- ರೈತರು ಪ್ರತಿಭಟನೆಯನ್ನು ನಿಲ್ಲಿಸಬೇಕು : ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್
ನವದೆಹಲಿ: ಮಾತುಕತೆಗೆ ಕರೆಯುವುದಾದರೆ ದೇಶದಲ್ಲಿರುವ ಎಲ್ಲ ರೈತ ಸಂಘಟನೆಗಳನ್ನು ಆಹ್ವಾನಿಸಬೇಕು. ಇಲ್ಲದಿದ್ದರೆ ಚರ್ಚೆಗೆ ಬರುವುದಿಲ್ಲ ಎಂದು ‘ಪಂಜಾಬ್ ರೈತ ಸಂಘರ್ಷ ಸಮಿತಿ’ಯು ಕೇಂದ್ರ ಸರ್ಕಾರಕ್ಕೆ ಮಂಗಳವಾರ ಬೆಳಿಗ್ಗೆ ಪ್ರತಿಕ್ರಿಯಿಸಿದೆ.
ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ ಐದು ದಿನಗಳಿಂದ ದೆಹಲಿ ಹೊರ ವಲಯದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಕೇಂದ್ರ ಸರ್ಕಾರ ಚರ್ಚೆಗೆ ಆಹ್ವಾನಿಸಿದ ಬೆನ್ನಲ್ಲೇ ಸಮಿತಿಯು ಈ ಪ್ರತಿಕ್ರಿಯೆ ನೀಡಿದೆ.
ಇದನ್ನೂ ಓದಿ:ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ: ಚರ್ಚೆಗೆ ಎರಡು ದಿನ ಮೊದಲೇ ಆಹ್ವಾನ
‘ದೇಶದಲ್ಲಿ 500ಕ್ಕೂ ಹೆಚ್ಚು ರೈತ ಸಂಘಟನೆಗಳಿವೆ. ಆದರೆ ಸರ್ಕಾರ ಕೇವಲ 32 ಸಂಘಟನೆಗಳನ್ನು ಮಾತುಕತೆಗೆ ಕರೆದಿದೆ. ಎಲ್ಲ ಸಂಘಟನೆಗಳನ್ನು ಮಾತುಕತೆಗೆ ಆಹ್ವಾನಿಸದಿದ್ದರೆ ನಾವೂ ಹೋಗುವುದಿಲ್ಲ’ ಎಂದು ‘ಪಂಜಾಬ್ ರೈತ ಸಂಘರ್ಷ ಸಮಿತಿ’ಯ ಜಂಟಿ ಕಾರ್ಯದರ್ಶಿ ಸುಖ್‌ವಿಂದರ್ ಎಸ್ ಸಭರನ್ ಹೇಳಿದ್ದಾರೆ.
ರೈತರು ತಮ್ಮ ಪ್ರತಿಭಟನೆಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿರುವ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಚಳಿ ಮತ್ತು ಕೋವಿಡ್-19 ಅನ್ನು ಗಮನದಲ್ಲಿಟ್ಟುಕೊಂಡು ಡಿಸೆಂಬರ್ 3ಕ್ಕಿಂತಲೂ ಮೊದಲೇ ನಾವು ರೈತ ಸಂಘಗಳ ಮುಖಂಡರನ್ನು ಚರ್ಚೆಗೆ ಆಹ್ವಾನಿಸಿದ್ದೇವೆ ಎಂದು ಹೇಳಿದ್ದರು.