ಜನವರಿ 26ರಂದು ನವದೆಹಲಿಯಲ್ಲಿ ಅಧಿಕೃತ ಕಾರ್ಯಕ್ರಮದ ನಂತರ ರಾಷ್ಟ್ರೀಯ ಬಾವುಟದೊಂದಿಗೆ ಕಿಸಾನ್ ಪರೇಡ್ ಮತ್ತು ಎಲ್ಲ ಜಿಲ್ಲೆಗಳಲ್ಲಿ ಮಜ್ದೂರ್ಕಿ ಸಾನ್ ಪರೇಡ್‌ಗಳು ನಡೆಯಲಿದ್ದು, ಇದರ ಭಾಗವಾಗಿ ಮಹಾಪಡಾವ್,ಕಿಸಾನ್-ಮಜ್ದೂರ್ ಪರೇಡ್‌ಗೆ ಭರದ ಸಿದ್ಧತೆಗಳು ನಡೆಸುತ್ತಿದೆ.
ಪಶ್ಚಿಮ ಬಂಗಾಲದಲ್ಲಿ ಜನವರಿ20ರಿಂದ 22ರ ವರೆಗೆ, ಮಹಾರಾಷ್ಟ್ರ ದಲ್ಲಿ 24ರಿಂದ 26 ರ ವರೆಗೆ , ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳದಲ್ಲಿ 23ರಿಂದ 25ರ ವರೆಗೆ ಹಾಗೂ ಒಡಿಶಾದಲ್ಲಿ ಜನವರಿ 23ರಂದು ರೈತರ ಬೇಡಿಕೆಗಳ ಮೇಲೆ ‘ಮಹಾಪಡಾವ್’ಗಳು ನಡೆಯಲಿವೆ ಎಂದು ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್)ಮುಖಂಡರು ಜನವರಿ 14ರಂದು ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದಾರೆ.
ಗಣರಾಜ್ಯೋತ್ಸವದಂದು ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ಪರ್ಯಾಯ ಪೆರೇಡ್ ನಡೆಯಲಿದ್ದು, ಗಣತಂತ್ರದ ನಿಜವಾದ ಆಶಯಗಳನ್ನು ಎತ್ತಿ ಹಿಡಿಯುವ ಉದ್ದೇಶದೊಂದಿಗೆ ಜನವರಿ 26, 2021 ರಂದು ಜನ ಗಣರಾಜ್ಯೋತ್ಸವನ್ನು ಬೆಂಗಳೂರಿನಲ್ಲಿ ಸಂಘಟಿಸಲಾಗುತ್ತಿದೆ.
ಜನವರಿ 26ರಂದು ನವದೆಹಲಿಯಲ್ಲಿ ಅಧಿಕೃತ ಕಾರ್ಯಕ್ರಮದ ನಂತರ ರಾಷ್ಟ್ರೀಯ ಬಾವುಟದೊಂದಿಗೆ ಕಿಸಾನ್ ಪರೇಡ್ ಮತ್ತು ಎಲ್ಲ ಜಿಲ್ಲೆಗಳಲ್ಲಿ ಮಜ್ದೂರ್ಕಿ ಸಾನ್ ಪರೇಡ್‌ಗಳು ನಡೆಯಲಿವೆ. ಕಾರ್ಮಿಕ ಸಂಘಗಳು ಇದರಲ್ಲಿ ಸಕ್ರಿಯವಾಗಿ ಭಾಗವಹಿಸಲು ನಿರ್ಧರಿಸಿವೆ. ಇದು ಸ್ವಾತಂತ್ರ್ಯಾನಂತರದ ಭಾರತದಲ್ಲಿ ಅತಿ ದೊಡ್ಡ ಪ್ರತಿಭಟನಾ ಪ್ರದರ್ಶನವಾಗುವ ನಿರೀಕ್ಷೆ ಇದೆ. ಈ ಕಾರ್ಯಾಚರಣೆಗಳು ಬಿಜೆಪಿಯ ಮತ್ತು ಪ್ರಧಾನ ಮಂತ್ರಿಗಳ ಸುಳ್ಳುಗಳಿಗೆ ತಕ್ಕ ಉತ್ತರ ನೀಡುತ್ತವೆ ಎಂದು ಎಐಕೆಎಸ್ ಮುಖಂಡರು ಹೇಳಿದ್ದಾರೆ.
ಜನವರಿ 18ರಂದು ಹಳ್ಳಿ, ಬ್ಲಾಕ್ ಮತ್ತು ಜಿಲ್ಲಾ ಮಟ್ಟಗಳಲ್ಲಿ ಮೆರವಣಿಗೆಗಳೊಂದಿಗೆ ಮಹಿಳಾ ಕಿಸಾನ್ ದಿನವನ್ನು ಆಚರಿಸಲಾಗುವುದು. ಪ್ರತಿಭಟನೆಗಳಲ್ಲಿ ಮಹಿಳೆಯರು ಮತ್ತು ವಯಸ್ಸಾದವರನ್ನು ಮನೆಗೆ ಹಿಂದಿರುಗುವಂತೆ ಹೇಳಿರುವುದು ಬಹಳಷ್ಟು ಟೀಕೆಗೆ ಒಳಗಾಗಿದೆ. ಇದು ಮಹಿಳಾ ಸಮಾನತೆ ಮತ್ತು ಸ್ವಾತಂತ್ರ್ಯದ ಮೇಲಿನ ದಾಳಿ, ಇದನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಬೇಕು. ಈ ದಿನ ಈ ಅಂಶವನ್ನು, ಕೃಷಿಯಲ್ಲಿ ಮತ್ತು ಪ್ರಜಾಪ್ರಭುತ್ವ ಹಾಗೂ ದೇಶಪ್ರೇಮದ ಹೋರಾಟಗಳಲ್ಲಿ ಮಹಿಳೆಯರ ಪಾತ್ರವನ್ನು ಎತ್ತಿ ತೋರುವ ಘೋಷಣೆಗಳು ಈ ಮೆರವಣಿಗೆಗಳಲ್ಲಿ ಮೊಳಗುತ್ತವೆ ಎಂದು ಎಐಕೆಎಸ್ ಹೇಳಿದೆ.
ಮೋದಿ ಸರಕಾರ ಸುಪ್ರಿಂ ಕೋರ್ಟ್ ಆದೇಶವನ್ನು ಬಳಸಿಕೊಂಡು ರೈತರ ಬೇಡಿಕೆಗಳನ್ನು ಕುರಿತಂತೆ ತನ್ನ ಹೊಣೆಯಿಂದ ಜಾರಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಎಐಕೆಎಸ್ ಖಂಡಿಸಿದೆ. ರೈತರು ಕಾರ್ಮಿಕ ವರ್ಗದ ಬೆಂಬಲದೊಂದಿಗೆ ಈ ಹೋರಾಟವನ್ನು ಇನ್ನಷ್ಟು ಶಕ್ತಿಗೂಡಿಸಿಕೊಂಡು ತೀವ್ರಗೊಳಿಸಲಾಗುತ್ತದೆ. ಜನವರಿ 13ರಂದು ಲೊಹ್ರಿ ಮತ್ತು ಮರುದಿನ ಮಕರ ಸಂಕ್ರಾಂತಿಯಂದು ರೈತ ವಿರೋಧಿ ಕಾಯ್ದೆಗಳ ಪ್ರತಿಗಳನ್ನು ಸುಡುವ ಮೂಲಕ ಈ ದೃಢನಿರ್ಧಾರ ವ್ಯಕ್ತಗೊಂಡಿದೆ.
ಈ ರೈತ ಹೋರಾಟ ಪಂಜಾಬ್, ಹರ್ಯಾಣದಂತಹ ರಾಜ್ಯಗಳಿಗೆ ಮಾತ್ರ ಸೀಮಿತವಾಗಿದೆ, ನಿರ್ದಿಷ್ಟವಾಗಿ ಕೇರಳ, ಕರ್ನಾಟಕದಲ್ಲಿ ಪ್ರತಿಭಟನೆಗಳೇ ಇಲ್ಲ ಎಂದು ಹೇಳಿ ಮೋದಿ ಸರಕಾರ ಸುಪ್ರಿಂ ಕೋರ್ಟನ್ನು ದಾರಿ ತ್ಪಪಿಸಲು ಪ್ರಯತ್ನಿಸಿದೆ. ಆದರೆ ಕೇರಳದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಡಿಸೆಂಬರ್ 14ರಿಂದ ಪ್ರತಿದಿನ ಧರಣಿಗಳು ನಡೆದಿವೆ, ರಾಜ್ಯ ವಿಧಾನಸಭೆ ಈ ಕಾಯ್ದೆಗಳನ್ನು ರದ್ದು ಮಾಡಬೇಕೆಂದು ಆಗ್ರಹಿಸಿ ಒಮ್ಮತದ ನಿರ್ಣಯ ಅಂಗೀಕರಿಸಿದೆ, ಅಲ್ಲಿದ್ದ ಬಿಜೆಪಿ ಶಾಸಕರೂ ಅದನ್ನು ವಿರೋಧಿಸಿಲ್ಲ.
ಕರ್ನಾಟಕದಲ್ಲಿ ಡಿಸೆಂಬರ್16ರಿಂದ ಎಲ್ಲ ಜಿಲ್ಲೆಗಳಲ್ಲಿ ಪ್ರತಿದಿನ ಧರಣಿ ಸತ್ಯಾಗ್ರಹ ನಡೆದಿದೆ, ನವಂಬರ್ 28ರಂದು ಸಂಪೂರ್ಣ ಬಂದ್ ನಡೆದಿದೆ. ಪಶ್ಚಿಮ ಬಂಗಾಲದಲ್ಲಿ 20ಸಾವಿರಕ್ಕೂ ಹೆಚ್ಚು ಹಳ್ಳಿಗಳಲ್ಲಿ ಜಾಥಗಳು ನಡೆದಿವೆ,ಇದೇ ರೀತಿ ತ್ರಿಪುರ, ತಮಿಳುನಾಡುಗಳಲ್ಲಿಯೂ, ಬಿಹಾರ, ಆಂಧ್ರಪ್ರದೇಶ, ತೆಲಂಗಾಣದಲ್ಲಿಯೂ ಪ್ರತಿಭಟನೆಗಳು ನಡೆದಿವೆ.
ಅಲ್ಲದೆ ಈಗಾಗಲೇ ರಾಜಸ್ತಾನ, ಒಡಿಶ, ಆಂಧ್ರ, ತೆಲಂಗಾಣ, ಉತ್ತರಾಖಂಡ, ಛತ್ತೀಸ್‌ಗಡ, ಮಧ್ಯಪ್ರದೇಶ, ಕರ್ನಾಟಕ ಮತ್ತು ಬಂಗಾಲದಿಂದ ಸಾವಿರಾರು ರೈತರು, ಕೃಷಿ ಕೂಲಿಕಾರರು, ಆದಿವಾಸಿಗಳು, ಭಾಗ ಬೆಳಗಾರರು ದಿಲ್ಲಿಯ ಗಡಿಗಳಲ್ಲಿ ಪ್ರತಿಭಟನೆಗಳ ಭಾಗವಾಗಿದ್ದಾರೆ ಎನ್ನುತ್ತ , ಮೋದಿ ಸರಕಾರ ಹರಡಿಸುತ್ತಿರುವ ಈ ಸುಳ್ಳನ್ನು ಎಐಕೆಎಸ್ ಬಯಲಿಗೆಳೆದಿದೆ.