ಬೆಂಗಳೂರು: ಬೆಂಗಳೂರಿನಲ್ಲಿ ಅಕ್ರಮವಾಗಿ ಪಿಸ್ತೂಲ್ ಮಾರಲು ಯತ್ನಿಸುತ್ತಿದ್ದ ಆರೋಪದಡಿ ನಿಲೇಶ್ ನಾವರೆ ಎಂಬುವರನ್ನು ಡಿ.ಜೆ. ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
‘ಮಹಾರಾಷ್ಟ್ರದ ನಿವಾಸಿ ನಿಲೇಶ್, ನಗರದ ವ್ಯಕ್ತಿಯೊಬ್ಬರಿಗೆ ಪಿಸ್ತೂಲ್ ಮಾರಲೆಂದು ಬಂದಿದ್ದ. ಅಂಬೇಡ್ಕರ್ ಆಸ್ಪತ್ರೆ ಎದುರು ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದ ಈತನನ್ನು ತಪಾಸಣೆಗೆ ಒಳಪಡಿಸಿದಾಗ ಎರಡು ಪಿಸ್ತೂಲ್ ಹಾಗೂ ಐದು ಜೀವಂತ ಗುಂಡುಗಳು ಸಿಕ್ಕಿವೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಆರೋಪಿ ನಿಲೇಶ್ ನಾಡ ಪಿಸ್ತೂಲ್ ಮಾರಾಟದ ಮಧ್ಯವರ್ತಿ ಎಂಬುದು ಗೊತ್ತಾಗಿದೆ. ಬೆಂಗಳೂರಿನಲ್ಲಿ ನೆಲೆಸಿದ್ದಾನೆ ಎನ್ನಲಾದ ವಿಜಯ್ ಪನ್ನೂರ್ ಎಂಬಾತ ಆರೋಪಿ ನಿಲೇಶ್‌ನನ್ನು ಸಂಪರ್ಕಿಸಿ ಪಿಸ್ತೂಲ್‌ಗಳನ್ನು ತಂದುಕೊಡುವಂತೆ ಹೇಳಿದ್ದ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಎರಡು ಪಿಸ್ತೂಲ್ ಹಾಗೂ ಜೀವಂತ ಗುಂಡುಗಳ ಸಮೇತ ಮುಂಬೈನಿಂದ ರೈಲಿನಲ್ಲಿ ಹೊರಟಿದ್ದ ಆರೋಪಿ, ಬುಧವಾರ ಯಶವಂತಪುರ ರೈಲು ನಿಲ್ದಾಣಕ್ಕೆ ಬಂದಿದ್ದ. ನಂತರ, ಅಂಬೇಡ್ಕರ್ ಆಸ್ಪತ್ರೆ ಬಳಿ ಬಂದು ವಿಜಯ್ ಎಂಬಾತನಿಗಾಗಿ ಕಾಯುತ್ತಿದ್ದ. ಬ್ಯಾಗ್ ಹಿಡಿದು ನಿಂತಿದ್ದ ಈತನ ನಡೆಯಿಂದ ಅನುಮಾನಗೊಂಡ ಸಿಬ್ಬಂದಿ ವಶಕ್ಕೆ ಪಡೆದಾಗ ಕೃತ್ಯ ಬಯಲಾಗಿದೆ. ಪಿಸ್ತೂಲ್ ಖರೀದಿದಾರ ವಿಜಯ್ ಯಾರು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ತಿಳಿಸಿವೆ.