ಬೆಂಗಳೂರು: ನಗರದ ಸಂಪಂಗಿರಾಮನಗರದಲ್ಲಿನ ಬಹುಮಹಡಿ ಕಟ್ಟಡದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಜರುಗಿತ್ತು. ಹೆತ್ತ ತಾಯಿ ತನ್ನ ಕಂದಮ್ಮನನ್ನು ನಾಲ್ಕನೇ ಮಹಡಿಯಿಂದ ಕೆಳಕ್ಕೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿರುವ ಪೊಲೀಸರು ಇದು ಉದ್ದೇಶ ಪೂರ್ವಕ ಕೊಲೆ ಎಂದು ದೃಢಪಡಿಸಿದ್ದಾರೆ.
ಸುಷ್ಮಾ ಭಾರದ್ವಾಜ್ ಎಂಬ ಮಹಿಳೆ ಆಗಸ್ಟ್ 04ರಂದು ತನ್ನ ಮಗುವನ್ನು ನಾಲ್ಕನೇ ಮಹಡಿ ಮೇಲಿಂದ ಎಸೆದು ಕೊಂದಿದ್ದಳು. ಈ ಘಟನೆ ಸಿಸಿ ಟಿವಿಯಲ್ಲೂ ಸೆರೆಯಾಗಿತ್ತು. ಘಟನೆ ಬಳಿಕ ಇಡೀ ಬೆಂಗಳೂರು ತಾಯಿಗೆ ಹಿಡಿಶಾಪ ಹಾಕಿತ್ತು. ಸಂಪಂಗಿ ರಾಮನಗರ ಪೊಲೀಸರು ಪ್ರಕರಣ ಸಂಬಂಧ ತನಿಖೆ ನಡೆಸಿ ಬರೋಬ್ಬರಿ 193 ಪುಟಗಳ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ.
ಪೊಲೀಸರ ವರದಿ ಪ್ರಕಾರ ಮೃತ ಮಗು ಬುದ್ಧಿಮಾಂದ್ಯ ಮಗುವಲ್ಲ, ಅದು AUTISM ಎಂಬ ಖಾಯಿಲೆಯಿಂದ ಬಳಲುತ್ತಿದ್ದ ಮಗು. ಹೀಗಾಗಿ ಮಗುವಿಗೆ ಪ್ರತಿನಿತ್ಯ ಥೆರಫಿ ಮಾಡಿಸಬೇಕಾಗಿದ್ದು, ತಾಯಿ ಸುಷ್ಮ ಭಾರದ್ವಾಜ್ ಕರೆದೊಯ್ಯುದ್ದರು. ಇದು ಅವರಿಗೆ ಬೇಸರ ತರಿಸಿದೆ, ನೋಡಿಕೊಳ್ಳಲಾಗುವುದಿಲ್ಲ ಎಂದು ಮಗುವನ್ನು ತಾಯಿಯೇ ಕೊಂದಿದ್ದಾಳೆ.
ಮಗುವನ್ನು ನೋಡಿಕೊಳ್ಳುವುದರಲ್ಲೇ ಜೀವನ ಕಳೆದರೆ ತನ್ನ ಭವಿಷ್ಯ ಎಂಜಾಯ್ ಮಾಡಲು ಆಗುವುದಿಲ್ಲ ಎಂದು ನಿರ್ಧಾರ ಮಾಡಿದ ಆರೋಪಿ ಸುಷ್ಮಾ ಮಗುವನ್ನು ಕೊಲ್ಲಲು ಮುಂದಾಗಿದ್ದಾಳೆ. ಎರಡು ಬಾರಿ ಮಗು ಬಿಸಾಡಲು ಹೊರಗಡೆ ಬಂದು ನೋಡಿದ್ದಾಳೆ. ಬಳಿಕ ಅಡ್ಡಲಾಗಿದ್ದ ಮರವನ್ನು ಗಮನಿಸಿ ಅಲ್ಲಿಂದ ದೂರ ಬಂದು ಕಲ್ಲಿನ ಗಟ್ಟಿ ನೆಲದ ಸ್ಥಳವನ್ನು ನೋಡಿ ಮಗುವನ್ನು ಬಿಸಾಡಿರೋದಾಗಿ ತನಿಖೆಯಿಂದ ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೂವರು ಪ್ರಮುಖರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಅಲ್ಲದೆ, 34 ಮಂದಿ ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಿ ವರದಿ ಸಿದ್ದಪಡಿಸಿದ್ದಾರೆ.
ಆರೋಪಿ ತಾಯಿ ಸುಷ್ಮಾಳ ಆರೋಗ್ಯದ ಪರಿಸ್ಥಿತಿ ಬಗ್ಗೆಯೂ ವರದಿ ನೀಡಲಾಗಿದ್ದು. ಮಾನಸಿಕವಾಗಿ ಕುಗ್ಗಿದ್ರು, ಖಿನ್ನತೆ ಎಂಬುದು ಸುಳ್ಳು, ಆಕೆ ಆರೋಗ್ಯವಾಗಿದ್ದಾಳೆ ಎಂದು ವರದಿ ಮಾಡಲಾಗಿದೆ. ಈ ಮೂಲಕ ಉದ್ದೇಶಪೂರ್ವಕವಾಗಿ ಮಗು ಕೊಂದದ್ದು ತನಿಖೆಯಿಂದ ಸಾಬೀತಾಗಿದೆ.