ಮುಂಬೈ: ಮಹಾರಾಷ್ಟ್ರದಲ್ಲಿ ಮುಂಗಾರು ಮಳೆ ಅಬ್ಬರದಿಂದಾಗಿ ಭಾರೀ ಮಳೆಯಾಗುತ್ತಿದ್ದು, ಕಳೆದ 2 ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ 136 ಮಂದಿ ಮರಣ ಹೊಂದಿರುವುದು ವರದಿಯಾಗಿದೆ. ಮಳೆಯ ತೀವ್ರತೆಯಿಂದಾಗಿ ಹಲವೆಡೆ ಭೂಕುಸಿತ ಸಂಭವಿಸಿದ್ದು, ನೂರಾರು ಸಂಖ್ಯೆಯಲ್ಲಿ ಮನೆಗಳು ನೆಲಸಮಗೊಂಡಿವೆ. ರಾಯಗಢ ಜಿಲ್ಲೆಯ ತಲಾಯಿ ಎಂಬ ಒಂದೇ ಗ್ರಾಮದಲ್ಲಿ ನೆನ್ನೆ 24 ಮನೆಗಳು ಕುಸಿದು ಬಿದ್ದಿದ್ದು, 38 ಮಂದಿ ಸಾವನ್ನಪ್ಪಿದ್ದಾರೆ.
ಇದನ್ನು ಓದಿ: ಭಾರೀ ಮಳೆ-ಭೂಕುಸಿತ: ಮಹಾರಾಷ್ಟ್ರದಲ್ಲಿ ಮೃತರ ಸಂಖ್ಯೆ 60ಕ್ಕೆ ಏರಿಕೆ
ರಾಜ್ಯದಲ್ಲಿ ರಕ್ಷಣಾ ಕಾರಾರಯಚರಣೆ ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ಸೇನೆ, ನೌಕಾಪಡೆ, ವಾಯುಪಡೆ, ಕರಾವಳಿ ಪಡೆ, ರಾಷ್ಟ್ರೀಯ ವಿಪತ್ತು ರಕ್ಷಣಾ ಪಡೆ ಹಾಗೂ ಮಹಾರಾಷ್ಟ್ರ ಸರ್ಕಾರದ ವಿವಿಧ ವಿಭಾಗಗಳ ಸಿಬ್ಬಂದಿಗಳು ಕಾರ್ಯಚರಣೆಗೆ ಇಳಿದಿದ್ದಾರೆ.
ರಾಯಗಡ, ರತ್ನಾಗಿರಿ, ಕೊಂಕಣ ಪ್ರದೇಶ, ಕೊಲ್ಹಾಪುರ ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಅತಿ ಹೆಚ್ಚು ಹಾನಿ ಉಂಟಾಗಿದೆ. ಈವರೆಗೆ 90,000 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದೂ ಮಾಹಿತಿ ಇದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ರಾಯಗಡ ಜಿಲ್ಲೆಯ ಮಹಾದ್ ಪಟ್ಟಣ ಮತ್ತು ತಾಲಿಯಾ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ.
ಮಳೆ ಅನಾಹುತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಘಾತ ವ್ಯಕ್ತಪಡಿಸಿದ್ದಾರೆ. ಜೊತೆಗೆ ರಾಜ್ಯಕ್ಕೆ ಪರಿಹಾರ ಹಾಗೂ ರಕ್ಷಣಾ ಕಾರ್ಯದಲ್ಲಿ ಕೇಂದ್ರದಿಂದ ನೆರವು ನೀಡುವ ಎಲ್ಲ ಭರವಸೆ ನೀಡಿದ್ದಾರೆ. ಇನ್ನು, ಮಳೆಗೆ ಬಲಿಯಾದವರ ಕುಟುಂಬಕ್ಕೆ ಮಹಾರಾಷ್ಟ್ರ ರಾಜ್ಯ ಸರ್ಕಾರ ತಲಾ ರೂ.5 ಲಕ್ಷ ಮತ್ತು ಪ್ರಧಾನಿ ನರೇಂದ್ರ ಮೋದಿ ತಲಾ ರೂ. 2 ಲಕ್ಷ ಪರಿಹಾರ ಘೋಷಿಸಿದ್ದಾರೆ.
ಭಾರೀ ಮಳೆಯಿಂದಾಗಿ ಉಂಟಾದ ಪ್ರವಾಹದಲ್ಲಿ ಸಿಲುಕಿರುವವರ ರಕ್ಷಣೆಗೆ ಎನ್‌ಡಿಆರ್‌ಎಫ್ ತಂಡಗಳು ಕಾರ್ಯಚಾರಣೆಗೆ ಇಳಿದಿವೆ. ಈ ತಂಡಗಳ ಸಂಖ್ಯೆಯನ್ನು 18 ರಿಂದ 26ಕ್ಕೆ ಹೆಚ್ಚಿಸಲಾಗಿದೆ. ಒಡಿಶಾದಲ್ಲಿರುವ ಎನ್‌ಡಿಆರ್‌ಎಫ್‌ನ ಶಿಬಿರದಿಂದ 8 ಹೊಸ ತಂಡಗಳನ್ನು ಭಾರತೀಯ ವಾಯುಪಡೆ ಕಳುಹಿಸಿಕೊಟ್ಟಿದೆ. ಸರಕಾರದ ಜೊತೆ ಸಮಾಲೋಚನೆ ನಡೆಸಿದ ಬಳಿಕ ಮುಂಬೈ, ರತ್ನಾಗಿರಿ, ಠಾಣೆ, ಪಾಲ್ಘರ್, ರಾಯಗಡ, ಸಾತಾರ, ಸಾಂಗ್ಲಿ, ಸಿಂಧುದುರ್ಗ, ಕೊಲ್ಹಾಪುರ ಮತ್ತು ನಾಗಪುರದಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗುವುದು.
ಇದನ್ನು ಓದಿ: ರಾಜ್ಯದ ಹಲವೆಡೆ ಭಾರೀ ಮಳೆ: ಜುಲೈ 26ರವರೆಗೂ ಮಳೆ ಮುಂದುವರಿಕೆ ಹವಾಮಾನ ಇಲಾಖೆ ಸೂಚನೆ
ರಾಯಗಢದಲ್ಲಿ 38 ಜನರು ಮಣ್ಣುಪಾಲು
ರಾಯಗಢ ಜಿಲ್ಲೆಯ ತಲಾಯಿ ಗ್ರಾಮದಲ್ಲಿ ಗುಡ್ಡವೊಂದು ಕುಸಿದಿದ್ದರಿಂದ ಕೆಳಭಾಗದಲ್ಲಿದ್ದ 24 ಮನೆಗಳು ಮಣ್ಣಿನಲ್ಲಿ ಹೂತು ಹೋಗಿವೆ. ಇದರಿಂದ 38 ಜನ ಜೀವಂತ ಸಮಾಧಿಯಾಗಿದ್ದಾರೆ. ಇನ್ನು ಸತಾರಾ ಜಿಲ್ಲೆಯ ಮೋರಿಗಾಂವ್ ಎಂಬಲ್ಲಿ ಮಣ್ಣು ಕುಸಿದು 6 ಮಂದಿ ನಿಧನರಾಗಿದ್ದಾರೆ. ಮುಂಬೈನಲ್ಲಿ ಮನೆ ಬಿದ್ದು 4 ಜನ ಸಾವನ್ನಪ್ಪಿದ್ದಾರೆ. ರತ್ನಗಿರಿ ಜಿಲ್ಲೆಯಲ್ಲಿ 10 ಮಂದಿ, ಸತಾರಾದಲ್ಲಿ ಮೂವರು ನಾಪತ್ತೆಯಾಗಿದ್ದಾರೆ. ಅವರ ಪತ್ತೆಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಇದುವರೆಗೆ ಒಟ್ಟು 136 ಜನ ಬಲಿಯಾಗಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಮಾಹಿತಿ ನೀಡಿದೆ.
ಸತಾರಾ ಜಿಲ್ಲೆಯ ಅಂಬೇಘರ್ ಗ್ರಾಮದಲ್ಲಿ ಸಂಭವಿಸಿದ ಭೂಕುಸಿತದಿಂದ ಮರಣ ಹೊಂದಿದ ಐದು ಮೃತ ದೇಹಗಳನ್ನು ಹೊರ ತೆಗೆಯಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಟಾನ್ ತಹಸಿಲ್‌ನಲ್ಲಿರುವ ಗ್ರಾಮದಲ್ಲಿ ಭೂಕುಸಿತದಿಂದ 4-5 ಮನೆಗಳು ಮಣ್ಣಿನ ಅಡಿಯಲ್ಲಿ ಸಿಲುಕಿದ್ದು, ಕನಿಷ್ಠ 16 ಮಂದಿ ಸಿಲುಕಿಕೊಂಡಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿತ್ತು.
ಬಸ್‌ನಲ್ಲಿದ್ದ 11 ಮಂದಿ ರಕ್ಷಣೆ:
ಕೊಲ್ಹಾಪುರ ಜಿಲ್ಲೆಯ ಪಂಗಿರೆ ಎಂಬ ಗ್ರಾಮದ ಬಳಿ ಸೇತುವೆಯ ಮೇಲೆ ನದಿ ನೀರು ಉಕ್ಕೇರಿದ್ದರೂ ಅಧಿಕಾರಿಗಳ ಎಚ್ಚರಿಕೆ ನೀಡಿದರೂ ನಿರ್ಲಕ್ಷಿಸಿ ಚಾಲಕ ಬಸ್ ಚಲಾಯಿಸಿದ್ದಾನೆ. ನೀರಿನ ರಭಸಕ್ಕೆ ಬಸ್ ಕೊಚ್ಚಿ ಹೋಗಿದ್ದು ಕಂಡ ಅಲ್ಲಿಯೇ ಇದ್ದ ಇದ್ದ ಪೊಲೀಸರು ನೀರಲ್ಲೇ ಸಾಗಿ, ಬಸ್‌ನಲ್ಲಿದ್ದ 11 ಮಂದಿಯನ್ನು ರಕ್ಷಿಸಿದ್ದು, ಬಸ್ ನದಿಯಲ್ಲಿ ಕೊಚ್ಚಿಹೋಗಿದೆ.