ಮುಂಬಯಿ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ, ಎನ್ಸಿಪಿ ನಾಯಕ ಅಜಿತ್ ಪವಾರ್ ಅವರ ಒಡೆತನದ ಬೇನಾಮಿ ಆಸ್ತಿಗಳನ್ನು ಜಪ್ತಿ ಮಾಡಲಾಗಿದ್ದು, ಸುಮಾರು 1000 ಕೋಟಿ ರೂಪಾಯಿ ಮೌಲ್ಯದ ಅಂದಾಜು ಆಸ್ತಿ ಎಂದು ತಿಳಿದು ಬಂದಿದೆ.
ಅಜಿತ್ ಪವಾರ್ ಅವರಿಗೆ ಸೇರಿರುವ ಬೇನಾಮಿ ಆಸ್ತಿಯನ್ನು ಜಪ್ತಿ ಮಾಡಿರುವ ಆದಾಯ ತೆರಿಗೆ ಇಲಾಖೆಯು ಅವರಿಗೆ ನೋಟಿಸ್ ಕೂಡ ನೀಡಿದೆ. ಇಷ್ಟು ಮೌಲ್ಯದ ಆಸ್ತಿ ಅಜಿತ್ ಪವಾರ್ ಮತ್ತು ಅವರ ಕುಟುಂಬಕ್ಕೆ ಸೇರಿದ್ದು ಎಂದು ಐಟಿ ಅಧಿಕಾರಿಗಳು ಉಲ್ಲೇಖಿಸಿದ್ದಾರೆ.
ದಕ್ಷಿಣ ದೆಹಲಿಯಲ್ಲಿರುವ 20 ಕೋಟಿ ರೂಪಾಯಿ ಮೌಲ್ಯದ ಮನೆ, ಅಜಿತ್ ಪವಾರ್ ಪುತ್ರ ಪಾರ್ಥ ಅವರಿಗೆ ಸೇರಿದ ನಿರ್ಮಲ್ ಹೌಸ್ನಲ್ಲಿರುವ ಸುಮಾರು 25 ಕೋಟಿ ರೂಪಾಯಿ ಬೆಲೆಯ ಕಚೇರಿ, ಜರಂದೇಶ್ವರದಲ್ಲಿ ಇರುವ ಸುಮಾರು 600 ಕೋಟಿ ರೂಪಾಯಿ ಮೌಲ್ಯದ ಸಕ್ಕರೆ ಕಾರ್ಖಾನೆ, 250 ಕೋಟಿ ರೂ.ಬೆಲೆಯ ಗೋವಾದಲ್ಲಿರುವ ಒಂದು ರೆಸಾರ್ಟ್ ಮತ್ತು ಮಹಾರಾಷ್ಟ್ರದ ವಿವಿಧ 27 ಪ್ರದೇಶಗಳಲ್ಲಿರುವ 500 ಕೋಟಿ ರೂ.ಮೌಲ್ಯದ ಭೂಮಿಯನ್ನು ಬೇನಾಮಿ ಆಸ್ತಿಯೆಂದು ಪರಿಗಣಿಸಿ ಆದಾಯ ತೆರಿಗೆ ಇಲಾಖೆ ಅವುಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಇದನ್ನು ಓದಿ: ಅಕ್ರಮ ಹಣ ವರ್ಗಾವಣೆ ಆರೋಪ: ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ಬಂಧನ
ಅಜಿತ್ ಪವಾರ್ ಇವುಗಳ ಬಗ್ಗೆ 90 ದಿನಗಳಲ್ಲಿ ಅಂದರೆ ಮೂರು ತಿಂಗಳಲ್ಲಿ ಈ ಆಸ್ತಿ ಬೇನಾಮಿ ಅಲ್ಲ ಎಂಬುದನ್ನು ಸಾಬೀತು ಪಡಿಸಬೇಕು. ಅಷ್ಟೂ ಆಸ್ತಿಯ ಕಾನೂನು ಬದ್ಧ ದಾಖಲೆಗಳನ್ನು ಸಲ್ಲಿಸಬೇಕು. ಐಟಿ ಇಲಾಖೆಯ ತನಿಖೆ, ವಿಚಾರಣೆ ಮುಗಿಯುವವರೆಗೂ ಅವರು ಈ ಆಸ್ತಿಗಳನ್ನು ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿದಿದಾರೆ.
ಕಳೆದ ತಿಂಗಳು ಆದಾಯ ತೆರಿಗೆ ಇಲಾಖೆ ಅಜಿತ್ ಪವಾರ್ ಕುಟುಂಬಕ್ಕೆ ಸೇರಿದ ಎರಡು ರಿಯಲ್ ಎಸ್ಟೇಟ್ ಗುಂಪುಗಳ ಮೇಲೆ ಶೋಧಕಾರ್ಯ ಕೈಗೊಂಡಿತ್ತು. ಈ ವೇಳೆ 184 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಪತ್ತೆ ಮಾಡಿತ್ತು. ಅದಕ್ಕೆ ಸಂಬಂಧಪಟ್ಟಂತೆ ಅಕ್ಟೋಬರ್ 7ರಂದು 70 ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಿತ್ತು. ಆಗ ಪ್ರತಿಕ್ರಿಯೆ ನೀಡಿದ್ದ ಅಜಿತ್ ಪವಾರ್ ಐಟಿಯವರು ಶೋಧ ಕಾರ್ಯ ನಡೆಸಿದರೆ ನನಗೇನೂ ಸಮಸ್ಯೆ ಇಲ್ಲ ಎಂದಿದ್ದರು.
ಮಹಾರಾಷ್ಟ್ರ ರಾಜಕೀಯದಲ್ಲಿ ಸದಾ ಒಂದಿಲ್ಲೊಂದು ಘಟನೆಗಳು ಸಂಭವಿಸುತ್ತಿವೆ. ಇಂದು ಭ್ರಷ್ಟಾಚಾರ ಮತ್ತು ಸುಲಿಗೆ ಪ್ರಕರಣದಲ್ಲಿ ಎನ್ಸಿಪಿ ನಾಯಕ, ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ಕೂಡ ಇಡಿ ಅಧಿಕಾರಿಗಳಿಂದ ಬಂಧಿತರಾಗಿದ್ದಾರೆ.
ಇದೀಗ ನೇರವಾಗಿ ಉಪಮುಖ್ಯಮಂತ್ರಿಗಳ ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಸಂಬಂಧಿಯೂ ಹೌದು.