ಮುಂಬೈ : ತಮ್ಮ ಸಾಮರ್ಥ್ಯವನ್ನು ಕಡೆಗಣಿಸಿ, ಉಪಯೋಗಕ್ಕೆ ಬಾರದ ಹುದ್ದೆಗಳಿಗೆ ನೇಮಿಸುವ ಮೂಲಕ ತಮ್ಮನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಮಹಾರಾಷ್ಟ್ರದ ವೈದ್ಯಕೀಯ ಶಿಕ್ಷಣ ಮತ್ತು ಔಷಧ ಇಲಾಖೆ (ಎಂಇಡಿಡಿ)ಯಲ್ಲಿ ಜಂಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ದೌಲತ್ ದೇಸಾಯಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಕುರಿತು ಫೆಸ್ಬುಕ್‌ನಲ್ಲಿ ಬೇಸರ ವ್ಯಕ್ತಪಡಿಸಿರುವ ದೌಲತ್ ದೇಸಾಯಿ, ಮಹಾರಾಷ್ಟ್ರದ ವೈದ್ಯಕೀಯ ಶಿಕ್ಷಣ ಮತ್ತು ಔಷಧ ಇಲಾಖೆ (ಎಂಇಡಿಡಿ)ಗೆ ವರ್ಗಾವಣೆಯಾಗುವ ಮೊದಲು, ಕೊಲ್ಲಾಪುರದ ಜಿಲ್ಲಾಧಿಕಾರಿ ಆಗಿದ್ದರು ಮತ್ತು ಆ ಜಿಲ್ಲೆಯಲ್ಲಿ 2019 ರಲ್ಲಿ ಸಂಭವಿಸಿದ್ದ ಭಾರೀ ಪ್ರವಾಹವನ್ನು ನಿಭಾಯಿಸಿದ್ದರು. ಆನಂತರ ಅವರನ್ನು ಎಂಇಡಿಡಿಗೆ ವರ್ಗಾವಣೆ ಮಾಡಲಾಗಿತ್ತು. ಅದು ಅವರಿಗೆ ಇರಿಸು ಮುರಿಸು ತಂದಿತ್ತು. “ಮಿಶ್ರ ಭಾವನೆಗಳ ನಡುವೆ, ನಾನು ರಾಜೀನಾಮೆ ನೀಡಿ, ಸ್ವಯಂಪ್ರೇರಣೆಯಿಂದ ಹೊರನಡೆದಿದ್ದೇನೆ. ಉಕ್ಕಿನ ಚೌಕಟ್ಟು ಎಂದು ಕರೆಯಲ್ಪಡುವ ಭಾರತೀಯ ಆಡಳಿತ ಸೇವೆಯ ಅಧಿಕಾರ, ಭದ್ರತೆ, ಸ್ಥಾನಮಾನ ಮತ್ತು ಪ್ರತಿಷ್ಠೆಯನ್ನು ಬಿಟ್ಟುಬಿಟ್ಟಿದ್ದೇನೆ! ಏಕೆಂದರೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಅತ್ಯಂತ ಸವಾಲಿನ ಅಧಿಕಾರಾವಧಿಯನ್ನು ಸಾಧಿಸಿದ ನಂತರವೂ ನನ್ನ ಸಾಮರ್ಥ್ಯಕ್ಕೆ ತಕ್ಕಂತಹ ಹುದ್ದೆ ನೀಡಲಿಲ್ಲ. ಇದು ನನಗೆ ಖಿನ್ನತೆಯನ್ನುಂಟು ಮಾಡಿದೆ. ಆ ಕಾರಣದಿಂದ ರಾಜೀನಾಮೆ ಸಲ್ಲಿಸುತ್ತಿದ್ದೇನೆ” ಎಂದಿದ್ದಾರೆ.
ಇದನ್ನೂ ಓದಿ : ಅತ್ಯಂತ ನೋವಿನಿಂದ ರಾಜೀನಾಮೆ ನೀಡಿದ್ದೇನೆ: ಡಿಜಿಪಿ ರವೀಂದ್ರನಾಥ್
14 ವರ್ಷದ ನನ್ನ ಅಧಿಕಾರಾವಧಿಯಲ್ಲಿ ಸಾಕಷ್ಟು ಉತ್ತಮ ಕೆಲಸ ಮಾಡಿದ ತೃಪ್ತಿ ನನಗಿದೆ. ಸಮಾಜದ ಒಳಿತಿಗಾಗಿ ನಿಯಮಗಳು ಮತ್ತು ನಿಬಂಧನೆಗಳ ಚೌಕಟ್ಟಿನೊಳಗೆ ನಾನು ಏನು ಮಾಡಬಹುದೋ ಅದನ್ನು ಮಾಡಿದ್ದೇನೆ. ಸಾರ್ವಜನಿಕ ಹಿತಾಸಕ್ತಿ ಅಪಾಯದಲ್ಲಿದ್ದರೆ ತಾನು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ” ಎಂದು ಫೆಸ್ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಮೋದಿ ಸರಕಾರದ ನೀತಿಗಳಿಂದ ಬೇಸತ್ತು ಈ ಹಿಂದೆ ಸಸಿಕಾಂತ್ ಸೆಂಥಿಲ್ ಮತ್ತು ಕಣ್ಣನ್ ಗೋಪಿನಾಥನ್, ಡಿಜಿಪಿ ರವೀಂದ್ರನಾಥ್ ರವರು ಐಎಎಸ್ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.