ಬೆಂಗಳೂರು: ಡಿಸೆಂಬರ್ 10ರಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ವ್ಯಾಪ್ತಿಯ ವಿದ್ಯಾರ್ಥಿಗಳ ವಿವಿಧ ಶೈಕ್ಷಣಿಕ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ನೇತೃತ್ವದಲ್ಲಿ ಚಲೋ ಬಿಎನ್‌ಯು ಹೋರಾಟ ನಡೆಸಿ ಮನವಿ ಸಲ್ಲಿಸಿದ್ದರು. ಎಸ್‌ಎಫ್‌ಐ ವಿದ್ಯಾರ್ಥಿ ಸಂಘದ ಮುಖಂಡರೊಂದಿಗೆ ಸಭೆ ನಡೆಸಿದ ಬೆಂಗಳೂರು ಉತ್ತರ ವಿವಿ ಕುಲಪತಿ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರು.
ಸಭೆಯ ನಂತರ ವಿವರವನ್ನು ತಿಳಿಸಿದ ಎಸ್‌ಎಫ್‌ಐ ಸಂಘಟನೆ ಮುಖಂಡರು ಬಿಎನ್‌ಯುನ ವಿವಿಧ ಕೋರ್ಸುಗಳ ವಿದ್ಯಾರ್ಥಿಗಳಿಗೆ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ನೇಮಕಾತಿ ಅರ್ಜಿಯನ್ನು ಸಲ್ಲಿಸಬಹುದು. ಇಲ್ಲಿ ಮೆರಿಟ್ ಆಧಾರದಲ್ಲಿ ಸೀಟು ಗಿಟ್ಟಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ ಮತ್ತು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ವ್ಯಾಪ್ತಿಯ ನಾಲ್ಕು ಕಾಲೇಜುಗಳಲ್ಲಿ 165 ಎಂ.ಎಸ್ಸಿ. ಕೆಮಿಸ್ಟ್ರಿ ವಿಭಾಗದ ಸೀಟುಗಳನ್ನು ಪ್ರಾರಂಭಿಸಲಾಗುವುದು. ಮತ್ತು ಈ ನಾಲ್ಕು ಕಾಲೇಜುಗಳಲ್ಲಿ ಪ್ರಯೋಗಾಲಯಗಳನ್ನು ಉನ್ನತೀಕರಣ ಮಾಡವುದು ಮತ್ತು ಬೆಂಗಳೂರು ವಿಶ್ವವಿದ್ಯಾಲಯ ಕೌನ್ಸಿಲಿಂಗ್ ಮುಗಿದ ನಂತರ ಬಿಎನ್‌ಯು ಎಂಎಸ್ಸಿ ವಿಭಾಗದ ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ನಡೆಸಲು ಅದಷ್ಟು ಪ್ರಯತ್ನಿಸುವುದಾಗಿ ಕುಲಪತಿ ಪ್ರೊ. ನಿರಂಜನ್ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಇದನ್ನು ಓದಿ: ಬೆಂ. ಉತ್ತರ ವಿವಿಯ ಎಲ್ಲಾ ಕಾಲೇಜುಗಳಲ್ಲಿ ಪ್ರವೇಶಾತಿಗೆ ಅವಕಾಶ ಕಲ್ಪಿಸಲು ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ಅದರೊಂದಿಗೆ, ಬಿಎನ್‌ಯುವಿನ 8 ವಿಭಾಗಗಳಿಗೆ 56 ಮಂದಿ ಖಾಯಂ ಬೋಧಕರ ನೇಮಕಾತಿಗೆ ಸರ್ಕಾರದ ಒಪ್ಪಿಗೆ ಸಿಕ್ಕಿದೆ. ಶೀಘ್ರವಾಗಿ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿರುತ್ತಾರೆ. ಬಿಎನ್‌ಯುಗೆ ಸ್ವಂತ ಕ್ಯಾಂಪಸ್ ನಿರ್ಮಾಣಕ್ಕಾಗಿ ರೂ.100 ಕೋಟಿ ಮೊತ್ತಕ್ಕೆ ಡಿಪಿಆರ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಶುಲ್ಕ ಹೆಚ್ಚಳ, ಪರೀಕ್ಷೆಗಳ ಫಲಿತಾಂಶ ವಿಳಂಬ, ಪಠ್ಯಪುಸ್ತಕ ಲಭ್ಯತೆ, ಗ್ರಂಥಾಲಯ, ಮೌಲ್ಯ ಮಾಪನ ಭತ್ಯೆ ಸಂದಾಯ ಬೇಡಿಕೆಗಳನ್ನು ಸಹ ಶೀಘ್ರವಾಗಿ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಎಸ್‌ಎಫ್‌ಐ ಮುಖಂಡರು ತಿಳಿಸಿದ್ದಾರೆ.
ವಿಶ್ವವಿದ್ಯಾಲಯದಲ್ಲಿ ಭ್ರಷ್ಟಾಚಾರ, ಸಿಂಡಿಕೇಟ್ ಗೆ ಖಾಸಗಿ ಕಾಲೇಜುಗಳ ಮಾಲೀಕರು ಉದ್ಯಮಿಗಳು ಹಣವಂತರನ್ನು ನೇಮಕಾತಿ, ಬಿ.ಯಡ್ ಶಿಕ್ಷಣ ಸಂಸ್ಥೆಗಳ ಅಕ್ರಮಗಳು, ಕೋವಿಡ್ ಕಾಲದಲ್ಲಿ ವಸೂಲಿ ಮಾಡಿರುವ ಪರೀಕ್ಷ ಶುಲ್ಕ ವಾಪಸ್ಸು ನೀಡುವ ಮುಂತಾದ ವಿಷಯಗಳ ಬಗ್ಗೆ ಸಭೆಯಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ.
ಸಭೆಯಲ್ಲಿ ಪರೀಕ್ಷಾ ಕುಲ ಸಚಿವರು ಪ್ರೋ. ಜನಾರ್ದನಂ, ಹಣಕಾಸು ಅಧಿಕಾರಿ ವೆಂಕಟೇಶ್ ಮೂರ್ತಿ ಮತ್ತು ವಿದ್ಯಾರ್ಥಿ ಸಂಘಟನೆಯ ಪರವಾಗಿ ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಸೋಮಶೇಖರ್, ಕೋಲಾರ ತಾಲ್ಲೂಕು ಅಧ್ಯಕ್ಷ ಶ್ರೀಕಾಂತ್, ಮುಳಬಾಗಿಲು ತಾಲ್ಲೂಕು ಅಧ್ಯಕ್ಷ ಸುರೇಶ್ ಬಾಬು, ವಿದ್ಯಾರ್ಥಿ ಮುಖಂಡರಾದ ಕಾವ್ಯ, ಕುಸುಮ, ರಮ್ಯ ಶ್ರೀನಾಥ್, ಮುಂತಾದವರು ಉಪಸ್ಥಿತರಿದ್ದರು.