ಈರುಳ್ಳಿ ರೈತರಿಗೆ ಸಿಗುವ ಬೆಲೆಗಳಲ್ಲಿ ಭಾರೀ ಕುಸಿತದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ರೈತರು ಈರುಳ್ಳಿಗೆ ಕನಿಷ್ಟ ಬೆಂಬಲ ಬೆಲೆ ಘೋಷಿಸಬೇಕೆಂಬ ಪ್ರಮುಖ ಬೇಡಿಕೆಯ ಜೊತೆಗೆ ತಮ್ಮ ಇತರ ಬೇಡಿಕೆಗಳನ್ನು ಮುಂದಿಟ್ಟು ಮಾರ್ಚ್ 12ರಿಂದ ನಾಶಿಕ್ ನಗರದಿಂದ ರಾಜ್ಯದ ರಾಜಧಾನಿ ಮುಂಬೈಯಲ್ಲಿರುವ ವಿಧಾನಸೌಧದತ್ತ ಇನ್ನೊಂದು ಲಾಂಗ್ ಮಾರ್ಚ್ ಆರಂಭಿಸಿದರು. ಐದು ವರ್ಷಗಳ ಹಿಂದೆ ಸುಮಾರು ಇದೇ ತಿಂಗಳಲ್ಲಿ ಮಹಾರಾಷ್ಟ್ರದ ರೈತರ ಲಾಂಗ್ ಮಾರ್ಚ್ ಮಹತ್ವದ ವಿಜಯ ಗಳಿಸಿ, ನಂತರ ದಿಲ್ಲಿಯಲ್ಲಿ ನಡೆದ ದೀರ್ಘ ಕದನಕ್ಕೆ ಮುನ್ನುಡಿಯಂತಾಗಿತ್ತು. ಈ ಬಾರಿಯೂ ರೈತರು ಇನ್ನೊಂದು ಮಹತ್ವದ ವಿಜಯಗಳಿಸಿದ್ದಾರೆ, ಅದೂ ಮುಂಬೈ ತಲುಪುವ ಮೊದಲೇ.
ಇದನ್ನು ಓದಿ: ಬೇಡಿಕೆ ಈಡೇರಿಕೆಯ ಉಲ್ಲಂಘನೆ: ದೇಶದಾದ್ಯಂತ ನವೆಂಬರ್ 26ರಿಂದ ರಾಜಭವನಗಳಿಗೆ ರೈತರ ಮೆರವಣಿಗೆ
10,000ಕ್ಕೂ ಹೆಚ್ಚು ರೈತರು ಮಾರ್ಚ್ 12ರಂದು ನಾಶಿಕ್ ನ ಕೇಂದ್ರ ಪ್ರದೇಶ ಡಿಂಡೋರಿ ಚೌಕದಲ್ಲಿ ಈರುಳ್ಳಿ, ಟೊಮೆಟೊ, ಬದನೆ, ಆಲೂಗೆಡ್ಡೆ ಮತ್ತು ಇತರ ತರಕಾರಿಗಳನ್ನು ರಸ್ತೆಗೆ ಚೆಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸುವುದರೊಂದಿಗೆ ಈ ಲಾಂಗ್ ಮಾರ್ಚ್ ಆರಂಭಿಸಿದರು.
ಈರುಳ್ಳಿಗೆ ಕ್ವಿಂಟಾಲಿಗೆ 2000ರೂ. ಕ್ವಿಂಟಾಲಿಗೆ 600ರೂ.ಯಂತೆ ತಕ್ಷಣದ ಸಬ್ಸಿಡಿ ಹಾಗೂ ರಫ್ತು ಧೋರಣೆಗಳಲ್ಲಿ ಬದಲಾವಣೆಯ ಬೇಡಿಕೆ ಮಾತ್ರವಲ್ಲ, ಹತ್ತಿ, ಸೊಯಾಬೀನ್, ತೊಗರಿ, ಹೆಸರು ಕಾಳು, ಹಾಲು ಮತ್ತು ಹಿರ್ದಾಕ್ಕೂ ಕನಿಷ್ಟ ಬೆಂಬಲ ಬೆಲೆ ಘೋಷಿಸಬೇಕು. ರೈತಾಪಿ ಜನಗಳಿಗೆ ಸಂಪೂರ್ಣ ಸಾಲ ಮನ್ನಾ, ವಿದ್ಯುತ್ ಬಿಲ್ ಬಾಕಿಗಳ ಮನ್ನಾ ಮತ್ತು ಪ್ರತಿದಿನ 12 ಗಂಟೆಗಳ ವಿದ್ಯುತ್ ಪೂರೈಕೆ, ಅಕಾಲಿಕ ಮಳೆ ಮತ್ತು ಇತರ ನೈಸರ್ಗಿಕ ಕಾರಣಗಳಿಂದ ರೈತರಿಗಾಗಿರುವ ನಷ್ಟಗಳಿಗೆ ಸರಕಾರ ಮತ್ತು ವಿಮಾ ಕಂಪನಿಗಳಿಂದ ಪರಿಹಾರ, ಎಲ್ಲ ಅರಣ್ಯಭೂಮಿ, ಹುಲ್ಲುಗಾವಲು, ದೇವಸ್ಥಾನದ ಜಮೀನು, ಇನಾಂ , ಚಕ್ಫ್ ಮತ್ತು ಬೇನಾಮಿ ಜಮೀನಗಳ ಪಟ್ಟಾವನ್ನು ಅವನ್ನು ಸಾಗುವಳಿ ಮಾಡುತ್ತಿರುವವರ ಹೆಸರಿಗೆ ಕೊಡುವುದು ಇತ್ಯಾದಿ ರೈತರ ಬೇಡಿಕೆಗಳಷ್ಟೇ ಅಲ್ಲದೆ, ಪೆನ್ಷನ್ ಮೊತ್ತವನ್ನು 4000ರೂ. ವರೆಗೆ ಹೆಚ್ಚಿಸುವುದು, 2005ರ ನಂತರ ಸರ್ಕಾರೀ ಸೇವೆಗೆ ಸೇರಿದವರಿಗೆ ಹಳೆಯ ಪೆನ್ಶನ್ ಯೋಜನೆ, ಅರೆ ಅನುದಾನದ ಶಾಲೆಗಳಿಗೆ ಪೂರ್ಣ ಅನುದಾನ, ಗುತ್ತಿಗೆ ಮತ್ತು ಸ್ಕೀಮ್ ಕೆಲಸಗಾರರನ್ನು ಸರಕಾರೀ ನೌಕರರೆಂದು ನಿಯಮಿತಗೊಳಿಸುವುದು, ಸರಕಾರೀ ಹುದ್ದೆಗಳಲ್ಲಿ ಆದಿವಾಸಿ ಹುದ್ದೆಗಳಲ್ಲಿರುವ ಬೋಗಸ್ ವ್ಯಕ್ತಿಗಳನ್ನು ತೆಗೆದು ಹಾಕಿ ನಿಜವಾದ ಆದಿವಾಸಿಗಳ ನೇಮಕ ಸೇರಿದಂತೆ 15 ಅಂಶಗಳ ಬೇಡಿಕೆಯ ಮೇಲೆ ಈ ಪಾದಯಾತ್ರೆ ಆರಂಭವಾಯಿತು. ಅಖಿಲ ಭಾರತ ಕಿಸಾನ್ ಸಭಾ(ಎಐಕೆಎಸ್)ದ ಅಖಿಲ ಭಾರತ ಅಧ್ಯಕ್ಷರಾದ ಅಶೋಕ ಧವಳೆ, ಮತ್ತು ಮಹಾರಾಷ್ಟ್ರದ ಎಐಕೆಎಸ್ ಮುಖಂಡರಾದ ಜೆ ಪಿ ಗವಿತ್, ಡಾ.ಅಜಿತ್ ನವಳೆ, ಡಾ. ಉದಯ್ ನಾರ್ಕರ್ ಮತ್ತಿತರರು ಇದರ ನೇತೃತ್ವ ವಹಿಸಿದ್ದರು.
ಇದನ್ನು ಓದಿ: ದೇಶದ ರೈತ ಬಾಂಧವರಿಗೆ ಪ್ರಧಾನಿ ನೀಡಿದ ಭರವಸೆ ಇನ್ನೂ ಈಡೇರಿಲ್ಲ: ಸಂಯುಕ್ತ ಕಿಸಾನ ಮೋರ್ಚಾ
ಮಾರ್ಚ್ 16 ರಂದು, ಲಾಂಗ್ ಮಾರ್ಚ್‍ನ ಐದನೇ ದಿನ ಮಹಾರಾಷ್ಟ್ರದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ಆಹ್ವಾನದ ಮೇರೆಗೆ, 16 ಸದಸ್ಯರ ಎಐಕೆಎಸ್ ನಿಯೋಗವು ಮುಂಬೈನ ವಿಧಾನಸಭೆ ಆವರಣದಲ್ಲಿ ರಾಜ್ಯ ಸರ್ಕಾರದೊಂದಿಗೆ ಎರಡೂವರೆ ಗಂಟೆಗಳ ಚರ್ಚೆ ನಡೆಸಿತು. ಇದರಲ್ಲಿ 6 ಸಚಿವರು ಮತ್ತು ಹಲವಾರು ಸಂಬಂಧಿಸಿದ ಇಲಾಖೆಗಳ ಕಾರ್ಯದರ್ಶಿಗಳು ಉಪಸ್ಥಿತರಿದ್ದರು. ರೈತರ ಬೇಡಿಕೆಗಳ 15 ಅಂಶಗಳ ಚಾರ್ಟರ್ ಗೆ ರಾಜ್ಯ ಸರ್ಕಾರ ಒಪ್ಪಿಕೊಳ್ಳುವ ಸಂಕೇತ ದೊರೆಯಿತು.
ಆದರೆ ಈ ಸಭೆಯ ನಿರ್ಣಯಗಳ ಸಾರಾಂಶವನ್ನು ವಿಧಾನಸಭೆಯಲ್ಲಿ ಮಂಡಿಸುವ ವರೆಗೆ ಮತ್ತು ಅವುಗಳ ಅನುಷ್ಠಾನದ ಬಗ್ಗೆ ಸೂಚನೆಗಳನ್ನು ವಿಭಾಗೀಯ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳಿಗೆ ಅಧಿಕೃತವಾಗಿ ಕಳುಹಿಸುವ ವರೆಗೆ, ಅದಾಗಲೇ 15,000ದಷ್ಟಿದ್ದ ರೈತರು ಆಗ ತಲುಪಿದ್ದ, ಮುಂಬೈ-ನಾಸಿಕ್ ಹೆದ್ದಾರಿಯಲ್ಲಿರುವ ಥಾಣೆ ಜಿಲ್ಲೆಯ ವಶಿಂದ್‍ನ ಈದ್ಗಾ ಮೈದಾನದಲ್ಲೇ ಠಿಕಾಣಿ ಹೂಡುತ್ತಾರೆ, ನಿರ್ಣಯಗಳ ಜಾರಿಯ ಸ್ಪಷ್ಟ ಕ್ರಮಗಳ ನಂತರವೇ ಲಾಂಗ್ ಮಾರ್ಚನ್ನು ಹಿಂತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಮಾರ್ಚ್ 18ರಂದು ಸರಕಾರ ರೈತರ ಎಲ್ಲ ಬೇಡಿಕೆಗಳನ್ನು ಒಪ್ಪಿಕೊಂಡು, ಅವನ್ನು ವಿಧಾನಸಭೆಯಲ್ಲಿ ಮಂಡಿಸಿ, ಸಂಬಂಧಿಸಿದ ಅಧಿಕಾರಿಗಳಿಗೆ ಅವುಗಳ ಜಾರಿಯ ಲಿಖಿತ ಆದೇಶಗಳನ್ನು ಕಳಿಸಿದೆ. ವಶಿಂದ್ ನಲ್ಲಿ ರೈತರು ತಮ್ಮ ವಿಜಯೋತ್ಸವ ನಡೆಸಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ