ವಾಚ್ಛತ್ತಿ ಆದಿವಾಸಿ ಮಹಿಳೆಯರ ಮೇಲಿನ ಅತ್ಯಾಚಾರಿಗಳಿಗೆ ಶಿಕ್ಷೆಯನ್ನು ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್: 215 ಜನರನ್ನು ತಪ್ಪಿತಸ್ಥರು -ಸಂತ್ರಸ್ತ ಮಹಿಳೆಯರಿಗೆ ರೂ. 10 ಲಕ್ಷ ಪರಿಹಾರ ನೀಡುವಂತೆ ಆದೇಶ

ಸಂಗ್ರಹ: ಸಿ.ಸಿದ್ದಯ್ಯ

ಅರಣ್ಯ ಇಲಾಖೆ, ಪೊಲೀಸ್ ಮತ್ತು ಕಂದಾಯ ಇಲಾಖೆ ಈ ಮೂರು ಸರ್ಕಾರಿ ಇಲಾಖೆಗಳ ಜಂಟಿ  ತುಕಡಿ 1992ರಲ್ಲಿ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ‘ವಾಚ್ಛತ್ತಿ’ ಎಂಬ ಪ್ರದೇಶದಲ್ಲಿನ ಆದಿವಾಸಿಗಳ ಮೇಲೆ ನಡೆಸಿದ ಅರಾಜಕತೆ, ಕ್ರೌರ್ಯ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್, ಬದುಕುಳಿದಿರುವ 215 ಆರೋಪಿಗಳ ಶಿಕ್ಷೆಯನ್ನು ಎತ್ತಿಹಿಡಿಯುವ ನಿರ್ಣಾಯಕ ತೀರ್ಪು ನೀಡಿದೆ. ಸೆಪ್ಟೆಂಬರ್ 29ರಂದು ನೀಡಿದ ಈ ತೀರ್ಪಿನಲ್ಲಿ, ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಗುಡ್ಡಗಾಡು ಮಹಿಳೆಯರಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರಾದ ವೇಲ್ಮುರುಗನ್ ಆದೇಶಿಸಿದ್ದಾರೆ. ಸಿಪಿಐ(ಎಂ) ಮತ್ತು ತಮಿಳುನಾಡು ಬುಡಕಟ್ಟು ಸಂಘ ಸೇರಿದಂತೆ ಕೆಲವು ಪ್ರಜಾಸತ್ತಾತ್ಮಕ ಸಂಘಟನೆಗಳ 31 ವರ್ಷಗಳ ನಿರಂತರ ಹೋರಾಟಕ್ಕೆ ಕೊನೆಗೂ ನ್ಯಾಯ ದೊರಕಿದೆ. 

1992ರಲ್ಲಿ ನಡೆದ ಭೀಕರ ದೌರ್ಜನ್ಯ

ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಸಿತೇರಿ ಬೆಟ್ಟಗಳ ತಪ್ಪಲಿನಲ್ಲಿ ನೆಲೆಸಿರುವ ಪುಟ್ಟ ಬುಡಕಟ್ಟು ಗ್ರಾಮ ವಾಚ್ಛತ್ತಿ. ತಮಿಳುನಾಡಿನಲ್ಲಿ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಸರ್ಕಾರ ಆಡಳಿತದಲ್ಲಿತ್ತು. ಜೂನ್ 20, 1992 ರಂದು, ವಾಚ್ಛತ್ತಿ ಗ್ರಾಮದ ಪಕ್ಕದ ಬೆಟ್ಟ ಪ್ರದೇಶದಲ್ಲಿ ಶ್ರೀಗಂಧದ ಮರವನ್ನು ಕಡಿಯುವುದರ ವಿರುದ್ಧ ದಾಳಿಯ ನೆಪದಲ್ಲಿ ಅರಣ್ಯ, ಪೊಲೀಸ್ ಮತ್ತು ಕಂದಾಯ ಇಲಾಖೆಯ 600 ಸಿಬ್ಬಂದಿಗಳ ತುಕಡಿಯೊಂದು ಮುತ್ತಿಗೆ ಹಾಕಿತು. ಅವರು ಮೂರು ದಿನಗಳ ಕಾಲ ಅಲ್ಲಿಯೇ ಬೀಡಾರ ಹೂಡಿದರು. ಅವರು ಅಲ್ಲಿ ಸುಮ್ಮನೆ ಇರಲಿಲ್ಲ. ಗುಡ್ಡಗಾಡು ನಿವಾಸಿಗಳ ಮೇಲೆ ದೊಡ್ಡದೊಂದು ಅರಾಜಕತೆಯನ್ನೇ  ಸೃಷ್ಟಿಸಿದರು. ಆದಿವಾಸಿಗಳ ಮನೆಗಳು, ಸೊತ್ತುಗಳನ್ನು ಲೂಟಿ ಮಾಡಿದರು, ಕುರಿ, ಕೋಳಿಗಳನ್ನು ಹಿಡಿದು, ಕೂಯ್ದು, ಅಲ್ಲೇ ಅಡುಗೆ ಮಾಡಿ ತಿಂದರು. ಪಡಿತರ ಅಂಗಡಿಯಲ್ಲಿದ್ದ ಆಹಾರ ಧಾನ್ಯಗಳನ್ನು ತೆಗೆದು ಹೊರಗೆಸೆದರು. ಆದಿವಾಸಿಗಳು ಬಳಸುತ್ತಿದ್ದ ಕುಡಿಯುವ ನೀರಿನ ತೊಟ್ಟಿಗೆ ಸೀಮೆ ಎಣ್ಣೆ ಸುರಿದರು. ಮನಸೋ ಇಚ್ಛೆ ದಾಂಧಲೆ ನಡೆಸಿದರು.

ಈ ಕ್ರೂರಿಗಳು ಇಷ್ಟಕ್ಕೇ ಸುಮ್ಮನಾಗಲಿಲ್ಲ. ಶ್ರೀಗಂಧದ ಮರವನ್ನು ಕದ್ದೊಯ್ದಿದ್ದಾರೆ ಎಂದು ಆರೋಪಿಸಿ 90 ಮಹಿಳೆಯರು, 28 ಮಕ್ಕಳು, 15 ಪುರುಷರು  ಸೇರಿದಂತೆ 133 ಮಂದಿಯನ್ನು ಬಂಧಿಸಿ ಎಳೆದೊಯ್ದರು. ಈ 90 ಮಹಿಳೆಯರ ಪೈಕಿ 18 ಮಹಿಳೆಯರ ಮೇಲೆ ರಾತ್ರಿಯಿಡೀ ಸಾಮೂಹಿಕ ಅತ್ಯಾಚಾರ ನಡೆಸಿದರು. ಬಾಯ್ಬಿಟ್ಟು ಹೇಳಲಾಗದ ಕೆಲವು ಚಿತ್ರಹಿಂಸೆಗಳಿಗೆ ಆ ಮಹಿಳೆಯರನ್ನು ಒಳಪಡಿಸಿದರು.  ತಮ್ಮ ಮೇಲೆ ನಡೆದ ದೌರ್ಜನ್ಯಗಳ ವಿರುದ್ದ ದನಿ ಎತ್ತಲೂ ಆದಿವಾಸಿಗಳು ಭಯಪಡುತ್ತಿದ್ದರು. ಅಧಿಕಾರದಲ್ಲಿರುವವರು ನಡೆಸಿದ ಈ ದೌರ್ಜನ್ಯದ ವಿಷಯಗಳು, ಸಿಪಿಐ(ಎಂ) ಮತ್ತು ತಮಿಳುನಾಡು ಬುಡಕಟ್ಟು ಸಂಘದ ಮಧ್ಯಪ್ರವೇಶದ ನಂತರವೇ ಬೆಳಕಿಗೆ ಬಂದವು. ಸಂತ್ರಸ್ತರಿಗೆ ನ್ಯಾಯ ಕೊಡಿಸಲು ಜನ ವೇದಿಕೆಯಲ್ಲಿ ಮಾತ್ರವಲ್ಲ, ವಿಧಾನಸಭೆ, ಸಂಸತ್ತಿನಲ್ಲಿ, ನ್ಯಾಯಾಂಗ ಸೇರಿದಂತೆ ಎಲ್ಲಾ ಹಂತಗಳಲ್ಲಿ ಹೋರಾಟಗಳಿಂದಾಗಿ, ಭೀಕರ ಘಟನೆಯ ಮೂರು ವರ್ಷಗಳ ನಂತರ ಹೈಕೋರ್ಟಿನ ನಿರ್ದೇಶನದ ಮೇರೆಗೆ ತನಿಖೆಯನ್ನು ವಹಿಸಿಕೊಂಡ ಸಿಬಿಐ ಚಾರ್ಜ್‌ಶೀಟ್‌ ಸಲ್ಲಿಸಿತು.

19 ವರ್ಷಗಳ ನಿರಂತರ ಹೋರಾಟ

ವಾಚಾತಿ ಜನರ ಜೊತೆಗೂಡಿ ಸುಮಾರು 19 ವರ್ಷಗಳ ಕಾಲ ನಡೆದ ಈ ಕಾನೂನು ಹೋರಾಟದ ಹಿನ್ನೆಲೆಯಲ್ಲಿ, ಸ್ವಾತಂತ್ರ್ಯೋತ್ತರ ಭಾರತದ ಕಾನೂನು ಇತಿಹಾಸದಲ್ಲಿ ಒಂದು ಮಹತ್ವದ ಕ್ಷಣದಲ್ಲಿ, ಧರ್ಮಪುರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಸ್. ಕುಮಾರ ಗುರು ಅವರು, 2011ರ ಸೆಪ್ಟೆಂಬರ್ 29ರಂದು, ಸಿಬಿಐ ಸಲ್ಲಿಸಿದ ಚಾರ್ಜ್‍ ಷೀಟಿನಲ್ಲಿ ಆರೋಪಿತರಾದ ಎಲ್ಲಾ 269 ಅಧಿಕಾರಿಗಳನ್ನು ದೋಷಿಗಳು ಎಂದು ತೀರ್ಪು ನೀಡಿದರು.

ಇದನ್ನೂ ಓದಿ: ‘ನಿಮ್ಮಲ್ಲಿ ಎಷ್ಟು ಮಂದಿ ದಲಿತರು?’: ಮಾಧ್ಯಮಗಳಲ್ಲಿನ ಪ್ರಾತಿನಿಧ್ಯತೆಯ ಬಗ್ಗೆ ರಾಹುಲ್ ಗಾಂಧಿ ಪ್ರಶ್ನೆ

ಇವರಲ್ಲಿ 17 ಮಂದಿ ಅತ್ಯಾಚಾರದ ಆರೋಪದ ಮೇಲೆ ಶಿಕ್ಷೆಗೊಳಗಾದವರು. ಪ್ರಸ್ತುತ ತೀರ್ಪಿನ ಸಮಯದಲ್ಲಿ,52 ಆರೋಪಿಗಳು ಅದಾಗಲೇ ನಿಧನರಾಗಿದ್ದರು. ಉಳಿದ  217 ಸಿಬ್ಬಂದಿ ಪ್ರಭುತ್ವ ಹಿಂಸಾಚಾರದಲ್ಲಿ ಭಾಗಿಯಾದಕ್ಕಾಗಿ ಜೈಲು ಶಿಕ್ಷೆಗೆ ಗುರಿಯಾದರು.ಒಂದೇ ಪ್ರಕರಣದಲ್ಲಿ ಒಂದಕ್ಕಿಂತ ಹೆಚ್ಚು ಅಪರಾಧಿಗಳಿಗೆ ಏಕಕಾಲದಲ್ಲಿ ಶಿಕ್ಷೆ ವಿಧಿಸಿದ ಮಹತ್ವದ ತೀರ್ಪು ಇದಾಗಿತ್ತು. ಇದು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿತು.

ಮೇಲ್ಮನವಿ – ವಿಚಾರಣೆ

ಈ ಸನ್ನಿವೇಶದಲ್ಲಿ, ಗರಿಷ್ಠ ಶಿಕ್ಷೆ ಪಡೆದ 27 ಮಂದಿ ಮದ್ರಾಸ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಗಳ ತನಿಖೆಯನ್ನು ನ್ಯಾಯಮೂರ್ತಿ ವೇಲ್ಮುರುಗನ್ ತನಿಖೆ ನಡೆಸುತ್ತಿದ್ದರು. ವಿಚಾರಣೆಯ ಒಂದು ಭಾಗವಾಗಿ, ಈ ಪ್ರಕರಣಕ್ಕೆ ಸಂಬಂಧಿಸಿದ ಸ್ಥಳಗಳು ಮತ್ತು ಜನರ ನಡುವೆ ವೈಯಕ್ತಿಕ ತನಿಖೆ ನಡೆಸಲು ನಿರ್ಧರಿಸಲಾಯಿತು.

 

ಅದರಂತೆ  ಮಾರ್ಚ್  4, 2023 ರಂದು ನ್ಯಾಯಮೂರ್ತಿ ವೇಲ್ಮುರುಗನ್ ನೇರವಾಗಿ ಆ ಪ್ರದೇಶಗಳಿಗೆ ಹೋದರು. ಘಟನೆಗೆ ಸಂಬಂಧಿಸಿವೆ ಎನ್ನಲಾದ  ಗಿರಿಜನ  ಪ್ರಾಥಮಿಕ ಶಾಲೆ, ಕೆರೆ ಪ್ರದೇಶ, ಆಲದ ಮರ, ನೀರಿನ ತೊಟ್ಟಿ, ಬೆಟ್ಟ ಪ್ರದೇಶಕ್ಕೆ ಭೇಟಿ  ನೀಡಿ ಪರಿಶೀಲನೆ ನಡೆಸಿದರು. ಸಂತ್ರಸ್ತರನ್ನು ಭೇಟಿ ಮಾಡಿ, ಪ್ರಕರಣಕ್ಕೆ ಸಂಬಂಧಿಸಿ ಮಾತ್ರ ಮಾತನಾಡದೆ, ಅದನ್ನು ಹೊರತುಪಡಿಸಿ ಆದಿವಾಸಿಗಳ ಇತರ ಬೇಡಿಕೆಗಳನ್ನು ಸಹ ಕೇಳಿದರು.

ವಿಚಾರಣೆಯ ವೇಳೆಯಲ್ಲಿ ವಾಚ್ಛತ್ತಿ ಸಂತ್ರಸ್ತರ ಪರವಾಗಿ ವಾದಿಸಿದ ಸಿಬಿಐನ ಪಬ್ಲಿಕ್‍ ಪ್ರಾಸಿಕ್ಯೂಟರ್ ಕೆ. ಜಯಬಾಲನ್ ಆರೋಪಿಗಳ ಪರವಾಗಿ ವಾದಿಸುತ್ತಿದ್ದ 12 ವಕೀಲರುಗಳ ಸವಾಲುಗಳನ್ನು ಏಕಾಂಗಿಯಾಗಿ ಎದುರಿಸಿದ್ದು ಕೂಡ ಈ ಕೇಸಿನ ಇನ್ನೊಂದು ಗಮನಾರ್ಹ ಸಂಗತಿ.

ತೀರ್ಪಿನಲ್ಲಿರುವ ಅಂಶಗಳು ;

ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ವೇಲ್ಮುರುಗನ್ ಅವರು ಶುಕ್ರವಾರ ಸೆಪ್ಟೆಂಬರ್ 29 ರಂದು ತಮ್ಮ ತೀರ್ಪು ಪ್ರಕಟಿಸಿದರು. ಅಂದು ವಾಚಾತಿ ಪ್ರಕರಣದ ಆರೋಪಿಗಳು ಸಲ್ಲಿಸಿದ್ದ ಎಲ್ಲ ಮೇಲ್ಮನವಿಗಳನ್ನು ವಜಾಗೊಳಿಸುವುದಾಗಿ ಹೇಳಿದ ನ್ಯಾಯಮೂರ್ತಿಗಳು, ಧರ್ಮಪುರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರು ನೀಡಿದ್ದ ತೀರ್ಪನ್ನು ಎತ್ತಿಹಿಡಿದಿದ್ದಾರೆ.

ಪ್ರತಿ ಅತ್ಯಾಚಾರ ಸಂತ್ರಸ್ತರಿಗೆ ಈ ಹಿಂದೆ ನೀಡಲಾಗಿದ್ದ 15 ಸಾವಿರ ರೂ.ನ್ನು ಹೆಚ್ಚಿಸಿ 10 ಲಕ್ಷ ರೂ.ಗಳ ಪರಿಹಾರವನ್ನು ನೀಡುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿದ್ದಾರೆ. ಇದಲ್ಲದೆ, ಅತ್ಯಾಚಾರ ಅಪರಾಧಗಳಿಗೆ ಶಿಕ್ಷೆಗೊಳಗಾದವರಿಂದ ಈ ಪರಿಹಾರದ ಶೇಕಡಾ 50 ರಷ್ಟನ್ನು ವಸೂಲಿ ಮಾಡುವಂತೆ ನ್ಯಾಯಾಧೀಶರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಅತ್ಯಾಚಾರ ಸಂತ್ರಸ್ತರಿಗೆ ಸರಿಯಾದ ವೈದ್ಯಕೀಯ ನೆರವು ನೀಡಲು ನಿರಾಕರಿಸಿದ ವೈದ್ಯಕೀಯ ಸಿಬ್ಬಂದಿಯಿಂದಲೂ ಪರಿಹಾರವನ್ನು ವಸೂಲಿ ಮಾಡುವಂತೆ ನ್ಯಾಯಮೂರ್ತಿ ವೇಲ್ಮುರುಗನ್ ಆದೇಶಿಸಿದ್ದಾರೆ. ದುರ್ಬಲ ಗ್ರಾಮಸ್ಥರನ್ನು ರಕ್ಷಿಸುವಲ್ಲಿ ವಿಫಲರಾದ ಹಿಂದಿನ ಧರ್ಮಪುರಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾ ಅರಣ್ಯಾಧಿಕಾರಿ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಲಾಗಿದೆ.

ಅತ್ಯಾಚಾರ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ನೀಡುವಂತೆ ನ್ಯಾಯಾಧೀಶರು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ. ವಿವಿಧ ಕಾರಣಗಳಿಂದ ಸರ್ಕಾರಿ ಉದ್ಯೋಗಗಳು ಕಾರ್ಯಸಾಧ್ಯವಾಗದ ಸಂದರ್ಭಗಳಲ್ಲಿ, ಸಂತ್ರಸ್ತರಿಗೆ ಸ್ವಯಂ ಉದ್ಯೋಗ ಚಟುವಟಿಕೆಗಳಿಗೆ ಸಾಕಷ್ಟು ತರಬೇತಿಯನ್ನು ನೀಡಬೇಕು. ಹೆಚ್ಚುವರಿಯಾಗಿ, ವಾಚ್ಛತ್ತಿ ಗ್ರಾಮದಲ್ಲಿ ತಕ್ಷಣದ ಅಭಿವೃದ್ಧಿ ಚಟುವಟಿಕೆಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರಕ್ಕೆ ನ್ಯಾಯಮೂರ್ತಿ ವೇಲ್ಮುರುಗನ್ ಆದೇಶಿಸಿದ್ದಾರೆ. ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿ, ಎಲ್ಲ ರೀತಿಯಲ್ಲೂ ಅಭಿವೃದ್ಧಿ ಪಡಿಸಲು ಸಂಘಟಿತ ಪ್ರಯತ್ನ ನಡೆಸಬೇಕಿದೆ ಎಂದು ಹೇಳಿದ್ದಾರೆ.

ಹಲವು ಸಂಘಟನೆಗಳು ಕೈಜೋಡಿಸಿದವು

ಆದಿವಾಸಿಗಳ ಮೇಲೆ ನಡೆದ ದೌರ್ಜನ್ಯದ ವಿರುದ್ದ ಹೋರಾಡಿ, ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಂಡ ಈ ಸುದೀರ್ಘ ಹೊರಾಟಕ್ಕೆ ಹಲವು ಸಂಘಟನೆಗಳು ಞ ಕೈಜೋಡಿಸಿದವು. ಪಿ. ಷಣ್ಮುಗಂ (ಈಗ ಸಿಪಿಐ(ಎಂ)ಕೇಂದ್ರ ಸಮಿತಿ ಸದಸ್ಯ) ನೇತೃತ್ವದ ತಮಿಳುನಾಡು ಬುಡಕಟ್ಟು ಸಂಘವು ಈ ಸುದೀರ್ಘ ಮತ್ತು ಪ್ರಯಾಸಕರ ಕಾನೂನು ಹೋರಾಟದ ಉದ್ದಕ್ಕೂ ಬಲಿಪಶುಗಳ ಪರವಾಗಿ ದೃಢವಾಗಿ ನಿಂತಿದ್ದರೆ, ಸಿಐಟಿಯು, ಎಐಕೆಎಸ್ ಮತ್ತು ವಿಮಾ ಮತ್ತು ಬ್ಯಾಂಕ್ ನೌಕರರ ಸಂಘಗಳು ಸಂತ್ರಸ್ತರಲ್ಲಿ ಸಹಜ ಸ್ಥಿತಿಯ ಭಾವನೆಯನ್ನು ಪುನಃಸ್ಥಾಪಿಸಲು ಬೆಂಬಲವನ್ನು ನೀಡುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿವೆ.

ಇದನ್ನೂ ಓದಿ: ಪಟಾಕಿ ದುರಂತ : ಹಿಂದೆಯೂ ನಡೆದಿತ್ತು ,ರಾಜಕಾರಣಿಗಳ ಪ್ರಭಾವ ಬಳಸಿ ಮತ್ತೆ ಓಪನ್‌ ಮಾಡಿಸಿದ್ದ ಮಾಲೀಕ!

ವಿಶೇಷವೆಂದರೆ, ಸಾರಿಗೆ ಒಕ್ಕೂಟದ ಸದಸ್ಯರು (ಸಿಐಟಿಯು) ರಾಜ್ಯಾದ್ಯಂತ ಬಸ್ ನಿಲ್ದಾಣಗಳಲ್ಲಿ ಹುಂಡಿಗಳ ಮೂಲಕ ದೇಣಿಗೆ ಸಂಗ್ರಹಿಸಿ ಸೌಹಾರ್ದ, ಬೆಂಬಲ ಪ್ರದರ್ಶಿಸಿದರು. ನಂತರ ಅವರು ಗ್ರಾಮದ ಪ್ರತಿ ಕುಟುಂಬಕ್ಕೆ ಅಡಿಗೆ ಪಾತ್ರೆಗಳನ್ನು ವಿತರಿಸಿದರು ಮತ್ತು ಉಳಿದ ಹಣವನ್ನು ಕಾನೂನು ವೆಚ್ಚಗಳನ್ನು ಭರಿಸಲು ಹಂಚಲಾಯಿತು.ಕಾನೂನಿನ ಹಾರಾಟದಲ್ಲಿ, ಹಿರಿಯ ವಕೀಲರಾದ ಎನ್‌ಜಿಆರ್ ಪ್ರಸಾದ್ ಮತ್ತು ಆರ್ ವೈಗೈ (ಹಿರಿಯ ಸಿಐಟಿಯು ನೇತಾರ ದಿವಂಗತ ಪಿ ರಾಮಮೂರ್ತಿ ಅವರ ಪುತ್ರಿ) ಸೇರಿದಂತೆ ವಕೀಲರ ಸಮರ್ಪಿತ ತಂಡವು ವಕೀಲರಾದ ಜಿ ಚಮ್ಕಿರಾಜ್, ಕೆ ಇಲಾಂಗೋ ಮತ್ತು ಸುಬ್ಬುರಾಮ್ ಅವರೊಂದಿಗೆ ಸಂತ್ರಸ್ತರ ದೃಷ್ಟಿಕೋನಗಳನ್ನು ವ್ಯಕ್ತಪಡಿಸುವಲ್ಲಿ ಈ ಪ್ರಯಾಣದ ಉದ್ದಕ್ಕೂ ಜೊತೆಯಾಗಿ ಕಾರ್ಯನಿರ್ವಹಿಸಿದರು.

ಹೈಕೋರ್ಟ್ ತೀರ್ಪನ್ನು ಕೇಳಿದ ವಾಚಾತಿ ಜನರು ವಿಜಯೋತ್ಸವದಲ್ಲಿ ಸಂಭ್ರಮಿಸಿದರು. ಅವರು ಪಟಾಕಿ ಸಿಡಿಸುವ ಮೂಲಕ ಮೆರವಣಿಗೆಗಳನ್ನು  ಆಯೋಜಿಸುವ  ಮೂಲಕ ಮತ್ತು ತಮಿಳುನಾಡು ಹಿಲ್ ಟ್ರೈಬ್ ಅಸೋಸಿಯೇಷನ್‌ನ ಮುಖಂಡರಿಗೆ ಸಿಹಿ  ಹಂಚುವ ಮೂಲಕ ಈ ಸಂದರ್ಭವನ್ನು ಆಚರಿಸಿದರು.

ವಿಡಿಯೋ ನೋಡಿ: ರೈತ, ಕಾರ್ಮಿಕ, ದಲಿತ, ಕೂಲಿಕಾರರ, ಮಹಿಳೆಯರ ಹಕ್ಕುಗಳಿಗಾಗಿ ಮಹಾಧರಣಿ Janashakthi Media

Donate Janashakthi Media

Leave a Reply

Your email address will not be published. Required fields are marked *