ಲಾಕ್ಡೌನ್ ಕುರಿತು ಮಹತ್ವದ ಮಾಹಿತಿ ನೀಡಿದ ಸಚಿವ ಸುಧಾಕರ್

ಬೆಂಗಳೂರು: ಕರ್ನಾಟಕದಲ್ಲಿ ಮಹಾರಾಷ್ಟ್ರದಂತಹ ಪರಿಸ್ಥಿತಿ ಬಂದಿಲ್ಲವಾದ ಕಾರಣ ಸದ್ಯಕ್ಕೆ ಲಾಕ್‍ಡೌನ್ ವಿಧಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ಒಂದು ಕಡೆ ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಲಾಕ್‍ಡೌನ್ ಜಾರಿ ಮಾಡಲಾಗಿದೆ. ಇದರ ಬೆನ್ನಲ್ಲೇ ರಾಜ್ಯದಲ್ಲೂ ಲಾಕ್‍ಡೌನ್ ವದಂತಿ ಕೇಳಿಬಂದ ಸಂದರ್ಭದಲ್ಲಿ ಸಚಿವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

 

ಇದನ್ನೂ ಓದಿ :  ಕೋವಿಡ್‌-19: ನಾಗ್ಪುರದಲ್ಲಿ ಮಾರ್ಚ್‌ 15 ರಿಂದ ಲಾಕ್‌ಡೌನ್‌ ಜಾರಿ

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಮಹಾರಾಷ್ಟ್ರದ ಪರಿಸ್ಥಿತಿ ನಿರ್ಮಾಣವಾಗಿಲ್ಲ. ನಮ್ಮಲ್ಲಿ ಈಗಲೂ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಸರ್ಕಾರ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದರು.

ಮಹಾರಾಷ್ಟ್ರದಲ್ಲಿ ಕಳೆದ 15 ದಿನಗಳಿಂದ ಸೋಂಕಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ನಮ್ಮಲ್ಲಿ ಕಳೆದೆರಡು ದಿನಗಳಿಂದ ಮಾತ್ರ 700ರ ಗಡಿ ದಾಟಿದೆ. ಆತಂಕಪಡಬೇಕಾದ ಅಗತ್ಯವಿಲ್ಲ ಎಂದು ಅಭಯ ನೀಡಿದರು.

ನಾವು ಬಿಗಿಯಾದ ಕ್ರಮಗಳನ್ನು ಕೈಗೊಂಡಿದ್ದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಸಾರ್ವಜನಿಕರು ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಹಾಗೂ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ಸೂಚಿಸಲಾಗಿದೆ. ಕೊರೊನಾ ಸಂಖ್ಯೆ ಇಳಿಮುಖವಾಗಿದ್ದರೂ ಕೋವಿಡ್ ನಮ್ಮನ್ನು ಬಿಟ್ಟು ಹೋಗಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಿ ಎಂದು ಮನವಿ ಮಾಡಿದರು.

ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ

ಜನರು ಎಚ್ಚರದಿಂದ ಇರಬೇಕೆಂದು ಮನವಿ ಮಾಡಲಾಗಿದೆ. ಅನಗತ್ಯವಾಗಿ ತಿರುಗಾಟ, ಮಾಸ್ಕ್ ಹಾಕದೆ ಇರುವುದು, ನಿಯಮಗಳ ಉಲ್ಲಂಘನೆ ಸರಿಯಾದ ಕ್ರಮವಲ್ಲ. ನಿಮ್ಮ ಆರೋಗ್ಯ ದೃಷ್ಟಿಯಿಂದಲಾದರೂ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ಸುಧಾಕರ್ ಸಲಹೆ ಮಾಡಿದರು. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದೆ ಕೋವಿಡ್ ನಿಯಮಗಳನ್ನು ಪಾಲನೆ ಮಾಡಬೇಕು. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ ಎಂದು ಸುಧಾಕರ್ ಕಿವಿಮಾತು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *