ಅಡುಗೆ ಅನಿಲ ಸಬ್ಸಿಡಿ ಸ್ಥಗಿತ: ಕೇಂದ್ರ ಸರ್ಕಾರ ಅಧಿಕೃತ ಘೋಷಣೆ

ನವದೆಹಲಿ: ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗಳಿಗೆ ಸಬ್ಸಿಡಿ ನೀಡುವುದಿಲ್ಲ ಎಂದು ಅಧಿಕೃತವಾಗಿ ಘೋಷಿಸಿರುವ ಕೇಂದ್ರದ ಬಿಜೆಪಿ ಸರ್ಕಾರವು, ಇದೀಗ ಜನಸಾಮನ್ಯರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಈಗಾಗಲೇ ಅಡುಗೆ ಅನಿಲದ ಸಿಲಿಂಡರ್‌ ದರ ಏರಿಕೆಯಿಂದ ಸಾಮಾನ್ಯ ಜನರು ಮಾರ್ಕೆಟ್ ದರಕ್ಕೆ ಖರೀದಿ ಮಾಡಬೇಕಾಗುತ್ತದೆ. ಕೋವಿಡ್ ಶುರುವಾದ ದಿನದಿಂದ ಎಲ್‍ಪಿಜಿ ಫಲಾನುಭವಿಗಳಿಗೆ ಸಬ್ಸಿಡಿ ನೀಡಿಲ್ಲ. ಇನ್ಮುಂದೆಯೂ ಸಹ ನೀಡಲಾಗುವುದಿಲ್ಲ ಎಂದು ಇಂಧನ ಇಲಾಖೆ ಕಾರ್ಯದರ್ಶಿ ಪಂಕಜ್ ಚೌಧರಿ ಸ್ಪಷ್ಟಪಡಿಸಿದ್ದಾರೆ.

ಗೃಹ ಬಳಕೆಯ ಅಡುಗೆ ಅನಿಲದ ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ ಮಾತ್ರ ಸಬ್ಸಿಡಿ ಸೀಮಿತವಾಗಿದೆ. ಉಳಿದ ಗ್ರಾಹಕರು ಅಡುಗೆ ಅನಿಲವನ್ನು ಮಾರುಕಟ್ಟೆ ಬೆಲೆಯನ್ನು ಪಾವತಿಸಿ ಖರಿಸಬೇಕಾಗುತ್ತಿದೆ.

ಈಗಾಗಲೇ ಕೋವಿಡ್ ಸಾಂಕ್ರಾಮಿಕದ ಆರಂಭಿಕ ದಿನಗಳಿಂದಲೂ ಸಬ್ಸಿಡಿ ನೀಡಿಕೆಯನ್ನು ಕಡಿತಗೊಳಿಸಲಾಗಿತ್ತು. ನಂತರದ ದಿನಗಳಲ್ಲಿ ಆರ್ಥಿಕ ಚೇತರಿಕೆಯ ಹಿನ್ನೆಲೆಯಲ್ಲಿ ಸಬ್ಸಿಡಿ ಮರಳಿ ಪಾವತಿಯಾಗಬಹುದೆಂದು ನಿರೀಕ್ಷೆಯಲ್ಲಿದ್ದ ಕೋಟ್ಯಾಂತರ ಜನರಿಗೆ ಕೇಂದ್ರ ಸರ್ಕಾರ ಹುಸಿಗೊಳಿಸಿದೆ.

ಆರ್ಥಿಕವಾಗಿ ಹಿಂದುಳಿದವರಿಗೆ, ಕಡುಬಡವರಿಗೆಂದು ಕೇಂದ್ರ ಸರ್ಕಾರವು ಉಜ್ವಲ ಯೋಜನೆಯಡಿ ಎಲ್‌ಪಿಜಿ ಸಂಪರ್ಕ ಪಡೆದಿರುವ 9 ಕೋಟಿ ಬಡ ಮಹಿಳೆಯರಿಗೆ ಮಾತ್ರ ಸಬ್ಸಿಡಿ ಮುಂದುವರೆಯಲಿದೆ. ಇತರ ಫಲಾನುಭವಿಗಳಿಗೆ ಕೇಂದ್ರವು ಅಡುಗೆ ಅನಿಲ ಸಬ್ಸಿಡಿಯನ್ನು ನಿರ್ಬಂಧಿಸಿದೆ. ಜೂನ್ 2020 ರಿಂದ ಅಡುಗೆ ಅನಿಲದ ಮೇಲೆ ಯಾವುದೇ ಸಬ್ಸಿಡಿಯನ್ನು ಪಾವತಿಸಲಾಗಿಲ್ಲ.

ಸದ್ಯ ಬೆಂಗಳೂರಿನಲ್ಲಿ 14.2 ಕೆಜಿ ತೂಕದ ಎಲ್‍ಪಿಜಿ ಸಿಲಿಂಡರ್ ಬೆಲೆ 1006 ರೂಪಾಯಿ ಇದೆ. ಉಜ್ವಲ ಯೋಜನೆಯ ಫಲಾನುಭವಿಗಳಿಗೆ 200 ರೂಪಾಯಿ ದರ ಕಡಿತವನ್ನು ಕಳೆದ ಕೆಲವು ದಿನಗಳ ಹಿಂದೆ ಪ್ರಕಟಿಸಲಾಗಿತ್ತು.  ಮುಂದಿನ ದಿನಗಳಲ್ಲಿ  ಸಿಲಿಂಡರ್ ಬೆಲೆ ಮತ್ತಷ್ಟು ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ. ಈಗಾಗಲೇ ಹಣದುಬ್ಬರದಿಂದ ತತ್ತರಿಸಿರುವ ಜನತೆಗೆ  ಬೆಲೆ ಏರಿಕೆ ಮತ್ತೆ ಸಮಸ್ಯೆಗಳನ್ನು ತಂದೊಡ್ಡಲಿದೆ.

ಈಗಾಗಲೇ ಬೆಲೆ ಏರಿಕೆಯ ಬಗ್ಗೆ ಸಾಕಷ್ಟು ಆಕ್ರೋಶವನ್ನು ವ್ಯಕ್ತಪಡಿಸಿರುವ ಜನಸಾಮಾನ್ಯರು, ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *