ಮಗುಚಿದ ಬಿದ್ದ ಗೂಡ್ಸ್ ಆಟೋ; ಏಳು ಕಾರ್ಮಿಕರಿಗೆ ಗಾಯ

  • ಇಬ್ಬರು ಮಹಿಳಾ ಕಾರ್ಮಿಕರಿಗೆ ತೀವ್ರ ಗಾಯ

 ಕೊಡಗು: ತೋಟದ ಕೆಲಸದ ಕಾರ್ಮಿಕರನ್ನು ಮನೆಗೆ ಕರೆದೊಯ್ಯುತಿದ್ದ ಗೂಡ್ಸ್ ಆಟೋವೊಂದು ಮಗುಚಿಬಿದ್ದ ಪರಿಣಾಮ ಏಳು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಮರೂರಿನಲ್ಲಿ ನಡೆದಿದೆ.

ಹಾಸನ ಜಿಲ್ಲೆಯ ಮರಿಯಾನಗರದ ಕಾರ್ಮಿಕರು ಕೊಡಗು ಜಿಲ್ಲೆಯ ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿದ್ದವರು. ಶುಕ್ರವಾರ  ಕೂಡ ಆಟೋದಲ್ಲಿ ಬಂದಿದ್ದ ಕಾರ್ಮಿಕರು ಕೆಲಸ ಮುಗಿಸಿ ಮನೆಗೆ ತೆರಳುವ ಸಂದರ್ಭದಲ್ಲಿ ಗೂಡ್ಸ್ ಆಟೋ, ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಪರಿಣಾಮವಾಗಿ ಆಟೋದಲ್ಲಿದ್ದ ಏಳು ಜನರಿಗೆ ಗಂಭೀರವಾಗಿ ಗಾಯವಾಗಿದೆ.

ಗಾಯಗೊಂಡ ಮಹಿಳೆಯರನ್ನು ಸೋಮವಾರಪೇಟೆ ಮತ್ತು ಕುಶಾಲನಗರ ಆಸ್ಪತ್ರೆಗಳಿಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗಿದೆ.  ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಮಹಿಳೆಯರ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಘಟನೆ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಮಿಕರನ್ನು ಕೆಲಸದ ಸ್ಥಳಕ್ಕೆ ಸುರಕ್ಷಿತವಾಗಿ  ಕರೆದುಕೊಂಡು  ಹೋಗುವುದು ಮತ್ತು ಕೆಲಸ ಮುಗಿದ ಮೇಲೆ ಅವರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಬಿಡುವುದು, ಅವರನ್ನು  ಕೆಲಸದ ಸ್ಥಳಗಳಲ್ಲಿ ಅಗತ್ಯ ಸೌಲಭ್ಯ ನೀಡುವುದು ಮಾಲೀಕರ ಅಥವಾ ಆಡಳಿತ ಮಂಡಳಿಯ ಶಾಸನಬದ್ಧ ಹೊಣೆಗಾರಿಗೆಯಾಗಿದ್ದು, ಇದು ಪಾಲನೆಯಾಗುತ್ತಿಲ್ಲ ಎಂಬುದು ಈ ಘಟನೆಯಿಂದ ಬೆಳಕಿಗೆ ಬಂದಿದೆ.

ಮಾಲೀಕರೇ ಹೊಣೆ ಹೊರಬೇಕು:

ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಕರ್ನಾಟಕ ತೋಟಕಾರ್ಮಿಕರ ಒಕ್ಕೂಟದ ಕಾರ್ಯಾಧ್ಯಕ್ಷ ಧರ್ಮೇಶ್‍, ಕಾರ್ಮಿಕರನ್ನು ಅನಧಿಕೃತ ವಾಹನಗಳಲ್ಲಿ ಕರೆದುಕೊಂಡು ಹೋಗುವುದು ಕಾನೂನಿಗೆ ವಿರುದ್ಧವಾಗಿದ್ದು, ಇದರ ಹೊಣೆಯನ್ನು ಯಾವ ತೋಟಕ್ಕೆ ಕೆಲಸಕ್ಕೆ ಹೋಗಿದ್ದರೋ ಆ ತೋಟದ ಮಾಲೀಕರು ಹೊರಬೇಕು, ಅವರ ಚಿಕಿತ್ಸೆ ವೆಚ್ಚವನ್ನು ಭರಿಸಬೇಕು ಮತ್ತು ಕಾರ್ಮಿಕರ ಪರಿಹಾರ ಕಾಯ್ದೆಯನ್ವಯ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಕಾರ್ಮಿಕರನ್ನು ಕೆಲಸಕ್ಕೆ ಕರೆದುಕೊಂಡು ಹೋಗುವ ಮತ್ತು ಕರೆದುಕೊಂಡು ಬರುವ ಸಂಬಂಧ ಕೋರ್ಟ್‍ ಆದೇಶದಂತೆ ಕಾನೂನು ರಚನೆಯಾಗಿದ್ದು, ಅದರಲ್ಲಿ ಕಾರ್ಮಿಕರನ್ನು ಅನಧಿಕೃತ ವಾಹನಗಳಾದ ಗೂಡ್ಸ್ ಆಟೋ, ಲಾರಿ ಮತ್ತಿತರ  ಪ್ರಯಾಣರಹಿತ ವಾಹನಗಳಲ್ಲಿ ಕರೆದುಕೊಂಡು  ಹೋಗುವುದನ್ನು  ನಿಷೇಧಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು, ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧಿಕಾರಿಗಳು ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಕರ್ನಾಟಕ ಪ್ಲಾಂಟೇಷನ್‍ ಪ್ರೊವೆನ್ಷಿಯಲ್‍ ವರ್ಕರ್ಸ್ ಯೂನಿಯನ್‍ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಧರ್ಮೇಶ್‍ ಆಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *