ಮುಂಬಯಿ: ಅಕ್ರಮ ಹಣ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ಅವರನ್ನು ಜಾರಿ ನಿರ್ದೇಶನಾಲಯ ನೆನ್ನೆ ಮಧ್ಯರಾತ್ರಿ ಮುಂಬಯಿಯಲ್ಲಿ ಬಂಧಿಸಿದೆ. ಸತತ 12 ಗಂಟೆಗಳ ವಿಚಾರಣೆಯ ಬಳಿಕ ಅಧಿಕಾರಿಗಳು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ 71 ವರ್ಷದ ಅನಿಲ್ ದೇಶ್‌ಮುಖ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಅನಿಲ್ ದೇಶ್‌ಮುಖ್ ವಿರುದ್ಧ ಲಂಚ ಪಡೆದ ಆರೋಪ ಇದೆ. ಇದೇ ಕಾರಣಕ್ಕೆ ಈ ವರ್ಷದ ಪ್ರಾರಂಭದಲ್ಲಿ ತಮ್ಮ ಸಚಿವ ಸ್ಥಾನವನ್ನು ಕಳೆದುಕೊಂಡರು.
ಇದನ್ನು ಓದಿ: ದೇಶ್‌ಮುಖ್ ವಿರುದ್ಧ ಸಿಬಿಐ ಪ್ರಾಥಮಿಕ ತನಿಖೆ ನಡೆಸಲು ಬಾಂಬೆ ಹೈಕೋರ್ಟ್ ನಿರ್ದೇಶನ
ಅಧಿಕಾರಿಗಳ ಪ್ರಶ್ನೆಗೆ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ನೇರವಾಗಿ ಉತ್ತರಿಸಲಿಲ್ಲ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಅವರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದೇವೆ ಎಂದಿದ್ದಾರೆ. ಇಡಿ ಅಧಿಕಾರಿಗಳು ಐದು ಬಾರಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದರೂ ಅನಿಲ್ ದೇಶ್‌ಮುಖ್ ಗೈರು ಹಾಜರಾಗಿ, ಸೋಮವಾರ ಹಾಜರಾದರು. ವಿಚಾರಣೆಯ ಸಂದರ್ಭದಲ್ಲಿ ಸೂಕ್ತವಾದ ಉತ್ತರವನ್ನು ನೀಡಲು ಅವರು ವಿಫಲರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ಪೊಲೀಸ್ ಕಮಿಷನರ್ ಪರಮ್‌ಬೀರ್ ಸಿಂಗ್ ಅವರು ಅನಿಲ್ ದೇಶ್‌ಮುಖ್ ಅವರ ಮೇಲೆ 100 ಕೋಟಿ ರೂಪಾಯಿಯ ಲಂಚ ವಸೂಲಿಯ ಆರೋಪ ಮಾಡಿದ್ದರು. ಸಿಎಂ ಉದ್ಧವ್ ಠಾಕ್ರೆಗೆ ಪತ್ರ ಬರೆದಿದ್ದ ಅವರು, ಗೃಹ ಸಚಿವರಾಗಿರುವ ಅನಿಲ್ ದೇಶ್‌ಮುಖ್ ಪೊಲೀಸ್ ಇಲಾಖೆಯಲ್ಲಿ ತುಂಬ ಹಸ್ತಕ್ಷೇಪ ಮಾಡುತ್ತಾರೆ. ಪೊಲೀಸರನ್ನು ಬಳಸಿಕಂಡು ಪ್ರತಿ ತಿಂಗಳೂ ಬಾರ್ ಆ್ಯಂಡ್ ರೆಸ್ಟೋರೆಂಟ್ ಸೇರಿ ವಿವಿಧ ಮೂಲಗಳಿಂದ 100 ಕೋಟಿ ರೂಪಾಯಿ ಸುಲಿಗೆ ಮಾಡುತ್ತಿದ್ದಾರೆ ಎಂದು ಉಲ್ಲೇಖಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಹಣ ಅಕ್ರಮ ವರ್ಗಾವಣೆಯ ಕ್ರಿಮಿನಲ್ ವಿಚಾರಣೆ ನಡೆಸಲಾಗುತ್ತಿದೆ.
ಈ ಹಿಂದೆ ಅನಿಲ್ ದೇಶ್‌ಮುಖ್ ಇಡಿ ತಮಗೆ ನೀಡಿರುವ ಸಮನ್ಸ್ನ್ನು ರದ್ದುಗೊಳಿಸಬೇಕು ಎಂದು ಬಾಂಬೆ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಆದರೆ ಆ ಅರ್ಜಿಯನ್ನು ಕೋರ್ಟ್ ಪುರಸ್ಕರಿಸಲಿಲ್ಲ.
ವಿಚಾರಣೆಗೆ ತೆರಳುವ ಮುನ್ನ ಅನಿಲ್ ದೇಶ್‌ಮುಖ್ ವೀಡಿಯೋ ಮೂಲಕ ಸಂದೇಶ ಬಿಡುಗಡೆ ಮಾಡಿದ್ದು ‘ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಅಧಿಕಾರಿಗಳ ಆರೋಪ ಸುಳ್ಳಾಗಿದೆ. ಹಿಂದೆಯೂ ಸಿಬಿಐ ಅಧಿಕಾರಿಗಳ ಎದುರು ಎರಡು ಬಾರಿ ಹಾಜರಾಗಿದ್ದೇನೆ ಎಂದಿದ್ದಾರೆ. ಪ್ರಸ್ತುತ ನನ್ನ ಅರ್ಜಿ ಸುಪ್ರೀಂ ಕೋರ್ಟಿನಲ್ಲಿದೆ. ಆದರೆ ಅದಕ್ಕೆ ಇನ್ನಷ್ಟು ಸಮಯ ತಗಲುವ ಕಾರಣ ಈಗ ಸ್ವಯಂಪ್ರೇರಿತವಾಗಿ ವಿಚಾರಣೆಗೆ ತೆರಳುತ್ತಿದ್ದೇನೆ’ ಎಂದಿದ್ದರು.