ಮುಂಬಯಿ: ಕಳೆದ ಐದು ತಿಂಗಳ ಅವಧಿಯಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ 1,076 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮಹಾರಾಷ್ಟ್ರ ಪರಿಹಾರ ಮತ್ತು ಪುರ್ವಸತಿ ಸಚಿವ ವಿಜಯ್ ವಡೆತ್ತಿವಾರ್ ಸದನದಲ್ಲಿ ಮಾಹಿತಿ ನೀಡಿದರು.
ವಿಧಾನಸಭೆಯ ಕಲಾಪದಲ್ಲಿ ಪ್ರಶ್ನೋತ್ತರ ವೇಳೆ ಈ ಬಗ್ಗೆ ಉತ್ತರ ನೀಡಿದ ಸಚಿವರು 2021ರ ಜೂನ್‌ನಿಂದ ಅಕ್ಟೋಬರ್ ತಿಂಗಳವರೆಗೆ ರಾಜ್ಯದಲ್ಲಿ 1,076 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲ ಮರುಪಾವತಿ ಮಾಡಲು ಆಗದಿರುವುದು, ಪ್ರಕೃತಿ ವಿಕೋಪ ಸೇರಿದಂತೆ ವೈಯಕ್ತಿಕ ಹಾಗೂ ಕೌಟುಂಬಿಕ ಕಾರಣಗಳಿಂದಾಗಿ 1,076 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಆತ್ಮಹತ್ಯೆ ಮಾಡಿಕೊಂಡಿರುವವರಲ್ಲಿ 491 ಮಂದಿ ರಾಜ್ಯ ಸರ್ಕಾರದ ಮಹಾತ್ಮ ಜ್ಯೋತಿರಾವ್ ಫುಲೆ ಸಾಲ ಮನ್ನಾ ಯೋಜನೆಯ ವ್ಯಾಪ್ತಿಗೆ ಒಳಪಡುವ ಫಲಾನುಭವಿಗಳಾಗಿದ್ದಾರೆ. ಅವರನ್ನು ಸಂಬಂಧಿಸಿದ ಜಿಲ್ಲಾ ಮಟ್ಟದ ಸಮಿತಿಗಳು ಆರ್ಥಿಕ ನೆರವು ಯೋಜನೆಯಲ್ಲಿ ರೈತರನ್ನು ಗುರುತಿಸಿತ್ತು.
ಸರ್ಕಾರವು ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಮೃತ ರೈತರ ಕುಟುಂಬಕ್ಕೆ 1 ಲಕ್ಷ ರೂ. ಆರ್ಥಿಕ ನೆರವು ನೀಡಲಾಗಿದೆ. ಇದೇ ಸಂದರ್ಭದಲ್ಲಿ ಸಚಿವ ವಿಜಯ್ ವಡೆತ್ತಿವಾರ್ ಅವರು ರೈತರ ಆತ್ಮಹತ್ಯೆಯು ವಿಪತ್ತು ಪರಿಹಾರ ವ್ಯಾಪ್ತಿಗೆ ಒಳಪಡಿಸಲು ಮತ್ತು ಮೃತ ರೈತ ಕುಟುಂಬಗಳಿಗೆ ರೂ.4 ಲಕ್ಷ ಪರಿಹಾರ ನೀಡುವ ಕುರಿತು ರಾಜ್ಯ ಸಚಿವ ಸಂಪುಟದಲ್ಲಿ ಪ್ರಸ್ತಾಪಿಸುವುದಾಗಿ ತಿಳಿಸಿದರು.
ರೈತರಿಗೆ ನೆರವಾಗುವಂತೆ ತೆಲಂಗಾಣ ಸರ್ಕಾರದ ರೈತ ಬಂಧು ಕಾರ್ಯಕ್ರಮ ಅಧ್ಯಯನ ನಡೆಸಲಾಗುವುದು. ಈ ಬಗ್ಗೆ ಕೃಷಿ ಸಚಿವರಿಗೆ ಸೂಚಿಸಿದ್ದೇನೆ ಎಂದ ಸಚಿವ ವಿಜಯ್ ವಡೆತ್ತಿವಾರ್ ತಿಳಿಸಿದರು.