ಬೆಂಗಳೂರು: ರಾಜ್ಯದ ಹಲವಡೆ ಲೋಕಾಯುಕ್ತ ಪೋಲಿಸರು ಅಕ್ರಮ ಆಸ್ತಿ ಆರೋಪ ಕೇಳಿ ಬಂದ ಅಧಿಕಾರಿಗಳ ಮನೆ,ಫಾರ್ಮ್ ಹೌಸ್, ಕಛೇರಿಗಳ ಮೇಲೆ ಬುಧವಾರ ಬೆಳಿಗ್ಗೆ ದಾಳಿ ಮಾಡಿದ್ದಾರೆ. ಭ್ರಷ್ಟಾಚಾರ ಆರೋಪಗಳು ಹಾಗೂ ಆದಾಯ ಮೀರಿ ಆಸ್ತಿ ಸಂಪಾದನೆ ಆರೋಪಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ ಹಲವೆಡೆ ದಾಳಿ ಮಾಡಿದ್ದು, ಲೋಕಾಯುಕ್ತರ ಈ ದಾಳಿಯಿಂದ ಬೆಳ್ಳಂಬೆಳಿಗ್ಗೇ ಅಧಿಕಾರಿಗಳು ಬೆವರುವಂತಾಗಿದೆ. ಲೋಕಾಯುಕ್ತ ಪೋಲಿಸರು ಅಧಿಕಾರಿಗಳ ಮನೆ ಮತ್ತು ಕಚೇರಿಗಳಲ್ಲಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.
ಇದನ್ನೂ ಓದಿ:ಪಶ್ಚಿಮ ವಿಭಾಗದ ಕಛೇರಿ ಮೇಲೆ ಲೋಕಾಯುಕ್ತ ದಾಳಿ: ಜಂಟಿ ಆಯುಕ್ತ, ಪಿಎ ಬಂಧನ
ಬಾಗಲಕೋಟೆಯಲ್ಲಿ ಲೋಕಾಯುಕ್ತ ದಾಳಿ: ಇಲ್ಲಿನ ಇಬ್ಬರು ಕೃಷಿ ಇಲಾಖೆ ಅಧಿಕಾರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಬೆಳಿಗ್ಗೆ ದಾಳಿ ಮಾಡಿದ್ದಾರೆ. ವಿದ್ಯಾಗಿರಿಯಲ್ಲಿರುವ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ, ಬೀಳಗಿ ಸಹಾಯಕ ನಿರ್ದೇಶಕ ಕೃಷ್ಣ ಶಿರೂರು ಮನೆಗಳಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಕಲಬುರ್ಗಿಯಲ್ಲಿ ಲೋಕಾಯುಕ್ತ ದಾಳಿ: ರಾಯಚೂರು ಜಿಲ್ಲೆಯ ನಗರ ಯೋಜನಾ ಶಾಖೆಯ ಸಹಾಯಕ ನಿರ್ದೇಶಕ ಶರಣಪ್ಪ ಮಡಿವಾಳ ಅವರಿಗೆ ಸೇರಿದ ಇಲ್ಲಿನ ಫಾರ್ಮ್ ಹೌಸ್ ಮೇಲೆ ಲೋಕಾಯುಕ್ತ ಪೋಲಿಸರು ದಾಳಿ ನಡೆಸಿದ್ದಾರೆ.
ಬೆಂಗಳೂರುನಲ್ಲಿ ಲೋಕಾಯುಕ್ತ ದಾಳಿ: ಕೆ.ಆರ್.ಪುರ ತಹಶೀಲ್ದಾರ್ ಹುದ್ದೆಯಲ್ಲಿದ್ದ ಕೆಎಎಸ್ ಅಧಿಕಾರಿ ಅಜಿತ್ ಕುಮಾರ್ ರೈ ಮನೆ ಮತ್ತು ಅವರ ನಿಕಟವರ್ತಿಗಳ ಸಂಬಂಧಿಸಿದ ಸ್ಥಳಗಳ ಮೇಲೆ ಲೋಕಾಯುಕ್ತ ಪೋಲಿಸರು ದಾಳಿ ಮಾಡಿದ್ದು, ಶೋಧ ನಡೆಸುತ್ತಿದ್ದಾರೆ.
ಚಿಕ್ಕಬಳ್ಳಾಪುರದಲ್ಲೂ ಲೋಕಾಯುಕ್ತ ದಾಳಿ: ಗೌರಿಬಿದನೂರು ತಾಲೂಕಿನ ಅಬಕಾರಿ ಇಲಾಖೆ ನಿರೀಕ್ಷಕ ವಿ.ರಮೇಶ್ ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:ಅಗತ್ಯ ಬಿದ್ದರೆ ಶಾಸಕ ಮಾಡಾಳ್ ವಿರೋಪಾಕ್ಷಪ್ಪರನ್ನು ವಿಚಾರಣೆಗೆ ಒಳಪಡಿಸಿ : ಲೋಕಾಯುಕ್ತ ಬಿ.ಎಸ್.ಪಾಟೀಲ್
ಯಾದಗಿರಿಯಲ್ಲಿ ಲೋಕಾಯುಕ್ತ ದಾಳಿ: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಂಜಿನಿಯರಿಂಗ್ ವಿಭಾಗದ ಎಇಇ ವಿಶ್ವನಾಥ ರೆಡ್ಡಿ ಕಛೇರಿ ಮತ್ತು ಮನೆಯ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.
ಚಿಕ್ಕಮಗಳೂರುನಲ್ಲೂ ಲೋಕಾಯುಕ್ತ ದಾಳಿ:ಅಕ್ರಮ ಆಸ್ತಿ ಸಂಪಾದನೆ ಆರೋಪದಲ್ಲಿ ನಿರ್ಮಿತ ಕೇಂದ್ರದ ಯೋಜನಾ ವ್ಯವಸ್ಥಾಪಕ ಗಂಗಾಧರ ಮನೆ ಮೇಲೆ ಲೋಕಾಯುಕ್ತರು ಬುಧವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.
ತುಮಕೂರಿನಲ್ಲೂ ಲೋಕಾಯುಕ್ತ ದಾಳಿ: ಲೋಕಾಯುಕ್ತ ಅಧಿಕಾರಿಗಳು ಬುಧವಾರ ಬೆಳಿಗ್ಗೆ ಇಬ್ಬರು ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್.ರವಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ ನಡೆಸಿ, ದಾಖಲಾಎಗಳನ್ನು ಪರಿಶೀಲಿಸುತ್ತಿದ್ದಾರೆ.
ಮಡಿಕೇರಿಯಲ್ಲಿ ಲೋಕಾಯುಕ್ತ ದಾಳಿ: ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಫ್ ಡಿ ಎ ಮಹಮ್ಮದ್ ಬಷೀರ್ ಅವರ ಕುಶಾಲನಗರದ ಗೊಂದಿಬಸವನಹಳ್ಳಿ ಮನೆಯ ಮೇಲೆ ಬುಧವಾರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಲೋಕಾಯುಕ್ತ ದಾಳಿ: ಇಲ್ಲಿನ ‘ಹೆಸ್ಕಾಂ’ ಕಾರ್ಯನಿರ್ವಾಹಕ ಎಂಜಿನಿಯರ್ ಶೇಖರ ಬಹುರೂಪಿ ಅವರ ಮೂರು ಮನೆಗಳ ಮೇಲೆ, ಲೋಕಾಯುಕ್ತ ಅಧಿಕಾರಿಗಳು ಬುಧವಾರ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ವಿಜಯಪುರದಲ್ಲೂ ಲೋಕಾಯುಕ್ತ ದಾಳಿ: ಜಿಲ್ಲೆಯ ಇಬ್ಬರು ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಬುಧವಾರ ಬೆಳಿಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ, ಪರಿಶೀಲನೆ ನಡೆಸಿದ್ದಾರೆ. ಬಸವನ ಬಾಗೇವಾಡಿ ವಿಭಾಗದ ಪ್ರಭಾರ ಎಇಇ ಭೀಮನಗೌಡ ಬಿರಾದಾರ ಅವರ ಮನೆ ಮೇಲೆ ಹಾಗೂ ಮುದ್ದೇಬಿಹಾಳ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಸಹಾಯಕ ಎಂಜಿನಿಯರ್ ಜೆ.ಪಿ ಶೆಟ್ಟಿ ಅವರ ಸಾಸನೂರು ಗ್ರಾಮದಲ್ಲಿರುವ ಮನೆ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ.