ಮಹಾತ್ಮ ಗಾಂಧೀಜಿಯವರ ನೆನೆಯುತ್ತ….. ಅವರು ವಿಮರ್ಶಾತೀತರೇ?

ಜಿ.ಎನ್‌. ನಾಗರಾಜ್‌

ʻʻಮೋದಿಯವರೂ ಕೂಡಾ ವಿದೇಶಿ ಗಣ್ಯರನ್ನು ಗಾಂಧಿಯವರ ಸಮಾಧಿಯ ಬಳಿಗೆ ಕೊಂಡೊಯ್ಯುತ್ತಾರಲ್ಲದೆ  ಹೆಡಗೆವಾರ್, ಗೋಲ್ವಾಲ್ಕರ್ ಸಮಾಧಿಯತ್ತ ಕರೆದೊಯ್ಯಲು ಸಾಧ್ಯವೇ?” ಇದು ವಿಧಾನಸೌಧದ ಬಳಿಯ ಗಾಂಧಿ ಪ್ರತಿಮೆ ಬಳಿ ನಡೆದ ಹೋರಾಟವೊಂದರಲ್ಲಿ ಸಿದ್ಧರಾಮಯ್ಯ ಮೊದಲಾದ ನಾಯಕರ ಮುಂದೆ ನಾನು ಹೇಳಿದ  ಮಾತು.

ಭಾರತದ ಚರಿತ್ರೆಯಲ್ಲಿ ಅತ್ಯಂತ  ಪ್ರಭಾವಶಾಲಿ ವ್ಯಕ್ತಿತ್ವಗಳಲ್ಲಿ ಮುಖ್ಯರಾದವರು ಗಾಂಧೀಜಿ. ಸ್ವಾತಂತ್ರ್ಯ ಚಳುವಳಿಯ ಪ್ರಧಾನ ನೇತಾರರಾಗಿ ಭಾರತ ಮಾತ್ರವಲ್ಲ ವಿಶ್ವದ ಆಧುನಿಕ ಇತಿಹಾಸದ ಮೇಲೆ  ಪ್ರಭಾವ ಬೀರಿದವರು.

ಅವರು ಸ್ವಾತಂತ್ರ್ಯ ಸಾಧನೆಗಾಗಿ ರೂಪಿಸಿದ  ಬಾಯ್ಕಾಟ್, ಸತ್ಯಾಗ್ರಹ, ಕರ ನಿರಾಕರಣೆ ಮೊದಲಾದ ವಿಧಾನಗಳು ಲಕ್ಷಾಂತರ ಜನ ಸಾಮಾನ್ಯರನ್ನು ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿಸುವುದಕ್ಕೆ ಬಹಳ ಉಪಯುಕ್ತವಾದವು. ಅಲ್ಲಿಯವರೆಗೆ ಕೇವಲ ಪದವೀಧರ ಶ್ರೀಮಂತ ಹಾಗೂ ಮಧ್ಯಮ ವರ್ಗದ ಕೆಲವರು ಬ್ರಿಟಿಷರಿಗೆ ಮನವಿ ಸಲ್ಲಿಸಲು ಹೆಚ್ಚು ಸೀಮಿತವಾಗಿದ್ದ ಸ್ವಾತಂತ್ರ್ಯ ಹೋರಾಟ ಸಾಮೂಹಿಕ ಹೋರಾಟವಾಯಿತು. ಸಿನಿಮಾ ಭಾಷೆಯಲ್ಲಿ ಹೇಳುವುದಾದರೆ ಕ್ಲಾಸ್ ಆಗಿದ್ದ ಸ್ವಾತಂತ್ರ್ಯ ಚಳುವಳಿಯನ್ನು ಮಾಸ್ ಚಳುವಳಿಯಾಗಿಸಿತು.

ಇದು ಭಾರತದ ಸ್ವಾತಂತ್ರ್ಯಕ್ಕೆ ಗಾಂಧೀಜಿಯವರ ಬಹು ದೊಡ್ಡ ಕೊಡುಗೆ. ಅವರು ಹೋರಾಟ ಆರಂಭಿಸಿದ್ದೇ ರೈತ ಚಳುವಳಿಯ ಮೂಲಕ. ಬಿಹಾರದ ಚಂಪಾರಣ್‌ನಲ್ಲಿ ಬ್ರಿಟಿಷ್ ಕಂಪನಿಗಳಿಗೆ ನೀಲಿ ಬಣ್ಣ ನೀಡುವ ಬೆಳೆ ಬೆಳೆದು ಅಪಾರ ನಷ್ಟ, ಸಾಲ ಭಾಧೆಗೆ ಒಳಗಾಗಿದ್ದ ರೈತರ, ಗೇಣೀದಾರರ ಹೋರಾಟ. ಅವರು ಮೊದಲು ಬಂಧನಕ್ಕೊಳಗಾಗಿದ್ದು ಈ ಹೋರಾಟದಲ್ಲಿಯೇ. ನಂತರ ಹತ್ತಿ ಗಿರಣಿ ಕಾರ್ಮಿಕರ ಮುಷ್ಕರಕ್ಕೆ ಬೆಂಬಲಿಸಿ ಮೊದಲ ಉಪವಾಸ ಸತ್ಯಾಗ್ರಹ ಕೈಗೊಂಡರು. ಹೀಗೆ ರೈತ,ಕಾರ್ಮಿಕ ಜನ ಸಮುದಾಯವನ್ನು ಹೋರಾಟಕ್ಕೆ ಸೆಳೆದರು. ಇವುಗಳ ಜೊತೆಗೆ ಮಹಿಳೆಯರ ಮತ್ತು ಅಸ್ಪೃಶ್ಯತೆಯ ಬಗ್ಗೆ ಮಾತು ಮತ್ತು ಚಟುವಟಿಕೆಗಳು ದಲಿತ, ಮಹಿಳಾ ಸಮುದಾಯಗಳನ್ನು ಚಳುವಳಿಯ ಪರಿಧಿಯೊಳಕ್ಕೆ ಸೆಳೆದವು.

ಅದೇ ಸಮಯದಲ್ಲಿ ಇವು ಭಾರತದ ಜಾತಿ ವ್ಯವಸ್ಥೆಯ ಹಾಗೂ ಮಹಿಳಾ ಅಸಮಾನತೆಯ ಮೂಲ ಅಡಿಪಾಯವನ್ನು ಕದಲಿಸದೇ ಕೇವಲ ಮೇಲ್ಪದರದ ಮಾತುಗಳಾದವು.

ಅಂದಿನ ಭಾರತದ ಕಾರ್ಪೊರೇಟ್ ಮತ್ತು ಪಾಳೆಯಗಾರಿ ಭೂ ಒಡೆಯರು ಮತ್ತು ರಾಜ ಉಪರಾಜರುಗಳ ದಬ್ಬಾಳಿಕೆಯನ್ನು, ಕ್ರೌರ್ಯವನ್ನು, ಆರ್ಥಿಕ, ಸಾಮಾಜಿಕ ಶೋಷಣೆಯನ್ನು ಮುಂದುವರೆಸುವ , ಅವರ ಜೊತೆ ಸಹಚರರಾಗಿ, ಜೀತಗಾರ, ಗೇಣಿದಾರ ರೈತರ ಸಂಕಟಗಳನ್ನು ಕಡೆಗಣಿಸುವ ಮನೋಭಾವ ಅಂದಿನ ಅವರ ಕ್ರಿಯೆಗಳನ್ನು ಅಧ್ಯಯನ ಮಾಡಿದವರಿಗೆ ಎದ್ದು ಕಾಣುತ್ತದೆ.

ಇದೇ ಕಾರಣಕ್ಕಾಗಿ ಜಾತಿ ವ್ಯವಸ್ಥೆಯ ವಿನಾಶದ ಗುರಿಯಿಲ್ಲದೆ, ಕೇವಲ ಅಸ್ಪೃಶ್ಯತೆಯನ್ನು ನಿರ್ಮೂಲ‌ ಮಾಡುವ ಅವರ ವಿಚಾರ ದಲಿತರನ್ನು ಆಳುವ ವ್ಯವಸ್ಥೆಯಲ್ಲಿ ಸೀಮಿತ ಭಾಗವಾಗಿಸುವುದರಲ್ಲಿ ಮಾತ್ರ ಪರ್ಯವಸಾನವಾಯಿತು. ಕೊನೆಗೆ ಅವರು ಅಂತರ್ಜಾತೀಯ ವಿವಾಹಗಳಿಗೆ ಒತ್ತು ಕೊಟ್ಟರೂ ಜಾತಿ ವಿನಾಶಕ್ಕೆ ಅವರು ಮನಸ್ಸು ಮಾಡಲಿಲ್ಲ. ಇಂತಹ ಮನಸ್ಥಿತಿಯೇ ಸಂವಿಧಾನ ಸಭೆಯಲ್ಲಿ ಡಾ. ಅಂಬೇಡ್ಕರ್‌ರವರು ಜಾತಿ ವ್ಯವಸ್ಥೆಯ ನಿಷೇಧವಿಲ್ಲದೆ ಅಸ್ಪೃಶ್ಯತೆಯ ನಿಷೇಧ ಸಾಧ್ಯವಿಲ್ಲ ಎಂದರೂ ಕೇವಲ ಅಸ್ಪೃಶ್ಯತೆಯ ನಿಷೇಧ ಅಷ್ಟೇ ಮಾಡಲಾಯಿತು. ಇಂದಿಗೂ ಅಸ್ಪೃಶ್ಯತೆಯ ನಿಷೇಧ ಕಾಗದದ ಮೇಲೆ ಮಾತ್ರ ಇದೆ. ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಲೇ ಇವೆ.

ಕೋಮು ಸಾಮರಸ್ಯಕ್ಕಾಗಿ ಅವರ ನಿರಂತರ ಮತ್ತು‌ ಪ್ರಾಮಾಣಿಕ ಪ್ರಯತ್ನ ಇಂದಿನ ದಿನಗಳಲ್ಲಿ ಮತ್ತೆ ಮತ್ತೆ ನೆನಪಿಗೆ ತಂದುಕೊಳ್ಳಬೇಕು. ಆದರೆ ಇಂದು ಕೋಮುವಾದ ವಿಜೃಂಭಿಸುವುದರಲ್ಲಿ ಅವರ ಕ್ರಿಯೆಗಳ ಅನಿಚ್ಛಿತ ಪರಿಣಾಮವನ್ನೂ ಗಮನಿಸಲೇಬೇಕು.

ಅವರು ರಾಜರಾಡಳಿತದ ಸಂಸ್ಥಾನಗಳಲ್ಲಿ ಸ್ವಾತಂತ್ರ್ಯ ಚಳುವಳಿ ಮತ್ತು ಕಾಂಗ್ರೆಸ್ ಸ್ಥಾಪನೆಯನ್ನು ಪ್ರತಿಬಂಧಿಸಿದರು. ಅದರ ಪರಿಣಾಮವಾಗಿ ರಾಜರುಗಳ ಬೆಂಬಲ ಪಡೆದು ಆರೆಸ್ಸೆಸ್ ಬೆಳೆಯಿತು. ಅರಮನೆಗಳೇ ಆರೆಸ್ಸೆಸ್ ಕೇಂದ್ರಗಳಾದವು. ಮೈಸೂರು ಮಹರಾಜರಂತೆ ಅಂತಹ ಕೃತ್ಯಕ್ಕೆ ಕೈ ಹಾಕದವರು ಕೆಲವೇ ಕೆಲವರು. ಉತ್ತರ ಭಾರತದಲ್ಲಿ ಈ ಸಂಸ್ಥಾನಗಳಲ್ಲಿ ಆರೆಸ್ಸೆಸ್,  ಸ್ವಾತಂತ್ರ್ಯ ಬರುವ ವೇಳೆಗೆ ಬಹು ಕ್ರೂರ ಮತ್ತು ಬೃಹತ್ ಕೋಮು ಹತ್ಯೆಗಳನ್ನು ಮಾಡಲು ಶಕ್ತವಾಯಿತು.

ಅದರಿಂದ ಆ ಪ್ರದೇಶಗಳಲ್ಲಿ ರಾಜಾಸ್ಥಾನ, ಮಧ್ಯಪ್ರದೇಶ, ಉತ್ತರಪ್ರದೇಶ, ಚತ್ತೀಸಗಢ, ಜಾರ್ಖಂಡ್, ಹರಿಯಾಣ, ಜಮ್ಮು ಮತ್ತಿತರ ಪ್ರದೇಶಗಳಲ್ಲಿ ಮತ್ತಷ್ಟು ಬೆಳೆದು ಭದ್ರ ನೆಲೆಗಳನ್ನು ಪಡೆಯಿತು. ಇಂದಿಗೂ ಬಿಜೆಪಿಯ ಭದ್ರ ನೆಲೆಯಾಗಿವೆ.

ಗಾಂಧೀಜಿಯವರಿಗೆ ಸ್ವಾತಂತ್ರ್ಯವೆಂದರೆ ಮೊದ‌ಮೊದಲು ಬ್ರಿಟಿಷ್ ಆಡಳಿತದಲ್ಲಿ ಭಾರತೀಯರಿಗೂ ಪಾಲು ಪಡೆಯುವುದಷ್ಟೇ ಆಗಿತ್ತು. ನಂತರ ಕೇವಲ ಬ್ರಿಟಿಷರನ್ನು ಓಡಿಸುವುದು ಎಂದಾಯಿತು.

ಭಾರತದಲ್ಲಿ ಪ್ರಜಾಪ್ರಭುತ್ವದ, ಗಣರಾಜ್ಯದ ಮೌಲ್ಯಗಳನ್ನು ಪಸರಿಸುವುದು, ಜನಮನದಲ್ಲಿ ಬೇರೂರುವಂತೆ ಮಾಡುವುದು ಅವರಿಗೆ ಮುಖ್ಯವಾಗಲಿಲ್ಲ. ಅದನ್ನು ಸಾಧ್ಯವಾಗಿಸಿದ ಫ್ರೆಂಚ್ ಕ್ರಾಂತಿಯ ಸಂದರ್ಭದಲ್ಲಿ ಪ್ರಜಾಪ್ರಭುತ್ವ ಬೇರೂರಲು ಪುರೋಹಿತಶಾಹಿಯ ಸಂಪತ್ತನ್ನು ವಶಪಡಿಸಿಕೊಂಡು ಅವರನ್ನು ದುರ್ಬಲರನ್ನಾಗಿಸುವುದು, ರಾಜ ಪ್ರಭುತ್ವಗಳ, ಪಾಳೆಯಗಾರಿ ದಬ್ಬಾಳಿಕೆಯ ನಿರ್ಮೂಲನ ಮಾಡುವುದಕ್ಕೆ ಬದಲಾಗಿ ಅವರನ್ನು ಸಂರಕ್ಷಿಸುವ ಪ್ರಯತ್ನಪಟ್ಟರು. ಇದೇ ಇಂದು ಬಿಜೆಪಿಯ ಬೆಳವಣಿಗೆಯ ಮುಖ್ಯ ಆಧಾರ. ಅದರ ಜೊತೆಗೆ ಅವರು ಉಪಯೋಗಿಸಿದ ಧಾರ್ಮಿಕ ಸಂಕೇತಗಳು, ಮಾತುಗಳು ಖಿಲಾಫತ್ ಚಳುವಳಿಯ ನಂತರ ಮುಸ್ಲಿಮರು ಸ್ವಾತಂತ್ರ್ಯ ಚಳುವಳಿಯಿಂದ ದೂರ ಸರಿಯುವಂತಾಯಿತು. ಮುಸ್ಲಿಂ ಲೀಗ್ ಬಲಗೊಂಡಿತು.

ಅದೇ ಧಾರ್ಮಿಕ ಸಂಕೇತಗಳು ಆರೆಸ್ಸೆಸ್ಸಿ‌ನ ಹಿಂದು ರಾಷ್ಟ್ರ ಸಿದ್ಧಾಂತವನ್ನು ಜನರ ನಡುವೆ ಬಿತ್ತಲು ಸಹಾಯಕವಾದವು. ಇನ್ನು ವೈಚಾರಿಕತೆ ಮತ್ತು ವೈಜ್ಞಾನಿಕತೆಯಂತೂ ದೂರವೇ ಉಳಿಯಿತು.

ಅಂದು ಗಾಂಧೀಜಿಯವರ ಬಿರ್ಲಾ, ಬಜಾಜ್‌ರಂತವರ ಧನ ಮತ್ತಿತರ ಸಹಾಯ ಪಡೆದದ್ದು ನಂತರ ಟಾಟಾ ಬಿರ್ಲಾಗಳ, ಇಂದು ಅಂಬಾನಿ, ಅದಾನಿಗಳ ಪ್ರಾಬಲ್ಯಕ್ಕೆ ಕಾರಣವಾಗಿರುವುದನ್ನು ಗಮನಿಸದಿದ್ದರೆ ಕೇವಲ ವ್ಯಕ್ತಿ ಪೂಜೆಯಾಗುತ್ತದೆ.

ಈ ಬರಹವನ್ನು ಓದಿ ನನ್ನ ಮೇಲೆ ಸಿಟ್ಟುಗೊಳ್ಳುವವರು ಲಂಕೇಶರು ಸಂದ್ಯಾ ರೆಡ್ಡಿಯವರಿಗೆ ಸಲಹೆ ಮಾಡಿ ಅನುವಾದ ಮಾಡಿಸಿದ ʻಬರ್ಕ್‌ವೈಟ್ ಕಂಡ ಭಾರತʼ ಎಂಬ ಪತ್ರಕರ್ತೆಯ ಬರಹಗಳ ಪುಸ್ತಕವನ್ನು ದಯವಿಟ್ಟು ಓದಿ.

ಹೀಗೆ ಗಾಂಧೀಜಿಯವರ ವ್ಯಕ್ತಿತ್ವ ,ಕ್ರಿಯೆಗಳು ಇಂದಿನ ಭಾರತದ ಮೇಲೆ ಬೀರಿದ‌ ಪರಿಣಾಮವನ್ನು ಸಮಗ್ರವಾಗಿ ಗ್ರಹಿಸಬೇಕು. ಆಗ ಮಾತ್ರ ಅವರ ನಿಜ ಮೌಲ್ಯವನ್ನೂ ಮತ್ತು ಇಂದಿನ ಭಾರತದ ಸಮಸ್ಯೆಗಳ ಪರಿಹಾರದ ದಾರಿಯನ್ನೂ ಕಂಡುಕೊಳ್ಳಬಹುದು.

ಕೇವಲ” ಜಯ ಜಯ ಗಾಂಧಿ ಮೋಹನ” ಎಂಬ ಅರಾಧನಾ ಮನೋಭಾವದ , ಅವಿಮರ್ಶಾತ್ಮಕ ದೃಷ್ಟಿ ನಮ್ಮ ಸಮಸ್ಯೆಗಳು ಮತ್ತಷ್ಟು ಉಲ್ಬಣಗೊಳ್ಳುವಂತೆ ಮಾಡುತ್ತವೆ.

ಆರೆಸ್ಸೆಸ್- ಬಿಜೆಪಿ ಅವರ ಮೇಲೆ ಎಸಗುತ್ತಿರುವ ಅವೈಚಾರಿಕ ಧಾಳಿಯ ವಿರುದ್ಧ ಗಾಂಧೀಜಿಯನ್ನು ಸಮರ್ಥಿಸಿಕೊಳ್ಳಬೇಕು ನಿಜ. ಅದೇ ಸಮಯದಲ್ಲಿ ಅವೈಚಾರಿಕತೆ ಆರಾಧನೆ ಅದಕ್ಕೆ ಪರಿಹಾರವಲ್ಲ. ಅದೇ ಸಮಯದಲ್ಲಿ ಅವರ ನಿಂದನೆ, ಭರ್ತ್ಸನೆ ಪರಿಹಾರವಲ್ಲ. ಅವರ ಕೊಡುಗೆಗಳ ಜೊತೆಗೆ ಅವರ ಚಿಂತನೆ, ಕ್ರಿಯೆಗಳ ನೆಗೆಟಿವ್ ಪರಿಣಾಮಗಳನ್ನು ಅಧ್ಯಯನಪೂರ್ಣವಾಗಿ ವಿಶ್ಲೇಷಿಸಬೇಕು.

ಗಾಂಧೀಜಿಯವರ ಬಗ್ಗೆ ಡಾ.ಬಿ.ಆರ್‌.ಅಂಬೇಡ್ಕರ್, ಸುಭಾಸ್ ಚಂದ್ರ ಬೋಸ್, ಇ‌.ಎಂ.ಎಸ್.ನಂಬೂದರಿಪಾದ್‌, ಜ್ಯೋತಿಬಸು ಮೊದಲಾದ ಸಮಕಾಲೀನರು, ಅವರ ಚಿಂತನೆ, ಕ್ರಿಯೆಗಳನ್ನು ಹತ್ತಿರದಿಂದ ಗಮನಿಸಿದವರು, ಅವರೊಡನೆ ಒಡನಾಡಿದವರು ಅವರ ಅಭಿಪ್ರಾಯಗಳು, ವಿಮರ್ಶೆಗಳು ವಿನಾಕಾರಣವೇ?

ಗಾಂಧೀಜಿಯವರ ಬಗ್ಗೆ ಡಾ.ಬಿ.ಆರ್‌.ಅಂಬೇಡ್ಕರ್‌ರವರ ವಿಮರ್ಶೆ ಪೂನಾ ಒಪ್ಪಂದದ ಸಮಯದಲ್ಲಿ ಆರಂಭವಾದುದಲ್ಲ. ಅದಕ್ಕಿಂತ ದಶಕಗಟ್ಟಲೆ ಮೊದಲಿನದು.‌

ಇವರೆಲ್ಲ ನಮ್ಮ ಮುಂದಿಡುವ ಅಂಶಗಳನ್ನು ಪಕ್ಕಕ್ಕೆ ಸರಿಸುತ್ತೇವೆಂದರೆ ಗಾಂಧೀಜಿಯವರಿಗೆ ನಾವು ವಿಚಾರಶೀಲತೆಯನ್ನು ಕೈ ಬಿಟ್ಟಂತೆ. ಅಂಧಾಭಿಮಾನ ಮೆರೆದಂತೆ. ಇದು  ಭೂತ ಕಾಲದ ವಿಷಯವಲ್ಲ. ಭಾರತದ ವರ್ತಮಾನದ, ಭವಿಷ್ಯದ ದೃಷ್ಟಿಯಿಂದ ಅಗತ್ಯ. ಗಾಂಧೀಜಿಯವರ ಬಗ್ಗೆ ಏಕಮುಖ ನಿಂದೆ ಸರಿಯಲ್ಲ, ನಿಜ. ಆದರೆ ಅವರು ವಿಮರ್ಶಾತೀತರೇ?

ನಮ್ಮ ಪಠ್ಯಗಳು , ಪತ್ರಿಕೆಗಳು ಮೂಡಿಸುವ ಬಿಂಬಗಳ ಹಿಡಿತ ಎಷ್ಟಿದೆಯೆಂದರೆ ಸ್ವತಃ ಗಾಂಧೀಜಿಯವರ ಕಾಲದಲ್ಲಿ ಬದುಕಿದ್ದ, ಅವರ ಜೊತೆಗೂಡಿ ಹೋರಾಡಿದ ಅಥವಾ ಅಂದೇ ಅವರೊಡನೆ ಭಿನ್ನಾಭಿಪ್ರಾಯ ಹೊಂದಿದ್ದ ವ್ಯಕ್ತಿಗಳ ವಿಚಾರ ಇರಲಿ, ಕಣ್ಣಿಗೆ ಹೊಡೆಯುವಂತಹ ನಿಜ ಸಂಗತಿಗಳಿಗೂ ಬೆಲೆಯಿಲ್ಲ.

ಕನಿಷ್ಟ ಹೀಗೂ ಇರಬಹುದೇ? ಚೆಕ್ ಮಾಡೋಣ, ಮತ್ತಷ್ಟು ಹೆಚ್ಚು ತಿಳಿದುಕೊಳ್ಳೋಣ ಎಂಬ ಭಾವನೆಯೂ ಮೂಡುವುದಿಲ್ಲವೆಂದಾದರೆ ಅದು ನಮ್ಮ ಪಠ್ಯಗಳು , ಶಿಕ್ಷಣದ ಮೇಲೆ , ಮಾಧ್ಯಮಗಳ ಮೇಲೆ ವ್ಯವಸ್ಥೆ ಹೊಂದಿರುವ ಹಿಡಿತದ ಅಮಾನುಷ ಬಲವನ್ನು ಪ್ರದರ್ಶಿಸಿದಂತೆ.

ನಾನು ಇಲ್ಲಿ ಹಲವು ಬಾರಿ, ನೆಹರೂ, ಸುಭಾಸ್‌ ಚಂದ್ರ ಬೋಸ್‌, ಜಯಪ್ರಕಾಶ್‌ ನಾರಾಯಣ್‌ ಮೊದಲಾದವರು ಸೇರಿದಂತೆ ಹಲವರು ಅವರೊಡನೆ ನಿಷ್ಟುರವಾಗಿ ಜಗಳಾಡಬೇಕಾದ ಸಂಗತಿಗಳು, ಬೇರೆಯಾಗಬೇಕಾದ ಅನಿವಾರ್ಯತೆಗಳು, ಅದರ ಹಿಂದಿನ ಕಾರಣಗಳ ಬಗ್ಗೆ ಬರೆದಿದ್ದೇನೆ.

ನನ್ನ ಮನವಿ ಇಷ್ಟೇ – ಯಾವ ಮಹಾನ್ ವ್ಯಕ್ತಿಯೂ ವಿಮರ್ಶಾತೀತರಲ್ಲ. ಹಾಗೆ ಪರಿಗಣಿಸುವುದು ವೈಚಾರಿಕತೆಯಲ್ಲ. ನಿಜ ಸಂಗತಿಗಳ ಆಧಾರದ ಅಭಿಪ್ರಾಯಗಳನ್ನು ಮಂಡಿಸೋಣ. ಕೇವಲ ನಾವು ಮೂಡಿಸಿಕೊಂಡ ನಂಬಿಕೆಗಳು, ಒಳ್ಳೆಯ , ಕೆಟ್ಟ ಪೂರ್ವಾಗ್ರಹಗಳ ಮೇಲಲ್ಲ.

ನಮ್ಮ ಮನದ ಬಿಂಬಗಳು ನಮ್ಮ ಮೇಲೆ ಹೇರಲ್ಪಟ್ಟಿರುವುವು. ನಮ ಸ್ವಂತ , ವಿವಿಧ ಆಯಾಮಗಳ , ಬಹುಮುಖೀ‌ ಅಧ್ಯಯನದ ಆಧಾರದ ಮೇಲೆ ನಮ್ಮದೇ ಸ್ವಂತ ನಿಲುವುಗಳನ್ನು ರೂಪಿಸಿಕೊಳ್ಳೋಣ.

Donate Janashakthi Media

Leave a Reply

Your email address will not be published. Required fields are marked *