ಈ ಸ್ವಯಂ-ದೋಷಾರೋಪಣೆಯ ಪ್ರಾಜೆಕ್ಟಿನಲ್ಲಿ ಮೂವರು ಉನ್ನತ ಸಂವಿಧಾನಿಕ ವ್ಯಕ್ತಿಗಳು ಕಂಡುಬಂದರು- ರಾಜ್ಯಪಾಲರು, ಭಾರತದ ಪ್ರಧಾನ ಮಂತ್ರಿಗಳು ಮತ್ತು ಭಾರತದ ರಾಷ್ಟ್ರಪತಿಗಳು. ಇಂತಹ ಪ್ರಜಾಪ್ರಭುತ್ವ-ವಿರೋಧಿ ಯೋಜನೆಯನ್ನು ದಕ್ಕಿಸಿಕೊಳ್ಳಬಹುದು ಎಂಬ ಆತ್ಮವಿಶ್ವಾಸ ಬಿಜೆಪಿಗೆ ಬಂದದ್ದಾದರೂ ಹೇಗೆ? ಕಳೆದ ವರ್ಷ ಕರ್ನಾಟಕದಲ್ಲಿ ಆದ ಮುಖಭಂಗದಿಂದಲೂ ಬಿಜೆಪಿಯಾಗಲೀ, ಅದರ ಅಧ್ಯಕ್ಷ ಅಮಿತ್ ಷಾರಾಗಲೀ ಬುದ್ಧಿ ಕಲಿಯಲಿಲ್ಲ. ಇನ್ನಷ್ಟು ದೊಡ್ಡ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬಂದು ಗೃಹಮಂತ್ರಿಯಾದದ್ದು ಈ ಚಾಣಕ್ಯ ಇನ್ನಷ್ಟು ಭಂಡತನದಿಂದ ಹೊಲಸು ಉಪಾಯಗಳನ್ನು ಮಾಡಲು ಧೈರ್ಯ ತುಂಬಿತಷ್ಟೇ. ಈ ಕೊಬ್ಬಿನ ಫಲಿತಾಂಶ ದೇಶದ ಮುಂದಿದೆ. ಮಹಾರಾಷ್ಟ್ರದ ಕುತಂತ್ರಗಳು ಬಿಜೆಪಿಯ ಮತ್ತು ಅದಕ್ಕೆ ನೇತೃತ್ವ ನೀಡಿರುವ ಆರೆಸ್ಸೆಸ್ ಮುಖಂಡರುಗಳ ಪ್ರಜಾಪ್ರಭುತ್ವ-ವಿರೋಧಿ ಮತ್ತು ಸರ್ವಾಧಿಕಾರಶಾಹೀ ಚಾರಿತ್ರ್ಯದ ಬಗ್ಗೆ ಭಾರತದ ಜನತೆಯ ಕಣ್ಣು ತೆರೆಸಬೇಕು.
ಫಡ್ನವೀಸ್ ಸರಕಾರದ ಮೂರು ದಿನದ ಕೌತುಕ ಈಗ ಮಾಯವಾಗಿರುವುದರಿಂದ ಈ ಇಡೀ ಹೊಲಸು ಪ್ರಕರಣದಿಂದ ಏನೇನೆಲ್ಲ ಪಾಟಗಳನ್ನು ಕಲಿಯಬಹುದು ಎಂದು ಹಿಂದಿರುಗಿ ನೋಡಬಹುದಾಗಿದೆ.
ನವಂಬರ್ ೨೩ರ ರಾತ್ರಿ ಮತ್ತು ೨೪ರ ಮುಂಜಾನೆ ನಡೆದದ್ದು ಸಂವಿಧಾನ ಮತ್ತು ಪ್ರಜಾಪ್ರಬುತ್ವ ನೀತಿಗಳ ಮೇಲೆ ಒಂದು ನಾಚಿಕೆಗೆಟ್ಟ ಪ್ರಹಾರ. ಮನಸ್ಸನ್ನು ಘಾಸಿಗೊಳಿಸುವ ಸಂಗತಿಯೆಂದರೆ ಈ ಸ್ವಯಂ-ದೋಷಾರೋಪಣೆಯ ಪ್ರಾಜೆಕ್ಟಿನಲ್ಲಿ ಮೂವರು ಉನ್ನತ ಸಂವಿಧಾನಿಕ ವ್ಯಕ್ತಿಗಳು ಕಂಡುಬಂದರು- ರಾಜ್ಯಪಾಲರು, ಭಾರತದ ಪ್ರಧಾನ ಮಂತ್ರಿಗಳು ಮತ್ತು ರಾಷ್ಟ್ರಪತಿಗಳು. ಇವರೆಲ್ಲರೂ ಸಂವಿಧಾನಿಕ ವಿಧಿವಿಧಾನಗಳನ್ನು ಅನುಸರಿಸುವ ಬದಲು ಬಿಜೆಪಿಯ ಆಣತಿಯಂತೆ ಮತ್ತು ಆಳುವ ಪಕ್ಷದ ಹಿತ ಸಾಧಿಸಲು ಕೆಲಸ ಮಾಡಿದರು.
ದೇವೇಂದ್ರ ಫಡ್ನವೀಸರಿಗೆ, ಎನ್ಸಿಪಿ ಶಾಸಕಾಂಗ ಪಕ್ಷದ ಮುಖಂಡರಾದ ಅಜಿತ್ ಪವಾರ್ ಕೊಟ್ಟ ಒಂದು ಬೋಗಸ್ ಪತ್ರದ ಆಧಾರದಲ್ಲಿ ಮುಖ್ಯಮಂತ್ರಿಯಾಗಿ ಪ್ರತಿಜ್ಞೆ ಸ್ವೀಕಾರ ಮಾಡಿಸಿ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ತನ್ನ ಪಕ್ಷದ ಆಶಯವನ್ನು ಈಡೇರಿಸಲು ತನ್ನ ಹುದ್ದೆಯನ್ನು ದುರುಪಯೋಗ ಪಡಿಸಿಕೊಂಡರು. ರಾಷ್ಟ್ರಪತಿ ಆಳ್ವಿಕೆಯನ್ನು ತೆಗೆಯಲು ಮಧ್ಯರಾತ್ರಿಯಲ್ಲಿ ಅವರು ಶಿಫಾರಸು ಮಾಡಿದ ರೀತಿ ಇದನ್ನು ಮತ್ತಷ್ಟು ಗಹನಗೊಳಿಸಿತು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಂಜಾನೆ ೫.೪೭ಕ್ಕೆ ಸಂಪುಟ ಮಂಜೂರಾತಿ ಇಲ್ಲದೆ ರಾಷ್ಟ್ರಪತಿ ಆಳ್ವಿಕೆಯನ್ನು ತೆಗೆಯಲು ಒಪ್ಪಿಗೆಯನ್ನು ಪಡೆದರು. ಇದಕ್ಕಾಗಿ ಅವರು ಭಾರತ ಸರಕಾರ (ವ್ಯವಹಾರ ನಡಾವಳಿ) ನಿಯಮಗಳಲ್ಲಿ, ತುರ್ತು ಸಂದರ್ಭಗಳಲ್ಲಿ ಬಳಸಲೆಂದು ಇರುವ ಅವಕಾಶವನ್ನು ಬಳಸಿಕೊಂಡರು. ಪ್ರಧಾನ ಮಂತ್ರಿಗಳು ಈ ಮಧ್ಯರಾತ್ರಿಯ ರಾಜಕೀಯ ಕ್ಷಿಪ್ರಕ್ರಾಂತಿಯನ್ನು ನಡೆಸಲು ಈ ನಿಯಮವನ್ನು ಬಳಸಲೂ ಹೇಸಲಿಲ್ಲ.
ಅಂತಿಮವಾಗಿ, ಭಾರತದ ರಾಷ್ಟ್ರಪತಿಗಳು ವಿಧಿ ವಿಧಾನಗಳನ್ನು ಸರಿಯಾಗಿ ಅನುಸರಿಸಲಾಗಿದೆಯೇ ಎಂದು ಸ್ವತಃ ಖಾತ್ರಿಪಡಿಸಿಕೊಳ್ಳದೆಯೇ ರಾಷ್ಟ್ರಪತಿ ಆಳ್ವಿಕೆಯನ್ನು ತೆಗೆಯುವ ಆದೇಶಕ್ಕೆ ಸಹಿ ಹಾಕಿದರು.
ಇವನ್ನೆಲ್ಲ ಮಾಡಿದ್ದು ಸ್ಪಷ್ಟ ಬಹುಮತ ಪಡೆದಿರುವ ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ ಮೈತ್ರಿಕೂಟ ಅಧಿಕಾರಕ್ಕೆ ಬರುವ ಅವಕಾಶವನ್ನು ಮೊದಲೇ ಮೊಟಕುಗೊಳಿಸುವುದಕ್ಕಾಗಿ.
ಆದರೆ ಇದೆಲ್ಲ ಸಂವಿಧಾನ ಮತ್ತು ಸಂಸದೀಯ ಪ್ರಜಾಪ್ರಭುತ್ವದ ಮೇಲೆ ಎಷ್ಟರ ಮಟ್ಟಿನ ಪ್ರಹಾರ ಮಾಡಲಾಗಿದೆ ಎಂಬುದನ್ನು ವಿವರಿಸುವುದಿಲ್ಲ. ಈ ಪ್ರಜಾಪ್ರಭುತ್ವ-ವಿರೋಧಿ ಯೋಜನೆಯನ್ನು ದಕ್ಕಿಸಿಕೊಳ್ಳಬಹುದು ಎಂಬ ಆತ್ಮವಿಶ್ವಾಸ ಬಿಜೆಪಿಗೆ ಬಂದದ್ದಾದರೂ ಹೇಗೆ? ಅದು ದುರಹಂಕಾರದ ಆತ್ಮವಿಶ್ವಾಸ. ಏಕೆಂದರೆ ತನ್ನ ಹಣಬಲವನ್ನು ಮುಂದಿಟ್ಟುಕೊಂಡು ಮತ್ತು ಭ್ರಷ್ಟಾಚಾರದ ಹೂಟವನ್ನು ಬಳಸಿ ಸಾಕಷ್ಟು ಸಂಖ್ಯೆಯಲ್ಲಿ ಪಕ್ಷಾಂತರ ಮಾಡಿಸಬಹುದೆಂಬ ಪೂರ್ಣ ವಿಶ್ವಾಸ ಅದಕ್ಕೆ ಇತ್ತು.
ಈ ಮಹಾರಾಷ್ಟ್ರ ಪ್ರಕರಣ ಬಿಜೆಪಿ ರಾಜಕೀಯ ವಿಧೇಯತೆಗಳನ್ನು ಚಿತಾಯಿಸಲು ಭಾರೀ ಕುಳಗಳಿಂದ ಪಡೆದ ಹಣವನ್ನು ಮತ್ತು ಪ್ರಭುತ್ವದ ಸಂಸ್ಥೆಗಳ ಮೂಲಕ ಭೀತಿ ಹುಟ್ಟಿಸುವುದನ್ನು ಎಷ್ಟರ ಮಟ್ಟಿಗೆ ಬಳಸುತ್ತದೆ ಎಂಬುದನ್ನು ಪ್ರಕಟಪಡಿಸಿದೆ. ಅಜಿತ್ ಪವಾರ್ ಪಕ್ಷಾಂತರ ಇದಕ್ಕೆ ಕಣ್ಣುಕುಕ್ಕುವಂತಹ ರುಜುವಾತು. ಉಪಮುಖ್ಯಮಂತ್ರಿಯಾಗಿ ಪ್ರತಿಜ್ಞಾ ಸ್ವೀಕಾರದ ೪೮ ಗಂಟೆಗಳ ನಂತರ ಅವರ ವಿರುದ್ಧ ಇದ್ದ ನೀರಾವರಿ ಹಗರಣದ ಒಂಭತ್ತು ಪ್ರಕರಣಗಳಲ್ಲಿ ಆರೋಪಗಳನ್ನು ಭ್ರಷ್ಟಾಚಾರ ನಿಗ್ರಹ ಕಚೇರಿ (ಎಸಿಬಿ) ಕೈಬಿಟ್ಟಿತು. ಈ ಹಿಂದೆ ಒಬ್ಬ ಪ್ರತಿಪಕ್ಷದ ಶಾಸಕನಾಗಿ ದೇವೇಂದ್ರ ಫಡ್ನವೀಸ್ ಈ ೭೦,೦೦೦ರೂ.ಗಳ ಹಗರಣದಲ್ಲಿ ಪವಾರ್ ಕೇಂದ್ರವ್ಯಕ್ತಿ ಎಂದು ಆಪಾದಿಸಿದ್ದರು. ಬಿಜೆಪಿ ಪಕ್ಷಾಂತರ ಮಾಡುವ ಪ್ರತಿಯೊಬ್ಬ ಎನ್ಸಿಪಿ ಶಾಸಕರಿಗೆ ಅಪಾರ ಮೊತ್ತ ತೆರಲು ಸಿದ್ಧವಾಗಿತ್ತು ಎಂದು ವರದಿಯಾಗಿದೆ.
ಬಿಜೆಪಿ ಕಳೆದ ವರ್ಷ ಕರ್ನಾಟಕದಲ್ಲಿ ಇಂತಹುದೇ ಒಂದು ಹಿನ್ನಡೆಯನ್ನು ಅನುಭವಿಸಿತ್ತು. ರಾಜ್ಯಪಾಲರು ಯೆಡಿಯೂರಪ್ಪನವರನ್ನು ಮುಖ್ಯಮಂತ್ರಿಯಾಗಿ ಪ್ರತಿಜ್ಞೆ ಬೋಧಿಸುವಂತೆ ಅದು ಮಾಡಿತ್ತು. ಆದರೆ ಅವರು ೨೪ ಗಂಟೆಗಳೊಳಗೆ ಸದನದಲ್ಲಿ ಬಲಪರೀಕ್ಷೆ ನಡೆಸಬೇಕು ಎಂದು ಸುಪ್ರಿಂ ಕೋರ್ಟ್ ಆದೇಶ ನೀಡಿದಾಗ ರಾಜೀನಾಮೆ ನೀಡಬೇಕಾಯಿತು.
ಆದರೆ ಬಿಜೆಪಿಯಾಗಲೀ, ಅದರ ಅಧ್ಯಕ್ಷ ಅಮಿತ್ ಷಾರಾಗಲೀ ಇದರಿಂದ ಬುದ್ಧಿ ಕಲಿಯಲಿಲ್ಲ ಎಂಬುದು ಸ್ವಯಂವೇದ್ಯ. ಇನ್ನಷ್ಟು ದೊಡ್ಡ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬಂದು ಗೃಹಮಂತ್ರಿಯಾದದ್ದು ಈ ಚಾಣಕ್ಯ ಇನ್ನಷ್ಟು ಭಂಡತನದಿಂದ ಹೊಲಸು ಉಪಾಯಗಳನ್ನು ಮಾಡಲು ಧೈರ್ಯ ತುಂಬಿತಷ್ಟೇ. ಆದರೆ ಈ ಕೊಬ್ಬಿನ ಫಲಿತಾಂಶ-ಒಂದು ಅವಮಾನಕಾರೀ ಪರಾಭವ.
ಮರುದಿನವೇ ಸದನದಲ್ಲಿ ಬಲಪರೀಕ್ಷೆ ನಡೆಯಬೇಕು ಎಂಬ ಸುಪ್ರಿಂ ಕೋರ್ಟಿನ ಆದೇಶ ಅಸಂವಿಧಾನಿಕ ಮತ್ತು ಅಪ್ರಾತಿನಿಧಿಕ ಸರಕಾರದ ಗುಳ್ಳೆಯನ್ನು ಚುಚ್ಚಿತು. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಹಿತದೃಷ್ಟಿಯಿಂದ ನ್ಯಾಯಾಲಯ ಈ ಇಡೀ ಪ್ರಕರಣವನ್ನು ಪರೀಕ್ಷಿಸಬೇಕು ಮತ್ತು ಇದಕ್ಕೆ ಹೊಣೆಗಾರರಾದ ಅಪರಾಧಿಗಳನ್ನು ಬೊಟ್ಟುಮಾಡಿ ತೋರಬೇಕು.
ಭಾರತದ ಜನತೆಗೆ ಮಹಾರಾಷ್ಟ್ರದ ಕುತಂತ್ರಗಳು ಬಿಜೆಪಿಯ ಮತ್ತು ಅದಕ್ಕೆ ನೇತೃತ್ವ ನೀಡಿರುವ ಆರೆಸ್ಸೆಸ್ ಮುಖಂಡರುಗಳ ಪ್ರಜಾಪ್ರಭುತ್ವ-ವಿರೋಧಿ ಮತ್ತು ಸರ್ವಾಧಿಕಾರಶಾಹೀ ಚಾರಿತ್ರ್ಯದ ನಿಜಸ್ವರೂಪ ಕಣ್ಣು ತೆರೆಸಬೇಕು.
ಉದ್ಧವ್ ಥಾಕ್ರೆ ನೇತೃತ್ವದ ಹೊಸ ಸರಕಾರ ಈ ಮೂರು ಪಕ್ಷಗಳ ಮೈತ್ರಿಕೂಟ ನಿರ್ಧರಿಸಿರುವ ಕನಿಷ್ಟ ಸಾಮಾನ್ಯ ಕಾರ್ಯಕ್ರಮದ ಪ್ರಕಾರ ಕೆಲಸ ಮಾಡಬೆಕು. ಮಹಾರಾಷ್ಟ್ರದ ಜನತೆ ಈ ಸರಕಾರದಿಂದ ಅದನ್ನು ನಿರೀಕ್ಷಿಸುತ್ತಾರೆ. ಈ ಸರಕಾರದ ಅಂಗಪಕ್ಷಗಳು ಸೈದ್ಧಾಂತಿಕವಾಗಿ ವಿರುದ್ಧವಾದ ಕಣ್ಣೋಟಗಳನ್ನು ಹೊಂದಿರುವುದರಿಂದ ಇದು ಮತ್ತಷ್ಟು ಮಹತ್ವದ್ದಾಗುತ್ತದೆ.