ಮದ್ದೂರು : ಶಾಲಾ ಶಿಕ್ಷಕರು ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಸರಿಯಾಗಿ ಆಹಾರ ನೀಡುತ್ತಿಲ್ಲ. ಕುಡಿಯುವ ನೀರನ್ನು ಒದಗಿಸಿಲ್ಲ ಎಂದು ಆಗ್ರಹಿಸಿ ತಾಲೂಕಿನ ಕೂಳಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕೂಳಗೆರೆ ಗ್ರಾಮ ಪಂಚಾಯಿತಿಯ ಮುಂದೆ ಜಮಾಯಿಸಿ ಪ್ರತಿಭಟಿಸಿರುವ ಘಟನೆ ನಡೆದಿದೆ.
ಶಾಲೆಯಲ್ಲಿ ನಿತ್ಯ ಕಿರುಕುಳ ನೀಡುತ್ತಿದ್ದಾರೆ. ನಿಗದಿತ ಸಮಯಕ್ಕೆ ಮೊಟ್ಟೆ ನೀಡುವುದಿಲ್ಲ. ಗುಣಮಟ್ಟದ ಆಹಾರ ನೀಡುತ್ತಿಲ್ಲ. ಶಿಕ್ಷಕರು ಕತ್ತಿನ ಪಟ್ಟಿಯನ್ನು ಹಿಡಿದುಕೊಂಡು ತಲೆಯನ್ನು ಗೋಡೆಗೆ ಗುದ್ದಿಸಿ ನಿತ್ಯ ಅವಮಾನ ಮಾಡುತ್ತಿದ್ದಾರೆ. ಶಾಲೆಯ ವಾತಾವರಣ ಸಂಪೂರ್ಣವಾಗಿ ಹದಗೆಟ್ಟಿದೆ. ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ನಮ್ಮ ಶಾಲೆಗೆ ಭೇಟಿ ನೀಡುವುದಿಲ್ಲ. ನಮ್ಮ ಸಮಸ್ಯೆಯನ್ನು ಕೇಳೋರಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಂಡರೂ ಕಾಣದಂತಾಗಿದ್ದಾರೆ. ಚಿತ್ರ ಹಿಂಸೆ ನೀಡುತ್ತಿರುವ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು ನಮಗೆ ನ್ಯಾಯ ಒದಗಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ಇಂತಹ ಘನ ಘೋರ ಅನ್ಯಾಯ ನಡೆಯುತ್ತಿದ್ದರು ಹಿರಿಯ ಅಧಿಕಾರಿಗಳು ಗಮನಹರಿಸದೆ ಲೋಪವೆಸಗಿದ್ದಾರೆ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿ ಶಿಕ್ಷಕರು ಮತ್ತು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ದಲಿತ ಹಕ್ಕುಗಳ ಸಮಿತಿಯ ಜಿಲ್ಲಾಧ್ಯಕ್ಷ ಆರ್ ಕೃಷ್ಣ ಆಗ್ರಹಿಸಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ವಿವರವಾದ ಮಾಹಿತಿ ಪಡೆದು ಲೋಪವಿರುವ ಶಿಕ್ಷಕರನ್ನು ಅಮಾನತು ಮಾಡಲಾಗುವುದು. ಕಾನೂನನ್ನು ಯಾರೇ ಉಲ್ಲಂಘಿಸಿದರು ಕಠಿಣ ಕ್ರಮ ಕೈಗೊಳ್ಳಲಾಗುವುದು ಮಂಡ್ಯ ಡಿಡಿಪಿಐ ಎಸ್.ಟಿ. ಜವರೇಗೌಡ ತಿಳಿಸಿದ್ದಾರೆ.
ಈಗಾಗಲೇ ಶಾಲೆಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಮಕ್ಕಳಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗಿದ್ದು ಶಿಕ್ಷಕರಿಗೆ ತಿಳುವಳಿಕೆ ಹೇಳಲಾಗಿದೆ ಎಂದು ಅಕ್ಷರ ದಾಸೋಹ ಸಹಾಯಕ ತಾಲ್ಲೂಕ ನಿರ್ದೇಶಕರಾದ
ಡಾ. ಮಂಗಳಮ್ಮ ತಿಳಿಸಿದ್ದಾರೆ.