ಬೆಂಗಳೂರು: ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಇನ್ಸ್ಟ್ರಾಗ್ರಾಮ್ನಲ್ಲಿ ಅಪ್ಲೋಡ್ ಮಾಡುತ್ತಿದ್ದ ಪ್ರತಿಷ್ಠಿತ ಕಾಲೇಜಿನ ಪ್ರೊಫೆಸರ್ ಒಬ್ಬನನ್ನು ನಗರ ಈಶಾನ್ಯ ವಿಭಾಗದ ಸೆನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಯಲಹಂಕ ಭಾಗದ ಖಾಸಗಿ ಕಾಲೇಜೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಧುಸೂದನ್ ಆಚಾರ್ಯ (45) ಎಂಬಾತನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಮಧುಸೂದನ್ ಅವರು ತಾವು ಕೆಲಸ ಮಾಡುವ ಕಾಲೇಜಿನ ಓರ್ವ ವಿದ್ಯಾರ್ಥಿಗೆ ಇನ್ಸ್ಟಾಗ್ರಾಮ್ ಮೂಲಕ ವಿಡಿಯೋ ಕಳಿಸಿದ್ದರು.
ಆನ್ಲೈನ್ನಲ್ಲಿ ಸಿಗುವ ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಈತ ಇನ್ಸ್ಟ್ರಾಗ್ರಾಮ್ ಮೂಲಕ ಅಪ್‌ಲೋಡ್ ಮಾಡುತ್ತಿದ್ದ. ನಿರಂತರವಾಗಿ ವಿಡಿಯೋ ಮಾಡುತ್ತಿರುವ ಬಗ್ಗೆ ಎನ್ಸಿಆರ್ಬಿ ಅಧೀನದಲ್ಲಿರುವ ಅಧಿಕಾರಿಗಳ ತಂಡದ ಗಮನಕ್ಕೆ ಬಂದಿತ್ತು. ಪರಿಶೀಲಿಸಿದಾಗ ಬೆಂಗಳೂರಿನಿಂದ ವಿಡಿಯೋ ಅಪ್ಲೋಡ್ ಮಾಡಿರುವುದು ಗೊತ್ತಾಗಿದೆ.
ಐಪಿ ಅಡ್ರಸ್ ಸಹಿತ ಏರಿಯಾ ಪತ್ತೆ ಮಾಡಿದ್ದ ಪೊಲೀಸರು ನಂತ್ರ ಘಟನೆ ಸಂಬಂಧ ಈಶಾನ್ಯ ವಿಭಾಗ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಕೇಸ್ ದಾಖಲು ಮಾಡಿದ ಸಿಇಎನ್ ಪೊಲೀಸರು ಕೇಸ್ ಸಂಬಂಧಿಸಿ ಪ್ರೊಫೆಸರ್ ಮಧುಸೂದನ್ರನ್ನು ವಿಚಾರಣೆಗೆ ಕರೆಸಿ ವಿಚಾರಿಸಿದ್ದಾರೆ. ಆಗ ಕೃತ್ಯ ಬಯಲಾಗಿದೆ. ಪ್ರೊಫೆಸರ್ ಮಧುಸೂದನ್ ಹಲವಾರು ವಿದ್ಯಾರ್ಥಿಗಳನ್ನು ಕಾಮ ದೃಷ್ಟಿಯಿಂದ ಕಂಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಘಟನೆ ಸಂಬಂಧಿಸಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಮಕ್ಕಳ ಲೈಂಗಿಕ ವಿಡಿಯೋ ಕಳಿಸುವುದು, ನೋಡುವುದು ಹಾಗೂ ಸ್ಟೋರ್ ಮಾಡುವುದು ಶಿಕ್ಷಾರ್ಹ ಅಪರಾಧ. ಆದ್ರೆ ಗೌರವಯುತ ಸ್ಥಾನದಲ್ಲಿರುವ ಪ್ರೊಫೆಸರ್ ತಮ್ಮ ವಿದ್ಯಾರ್ಥಿಗೆ ವಿಡಿಯೋ ಕಳಿಸುತ್ತಿದ್ದರು. ಇಂತಹ ಉಪನ್ಯಾಸಕರಿಗೆ ತಕ್ಕ ಶಿಕ್ಷೆಯಾಗಬೇಕು. ಮಕ್ಕಳ ರಕ್ಷಣೆ ಮಾಡಬೇಕಿದ್ದವರೇ ಹೀಗೆ ಮಾಡಿದರೆ ಹೇಗೆ ಎಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
ಶಿಕ್ಷೆ ಏನು?: ಐಟಿ ಕಾಯ್ದೆಯ ಸೆಕ್ಷನ್ 67 ಪ್ರಕಾರ, ಮಕ್ಕಳಿಗೆ ಸಂಬಂಧಿಸಿದ ಅಶ್ಲೀಲ ವಿಡಿಯೋ ವೀಕ್ಷಣೆ, ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದು ಕಾನೂನುಬಾಹಿರ ಚಟುವಟಿಕೆ. ಪ್ರಕರಣದಲ್ಲಿ ಆರೋಪ ಸಾಬೀತಾದರೆ 5 ವರ್ಷ ಜೈಲು ಶಿಕ್ಷೆ ಹಾಗೂ ಎರಡನೇ ಬಾರಿ ಅಪರಾಧವೆಸಗಿದರೆ 7 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ.