“ಮಹಾಡ್ ಕೆರೆ ಸತ್ಯಾಗ್ರಹ” ಪುಸ್ತಕದ ‘”ಹಿನ್ನೋಟ, ಮುನ್ನಡೆ : ಮಹಾಡ್ ಕುರಿತು ಚಿಂತನೆ” ಎಂಬ ಅಧ್ಯಾಯದ ಕೊನೆಯಲ್ಲಿ ಮಹಾಡ್ ಚಳುವಳಿಯು ದಲಿತ ‘ಚಳುವಳಿಯ ಬುನಾದಿ’ ಮತ್ತು ‘ಇಂದಿನ ದಲಿತ ಚಳುವಳಿಯ ಪ್ರವೃತ್ತಿ, ಮನೋವೃತ್ತಿ ಮತ್ತು ನೈತಿಕ-ಅಧಿಕಾರ (ಈಥೋಸ್) ಗಳ ಸಂಭವನೀಯ ಮೂಲ’ ವೆಂದು ತೇಲ್ತುಂಬ್ಡೆ ಅವರು ಕರೆದಿದ್ದಾರೆ. ಅಲ್ಲಿ ಇಂದಿನ ದಲಿತ ಚಳುವಳಿಯ ಸಮಸ್ಯೆ, ಸವಾಲುಗಳ ವಿಶ್ಲೇಷಣೆ ನೀಡಿದ್ದಾರೆ. ಈ ಎರಡು ಪುಸ್ತಕಗಳು ಮೂಡಿಸುವ ಅರಿವಿನ ಬೆಳಕಿನಲ್ಲಿ ತೇಲ್ತುಂಬ್ಡೆ ಅವರು ಎತ್ತಿ ತೋರಿಸುವ ಕೆಲವು ಸಮಸ್ಯೆ, ನ್ಯೂನತೆ, ಸವಾಲುಗಳ ಸುತ್ತ ಸಂವಾದ ನಡೆಸಬಹುದು ಎಂದು ಅವರು ಸೂಚಿಸಿದರು.
ವರದಿ : ನಾಗರಾಜ ಎನ್.
ಎರಡು ಮಹಾಡ್ ಪುಸ್ತಕಗಳ ಬಿಡುಗಡೆ ಜೊತೆಗೆ “’ಮಹಾಡ್’ ಅರಿವು ಮತ್ತು ಜಾತಿ-ಅಸ್ಪೃಶ್ಯತೆ ವಿನಾಶಕ್ಕಾಗಿ ಚಳುವಳಿ’ ಎಂಬ ವಿಚಾರ ಸಂಕಿರಣವನ್ನೂ ಹಮ್ಮಿಕೊಳ್ಳಲಾಗಿತ್ತು. ಈ ವಿಚಾರ ಸಂಕಿರಣದ ನಿರೂಪಣೆ ಮಾಡಿದ ನಾಗರಾಜ ಎನ್. ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಮಹಾಡ್ ಪುಸ್ತಕಗಳಲ್ಲಿ ಮೂಡಿ ಬಂದಿರುವ ಒಟ್ಟು “ಮಹಾಡ್ ಅರಿವು” ಜಾತಿ-ಅಸ್ಪೃಶ್ಯತೆಯ ವಿನಾಶದತ್ತ ಚಳುವಳಿಗೆ ಹೊಸ ಸೂರ್ತಿ ದಿಕ್ಕು ದೆಸೆ ಕೊಡಬಲ್ಲದು ಎಂದರು. ಇಂತಹ ಚಿಂತನ ಮಂಥನಕ್ಕೆ ಸಾಕಷ್ಟು ಸಮಯ ಬೇಕು. ಇಂದಿನ ಅಸಹಜ ಸ್ಥಿತಿಯಲ್ಲಿ ಅದು ಕಷ್ಟ ಸಾಧ್ಯವಾದರೂ, ಒಂದು ವಿಚಾರ ಸಂಕಿರಣ ಅನಿವಾರ್ಯವೆಂದು ಭಾವಿಸಿ ಅದನ್ನು ಸಂಘಟಿಸಲಾಗಿದೆ. ಜಾತಿ-ಅಸ್ಪೃಶ್ಯತೆಯ ವಿನಾಶದತ್ತ ಚಳುವಳಿಗೆ ಸಂಬಂಧಿತ ಪ್ರಮುಖ ಅಗತ್ಯಗಳಾದ ಪ್ರಬಲ ದಲಿತ ಚಳುವಳಿ ಮತ್ತು ಎಡ-ದಲಿತ ಚಳುವಳಿಯ ಐಕ್ಯ ಕಾರ್ಯಾಚರಣೆ ಗಳ ಕುರಿತು ಎರಡು ಸಂವಾದಗಳನ್ನು ಏರ್ಪಡಿಸಲಾಗಿದೆ ಎಂದರು.
ಮಹಾಡ್ ನ ಒಂಬತ್ತು ದಶಕಗಳ ನಂತರವೂ ಸ್ವತಂತ್ರ ಭಾರತದ ಏಳು ದಶಕಗಳ ನಂತರವೂ ಜಾತಿ-ಅಸ್ಪೃಶ್ಯತೆಗಳ ವಿನಾಶದತ್ತ ಹೆಚ್ಚಿನ ಪ್ರಗತಿ ಆಗಿಲ್ಲ. ಮಾತ್ರವಲ್ಲ, ಕಳೆದ ಕೆಲವು ವರ್ಷಗಳಲ್ಲಿ ಮಹಾಡ್-ಪೂರ್ವ ಶತಮಾನಗಳಿಗೆ ನಾವು ಹೋಗುತ್ತಿದ್ದೇವೇಯೋ ಏನೋ ಎಂಬ ಸ್ಥಿತಿಯಿದೆ. ಜೊತೆಗೆ ವೆಮುಲಾ ಸಾಂಸ್ಥಿಕ ಹತ್ಯೆಯ ವಿರುದ್ಧ ನಡೆದ ಚಳುವಳಿಯಿಂದ ಆರಂಭವಾಗಿ ಅದಕ್ಕೆ ದೇಶವ್ಯಾಪಿ ಪ್ರಬಲ ಪ್ರತಿರೋಧವೂ ಇದೆ. ಹಲವಾರು ಹೊಸ ದಲಿತ ಪ್ರತಿರೋಧದ ಚಳುವಳಿಗಳೂ ಹುಟ್ಟಿಕೊಂಡಿವೆ, ಎಂದು “ಮಹಾಡ್ ನಿಂದ ದಲಿತ ಚಳುವಳಿ ಏನು ಕಲಿಯಬಹುದು?” ಎಂಬ ಮೊದಲ ಸಂವಾದಕ್ಕೆ ಬಂದ ದಲಿತ ನಾಯಕರನ್ನು ಪರಿಚಯಯಿಸುತ್ತಾ ಪ್ರಾಸ್ತಾವಿಕವಾಗಿ ನಾಗರಾಜ ಎನ್. ಹೇಳಿದರು.
“ಮಹಾಡ್ ಕೆರೆ ಸತ್ಯಾಗ್ರಹ” ಪುಸ್ತಕದ ‘”ಹಿನ್ನೋಟ, ಮುನ್ನಡೆ : ಮಹಾಡ್ ಕುರಿತು ಚಿಂತನೆ” ಎಂಬ ಅಧ್ಯಾಯದ ಕೊನೆಯಲ್ಲಿ ಮಹಾಡ್ ಚಳುವಳಿಯು ದಲಿತ ‘ಚಳುವಳಿಯ ಬುನಾದಿ’ ಮತ್ತು ‘ಇಂದಿನ ದಲಿತ ಚಳುವಳಿಯ ಪ್ರವೃತ್ತಿ, ಮನೋವೃತ್ತಿ ಮತ್ತು ನೈತಿಕ-ಅಧಿಕಾರ (ಈಥೋಸ್) ಗಳ ಸಂಭವನೀಯ ಮೂಲ’ ವೆಂದು ತೇಲ್ತುಂಬ್ಡೆ ಅವರು ಕರೆದಿದ್ದಾರೆ. ಅಲ್ಲಿ ಇಂದಿನ ದಲಿತ ಚಳುವಳಿಯ ಸಮಸ್ಯೆ, ಸವಾಲುಗಳ ವಿಶ್ಲೇಷಣೆ ನೀಡಿದ್ದಾರೆ. ಈ ಎರಡು ಪುಸ್ತಕಗಳು ಮೂಡಿಸುವ ಅರಿವಿನ ಬೆಳಕಿನಲ್ಲಿ ತೇಲ್ತುಂಬ್ಡೆ ಅವರು ಎತ್ತಿ ತೋರಿಸುವ ಈ ಕೆಲವು ಸಮಸ್ಯೆ, ನ್ಯೂನತೆ, ಸವಾಲುಗಳ ಸುತ್ತ ಸಂವಾದ ನಡೆಸಬಹುದು ಎಂದು ಅವರು ಸೂಚಿಸಿದರು.
* ಸಾಮಾಜಿಕ-ಸಾಂಸ್ಕೃತಿಕ ಮತ್ತು ಭಾವನಾತ್ಮಕ ವಿಷಯಗಳ ಜೊತೆಗೆ ಆರ್ಥಿಕ-ರಾಜಕೀಯ ವಿಷಯಗಳನ್ನು ಬೆಸೆಯುವುದು
* ಬಂಡವಾಳಶಾಹಿ ಜಾಗತೀಕರಣದಿಂದಾಗಿ ಬಂದಿರುವ ವ್ಯಾಪಕ ಬದಲಾವಣೆಗಳ ಜತೆ ಜಾತಿ-ಅಸ್ಪೃಶ್ಯತೆಗಳ ಸ್ವರೂಪದಲ್ಲಿ ಆಗುತ್ತಿರುವ ಬದಲಾವಣೆಗಳ ವಾಸ್ತವವನ್ನು ಗ್ರಹಿಸಿ ಅದಕ್ಕೆ ಸೂಕ್ತವಾಗಿ ಪ್ರತಿಕ್ರಿಯಿಸುವುದು
* ದಲಿತ ಚಳುವಳಿಯ ಮಿತ್ರ ಮತ್ತು ಶತ್ರುಗಳನ್ನು ಗುರುತಿಸುವುದು
* ಪ್ರಭುತ್ವದ ಮೇಲೆ ಅತಿಯಾದ ಅವಲಂಬನೆ ಹಾಗೂ ಐಡೆಂಟಿಟಿ ಮತ್ತು ರಾಜಕೀಯ ಪ್ರಾತಿನಿಧ್ಯದ ಮೇಲೆ ಅತಿಯಾದ ಒತ್ತನ್ನು ನಿವಾರಿಸುವುದು
ಸಾಮಾಜಿಕ ಪರಿವರ್ತನೆಗೆ ವಿಶಾಲ ಹೋರಾಟ ರೂಪಿಸುವಲ್ಲಿ ಎಡವುತ್ತಿದ್ದೇವೆ : ಡಿ.ಜಿ ಸಾಗರ್
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹಿರಿಯ ಮುಖಂಡರಾದ ಡಾ. ಡಿ.ಜಿ. ಸಾಗರ್ ರವರು, ಮಾತನಾಡುತ್ತಾ, ನಮ್ಮ ಸಮಾಜದ ಶೋಷಕ ವ್ಯವಸ್ಥೆ ಯನ್ನು ಕಿತ್ತು ಹಾಕುವಲ್ಲಿ ನಾವು ಸೋತಿದ್ದೇವೆ. ಬಾಬಾಸಾಹೇಬ್ ಅಂಬೇಡ್ಕರ್ ರವರು ಮಹಾಡ್ ನಿಂದ ಕಟ್ಟಿದ ಚಳುವಳಿಯ ಹಾದಿಯಲ್ಲಿಯೇ, ಹೋರಾಟಗಳನ್ನು ಸ್ವಲ್ಪ ಮಟ್ಟಿಗೆ ನಡೆಸಿದ್ದೇವೆ. ಆದಾಗ್ಯೂ, ಸಾಮಾಜಿಕ ಪರಿವರ್ತನೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿನ ವಿಶಾಲ ತಳಹದಿಯಲ್ಲಿ ಬಲಿಷ್ಟ ಚಳುವಳಿ ರೂಪಿಸುವಲ್ಲಿ ಮತ್ತು ಅದರ ಮೂಲ ಗುರಿಯಾದ, ಅಸ್ಪೃಶ್ಯತೆಯ ಮರದ ಬೇರುಗಳನ್ನು ಪೂರ್ಣವಾಗಿ ಕಿತ್ತು ಹಾಕುವಲ್ಲಿ ದಲಿತ ಚಳುವಳಿ ಕರ್ನಾಟಕದಲ್ಲಿ ಹಿಂದೆ ಬಿದ್ದಿದೆ. ಮರದ ಕೊಂಬೆಗಳು ಅಲುಗಾಡಿದಾಗ ಸ್ವಲ್ಪ ಮಟ್ಟಿಗೆ, ಕೊಂಬೆಯನ್ನು ಕಡಿದು ಹಾಕುವ ಕೆಲಸಕ್ಕೆ ಹೆಚ್ಚು ಒತ್ತು ನೀಡುತ್ತೇವೆ. ಅಲ್ಲಲ್ಲಿ ನಡೆಯುವ ದೌರ್ಜನ್ಯ ಗಳ ವಿರುದ್ದ ಪ್ರತಿಭಟನೆ ಮಾಡಿ, ಸ್ವಲ್ಪ ಮಟ್ಟಿಗೆ ಪರಿಹಾರ ಕೊಡಿಸಿ, ನಮ್ಮ ಹೋರಾಟಗಳನ್ನು ಅಷ್ಟಕ್ಕೆ ಸೀಮಿತಗೊಳಿಸಿ ಕೊಂಡಿದ್ದೇವೆ. ಆದರೆ ಅಸ್ಪೃಶ್ಯತೆ ವಿನಾಶದತ್ತ ವಿಶಾಲವಾದ ತಳಹದಿಯ ಮೇಲೆ ಚಳುವಳಿ ರೂಪಿಸುವಲ್ಲಿ ವಿಫಲರಾಗಿದ್ದೇವೆ ಎಂದರು.
ಇದರ ಕುರಿತಂತೆ ದಲಿತ ನಾಯಕರಾದ ನಾವುಗಳು ನನ್ನನ್ನು ಒಳಗೊಂಡಂತೆ, ಅಂಬೇಡ್ಕರ್ ಮತ್ತು ಆರ್.ಬಿ.ಮೋರೆಯರು, ಮಹಾಡ್ ಸತ್ಯಾಗ್ರಹ ಚಳುವಳಿಯಲ್ಲಿ ತೋರಿಸಿದ ಒಗ್ಗಟ್ಟನ್ನು ಅರ್ಥಮಾಡಿಕೊಂಡು, ಮರು ಚಿಂತಿಸಬೇಕಾಗಿದೆ. ಇಲ್ಲಿ ನಾನು ಯಾರನ್ನೂ ದೂಷಿಸುತ್ತಿಲ್ಲ ಎಂದು ಹೇಳಿದ ಸಾಗರ್ ರವರು, ತಮ್ಮ ಅಪಾರ ಅನುಭವದ ಬೆಳಕಿನಲ್ಲಿ ವಸ್ತು ನಿಷ್ಠ ವಿಶ್ಲೇಷಣೆ ಮಾಡಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ರವರು ಮಹಾಡ್ ನಲ್ಲಿ ಚಾವ್ದಾರ್ ಕೆರೆಯ ನೀರು ಕುಡಿಯುವ ಮತ್ತು ಮನುಸ್ಮೃತಿ ಯಲ್ಲಿ ಅಡಕವಾಗಿರುವ, ದಲಿತ ಮತ್ತು ಅಸ್ಪೃಶ್ಯತೆ ಆಚರಣೆಗಳ ಮೂಲ ಪ್ರತಿಗಳನ್ನು ಸುಡುವ ಹೋರಾಟ ಗಳಲ್ಲಿ ಸ್ವತಃ ಪಾಲ್ಗೊಂಡಿದ್ದರು. ಅನೇಕ ಐತಿಹಾಸಿಕ ಚಳುವಳಿಗಳ ಮೂಲಕ ದಲಿತ ಹೋರಾಟಗಾರರಿಗೆ ಸ್ಪೂರ್ತಿ ತುಂಬಿದ್ದಾರೆ. ಆದರೆ, ನಾವು, ದಲಿತ ನಾಯಕರುಗಳು ಒಗ್ಗಟ್ಟಾಗಿ ಜಾತಿ ಅಸ್ಪೃಶ್ಯತೆ ವಿರುದ್ದ ಮಹಾಡ್ ಚಳುವಳಿ ತೋರಿಸಿದ ಮಾದರಿಯನ್ನು ಮುಂದುವರಿಸುವಲ್ಲಿ ವಿಫಲರಾಗಿದ್ದೇವೆ. ಬದಲಿಗೆ, ಅಂಬೇಡ್ಕರ್ ರವರ, ಭಾವ ಚಿತ್ರಗಳು ಮತ್ತು ಪ್ರತಿಮೆಗಳಿಗೆ ಹೂ ಗುಚ್ಛವಿಟ್ಟು ಪೂಜಿಸುತ್ತಾ, ಅವುಗಳ ಮುಂದೆ ನಿಂತು ಪೋಟೋ ತೆಗೆಸಿ ಕೊಳ್ಳುವ ಮಟ್ಟಕ್ಕೆ ನಮ್ಮ ಹೋರಾಟಗಳನ್ನು ನಾವೇ ಸೀಮಿತಗೊಳಿಸಿ ಕೊಂಡಿದ್ದೇವೆ ಎಂದರು.
ಸಾಮಾಜಿಕ ನ್ಯಾಯಕ್ಕಾಗಿ ನಡೆಯುವ ಹೋರಾಟದಲ್ಲಿ, ಆರ್ಥಿಕ ಶೋಷಣೆಯ ವಿರುದ್ದ ನಡೆಯುವ ಹೋರಾಟವನ್ನು ಒಳಗೊಳ್ಳಬೇಕು. ಆದರೆ, ನಾವು ಎಡವುತ್ತಿರುವುದು ಇಲ್ಲಿಯೇ, ಕಾರ್ಮಿಕರು, ಮಧ್ಯಮ ವರ್ಗದವರು, ಮಹಿಳೆಯರು ಮತ್ತು ಸಾಮಾಜಿಕ ದಮನಕ್ಕೆ ತುತ್ತಾಗಿರುವ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸ ಬೇಕಾದ ಅನಿವಾರ್ಯತೆಯನ್ನು ಕಡೆಗಣಿಸಿದ್ದೇವೆ. ಈ ಕೊರತೆಯನ್ನು ಹೋಗಲಾಡಿಸಲು, ಮಹಾಡ್ ನ ಸತ್ಯಾಗ್ರಹ ಚಳುವಳಿಯ ಅನುಭವ ನಮಗೆ ಪಾಠವಾಗಬೇಕು. ಅಂಬೇಡ್ಕರ್ ರ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರುತ್ತಿರುವ ಪ್ರಸಕ್ತ ಆಡಳಿತದ ವಿರುದ್ದ ದೃಡ ಸಂಕಲ್ಪದ ಹೋರಾಟಗಳನ್ನು ಕಟ್ಟಬೇಕಾಗಿದೆ ಎಂದರು.
ದಲಿತರ ನಾಗರಿಕ ಹಕ್ಕುಗಳು ಮತ್ತು ಸ್ವಾಬಿಮಾನ ಪ್ರತಿಪಾದನೆಯ ಮೊದಲ ಬಂಡಾಯ ಮಹಾಡ್ : ಡಾ.ಮೋಹನ್ ರಾಜ್
ದಲಿತ ಸಂಘರ್ಷ ಸಮಿತಿ (ಭೀಮವಾದ), ರಾಜ್ಯ ಸಂಚಾಲಕರಾದ ಡಾ.ಮೋಹನ್ ರಾಜ್ ರವರು, ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು. ಮಹಾಡ್ ಸತ್ಯಾಗ್ರಹ ದ ಮಹತ್ವವನ್ನು ಪುಸ್ತಕದಲ್ಲಿ ಆರ್.ಬಿ.ಮೋರೆ ಯವರ ಮೂಲ ಅನುಭವ ಕಥನ ಮತ್ತು ಡಾ.ತೇಲ್ತುಂಬ್ದೆ ಯವರ ವಿಶ್ಲೇಷಣೆಗಳ ಮೂಲಕ ಅದ್ಬುತವಾಗಿ ನಿರೂಪಿಸಲಾಗಿದೆ. ಈ ಪುಸ್ತಕದಲ್ಲಿ ಮಹಾಡ್ ಪೂರ್ವ ಕಾಲದಲ್ಲಿ ಜಾತಿ ಅಸ್ಪೃಶ್ಯತೆಯ ಸ್ವರೂಪ ಮತ್ತು ಮನುಸ್ಮೃತಿ ಪ್ರಣೀತ ಕಠೋರ ಅಸಮಾನತೆಯನ್ನು ಬಣ್ಣಿಸಲಾಗಿದೆ ಎಂದರು.
ಯಾವುದೇ ಕೆರೆಯ ನೀರನ್ನು ಮನುಷ್ಯರೊಂದಿಗೆ, ಪ್ರಾಣಿಗಳು, ಪಕ್ಷಿಗಳು ಕುಡಿಯುತ್ತವೆ. ಆದರೆ, ಮನುಸ್ಮೃತಿ ಪ್ರೇರಿತ ಬ್ರಾಹ್ಮಣಶಾಹಿ ಸಮಾಜ ದಲಿತರಿಗೆ ಕುಡಿಯುವ ನೀರನ್ನು ನಿರಾಕರಿಸಿ ನಿರ್ಬಂಧಗಳನ್ನು ಹೇರಿತ್ತು. ಹಾಗಾಗಿ, ದಲಿತರು ತಮ್ಮ ನಾಗರಿಕ ಹಕ್ಕುಗಳನ್ನು ಮತ್ತು ಸ್ವಾಬಿಮಾನವನ್ಜು ಪ್ರತಿಪಾದನೆಗೊಳಿಸಿದ, ಮೊದಲ ದಲಿತ ಬಂಡಾಯ ಚಳುವಳಿಯಾಗಿ ಮಹಾಡ್ ಚರಿತ್ರೆಯ ಪುಟಗಳಲ್ಲಿ ಅಚ್ಚಳಿಯದೆ ದಾಖಲಾಗಿದೆ. ಮಹಾಡ್ ಸತ್ಯಾಗ್ರಹದ ಈ ಕೃತಿಗಳನ್ನು ಪ್ರತಿಯೊಬ್ಬರು ಓದಲೇ ಬೇಕೆಂದು ಆಗ್ರಹಿಸಿದರು.
ಕೆರೆ ಸತ್ಯಾಗ್ರಹ ದ ಆ ಚಳುವಳಿಯಲ್ಲಿ ಮೋರೆಯರ ಪಾತ್ರವನ್ನು ಅಂಬೇಡ್ಕರ್ ರವರೆ ಮೆಚ್ಚಿ ಕೊಂಡಿದ್ದಾರೆ. ಮೋರೆಯವರು, ಈ ಚಳುವಳಿಯಿಂದ ಸ್ಪೂರ್ತಿಗೊಂಡು ಕಮ್ಯೂನಿಸ್ಟ್ ಪಕ್ಷ ಸೇರುವ ಮುನ್ನ ಅಂಬೇಡ್ಕರ್ ರನ್ನು ಕೇಳುತ್ತಾರೆ. ಆಗ ಅವರು ಒಪ್ಪಿಗೆ ಸೂಚಿಸುತ್ತಾರೆ ಮೋರೆ ಮತ್ತು ಅಂಬೇಡ್ಕರ್ ರ ಸಂಬಂದ ದಲ್ಲಿದ್ದ ಸೈದ್ದಾಂತಿಕ ಗಟ್ಡಿತನವನ್ನು ಪುಸ್ತಕ ದಲ್ಲಿ ತೇಲ್ತುಂಬ್ದೆ ಗುರುತಿಸಿರುವುದನ್ನು ಮೋಹನ್ ರಾಜ್ ತಿಳಿಸಿ, ನಾವು ಕಲಿಯ ಬೇಕಾದ ಪಾಠಗಳು ಇಲ್ಲಿ ಅಡಕವಾಗಿವೆ ಎಂದರು.
ದುಂಡು ಮೇಜಿನ ಸಭೆಯಲ್ಲಿ ಅಂಬೇಡ್ಕರ್ ರವರು, ಅಸ್ಪೃಶ್ಯತೆ ರದ್ದು ಪಡಿಸುವ ಕಾನೂನು ಜಾರಿ ಮಾಡಬೇಕು ಮತ್ತು ದೌರ್ಜನ್ಯ-ದಬ್ಬಾಳಿಕೆ ಎಸಗಿದವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದಾಗ, ಗಾಂಧಿಯವರು ಇದನ್ನು ವಿರೋಧಿಸುತ್ತಾರೆ. ನಾವೆಲ್ಲಾ ಹಿಂದುಗಳು ಒಂದೇ, ನಮ್ಮ ನಮ್ಮ ನಡುವೆ ಈ ಸಮಸ್ಯೆಯನ್ನು ಚರ್ಚಿಸಿ ಬಗೆ ಹರಿಸಿಕೊಳ್ಳೋಣ ಎಂಬ ನಿಲುವು ತೆಗೆದುಕೊಳ್ಳುತ್ತಾರೆ. ಆಗ, ಅಂಬೇಡ್ಕರ್, ಗಾಂಧೀ ಯವರಿಗೆ, ಹಿಂದೂ ಸಮಾಜವು, ಮನುಸ್ಮೃತಿ ಯ ಒಳಸುಳಿಯಾದ, ಜಾತಿ ಪದ್ದತಿ ಯನ್ನು ಪ್ರೋತ್ಸಾಹಿಸುತ್ತದೆ. ಅದು ಸಮಾನತೆಯನ್ನು ನಿರಾಕರಿಸುತ್ತದೆ ಎಂದು ಗಾಂಧಿಯವರ ನಿಲುವನ್ನು ಕಠಿಣವಾಗಿ ವಿರೋಧಿಸಿ, ಮಹಾಡ್ ಸತ್ಯಾಗ್ರಹದ ಘಟನೆಯನ್ನು ನೆನಪು ಮಾಡುತ್ತಾರೆ. 1927 ಮಾರ್ಚ್ 19-20 ರಂದು ಹಿಂದುಗಳು ನಮಗೆ ಚವಾದಾರ್ ಕೆರೆಯ ನೀರನ್ನು ಮುಟ್ಟುವುದಕ್ಕೆ ಅವಕಾಶ ವಂಚಿಸಿದರು ಏಕೆ ? ಎಂದು ಪ್ರಶ್ನಿಸುತ್ತಾರೆ. ಆಗ, ಗಾಂಧಿಯವರ ಬಳಿ ಉತ್ತರ ಇರಲಿಲ್ಲ ವೆಂದು ಮೋಹನ್ ರಾಜ್ ಹೇಳಿದರು.
ಹಾಗಾಗಿ, ಮನುಸ್ಮೃತಿ ಯ ಆರಾಧನೆ ಯಾದ ಹಿಂದು ಧರ್ಮದಿಂದ ದಲಿತರಿಗೆ ಸಾಮಾಜಿಕ ಸಮಾನತೆ ಅಸಾಧ್ಯವೆಂದು ಅಂಬೇಡ್ಕರ್ ಪರಿಗಣಿಸಿ, ಹಿಂದು ಧರ್ಮವನ್ನು ದಿಕ್ಕರಿಸಿ, ಮನುಸ್ಮೃತಿ ಯನ್ನು ಸುಡುತ್ತಾರೆ. ಏಕೆಂದರೆ, ಹಿಂದೂ ಧರ್ಮದಲ್ಲಿ ನ್ಯಾಯಕ್ಕೆ, ಮಾನವಿಯತೆಗೆ ಮತ್ತು ಸ್ವಾತಂತ್ರ್ಯ, ಸೋದರತ್ವಕ್ಕೆ ಅವಕಾಶವಿಲ್ಲ. ಅದೊಂದು ಅಸಮಾನತೆಯ ಪ್ರತೀಕ ; ಅದೊಂದು ಜನರನ್ನು ಗುಲಾಮಗಿರಿಯತ್ತ ಕೊಂಡೊಯ್ಯುವ ಧರ್ಮ. ಆದ್ದರಿಂದ ನಾವೆಲ್ಲರೂ, ಹಿಂದು ಧರ್ಮವನ್ನು ತೊರೆದು ಆಚೆ ಬರಬೇಕೆಂದು ಅಂಬೇಡ್ಕರ್ ಕರೆ ನೀಡುತ್ತಾರೆ.
ಆನಂದ ತೇಲ್ತುಂಬ್ದೆ ಯವರನ್ನು ಬೀಮಾ ಕೊರೆಂಗಾವ್ ಪ್ರಕರಣದಲ್ಲಿ, ಸುಳ್ಳು ಆರೋಪ ಹೊರಿಸಿ, ಅಂಬೇಡ್ಕರ್ ಜಯಂತಿಯ ದಿನವಾದ ಏಪ್ರಿಲ್ 14 ರಂದೇ ಬಂಧಿಸಿ, ಸೆರೆಮನೆಯಲ್ಲಿ ಇಟ್ಟಿದ್ದಾರೆ, ಹಿಂದುತ್ವ ಪ್ರತಿಗಾಮಿಗಳು, ಡಿಸೆಂಬರ್ 6 ರಂದೇ ಬಾಬ್ರಿ ಮಸೀದಿಯನ್ನು ಕೆಡವಿದ್ದಾರೆ.ಇದು ಮನುಸ್ಮೃತಿ ಯ ಆರಾದಕ ಆಡಳಿತಗಾರ ದಬ್ಬಾಳಿಕೆಯಾಗಿದೆ. ಹಾಗಾಗಿಯೇ, 1927 .ರಲ್ಲಿಯೇ ಅಂಬೇಡ್ಕರ್ ನೇತೃತ್ವದಲ್ಲಿ ಮನುಸ್ಮೃತಿ ಯನ್ನು ಸುಡಲಾಯಿತು.
ಈ ಹಿನ್ನೆಲೆಯಲ್ಲಿ ಸಂವಿಧಾನವನ್ನು ಸುಡುವ ಮನಸ್ಸುಗಳು ಹುಟ್ಟಿಕೊಂಡಿವೆ ಅದಕ್ಕೆ ಸಂಘಪರಿವಾರ ಪ್ರೋತ್ಸಾಹ ನೀಡುತ್ತಿದೆ. ಹೀಗಾಗಿ, ಮಹಾಡ್ ಸತ್ಯಾಗ್ರಹದ ಈ ಪುಸ್ತಕಗಳು ನೀಡಿರುವ ಹೊಸ ಪರಿಕಲ್ಪನೆ, ದಲಿತ ಮತ್ತು ಎಡ ಚಳುವಳಿ ಗಳ ಐಕ್ಯತೆಯ ಅಗತ್ಯತೆಯನ್ನು ಎತ್ತಿ ತೋರಿಸುತ್ತದೆ. ಈ ನಿಟ್ಟಿನಲ್ಲಿ ಈಗಾಗಲೇ, ಪ್ರಕಾಶ್ ಅಂಬೇಡ್ಕರ್ ಮತ್ತು ಸೀತಾರಾಂ ಯೆಚೂರಿ , ಡಿ. ರಾಜ ರವರನ್ನು ಒಂದೇ ವೇದಿಕೆಗೆ ತಂದು ದಲಿತ ಸ್ವಾಭಿಮಾನ ಸಂಘರ್ಷ ಸಮಾವೇಶಗಳನ್ನು ರಾಷ್ಟ ಮಟ್ಟದಲ್ಲಿ ಹಾಗೂ ನಮ್ಮ ರಾಜ್ಯದಲ್ಲಿಯೂ ನಡೆಸಲಾಗಿದೆ. ನಮ್ಮ ದಲಿತ ಸಂಘರ್ಷ ಸಮಿತಿ( ಭೀಮವಾದ), ಸದಾಕಾಲವೂ ಐಕ್ಯತೆಯನ್ನು ಬೆಂಬಲಿಸುತ್ತದೆ ಎಂದರು.
ಇದು ಮೌಲಿಕವಾದ ಒಂದು ಐತಿಹಾಸಿಕ ಮತ್ತು ಸೈದ್ದಾಂತಿಕ ಗ್ರಂಥ : ಲಕ್ಷ್ಮಿನಾರಾಯಣ ನಾಗವಾರ
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮತ್ತೊಬ್ಬ ನಾಯಕರಾದ ಲಕ್ಷ್ಮಿ ನಾರಾಯಣ ನಾಗವಾರ ರವರು, ತೇಲ್ತುಂಬ್ದೆ ಯವರ ಈ ಕೃತಿ ಒಂದು ಮೌಲಿಕವಾದ ಐತಿಹಾಸಿಕ-ಸೈದ್ದಾಂತಿಕ ಗ್ರಂಥವೆಂದರು. ಇದನ್ನು ಎಲ್ಲಾ ಹೋರಾಟಗಾರರು, ದಲಿತರು ಮತ್ತು ದಲಿತೇತರರು ಕಡ್ಡಾಯವಾಗಿ ಓದಲೇ ಬೇಕೆಂದರು. ಆ ಮೂಲಕ ಹೊಸ ದಲಿತ ಎಡ ಐಕ್ಯತೆಯ ಪರಂಪರೆಯನ್ನು ಬೆಳೆಸೋಣವೆಂದರು. ಇದು ಮಹಾಡ್ ನಮಗೆ ನೀಡಿರುವ ಕೊಡುಗೆ ಎಂದರು.
‘ಮಹಾಡ್ ಎಡೆಗೆ ಹೋರಾಟದ ನಡಿಗೆ’ ಅಧ್ಯಾಯದಲ್ಲಿ ಆನಂದ ತೇಲ್ತುಂಬ್ದೆ ಮಹಾಡ್=ಪೂರ್ವ ಹೋರಾಟಗಳ ಅರ್ಥಗರ್ಭಿತ ವಿಶ್ಲೇಷಣೆ ಸಹ ಮಾಡಿದ್ದಾರೆ. ಮಹಾಡ್ ದಲಿತರ ಸ್ವಾಭಿಮಾನವನ್ನು ದೇಶಕ್ಕೆ ಪರಿಚಯಿಸಿದ ಮೊದಲ ದಂಗೆ. ಭಾರತದಲ್ಲಿನ ಜಾತಿ ವ್ಯವಸ್ಥೆಯ ಬೆಂಬಲಿಗರಿಗೆ ಎಚ್ಚರಿಕೆ ನೀಡಿದ ದಿಟ್ಟ ಹೋರಾಟವಿದು. ಕೆರೆ ನೀರು ಕುಡಿಯುವ ಮತ್ತು ಮನುಸ್ಮೃತಿ ಸುಡುವ ಹೊಸ ಸಂಚಲನ ಮೂಡಿಸಿದ ಮಹಾಡ್ ಚಳುವಳಿಯ ಎರಡು ಪ್ರಮುಖ ಘಟನೆಗಳ ಅದ್ಬುತವಾದ ವಿಶ್ಲೇಷಣೆ ಗಳೊಂದಿಗೆ ದಲಿತರಿಗೆ ಮುಂದಿನ ಹಾದಿಯನ್ನು ತೋರಿಸುತ್ತದೆ ಈ ಗ್ರಂಥ.
ದಲಿತ ಚಳುವಳಿ ವಿಭಜನೆಗಳಾಗಿರುವುದನ್ನು ಒಪ್ಪಿಕೊಂಡ ನಾಗವಾರ ರವರು, ಆದರೆ, ನಮ್ಮ ಚಿಂತನೆ ಮತ್ತು ಹೋರಾಟದ ದಾರಿಗಳಲ್ಲಿ ಬಿನ್ನತೆ ಇಲ್ಲ. ಅಂಬೇಡ್ಕರ್ ರವರ ಮಾರ್ಗ ನಮ್ಮ ದ್ಯೇಯ ಆಗಿದೆ. ಆದರೆ ನಮ್ಮಲ್ಲಿ ಇರುವ ‘ಇಗೋ’ ಬಿಡಬೇಕೆಂದರು. ರಾಜಕೀಯ ಹೋರಾಟ ನಡೆಸುವಾಗ ಎಲ್ಲರನ್ನು ಒಳಗೊಂಡಿರಬೇಕು. ಪ್ರಜಾಸತ್ತಾತ್ಮಕ ವಾಗಿರಬೇಕು. ಜಾತಿ ವಿನಾಶದ ವಿಶಾಲವಾದ ವೇದಿಕೆಯ ಜೊತೆಗೆ, ಪ್ರಮುಖವಾಗಿ ಎಡ ಮತ್ತು ಪ್ರಜಾಸತ್ತಾತ್ಮಕ ಹೋರಾಟಗಳು ಹಾಗೂ ದಲಿತೇತರರನ್ನು, ಕಾರ್ಮಿಕರನ್ನು, ರೈತರನ್ನು ಹಾಗು ಮಹಿಳೆಯರನ್ನು ಬೆಸೆಯಬೇಕಾದ ಮುತುವರ್ಜಿಯನ್ನು ನಾವು ಕಲಿಯ ಬೇಕಾಗಿದೆ ಎಂದರು.
ದಲಿತೇತರರು ಕೂಡಾ ಅದರಲ್ಲೂ ಪ್ರಮುಖವಾಗಿ ರಾಜಾರಾಂ ಮೋಹನ್ ರಾವ್, ಜೋತಿಬಾಪುಲೆ, ಸಾವಿತ್ರಿ ಪುಲೆ, ಪೆರಿಯಾರ್ ಮತ್ತು ನಾರಾಯಣ ಗುರು ಇಂತಹ, ಅನೇಕರು ಅಂಬೇಡ್ಕರ್ ಗೆ ಪ್ರೇರಣೆಯಾಗಿದ್ದರು. ಹಾಗಾಗಿ, ನಾವೇ ಎಲ್ಲವನ್ನೂ ಮಾಡಿ ಬಿಡುತ್ತವೆ ಎಂಬ ಅಹಂ ಬಿಡಬೇಕು. ಸಂಘ ಪರಿವಾರಾದ ಹಿಂದುತ್ವ ಪರಿಕಲ್ಪನೆ, ನಮ್ಮ ಸಂವಿಧಾನದ ಪರಿಕಲ್ಪನೆ ಯನ್ನು ನಾಶಗೊಳಿಸುವಂತದ್ದು. ಪ್ರಸಕ್ತ ರಾಜಕೀಯ ಆಡಳಿತದ ಚುಕ್ಕಾ,ಣಿ ಇವರ ಕೈಯಲ್ಲಿದೆ. ಪ್ರಜಾಸತ್ತಾತ್ಮಕ ಆಶಯಗಳನ್ನು ಕೊಲ್ಲುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಹಣ ಬಲ ಮತ್ತು ಆಡಳಿತದ ಮಶೀನುಗಳನ್ನು ದುರುಪಯೋಗಗಳಿಂದ ಹಾಗೂ ಇವಿಎಂ ಮಶೀನುಗಳ ಮೋಸದಿಂದ ಗೆದ್ದು ಬರುತ್ತಾರೆ. ಇವರನ್ನು ಸೋಲಿಸಲೇ ಬೇಕು. ಹಾಗಾಗಿ, ಎಲ್ಲರನ್ನು ಒಳಗೊಂಡ ಪ್ರಜಾಸತ್ತಾತ್ಮಕ ಹೋರಾಟದ ಅಗತ್ಯ ಎಂದರು.
*****