ಮೋದಿ ಭಾಗವಹಿಸುವ 4 ಗಂಟೆ ಕಾರ್ಯಕ್ರಮಕ್ಕೆ ಬರೋಬ್ಬರಿ ₹23 ಕೋಟಿ ಖರ್ಚು

ಭೋಪಾಲ್‌: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅಂದರೆ, ನವೆಂಬರ್​ 15ರಂದು ಮಧ್ಯಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಅಂದು ಭಗವಾನ್​ ಬಿರ್ಸಾ ಮುಂಡಾ ಸ್ಮರಣಾರ್ಥ ಜನಜಾತೀಯ ಗೌರವ ದಿವಸ್​ ಆಚರಣೆಯನ್ನು ಮಧ್ಯಪ್ರದೇಶ ಸರ್ಕಾರ ಹಮ್ಮಿಕೊಂಡಿದೆ.

ಪ್ರಧಾನಿ ಮೋದಿ ಪಾಲ್ಗೊಳ್ಳಲಿರುವ ನಾಲ್ಕು ತಾಸುಗಳ ಕಾಲ ಕಾರ್ಯಕ್ರಮಕ್ಕೆ ಬುಡಕಟ್ಟು ಜನಾಂಗದ ಸುಮಾರು 2 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ಕಾರ್ಯಕ್ರಮಕ್ಕಾಗಿ ಮಧ್ಯಪ್ರದೇಶ ಸರ್ಕಾರ ಬರೋಬ್ಬರಿ 23 ಕೋಟಿ ಖರ್ಚು ಮಾಡುತ್ತಿದೆ.

ಇದನ್ನು ಓದಿ: ಎರಡು ದಿನ ಸಂಪೂರ್ಣ ಲಾಕ್​ಡೌನ್​ ಮಾಡಿ: ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ಸಲಹೆ

ಅದರಲ್ಲೂ ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ಸುಮಾರು 12 ಕೋಟಿ ವೆಚ್ಚವಾಗುತ್ತಿದೆ ಎಂದೂ ಹೇಳಲಾಗಿದೆ. ಈ ಕಾರ್ಯಕ್ರಮದ ಸಿದ್ಧತೆಗಾಗಿ ಸುಮಾರು 300 ಕೆಲಸಗಾರರು ಕಾರ್ಯನಿರತರಾಗಿದ್ದಾರೆ. ಜಂಬೂರಿ ಮೈದಾನದಲ್ಲಿ ನಡೆಯಲಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಐದು ಗುಮ್ಮಟಗಳನ್ನು ನಿರ್ಮಿಸಲಾಗುತ್ತಿದೆ. ವೇದಿಕೆಯ ಮೇಲೆ ಗುಮ್ಮಟ ನಿರ್ಮಾಣಕ್ಕಾಗಿಯೇ 9 ಕೋಟಿಗೂ ಅಧಿಕ ಹಣ ಖರ್ಚು ಮಾಡಲಾಗಿದೆ. ಅತ್ಯಂತ ಹೆಚ್ಚು ಬುಡಕಟ್ಟು ಸಮುದಾಯದ ಜನರನ್ನು ಒಳಗೊಂಡ ರಾಜ್ಯ ಮಧ್ಯಪ್ರದೇಶವಾಗಿದ್ದು, ಈ ಕಾರ್ಯಕ್ರಮದಲ್ಲಿ 52 ಜಿಲ್ಲೆಗಳಿಂದ ಜನರು ಆಗಮಿಸಲಿದ್ದಾರೆ.

ಬುಡಕಟ್ಟು ಸಮುದಾಯದ ಜನರು ಸಮ್ಮೇಳನಕ್ಕೆ ಹಾಜರಾಗಲು ಭೋಪಾಲ್‌ಗೆ ಆಗಮಿಸಲಿರುವ ವಾಹನಗಳಿಗೆ ಟೋಲ್ ಪಾವತಿಯಿಂದ ವಿನಾಯಿತಿ ನೀಡಲು ಮಧ್ಯಪ್ರದೇಶ ಸರಕಾರ ನಿರ್ಧರಿಸಿದೆ. ಕಾರ್ಯಕ್ರಮಕ್ಕೆ ಜನರನ್ನು ಕರೆತರುವ ವಾಹನಗಳಿಗೆ ಟೋಲ್‌ ಶುಲ್ಕ ಇರುವುದಿಲ್ಲ ಎಂದು ಮುಖ್ಯಮಂತ್ರಿ ಶಿವರಾಜ್‌ ಸಿಂಗ್ ಚೌಹಾಣ್ ಹೇಳಿಕೆ ಉಲ್ಲೇಖಿಸಿ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿದೆ.

ಅಲ್ಲದೆ, ದೂರದ ಊರುಗಳಿಂದ ಬರುವ ವಾಹನಗಳ ಜೊತೆಗೆ ಆಂಬುಲೆನ್ಸ್ ಕೂಡಾ ಇರುವಂತೆ ನೋಡಿಕೊಳ್ಳಬೇಕು. ಜನರನ್ನು ಕರೆತರುವ ಬಸ್‌ಗಳು ಸುಸ್ಥಿತಿಯಲ್ಲಿವೆ ಎಂದು ಖಾತರಿಪಡಿಸಿಕೊಳ್ಳಬೇಕು. ಚಾಲಕರ ಆರೋಗ್ಯವನ್ನು ಪರೀಕ್ಷಿಸಲು ಕ್ರಮವಹಿಸಬೇಕು. ಸಮಾವೇಶಕ್ಕೆ ಬುಡಕಟ್ಟು ಜನರನ್ನು ಕರೆತರುವ ಬಸ್‌ಗಳಲ್ಲಿ ಮಾರ್ಗಮಧ್ಯೆ ತಾಂತ್ರಿಕ ತೊಂದರೆ ಕಂಡುಬಂದಲ್ಲಿ ತುರ್ತಾಗಿ ದುರಸ್ತಿ ಮಾಡಲು ಬಸ್‌ಗಳಿಗೆ ಮೆಕ್ಯಾನಿಕ್‌ಗಳನ್ನು ನಿಯೋಜಿಸಲಾಗಿದೆ.

ಇದನ್ನು ಓದಿ: ನಟಿ ಕಂಗನಾ ರಣಾವತ್‌ ಬಂಧಿಸಿ-ಪದ್ಮಶ್ರೀ ಪ್ರಶಸ್ತಿ ವಾಪಸ್ ಪಡೆಯಬೇಕೆಂದು ಆಗ್ರಹ

ಈ ಕಾರ್ಯಕ್ರಮಕ್ಕೆ ಎಷ್ಟು ವೆಚ್ಚ ತಗಲಬಹುದು ಎಂಬ ಕುರಿತು ಸರಕಾರ ಮೌನ ವಹಿಸಿದೆಯಾದರೂ ಆರೋಗ್ಯ, ಶಿಕ್ಷಣ ಮತ್ತು ಆದಿವಾಸಿಗಳ ಅಭಿವೃದ್ಧಿಗಾಗಿ ಮೀಸಲಿರಿಸಲಾದ ಹಣವನ್ನು ಮುಖ್ಯಮಂತ್ರಿ ಚೌಹಾಣ್ ಅವರು ಪ್ರಧಾನಿ ಮೋದಿ ಪ್ರಚಾರಕ್ಕಾಗಿ ಬಳಸುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಹಾಗೂ ಆದಿವಾಸಿ ನಾಯಕ ಹೀರಾಲಾಲ್ ಅಲಾವ ಆರೋಪಿಸಿದ್ದಾರೆ.

ಮುಂಡಾ ಬುಡಕಟ್ಟು ಜನಾಂಗಕ್ಕೆ ಸೇರಿದ, ಸ್ವಾತಂತ್ರ್ಯ ಹೋರಾಟಗಾರರಾಗಿರುವ ಬಿರ್ಸಾ ಮುಂಡಾ ಹುಟ್ಟಿದ್ದು 1875ರ ನವೆಂಬರ್​ 15ರಂದು. ಅವರ ಜನ್ಮ ಜಯಂತಿಯನ್ನು ಬುಡಕಟ್ಟು ಜನಾಂಗಕ್ಕೆ ಗೌರವ ಸಲ್ಲಿಸಲು ಮುಡಿಪಾಗಿಡಲಾಗಿದೆ. ತನ್ನಿಮಿತ್ತ ನವೆಂಬರ್​ 15ರಿಂದ 22ರವರೆಗೂ ಬುಡಕಟ್ಟು ಹೆಮ್ಮೆಯ ವಾರವೆಂದು ಆಚರಿಸಲಾಗುತ್ತಿದೆ.

ಮಧ್ಯಪ್ರದೇಶದ ಬುಡಕಟ್ಟು ಜನಾಂಗದವರ ಓಲೈಕೆಗೆ ಮುಂದಾಗಿರುವ ರಾಜಕೀಯ ಪಕ್ಷಗಳು ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಜನ್ಮದಿನಾಚರಣೆ ನೆಪದಲ್ಲಿ ಭೂಪಾಲ್‍ನಲ್ಲಿ ಬುಡಕಟ್ಟು ಜನಾಂಗದವರ ಜನಜಾತಿಯ ಗೌರವ್ ದಿವಸ್ ಆಚರಣೆಗೆ ಮುಂದಾಗಿದೆ.

ಬಿಜೆಪಿ ಪಕ್ಷದ ಈ ರ‍್ಯಾಲಿಗೆ ಪರ್ಯಾಯವಾಗಿ ಕಾಂಗ್ರೆಸ್ ಪಕ್ಷವೂ ನವೆಂಬರ್‌ 15 ರಂದೇ ಜಬಲ್‍ಪುರದಲ್ಲಿ ಬೃಹತ್ ಸಭೆ ಆಯೋಜಿಸುವ ಮೂಲಕ ಪರ್ಯಾಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

Donate Janashakthi Media

Leave a Reply

Your email address will not be published. Required fields are marked *