ದೂರ ತಳ್ಳುವ ಕನ್ನಡವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಅಧ್ಯಕ್ಷರಿಗೆ ನೀಡಿರುವ ಸಚಿವ ಸ್ಥಾನಮಾನ ತೆಗೆದು ಪರಿಷತ್ತಿನ ಅಧ್ಯಕ್ಷರ ನೈಜ ಜವಾಬ್ದಾರಿ ಏನು ಎನ್ನುವುದನ್ನು ಜೋಶಿಯವರು ಅರಿತು ಮುನ್ನಡೆಯುವಂತೆ ಮಾಡಬೇಕೆಂದು ಸಿಪಿಐಎಂ ಮಂಡ್ಯ ಜಿಲ್ಲಾ ಸಮಿತಿ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.