ಮದುವೆಗೆ ಜಾತಿ ಕಾರಣ: ಯುವತಿಯನ್ನು ಪೆಟ್ರೋಲ್‌ ಸುರಿದು ಕೊಂದ ಆರೋಪಿ ನಾಪತ್ತೆ

ಬೆಂಗಳೂರು: ಮದುವೆಯಾಗುವಂತೆ ಒತ್ತಾಯಿಸಿದ್ದ ಪ್ರಿಯತಮೆಯನ್ನು, ಪ್ರಿಯಕರನೇ ಪೆಟ್ರೋಲ್‌ ಸುರಿದು ಹತ್ಯೆ ಮಾಡಿರುವ ದಾರುಣ ಘಟನೆ ಎಲೆಕ್ಟ್ರಾನಿಕ್‌ ಸಿಟಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಶಿವಕುಮಾರ್‌ ಎಂಬ ಯುವಕ ದಾನೇಶ್ವರಿ ಎಂಬ ಯುವತಿಯನ್ನು 3 ವರ್ಷಗಳು ಪ್ರೀತಿಸಿ ಮದುವೆ ಮಾಡಿಕೊಳ್ಳಲು ಒಪ್ಪದೇ ಜಾತಿ ಕಾರಣ ನೆಪವೊಡ್ಡಿ ಆಕೆಯನ್ನು ಪೆಟ್ರೋಲ್‌ ಸುರಿದು ಹತ್ಯೆ ಮಾಡಿದ್ದಾನೆ.

ವಿಜಯಪುರ ಜಿಲ್ಲೆಯ ತಾಳಿಕೋಟೆಯ ಉಪ ತಹಶೀಲ್ದಾರ್ ಅಶೋಕ ಶರ್ಮಾ ಅವರ ಮಗಳು ದಾನೇಶ್ವರಿ (23) ಹಾಗೂ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಶಿವಕುಮಾರ್‌ ಬೇರೆ ಬೇರೆ ಜಾತಿಯವರಾಗಿದ್ದ ಕಾರಣ ಯುವಕನ ಮನೆಯವರು ಮದುವೆಗೆ ಒಪ್ಪಿರಲಿಲ್ಲ. ಪ್ರಕರಣದ ಸಂಬಂಧ ದಾನೇಶ್ವರಿ ಸಹೋದರಿ ತೇಜಸ್ವಿನಿ, ಶಿವಕುಮಾರ್‌ ವಿರುದ್ಧ ಎಲೆಕ್ಟ್ರಾನಿಕ್‌ ಸಿಟಿ ಪೊಲೀಸ್‌ ಠಾಣೆಯಲ್ಲಿ ದೂರು  ದಾಖಲಿಸಿದ್ದಾರೆ.

‘ಪರಿಶಿಷ್ಟ ಜಾತಿಯ ದಾನೇಶ್ವರಿ ಹಾಗೂ ಲಿಂಗಾಯತ ಸಮುದಾಯದ ಶಿವಕುಮಾರ್ ಹಿರೇಹಾಳ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗುವಂತೆ ಕೇಳಿದ್ದಕ್ಕಾಗಿ ಸಿಟ್ಟಾದ ಶಿವಕುಮಾರ್, ಕೊಲೆ ಮಾಡಿ ಪರಾರಿಯಾಗಿರುವ ಬಗ್ಗೆ ಯುವತಿಯ ಸಹೋದರಿ ದೂರು ನೀಡಿದ್ದಾರೆ. ಪರಿಶಿಷ್ಟ ಜಾತಿ, ಪಂಗಡ ದೌರ್ಜನ್ಯ ತಡೆ ಕಾಯ್ದೆ ಹಾಗೂ ಕೊಲೆ ಆರೋಪದಡಿ ಶಿವಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಿ, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಇದನ್ನು ಓದಿ: ಪೊಲೀಸರಿಂದ ಅನ್ಯಾಯ ಆರೋಪ: ಸಿಎಂ ಎದುರೇ ಆತ್ನಹತ್ಯೆಗೆ ಯತ್ನಸಿದ ವೃದ್ಧ

ದಾನೇಶ್ವರಿ ಮತ್ತು ಶಿವಕುಮಾರ್‌ ವಿಜಯಪುರದ ಬಿಎಲ್‌ಡಿಇಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದರು. ಅವರಿಬ್ಬರೂ ಎಂಜಿನಿಯರಿಂಗ್‌ ವ್ಯಾಸಂಗ ಮಾಡುತ್ತಿರುವಾಗಲೇ ಪರಸ್ಪರ ಪ್ರೀತಿಸುತ್ತಿದ್ದರು. ಒಂದೂವರೆ ವರ್ಷದ ಹಿಂದೆ ಅವರಿಬ್ಬರೂ ಬೆಂಗಳೂರಿಗೆ ಬಂದಿದ್ದು, ಶಿವಕುಮಾರ್‌ ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಬಿಟಿಎಂ ಲೇಔಟ್‌ನ ವೀರಸಂದ್ರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ‘ವಿಜಯಪುರ ಬಿಎಲ್‌ಡಿಇಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಮುಗಿಸಿದ್ದ ದಾನೇಶ್ವರಿ, ಉದ್ಯೋಗಕ್ಕೆ ಪೂರಕ ಅಧ್ಯಯನಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಬಿಟಿಎಂ ಲೇಔಟ್‌ನ ಪಿಜಿಯಲ್ಲಿ ವಾಸವಿದ್ದರು. ಆಗಾಗ್ಗೆ ಶಿವಕುಮಾರ್‌ ಮನೆಗೆ ಬರುತ್ತಿದ್ದರು ಎನ್ನಲಾಗಿದೆ.

ಇವರಿಬ್ಬರೂ ಬೇರೆ ಬೇರೆ ಜಾತಿಯವರಾಗಿದ್ದ ಕಾರಣ ಶಿವಕುಮಾರ್‌ ಮನೆಯವರು ಮದುವೆಗೆ ಒಪ್ಪಿರಲಿಲ್ಲ. ಈ ಹಿನ್ನೆಲೆಯಲ್ಲಿ ಆತ ದಾನೇಶ್ವರಿಯಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದ. ಆಕೆಗೂ ತನ್ನಿಂದ ದೂರ ಇರುವಂತೆ ಸೂಚಿಸಿದ್ದ. ಆದರೆ, ಆಕೆ ‘ನಿನ್ನನ್ನು ಬಿಟ್ಟು ಬೇರೆ ಯಾರನ್ನೂ ಮದುವೆಯಾಗುವುದಿಲ್ಲ’ ಎಂದು ಹೇಳಿದ್ದಳು. ಆದರೆ, ‘ಮನೆಯವರ ವಿರೋಧ ಕಟ್ಟಿಕೊಂಡು ಮದುವೆಯಾಗಲು ಸಾಧ್ಯವಿಲ್ಲ’ ಎಂದು ಶಿವಕುಮಾರ್‌ ಹೇಳಿದ್ದ ಎನ್ನಲಾಗಿದೆ.

ಇದನ್ನು ಓದಿ: ನನ್ನ ಸಾವಿಗೆ ಕರಾವಳಿ ಕಾಲೇಜು ಕಾರಣ : ಡೆತ್‌ ನೋಟ್‌ ಬರೆದಿಟ್ಟು ವಿದ್ಯಾರ್ಥಿ ಆತ್ಮಹತ್ಯೆ

ವಿಜಯಪುರಕ್ಕೆ ಹೋಗಿದ್ದ ದಾನೇಶ್ವರಿ, ಮಾರ್ಚ್‌ 14ರಂದು ಬೆಂಗಳೂರಿಗೆ ವಾಪಸ್ಸಾಗಿದ್ದರು. ಮಾರ್ಚ್‌ 15ರಂದು ಶಿವಕುಮಾರ್ ಕೆಲಸ ಮಾಡುವ ಕಂಪನಿಗೆ ಹೋಗಿ, ಆತನ ಮನವೊಲಿಕೆಗೆ ಮುಂದಾಗಿದ್ದಾರೆ. ಆಗಲೂ ಇಬ್ಬರ ನಡುವೆ ಜಗಳವಾಗಿದೆ. ನಂತರ ವಾಪಸ್ಸು ಹೋದ ಅವರು, ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ನಿರ್ಜನ ಪ್ರದೇಶದಲ್ಲಿ ಮತ್ತೆ ಭೇಟಿಯಾಗಿದ್ದು, ಮತ್ತೊಮ್ಮೆ ಇಬ್ಬರ ನಡುವೆ ಜಗಳ ನಡೆದಿದೆ. ಅದು ವಿಕೋಪಕ್ಕೆ ಹೋದಾಗ ಶಿವಕುಮಾರ್‌, ಆಕೆ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಹತ್ಯೆಗೈದಿದ್ದಾನೆ ಎಂದು ಸಂತ್ರಸ್ತೆಯ ಸಹೋದರಿ ದೂರಿನಲ್ಲಿ ಆರೋಪಿಸಿದ್ದಾರೆ.

ದಾನೇಶ್ವರಿ ಮೈ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲಾಗಿದ್ದು, ಶೇಕಡಾ 75ರಷ್ಟು ಸುಟ್ಟ ಗಾಯಗಳಾಗಿವೆ. ಮಾರ್ಚ್ 15ರಂದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ದಾನೇಶ್ವರಿ ಮೃತಪಟ್ಟದ್ದಾಳೆ.

ಸುಟ್ಟ ಗಾಯಗಳಿಂದ ಬಳಲುತ್ತಿದ್ದ ದಾನೇಶ್ವರಿಯನ್ನು ಶಿವಕುಮಾರ್‌ ಮತ್ತು ಆತನ ಸ್ನೇಹಿತರೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಆಕೆಯ ಪೋಷಕರ ಮೊಬೈಲ್‌ ನಂಬರ್‌ ಕೊಟ್ಟು ಪರಾರಿಯಾಗಿದ್ದಾನೆ. ಹೀಗಾಗಿ ಆತ್ಮಹತ್ಯೆಯೋ? ಕೊಲೆಯೋ? ಎಂಬ ಮಾಹಿತಿ ಸಂಗ್ರಹಿಸಬೇಕಿದೆ. ಒಂದು ವೇಳೆ ಆತನೇ ಪೆಟ್ರೋಲ್‌ ಸುರಿದಿದ್ದರೆ, ಆಕೆಯನ್ನು ಆಸ್ಪತ್ರೆಗೆ ಏಕೆ ಸೇರಿಸುತ್ತಿದ್ದ? ಮತ್ತೊಂದೆಡೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ, ಪೋಷಕರ ಮೊಬೈಲ್‌ ನಂಬರ್‌ ಕೊಟ್ಟು ಪರಾರಿಯಾಗಲು ಕಾರಣವೇನು? ಎಂಬ ಅನುಮಾನವಿದೆ. ಆತನ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ. ನಂತರ ಸ್ಪಷ್ಟ ಮಾಹಿತಿ ದೊರೆಯಲಿದೆ. ಜತೆಗೆ ಕೃತ್ಯ ನಡೆದ ಸ್ಥಳ ಪ್ರಮುಖ ರಸ್ತೆಯಿಂದ ಅರ್ಧ ಕಿ.ಮೀ. ದೂರದಲ್ಲಿದೆ. ಅಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾಗಳು ಇಲ್ಲ. ತಾಂತ್ರಿಕ ತನಿಖೆ ನಡೆಸಬೇಕಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.

ದಾನೇಶ್ವರಿ ಸಂಬಂಧಿಕರು ಅಸಮಾಧಾನ:

‘ದಾನೇಶ್ವರಿ ಕೊಲೆ ಪ್ರಕರಣದ ತನಿಖೆಯಲ್ಲಿ ಪೊಲೀಸರು ನಿರ್ಲಕ್ಷ್ಯ ತೋರುತ್ತಿದ್ದಾರೆ. ದೂರು ಕೊಟ್ಟವರನ್ನೇ ಪದೇ ಪದೇ ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಆರೋಪಿಯನ್ನು ಬಂಧಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪ್ರಕರಣವೂ ನಿಲ್ಲುವುದಿಲ್ಲವೆಂದು ನೇರವಾಗಿ ಹೇಳುತ್ತಿದ್ದಾರೆ. ನಮಗೆ ನ್ಯಾಯ ಬೇಕು’ ಎಂದು ಸಂಬಂಧಿಕರು ಅಸಮಾಧಾನ ವ್ಯಕ್ತಪಡಿಸಿದರು.

 

Donate Janashakthi Media

Leave a Reply

Your email address will not be published. Required fields are marked *