ಬೆಳಗಾವಿ: ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಇತ್ತೀಚೆಗೆ ಪಾದಯಾತ್ರೆ ಕೈಗೊಂಡಿದ್ದ ಕಾಂಗ್ರೆಸ್ ಪಕ್ಷವು ಮತ್ತೊಂದು ಬೃಹತ್ ಚಳುವಳಿಯನ್ನು ಸಂಘಟಿಸಲು ಸಜ್ಜಾಗಿದೆ. ಮಹಾದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ನಡೆಸಲು ಸಿದ್ಧತೆ ನಡೆಸಿರುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಾದಾಯಿ ಯೋಜನೆ ಜಾರಿ ಸಂಬಂಧ ನಡೆಯಲಿರುವ ಪಾದಯಾತ್ರೆ ಕುರಿತು ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸಲಾಗುತ್ತಿದೆ. ಕೋವಿಡ್ ನಿಯಂತ್ರಣಕ್ಕೆ ಬಂದ ನಂತರ ಮಹಾದಾಯಿ ಯೋಜನೆ ಜಾರಿಗಾಗಿ ಪಾದಯಾತ್ರೆ ನಡೆಸಲಾಗುವುದು ಎಂದರು.
ನರಗುಂದದಿಂದ ಮಹಾದಾಯಿ ಉಗಮಸ್ಥಾನ ಕಣಕುಂಬಿವರೆಗೆ ಪಾದಯಾತ್ರೆ ನಡೆಯಲಿದೆ. ಪಾದಯಾತ್ರೆ ಸಂಬಂಧ ಶೀಘ್ರದಲ್ಲಿಯೇ ರೂಪುರೇಷ ಸಿದ್ಧಗೊಳ್ಳಲಿದೆ. ಮೇಕೆದಾಟು ಯೋಜನೆ ಜಾರಿಗೆ ನಡೆದ ಪಾದಯಾತ್ರೆ ಮಾದರಿಯಲ್ಲಿಯೇ ಚಳುವಳಿಯನ್ನು ಸಂಘಟಿಸಲಾಗುತ್ತಿದೆ. ಸರ್ಕಾರದ ಗಮನ ಸೆಳೆಯಲು ನಮ್ಮ ಈ ಹೋರಾಟ ಯಶಸ್ವಿಯಾಗಿದೆ ಎಂದು ನುಡಿದರು.
ಮೇಯರ್ ಆಯ್ಕೆ ವಿಳಂಬ
ಬೆಳಗಾವಿ ಮಹಾನಗರದ ಮೇಯರ್-ಉಪಮೇಯರ್ ಆಯ್ಕೆ ವಿಳಂಬಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದರು. ನಗರದಲ್ಲಿ ಮೇಯರ್- ಉಪಮೇಯರ್ ಇಲ್ಲ ಅಂತ ಯಾರು ಹೇಳಿದ್ದಾರೆ. ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮೇಯರ್, ಉತ್ತರ ಕ್ಷೇತ್ರದ ಶಾಸಕ ಅನಿಲ್ ಬೆನಕೆ ಉಪಮೇಯರ್. ಸರ್ಕಾರವೇ ಈ ಸಂಬಂಧ ಅನಧಿಕೃತ ಘೋಷಣೆ ಮಾಡಿದೆ. ಇಬ್ಬರೂ ನಾಯಕರಿಗೆ ಗೌನ್ ಹಾಕುವುದೊಂದೇ ಬಾಕಿ ಇದೆ. ಬಿಜೆಪಿ ಸರ್ಕಾರ ಇರುವ ತನಕ ಇವರೇ ಮೇಯರ್- ಉಪಮೇಯರ್. ಉಳಿದ ಪಾಲಿಕೆ ಸದಸ್ಯರು ಚಹಾ, ಬಿಸ್ಕೆಟ್ ಸೇವಿಸಲು ಬರಬೇಕಷ್ಟೇ ಎಂದು ವ್ಯಂಗ್ಯವಾಡಿದರು.
ಖಾಸಗಿ ತರಕಾರಿ ಮಾರುಕಟ್ಟೆ ನಿರ್ಮಾಣ ವಿಚಾರ
ಈಗಾಗಲೇ ಜಿಲ್ಲಾಧಿಕಾರಿ ಭೇಟಿಯಾಗಿ ಬೆಳಗಾವಿಯಲ್ಲಿ ಖಾಸಗಿ ತರಕಾರಿ ಮಾರುಕಟ್ಟೆ ನಿರ್ಮಾಣದ ಬಗ್ಗೆ ಚರ್ಚೆ ಮಾಡಲಾಗಿದೆ. ಎಪಿಎಂಸಿ ಉಳಿಯುವ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಿ ಎಂದಿದ್ದೇವೆ. ಖಾಸಗಿ ತರಕಾರಿ ಮಾರುಕಟ್ಟೆ ಮೇಲೆ ಯಾರ ನಿಯಂತ್ರಣ ಇಲ್ಲ. ಸರ್ಕಾರ ವೆಚ್ಚ ಮಾಡಿ ಎಪಿಎಂಸಿ ಮಾರುಕಟ್ಟೆ ನಿರ್ಮಾಣ ಮಾಡಿದೆ. ಎಪಿಎಂಸಿ ಉಳಿಸಲು ಜಿಲ್ಲಾಧಿಕಾರಿ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದ್ದೇವೆ.
ಖಾಸಗಿ ತರಕಾರಿ ಮಾರುಕಟ್ಟೆಯವರು ಎಪಿಎಂಸಿಗೆ ಹೋಗದಂತೆ ತಡೆಯುತ್ತಿದ್ದಾರೆ. ಎಪಿಎಂಸಿಯಲ್ಲಿ ಸೆಸ್ಸ್, ತೂಕದ ವ್ಯವಸ್ಥೆ ಇದೆ. ಖಾಸಗಿ ತರಕಾರಿ ಮಾರುಕಟ್ಟೆಯಲ್ಲಿ ಈ ಯಾವುದೇ ವ್ಯವಸ್ಥೆ ಇಲ್ಲ. ಬಿಜೆಪಿ ಶಾಸಕರು, ಸರ್ಕಾರ ಪರ ಇರುವುದು ಬಿಟ್ಟು ಖಾಸಗಿಯವರ ಪರ ಇದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ.
ಖಾಸಗಿ ಮಾರುಕಟ್ಟೆ ಪ್ರಾರಂಭ ಆಗಿದ್ದು ರಾಜ್ಯದಲ್ಲಿ ಇದೆ ಮೊದಲು. ನಮ್ಮ ಪ್ರಯತ್ನ ಎರಡು ಉಳಿಯಬೇಕು ಎಂಬುವುದು ಆಗಿದೆ. ಖಾಸಗಿ ಮಾರುಕಟ್ಟೆಗೆ ಕಾನೂನಿನಲ್ಲಿ ಅವಕಾಶ ಇದೆ.
ಬಂದ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ರಾಜ್ಯ, ಕೇಂದ್ರ ಸರ್ಕಾರ ಖಾಸಗೀಕರಣ ಪರ ಇದೆ. ಕಾಂಗ್ರೆಸ್, ಬಿಜೆಪಿ ಎಂದು ವಿಂಗಡಣೆ ಮಾಡಲು ಆಗಲ್ಲ. ರೈತರಿಗೆ ಎರಡು ಕಡೆ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು ಎನ್ನುವುದು ನಮ್ಮ ಉದ್ದೇಶ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಗೋವಾ ವಿಧಾನಸಭಾ ಚುನಾವಣೆ
ಗೋವಾದಲ್ಲಿ ಚುನಾವಣಾ ಉಸ್ತುವರಿಯಾದ ದಿನೇಶ್ ಗೂಂಡುರಾವ್ ನೇತೃತ್ವದಲ್ಲಿ ನಮ್ಮ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಲು ತಯಾರಿ ನಡೆಸಿದ್ದೇವೆ. ಇಪ್ಪತ್ತು ಕ್ಷೇತ್ರಗಳಲ್ಲಿ ನಾನು ಬಹಿರಂಗ ಪ್ರಚಾರ ನಡೆಸುತ್ತೇನೆ ಎಂದರು.