ಮೈಸೂರು: ಮಹಾರಾಣಿ ಕಾಲೇಜಿನ ಪದವಿ ಪ್ರವೇಶ ಮತ್ತು ವಿದ್ಯಾರ್ಥಿ ವೇತನ ಕುರಿತ ಗೊಂದಲಗಳ ವಿರುದ್ಧ ವಿದ್ಯಾರ್ಥಿಗಳ ನಿರಂತರ ಹೋರಾಟದ ಪರಿಣಾಮವಾಗಿ ಮೈಸೂರು ವಲಯದ ಜಂಟಿ ನಿರ್ದೇಶಕ ಡಾ. ಗಿರಿಧರರಾವ್ ಎಂ.ಎಸ್ ನೇತೃತ್ವದಲ್ಲಿ ನಡೆದ ಸಭೆಯು ಫಲಪ್ರದವಾಗಿದ್ದು, ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮಗಳು ತೀರ್ಮಾನವಾಗಿದೆ.
ಜಂಟಿ ನಿರ್ದೇಶಕರ ಸಭೆಯಲ್ಲಿ ಮಹಾರಾಣಿ ಕಾಲೇಜಿನ ಪ್ರಾಂಶುಪಾಲರು ಹಾಗೂ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಅರ್ಗನೈಜೇಶನ್(ಎಐಡಿಎಸ್‌ಒ) ಸಂಘಟನೆಯ ಪದಾಧಿಕಾರಿಗಳು ಮತ್ತು ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಭೆಯಲ್ಲಿ ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಯಾದ ಪ್ರಸ್ತುತ 3ನೇ ಮತ್ತು 2ನೇ ವರ್ಷದ ಪ್ರವೇಶ ಶುಲ್ಕವನ್ನು ವಿದ್ಯಾರ್ಥಿ ವೇತನ ಬಂದ ಬಳಿಕ ಕಟ್ಟಲಾಗುವುದು ಎಂದು ವಿದ್ಯಾರ್ಥಿಗಳ ಆಗ್ರಹಕ್ಕೆ ಒಪ್ಪಿಗೆ ದೊರೆತಿದೆ. ವಿದ್ಯಾರ್ಥಿ ವೇತನ ಬರುವ ತನಕ ಪ್ರವೇಶ ಶುಲ್ಕ ಕಟ್ಟುವ ಅಗತ್ಯವಿಲ್ಲವೆಂದು ಸ್ಪಷ್ಟಪಡಿಸಲಾಗಿದೆ. ಅಲ್ಲದೆ, ಪ್ರವೇಶಾತಿಗೆ ಕೇವಲ ಸಮಾಜ ಕಲ್ಯಾಣ ಇಲಾಖೆಯಿಂದ ಸಿಗುವ ಫ್ರೀಶಿಪ್ ಕಾರ್ಡ್ ಫಾರ್ಮನ್ನು ಡೌನ್ಲೋಡ್ ಮಾಡಿಕೊಂಡು ಕಾಲೇಜಿಗೆ ಕೊಟ್ಟು ಪ್ರವೇಶಾತಿ ಪಡೆಯಬಹುದು ಎಂದು ಹೇಳಿದ್ದಾರೆ.
ಪ್ರಸಕ್ತ ಶೈಕ್ಷಣಿಕ ಅವಧಿಯ ಮೊದಲನೇ ವರ್ಷದ ಎಸ್.ಎಸ್.ಟಿ. ವಿದ್ಯಾರ್ಥಿಗಳಿಂದ ಯಾವುದೇ ಶುಲ್ಕವನ್ನು ಕಟ್ಟಿಸಿಕೊಳ್ಳಬಾರದಿತ್ತು. ಆದರೆ ಎಲ್ಲಾ ಕಾಲೇಜುಗಳಲ್ಲಿ ಪೂರ್ಣ ಪ್ರಮಾಣದ ಪ್ರವೇಶ ಶುಲ್ಕವನ್ನು ಕಟ್ಟಿಸಿಕೊಂಡಿದ್ದಾರೆ. ಇದರಿಂದ ಎಷ್ಟೋ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಈ ನಡೆಯನ್ನು ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ತೀವ್ರವಾಗಿ ಖಂಡಿಸಿದೆ.
ನಿರಂತರ ಹೋರಾಟದ ಪರಿಣಾಮವಾಗಿ ಸ್ಪಂದಿಸಿದ ಮೈಸೂರು ವಲಯದ ಜಂಟಿ ನಿರ್ದೇಶಕರು ಮತ್ತು ಪ್ರಾಂಶುಪಾಲರು ಸಭೆಯನ್ನು ನಿಗದಿಪಡಿಸುವ ಮೂಲಕ ವಿದ್ಯಾರ್ಥಿಗಳ ನಿರ್ದಿಷ್ಟ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯವಾಗಿದೆ. ಇದು ವಿದ್ಯಾರ್ಥಿಗಳ ಹೋರಾಟದ ಜಯ ಎಂದು ಎಐಡಿಎಸ್‌ಒ ಹರ್ಷ ವ್ಯಕ್ತಪಡಿಸಿದೆ.