ಮಡಿಕೇರಿ: ಪ್ರವಾಸಕ್ಕೆಂದು ಆಗಮಿಸಿ ಹೋಂ ಸ್ಟೇನಲ್ಲಿ ತಂಗಿದ್ದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮುಂಬೈ ಮೂಲದ ಈಶ್ವರ್ ಎಂಬುವರ ಮಗಳು ವಿಘ್ನೇಶ್ವರಿ (24) ಮೃತ ಯುವತಿ. ಶನಿವಾರ ಕೊಡಗು ಜಿಲ್ಲೆಗೆ ತನ್ನ ನಾಲ್ವರು ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಬಂದಿದ್ದಳು. ಮಡಿಕೇರಿ ನಗರದ ನ್ಯೂ ಕೂರ್ಗ್ ವ್ಯಾಲಿ ಹೋಂಸ್ಟೇನಲ್ಲಿ ತಂಗಿದ್ದರು. ನಿನ್ನೆ ರಾತ್ರಿ ಯುವತಿ ವಿಘ್ನೇಶ್ವರಿ ಬಾತ್ ರೂಮಿನಲ್ಲಿ ಮೃತಪಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.
ಸ್ನಾನಕ್ಕೆಂದು ತೆರಳಿದ್ದ ಯುವತಿ ಅಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ. ಸ್ನಾನಗೃಹದಲ್ಲಿ ಅಳವಡಿಸಿದ್ದ ಗೀಸರಿ ಗ್ಯಾಸ್ ಲೀಕ್ ಆಗಿ ಯುವತಿ ಮೃತಪಟ್ಟಿರಬಹುದು ಎನ್ನಲಾಗುತ್ತಿದೆ. ಯುವತಿ ಮೃತಪಟ್ಟಿರುವುದು ತಿಳಿಯುತ್ತಿದ್ದಂತೆ ಜೊತೆಯಲ್ಲಿದ್ದ ಉಳಿದ ನಾಲ್ವರು ಹೋಂಸ್ಟೇ ಮಾಲೀಕನಿಗೆ ಕರೆಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣವೇ ಮಾಲೀಕ ಮುಕ್ತರ್ ಸ್ಥಳಕ್ಕೆ ಆಗಮಿಸಿದ್ದಾನೆ. ಅಷ್ಟರಲ್ಲಿ ಯುವತಿ ಮೃತಪಟ್ಟಿದ್ದಾಳೆ.
ಯುವತಿಯ ಮೃತದೇಹವನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ಮಾಡಿ ಬಳಿಕ ಪೋಷಕರಿಗೆ ಹಸ್ತಾಂತರ ಮಾಡಲಾಗಿದೆ. ಘಟನೆ ಸಂಬಂಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಬಂಧ ಮಾತನಾಡಿರುವ ಯುವತಿಯ ತಂದೆ ಈಶ್ವರ್ ನನ್ನ ಮಗಳು ಆರೋಗ್ಯವಾಗಿದ್ದಳು. ನಿತ್ಯವೂ ಹೆಚ್ಚಿನ ವ್ಯಾಯಾಮ ಮಾಡಿ ತುಂಬಾಹೊತ್ತು ನಡೆಯುತ್ತಿದ್ದಳು. ಎರಡು ದಿನ ಕೊಡಗಿನ ಪ್ರವಾಸಿ ಸ್ಥಳಗಳಲ್ಲಿ ಚೆನ್ನಾಗಿಯೇ ನೋಡಿದ್ದಾಳೆ. ಆದರೆ ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ ಮೃತಪಟ್ಟಿರುವುದು ಅನುಮಾನ ಮೂಡಿಸಿದೆ ಈ ಕುರಿತು ಸರಿಯಾದ ತನಿಖೆ ಮಾಡಿ ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ಹೋಂಸ್ಟೇ ಮಾಲೀಕ ಮುಕ್ತರ್ ಸ್ನಾನಗೃಹದಲ್ಲಿ ಅಳವಡಿಸಿರುವ ಗ್ಯಾಸ್ ಗೀಸರಿಗೆ ಸಂಪರ್ಕವನ್ನೇ ಕಲ್ಪಿಸಿಲ್ಲ. ಯುವತಿ ಅದ್ಹೇಗೆ ಮೃತಪಟ್ಟಿದ್ದಾರೆ ಎನ್ನೋದು ಗೊತ್ತಾಗಿಲ್ಲ ಎಂದಿದ್ದಾರೆ.