ರಂಗಕರ್ಮಿ, ಹೋರಾಟಗಾರ ಎಂ.ಜಿ. ವೆಂಕಟೇಶ್‌ ಇನ್ನಿಲ್ಲ.

ಬೆಂಗಳೂರು : ರಂಗಕರ್ಮಿ,  ಲೇಖಕ, ಪ್ರಗತಿಪರ ಹೋರಾಟಗಾರ ಎಂಜಿ ವೆಂಕಟೇಶ್‌  ಕೋವಿಡ್‌ ಸೋಂಕಿನಿಂದ ಮೃತಪಟ್ಟಿದ್ದಾರೆ.  ಸರಿ ಸುಮಾರು ಒಂದು ತಿಂಗಳಿಂದ  ನಾರಾಯಣ ಹೆಲ್ತ್‌ ಕೇರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಇಂದು ಮಧ್ಯಾಹ್ನ ನಿಧನರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು.

ಸಮುದಾಯ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದ ಅವರು ಸಮುದಾಯದ ಜತೆ ನಿಕಟ ಸಂಪರ್ಕ ಹೊಂದಿ ಇತರರಿಗೆ ಮಾರ್ಗದರ್ಶನ ನೀಡುತ್ತಿದ್ದರು. ನಟರಾಗಿ, ಸಂಘಟಕರಾಗಿ, ಬರಹಗಾರರಾಗಿ ಸಮುದಾಯವನ್ನು ಮುನ್ನಡೆಸಿದ್ದರು. ಇತ್ತೀಚೆಗೆ ಸಫ್ದರ್ ಹಷ್ಮಿ ಜೀವನ ಕುರಿತು ದೆಹಲಿಯ ಜನ ನಾಟ್ಯ ಮಂಚ್ ದ ಗೆಳೆಯ ಸುಧನ್ವ ದೇಶಪಾಂಡೆ ಬರೆದಿದ್ದ ‘ಹಲ್ಲಾಬೋಲ್’ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದರು.

‘ಸಮುದಾಯ’ದ ನಾಟಕ ಆಂದೋಲನದೊಂದಿಗೆ ಆರಂಭದಿಂದಲೂ ಇರುವ ಇವರು ವೃತ್ತಿಯಲ್ಲಿ ಲೆಕ್ಕ
ಪರಿಶೋಧಕರಾಗಿದ್ದು, ಭಾರತದ ಮಹಾ ಲೆಕ್ಕ ಪರಿಶೋಧಕರ ಕಚೇರಿಯ(ಸಿಎಜಿ)ಲ್ಲಿನ ತಮ್ಮ ಕರ್ತವ್ಯ ನಿಮಿತ್ತ ದೇಶದೆಲ್ಲೆಡೆ ಸಂಚರಿಸಿರುವವರು, ಅಲ್ಲಿಯ ಸಾಂಸ್ಕೃತಿಕ ನಡೆಗಳನ್ನು ವೀಕ್ಷಿಸಿದವರು. ‘ಸಮುದಾಯ’ದ ರಾಜ್ಯಮಟ್ಟದ ಜಾಥಾಗಳ  ಭಾಗವಾಗಿರುತ್ತಿದ್ದ ಇವರು,  ನಿವೃತ್ತಿಯ ನಂತರ ‘ಸಮುದಾಯ’ದೊಂದಿಗೆ ಇತರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರಗತಿಪರ ಚಳುವಳಿಯಲ್ಲಿ ತೊಡಗಿಕೊಂಡಿದ್ದ ಅವರು ದೇಶಾದ್ಯಂತ ಸ್ನೇಹಿತರನ್ನು ಗಳಿಸಿಕೊಂಡಿದ್ದರು. ಎಂ.ಜಿ. ವೆಂಕಟೇಶ್‌ ನಿಧನಕ್ಕೆ ಸಾಂಸ್ಕೃತಿಕ ರಂಗದ ಚಿಂತಕರು, ಪ್ರಗತಿಪರ ಸಾಹಿತಿಗಳು, ಜನಪರ ಚಳುವಳಿಯ ನಾಯಕರು. ಸಮುದಾಯ ಕರ್ನಾಟಕ ಸೇರಿದಂತೆ ಅನೇಕರು ಸಂತಾಪವನ್ನು ಸೂಚಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *