ಭೋಪಾಲ್: ಮಧ್ಯಪ್ರದೇಶದ ಮಂದಸೌರ್ ಜಿಲ್ಲೆಯಲ್ಲಿ ತನ್ನ ಜಮೀನು ಕಬಳಿಕೆಗೆ ಸಂಬಂಧಿಸಿದಂತೆ ನೀಡಲಾದ ದೂರನ್ನು ಪರಿಹರಿಸಲಿಲ್ಲ ಎಂದು ಬೇಸತ್ತ ರೈತರೊಬ್ಬರು ಜಿಲ್ಲಾಧಿಕಾರಿ ಕಚೇರಿಯ ಆವರಣದ ಸುತ್ತ ‘ಉರುಳು ಸೇವೆ’ ಮೂಲಕ ಪ್ರತಿಭಟನೆ ನಡೆಸಿದ್ದಾರೆ.
ಮಾಫಿಯಾದಿಂದ ಸಂಕಷ್ಟಕ್ಕೆ ಸಿಲುಕಿದ ರೈತ ಶಂಕರಲಾಲ್, ಈ ಕುರಿತು ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಅಧಿಕಾರಿಗಳು ದೂರಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ತನ್ನ ನೋವನ್ನು ಹೇಳಿಕೊಳ್ಳಲು ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದಾರೆ. ಕಚೇರಿಯ ಅವರಣದಲ್ಲಿ ಕೈ ಮುಗಿದು ಬಿದ್ದಿರುವ ರೈತ ಕಣ್ಣೀರು ಹಾಕುತ್ತ ಹೊರಳಾಡುತ್ತಿರುವ ದೃಶ್ಯವನ್ನು ಅಲ್ಲೆ ಇದ್ದವರು ಮೊಬೈಲ್ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : ವಿಜಯನಗರ | ಎತ್ತುಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು
ಭೂಮಾಫಿಯಾದಿಂದ ನನಗೆ ತೊಂದರೆಯಾಗಿದೆ. ತಹಶೀಲ್ದಾರ್ ಮಾಡಿದ ತಪ್ಪಿನಿಂದಾಗಿ ನಾವು ಕಷ್ಟಕ್ಕೆ ಸಿಲುಕಿದ್ದೇವೆ ಎಂದಿದ್ದಾರೆ. ತಹಶೀಲ್ದಾರ್ ಮಾಡಿದ ತಪ್ಪಿನ ಪರಿಣಾಮವನ್ನು ನಾನು ಅನುಭವಿಸುತ್ತಿದ್ದೇನೆ. ನನಗೆ ಸರ್ಕಾರ ಹಾಗೂ ಅಧಿಕಾರಿಗಳ ಮೇಲೆ ನಂಬಿಕೆ ಇಲ್ಲ, ಇಲ್ಲಿ ಎಲ್ಲರೂ ಭ್ರಷ್ಟರೆ, ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಶಂಕರಲಾಲ್, ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಶಂಕರ್‌ಲಾಲ್ ಅವರ ಜಮೀನನ್ನು ಯಾವುದೇ ವ್ಯಕ್ತಿ ಅಥವಾ ಭೂ ಮಾಫಿಯಾ ಅತಿಕ್ರಮಿಸಿಲ್ಲ. ಕುಂದುಕೊರತೆ ಸಭೆಯಲ್ಲಿ ಅವರು ನೀಡಿದ ದೂರಿನ ಮೇರೆಗೆ, ಉಪವಿಭಾಗೀಯ ಅಧಿಕಾರಿ ಮತ್ತು ತಹಶೀಲ್ದಾರ್ ಅವರಿಂದ ವರದಿ ಕೇಳಲಾಗಿದೆ’ ಮಂದಸೌರ್ ಜಿಲ್ಲಾಧಿಕಾರಿ ದಿಲೀಪ್ ಯಾದವ್ ಪ್ರತಿಕ್ರಿಯಿಸಿದ್ದಾರೆ.