ಬೆಂಗಳೂರು: ಇದೇ ಮೊದಲ ಬಾರಿಗೆ ಲೋಕಾಯುಕ್ತ ಅಧಿಕಾರಿಗಳು ದೊಡ್ಡಮಟ್ಟದಲ್ಲಿ ದಾಳಿ ನಡೆಸಿದ್ದು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಸಾರ್ವಜನಿಕರ ವ್ಯಾಪಾಕ ದೂರುಗಳ ಹಿನ್ನೆಲೆಯಲ್ಲಿ ಬಿಡಿಎ ಕೇಂದ್ರ ಕಛೇರಿ ಮೇಲೆ ದಾಳಿ ನಡೆಸಿ, ಹಲವು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ ಹಾಗೂ ಸದ್ಯ ಮೂವರನ್ನು ಬಂಧಿಸಿರುವ ಅಧಿಕಾರಿಗಳು, ಸಾರ್ವಜನಿಕರಿಂದ ದೂರು ಸ್ವೀಕರಿಸಲು ಸ್ಥಳದಲ್ಲೇ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ.
ಬಿಡಿಎನಲ್ಲಿ ವ್ಯಾಪಕವಾದ ಅಕ್ರಮ ಅವ್ಯವಹಾರಗಳು ಕಂಡುಬಂದಿದ್ದು, ದಾಳಿ ನಡೆಸಿ ತನಿಖೆಯನ್ನು ಕೈಗೊಂಡಿದ್ದಾರೆ. ನೆನ್ನೆ(ಫೆಬ್ರವರಿ 10) 3 ಗಂಟೆ ಸುಮಾರಿಗೆ ಲೋಕಾಯುಕ್ತ ಅಧಿಕಾರಿಗಳು ಕುಮಾರ ಪಾರ್ಕ್ ಬಳಿಯ ಬಿಡಿಎ ಕೇಂದ್ರ ಕಚೇರಿ ಮೇಲೆ ದಾಳಿ ನಡೆಸಿದರು. ಸುಮಾರು 35 ಅಧಿಕಾರಿಗಳ ಒಟ್ಟು ಆರು ತಂಡ ದಾಳಿಯ ನೇತೃತ್ವ ವಹಿಸಿದ್ದವು.
ಇದನ್ನು ಓದಿ: ಬಿಡಿಎ ಬಹುಕೋಟಿ ರೂಪಾಯಿ ಹಗರಣ: ಪ್ರಕರಣ ದಾಖಲು
ವಿಶೇಷವಾಗಿ ಬಿಡಿಎ ಮೂಲೆ ನಿವೇಶನಗಳ ಹಂಚಿಕೆ ಮಾರಾಟದಲ್ಲಿ ನಡೆಸಿದ ಅವ್ಯವಹಾರಗಳ ಬಗ್ಗೆಯೇ ಹೆಚ್ಚಿನ ದೂರುಗಳು ಕಂಡುಬಂದಿದ್ದು, ಅದರ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲನೆಗೆ ಒಳಪಡಿಸಲಾಗುತ್ತಿದೆ.
ನಗರ ಯೋಜನಾ ಇಲಾಖೆ, ಆಯುಕ್ತರ ಕಾರ್ಯದರ್ಶಿ ಮತ್ತು ವೈಯಕ್ತಿಕ ವಿಭಾಗದ ಕಚೇರಿಗಳ ಮೇಲೆಯೂ ಲೋಕಾಯುಕ್ತ ತಂಡಗಳು ದಾಳಿ ನಡೆಸಿವೆ. ಬಿಡಿಎ ಅಧಿಕಾರಿಗಳು ಹಾಗೂ ಸಾರ್ವಜನಿಕರ ನಡುವೆ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ, ಕಚೇರಿಯ ಬಳಿ ಸುತ್ತಾಡುತ್ತಿದ್ದ ಮೂವರನ್ನು ಬಂಧಿಸಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿ ಅಶೋಕ್ ತಿಳಿಸಿದ್ದಾರೆ.
ವಿವಿಧ ವಸತಿ ಬಡಾವಣೆಗಳಲ್ಲಿ ನಿವೇಶನ ಹಂಚಿಕೆ ಹಾಗೂ ಇನ್ನೂ ಹಲವಾರು ಅಕ್ರಮಗಳ ಬಗ್ಗೆ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿದ್ದೇವೆ. ಇತ್ತೀಚಿಗೆ ಬಿಡಿಎ ಇಂಜಿನಿಯರುಗಳು ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಾಗರಿಕ ಸೌಕರ್ಯ ನಿವೇಶನಗಳನ್ನು ಅಕ್ರಮವಾಗಿ ಮಾರಾಟ ಮಾಡಿರುವ ಹಗರಣ ಪತ್ತೆಯಾಗಿದ್ದು, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ: ಪ್ರಧಾನಿ ಬಂದರೆ ಮಾತ್ರ ರಸ್ತೆ ಸರಿ ಮಾಡ್ತೀರಾ? ಬಿಡಿಎಗೆ ಹೈಕೋರ್ಟ್ ತರಾಟೆ
ಬಿಡಿಎ ಮೇಲೆ ದಾಳಿ ನಡೆಯುತ್ತಿದ್ದಂತೆ ಖುದ್ದು ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ ಬಿಡಿಎ ಕಚೇರಿಗೆ ದೌಡಾಯಿಸಿ ದಾಳಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಲೋಕಾಯುಕ್ತ ನ್ಯಾ. ಬಿ ಎಸ್ ಪಾಟೀಲ್ ಮಾತನಾಡಿ, ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದ ಹಿನ್ನಲೆಯಲ್ಲಿ ದಾಳಿ ನಡೆಸಲಾಗಿದೆ. ಈಗಾಗಲೇ ದಾಖಲೆಗಳ ಪರಿಶೀಲನೆ ನಡೆಸಿ, ನಂತರ ಮಾಹಿತಿ ನೀಡಲಾಗುವುದು ಎಂದರು.
ಲೋಕಾಯುಕ್ತ ಐಜಿಪಿ ಸುಬ್ರಹ್ಮಣ್ಯೇಶ್ವರ್ ರಾವ್, ಎಸ್ ಪಿ ಅಶೋಕ್ ಕೆವಿ ನೇತೃತ್ವದಲ್ಲಿ ಮೂರು ತಂಡ ಬಿಡಿಎಗೆ ಸಂಬಂಧಿಸಿದ ದಾಖಲೆ ಮತ್ತು ಕಡತಗಳನ್ನ ಕೂಲಂಕುಷವಾಗಿ ಪರಿಶೀಲನೆಗೆ ಒಳಪಡಿಸಿದ್ದಾರೆ.
ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಲು ಸ್ಥಳದಲ್ಲೇ ವಿಶೇಷ ವ್ಯವಸ್ಥೆಯನ್ನು ಮಾಡಿಕೊಂಡಿರುವ ಲೋಕಾಯುಕ್ತ ಅಧಿಕಾರಿಗಳು ಸಾರ್ವಜನಿಕರಿಂದ ದೂರುಗಳ ಮಹಾಪೂರವೇ ಹರಿದು ಬರುತ್ತಿದೆ. ಬಿಡಿಎ ಆವರಣದಲ್ಲಿದಲ್ಲಿ ನೂರಾರು ಸಾರ್ವಜನಿಕರು ಲೋಕಾಯುಕ್ತ ಅಧಿಕಾರಿಗಳನ್ನು ಖುದ್ದು ಭೇಟಿಯಾಗಿ ತಮ್ಮ ಸಂಕಷ್ಟಗಳ ಬಗ್ಗೆ ವಿವರಣೆ ನೀಡಿದರು.
ಇದನ್ನು ಓದಿ: ಲಾಭ ಮಾಡಿಕೊಳ್ಳಲು ಬಿಡಿಎ ರಿಯಲ್ ಎಸ್ಟೇಟ್ ಕಂಪೆನಿ ಅಲ್ಲ: ಹೈಕೋರ್ಟ್ ಕಿಡಿ
ಲೋಕಾಯುಕ್ತ ದಾಳಿ ವೇಳೆಯಲ್ಲಿಯೇ ಬಿಡಿಎ ಆವರಣದಲ್ಲಿ ಕೆಲವು ಮದ್ಯವರ್ತಿಗಳು ಓಡಾಟ ಕೂಡ ಬಂದಿದ್ದು, ಕೂಡಲೇ ಲೋಕಾಯುಕ್ತ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದಲ್ಲದೆ 2022 ರಲ್ಲಿ ಎಸಿಬಿ ಅಧಿಕಾರಿಗಳು ಕೂಡ ಬಿಡಿಎ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಇದರ ತನಿಖೆ ಸಹ ಲೋಕಾಯುಕ್ತದಲ್ಲಿ ತನಿಖೆ ಹಂತದಲ್ಲಿ ಇರುವಾಗಲೇ ಈಗ ಮತ್ತೆ ಲೋಕಾಯುಕ್ತರು ದಾಳಿ ನಡೆದಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ