ಬೆಂಗಳೂರು: ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಹಲವು ಮಹತ್ವದ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ರೈತರ ಮಕ್ಕಳಿಗೆ ಅವರ ಉನ್ನತ ಶಿಕ್ಷಣ ಪ್ರೋತ್ಸಾಹ ಧನ, ಮತ್ತು ಹೊಸ ಶಿಷ್ಯ ವೇತನ ಯೋಜನೆ ಜಾರಿಗೊಳಿಸಿದ್ದಾರೆ. ಇದಕ್ಕಾಗಿ ಸರಕಾರ 1 ಸಾವಿರ ಕೋಟಿ ಹಣ ಮೀಸಲಿಟ್ಟಿದೆ. ಈಗಾಗಲೇ ಜಾರಿಯಲ್ಲಿರುವ ಸಂಧ್ಯಾ ಸುರಕ್ಷಾ ಯೋಜನೆಯ ಪಿಂಚಣಿಯನ್ನು ತಿಂಗಳಿಗೆ 1200 ರೂಪಾಯಿಗಳಿಗೆ ಏರಿಕೆ ಮಾಡುತ್ತಿದ್ದು ಇದರಿಂದ 35 ಲಕ್ಷ ಫಲಾನುಭವಿಗಳಿಗೆ ಲಾಭ ಉಂಟಾಗಲಿದೆ. ಸರ್ಕಾರಕ್ಕೆ 863 ಕೋಟಿ ರೂಪಾಯಿ ಹೆಚ್ಚು ಖರ್ಚಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು.
ಇದನ್ನು ಓದಿ: ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕಾರ
ವಿಧವಾ ವೇತನವನ್ನೂ 600 ರಿಂದ 800 ರೂಪಾಯಿಗಳಿಗೆ ಏರಿಕೆ ಮಾಡಲಾಗಿದ್ದು, 17.25 ಲಕ್ಷ ಫಲಾನುಭವಿಗಳಿಗೆ ಪ್ರಯೋಜನವಾಗಲಿದೆ ಹಾಗೂ 414 ಕೋಟಿ ಹೆಚ್ಚುವರಿ ವೆಚ್ಚವಾಗಲಿದೆ. ಶೇಕಡಾ 40-70 ಅಂಗವೈಕಲ್ಯವಿರುವವರಿಗೆ ಮಾಸಿಕವಾಗಿ ಈಗ ನೀಡಲಾಗುತ್ತಿರುವ 600 ರೂಪಾಯಿಗಳ ವೇತನವನ್ನು 800 ರೂಗಳಿಗೆ ಏರಿಕೆ ಮಾಡಲಾಗಿದೆ. ಇದರಿಂದ 3.66 ಸಾವಿರ ಫಲಾನುಭವಿಗಳು ಪ್ರಯೋಜನವಾಗಲಿದ್ದು ಸರ್ಕಾರದ ಬೊಕ್ಕಸಕ್ಕೆ 90 ಕೋಟಿ ಹೆಚ್ಚು ವೆಚ್ಚವಾಗಲಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ.
‘ದಕ್ಷ, ಜನಪರ ಆಡಳಿತ ನನ್ನ ಸರಕಾರದ ಗುರಿಯಾಗಿದೆ. ಸಮಾಜದ ಕಟ್ಟ ಕಡೆಯ ದೀನ ದಲಿತ, ಹಿಂದುಳಿದ, ಕೂಲಿಕಾರರ ಪರವಾಗಿ ಕೆಲಸ ಮಾಡುತ್ತೇನೆ. ನಾನು ರಬ್ಬರ್ ಸ್ಟಾಂಪ್ ಅಲ್ಲ. ರೈತರ ಮಕ್ಕಳ ಉನ್ನತಿಯ ಬಗ್ಗೆ ಚಿಂತನೆ, ಬಡವರಿಗೆ ಸಹಾಯ ನನ್ನ ಮೊದಲ ಆದ್ಯತೆಯಾಗಲಿದೆ. ಜನಕಲ್ಯಾಣ, ಬಡವ, ದೀನದಲಿತರ ಪರವಾಗಿ ಸರಕಾರ ಇರಲಿದೆʼ ಎಂದರು.
ಇದನ್ನು ಓದಿ: ನೂತನ ಮುಖ್ಯಮಂತ್ರಿ ಬೊಮ್ಮಾಯಿಗೆ ಪ್ರಧಾನಿ ಮೋದಿ ಅಭಿನಂದನೆ
ಪತ್ರಿಕಾಗೋಷ್ಠಿಗೂ ಮುನ್ನ ಅಧಿಕಾರಿಗಳ ಸಭೆ ನಡೆಸಿದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ದಿಕ್ಕುದೆಸೆ ದಿಕ್ಸೂಚಿ ಏನೆಂಬುದನ್ನು ಮನವರಿಕೆ ಮಾಡಿದರು. ಎಲ್ಲಾ ಇಲಾಖೆಗಳಲ್ಲಿ ಬಾಕಿ ಉಳಿದ ಕಡತಗಳನ್ನು ವಿಲೇವಾರಿ ಮಾಡಲು ಕಡತ ಯಜ್ಞ ನಡೆಸಲಿದ್ದು, 15 ದಿನಗಳಲ್ಲಿ ವಿಲೇವಾರಿ ಮಾಡಲಾಗುವುದು. ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ಇಲಾಖೆಗಳ ಮಧ್ಯೆ ಸಮನ್ವಯಕ್ಕೆ ಒತ್ತು ನೀಡಲಾಗುವುದು ಎಂದರು.
ನಾವು ಇನ್ನಷ್ಟು ದಕ್ಷತೆಯಿಂದ ಕೆಲಸ ಮಾಡಬೇಕು. ಸಚಿವ ಸಂಪುಟದ ನಿರ್ಣಯಗಳು ಕಾಲಮಿತಿಯಲ್ಲಿ ಅನುಷ್ಠಾನಗೊಳ್ಳಬೇಕು. ವಿಳಂಬವಾದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ನೀಡಿದಂತಾಗುತ್ತದೆ. ಆದ್ದರಿಂದ ಸರಕಾರದ ನಿರ್ಣಯಗಳು ನಿಗದಿತ ಕಾಲಮಿತಿಯಲ್ಲಿ ಕಾರ್ಯರೂಪಕ್ಕೆ ಬರಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಸಂಪುಟ ವಿಸ್ತರಣೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ನಂತರ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ. ಇಂದು ದೆಹಲಿಗೆ ಹೋಗಿ ಪಕ್ಷದ ವರಿಷ್ಠರನ್ನು ಭೇಟಿ ಮಾಡುತ್ತೇನೆ. ರಾಜ್ಯದ ಸ್ಥಿತಿಗತಿಯ ಕುರಿತು ಅಧಿಕಾರಿಗಳೊಂದಿಗೆ ಸಭೆ ಮಾಡುತ್ತೇವೆ. ಎಲ್ಲರ ಸಹಕಾರದೊಂದಿಗೆ ಉತ್ತಮವಾಗಿ ಕೆಲಸ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.