ನವದೆಹಲಿ: ಜುಲೈ 19ರಿಂದ ಆರಂಭವಾದ ಸಂಸತ್ತಿನ ಮುಂಗಾರು ಅಧಿವೇಶನ ಸತತ ಮೂರುದಿನಗಳ ಭಾರೀ ಗದ್ದಲದಿಂದಾಗಿ ಪೂರ್ಣ ಪ್ರಮಾಣದಲ್ಲಿ ನಡೆಯಲಿಲ್ಲ. ಇಂದೂ ಸಹ ಲೋಕಸಭೆ ಅಧಿವೇಶನ ಆರಂಭವಾಗುತ್ತಿದ್ದಂತೆಯೇ ವಿಪಕ್ಷಗಳಿಂದ ಪೆಗಾಸಸ್ ಬೇಹುಗಾರಿ ವಿಷಯ ಉಭಯ ಸದನಗಳಲ್ಲಿ ಸದ್ದು ಗದ್ದಲ ನಿರ್ಮಾಣವಾಯಿತು.
ಪೆಗಾಸಸ್ ಸಾಫ್ಟ್‌ವೇರ್ ಮೂಲಕ ದೇಶದ 400 ಗಣ್ಯರ ಮೇಲೆ ಬೇಹುಗಾರಿಕೆ ನಡೆಸಲಾಗಿದೆ ಎನ್ನಲಾದ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ತೀವ್ರ ಗದ್ದಲ ಸೃಷ್ಠಿಯಾದ ಪರಿಣಾಮವಾಗಿ ಕಲಾಪವನ್ನು ಜುಲೈ 26ಕ್ಕೆ ಮುಂದೂಡಲಾಗಿದೆ.
ಕೋವಿಡ್ ಲಸಿಕೆ
ಲೋಕಸಭೆ ಹಾಗೂ ರಾಜ್ಯಸಭೆಯ ಉಭಯ ಸದನಗಳಲ್ಲಿ ಕೋವಿಡ್ ತಡೆಯುವ ಬಗ್ಗೆ ನಿರ್ವಹಣೆ, ಲಸಿಕೆ ಪೂರೈಕೆ, ಇಂಧನ ಬೆಲೆ ಏರಿಕೆ, ಜನವಿರೋಧಿ ಕೃಷಿ ಕಾಯ್ದೆಗಳ ರದ್ದು ಮತ್ತು ಪೆಗಾಸಸ್ ಬೇಹುಗಾರಿಕೆ ವರದಿ ವಿಚಾರಗಳು ಈ ಬಾರಿಯ ಅಧಿವೇಶನದಲ್ಲಿ ತೀವ್ರ ಚರ್ಚೆಯ ವಿಷಯವಾಗಿವೆ.
ಇದನ್ನು ಓದಿ: ಮುಂಗಾರು ಅಧಿವೇಶನ: ಪ್ರತಿಪಕ್ಷಗಳ ತೀವ್ರ ಗದ್ದಲದಿಂದ ಕೆಲಕಾಲ ಎರಡೂ ಸದನಗಳು ಮುಂದೂಡಿಕೆ
ಲೋಕಸಭೆಯಲ್ಲಿ ಕೊರೊನಾ ಲಸಿಕೆ ವಿಚಾರವಾಗಿ ಆರೋಗ್ಯ ಇಲಾಖೆ ರಾಜ್ಯ ಸಚಿವ ಡಾ. ಭಾರತಿ ಪ್ರವೀಣ್ ಪವಾರ್ ಅವರು ʻʻಕೊರೊನಾ ವೈರಸ್ ಲಸಿಕೆ ಉತ್ಪಾದಿಸುವ ವಾಣಿಜ್ಯ ಕಂಪನಿಗಳ ಜೊತೆಗೆ ಒಪ್ಪಂದದಲ್ಲಿ ಯಾವುದೇ ರೀತಿ ವಿಳಂಬ ನೀತಿ ಅನುಸರಿಸಿಲ್ಲ. ಲಸಿಕೆ ಪೂರೈಕೆಗೂ ಮೊದಲು ಮುಂಗಡ ಹಣವನ್ನು ಪಾವತಿ ಮಾಡಲಾಗಿದೆ. 2021ರ ಆಗಸ್ಟ್ ತಿಂಗಳಾಂತ್ಯದ ವೇಳೆಗೆ 135 ಕೋಟಿ ಡೋಸ್ ಲಸಿಕೆಯ ಲಭ್ಯತೆ ಇರಲಿದೆ. ಲಸಿಕೆ ಖರೀದಿ, ಪೂರೈಕೆ ಹಾಗೂ ವಿತರಣೆ ಅಭಿಯಾನಕ್ಕಾಗಿ ಈವರೆಗೂ 9,725.15 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆʼʼ ಎಂದು ತಿಳಿಸಿದರು.
ಟಿಎಂಸಿ ಸಂಸದ ಸಂತನು ಸೇನ್ ಅಮಾನತು
ಸದನ ಆರಂಭಕ್ಕೂ ಮುನ್ನ ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಅವರನ್ನು ಕೇಂದ್ರ ಸಚಿವ ಅಶ್ಚಿನಿ ವೈಷ್ಣವ್ ಅವರೊಂದಿಗೆ ಟಿಎಂಸಿ ಸಂಸದ ಸಂತನು ಸೇನ್ ಅಶಿಸ್ತಿನ ವರ್ತನೆ ಹಿನ್ನೆಲೆಯಲ್ಲಿ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದರು.
ಮೇಲ್ಮನೆಯ ಟಿಎಂಸಿ ಸಂಸದ ಸಂತನು ಸೇನ್ ಅವರು ಐಟಿ ಸಚಿವ ಅಶ್ವಿನಿ ವೈಷ್ಣವ್ ಕೈಯಿಂದ ಕಾಗದಗಳನ್ನು ಕಸಿದುಕೊಂಡು ಸದನದಲ್ಲಿ ಹರಿದು ಹಾಕಿದ ಘಟನೆ ನೆನ್ನೆ ನಡೆಯಿತು. ಈ ಬಗ್ಗೆ ರಾಜ್ಯಸಭೆಯ ಸದನ ಮುಖಂಡ ಪಿಯೂಷ್ ಗೋಯಲ್ ವಿರೋಧ ಪಕ್ಷದ ಸಭೆ ನಡೆಸಿದರು. ನಂತರ ಮೇಲ್ಮನೆ ಕಲಾಪ ಆರಂಭವಾಗುತ್ತಿದ್ದಂತೆ ಉಪ ಸಭಾಪತಿ ಹರಿವಂಶ್ ಕೂಡಾ ಕಲಾಪದಿಂದ ಹೊರ ನಡೆಯುವಂತೆ ಟಿಎಂಸಿ ಸಂಸದ ಸಂತಾನು ಸೇನ್ ರಿಗೆ ಸೂಚನೆ ನೀಡಿದರು. ಮುಂಗಾರು ಅಧಿವೇಶನದ ಅಂತ್ಯದವರೆಗೆ ಕಲಾಪಕ್ಕೆ ಹಾಜರಾಗದಂತೆ ಅಮಾನತುಗೊಳಿಸುವ ನಿರ್ಣಯವನ್ನು ಅಂಗೀಕರಿಸಲಾಗಿದೆ. ಆಗಸ್ಟ್ 13ರವರೆಗೂ ನಡೆಯಲಿರುವ ಮುಂಗಾರು ಅಧಿವೇಶನದಿಂದ ದೂರ ಇರುವಂತೆ ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಸೂಚನೆ ನೀಡಿದ್ದಾರೆ.
ಇದನ್ನು ಓದಿ: ಸಂಸತ್ತಿನ ಮುಂಗಾರು ಅಧಿವೇಶನ: ವಿರೋಧ ಪಕ್ಷಗಳಿಗೆ ಮತದಾರರ ವಿಪ್ ಜಾರಿ ಮಾಡಿದ ರೈತರು
ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಸದನದಲ್ಲಿ ನಡೆದ ಘಟನೆಯ ಬಗ್ಗೆ ನನಗೆ ತುಂಬಾ ನೋವಾಗುತ್ತದೆ. ಕಲಾಪ ನಡೆಯುತ್ತಿರುವ ಸಂದರ್ಭದಲ್ಲಿ ಸಚಿವರ ಕೈಯಲ್ಲಿರುವ ಪತ್ರಗಳನ್ನು ಕಸಿದು ಹರಿದು ಹಾಕುವಷ್ಟು ಕೆಳಮಟ್ಟಕ್ಕೆ ಇಳಿದಿರುವುದು ದುರಾದೃಷ್ಟಕರ. ಇಂತಹ ನಡುವಳಿಕೆಗಳು ಸಂಸದೀಯ ಪ್ರಜಾಪ್ರಭುತ್ವದ ಮೇಲಿನ ದಾಳಿ ಆಗಿರುತ್ತದೆ. ಎಂದು ಹೇಳಿದರು.
ಸಂತಾನು ಸೇನ್ ಅವರ ಸದನದಲ್ಲಿ ಗಲಾಟೆಯಿಂದಾಗಿ ಮೇಲ್ಮನೆ ಸದನವನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಲಾಯಿತು. 12 ಗಂಟೆ ನಂತರ ಆರಂಭವಾದ ಕಲಾಪದ ಸಂದರ್ಭದಲ್ಲಿ ಪೆಗಾಸಸ್ ವಿವಾದ ತೀವ್ರ ಗದ್ದಲವನ್ನು ಏರ್ಪಟ್ಟಿದ್ದರಿಂದಾಗಿ ಮೇಲ್ಮನೆ ಸದನವನ್ನು ಮತ್ತೆ ಮಧ್ಯಾಹ್ನ 2.30ಕ್ಕೆ ಮುಂದೂಡಲಾಯಿತು.
ಪೆಗಾಸಸ್ ಬೇಹುಗಾರಿಕೆ: ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ
ಇಂದಿನ ಅಧಿವೇಶನ ಆರಂಭಕ್ಕೂ ಮುನ್ನ ಸಂಸತ್ತಿನ ಗಾಂಧಿ ಪ್ರತಿಮೆ ಬಳಿ ಪೆಗಾಸಸ್ ಬೇಹುಗಾರಿಕೆ ವಿಚಾರವಾಗಿ ಡಿಎಂಕೆ ಹಾಗೂ ಶಿವಸೇನೆ ಸಂಸದರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ʻʻಪೆಗಾಸಸ್ ಸಾಫ್ಟ್‌ವೇರ್ ಅನ್ನು ಇಸ್ರೇಲ್ ಆಯುಧವಾಗಿ ಬಳಸಲು ತಯಾರಿಸಿದೆ. ಭಯೋತ್ಪಾದಕರ ವಿರುದ್ಧವೇ ಬಳಸಬೇಕಿದೆ. ಆದರೆ, ಪ್ರಧಾನಿ ಮತ್ತು ಗೃಹ ಸಚಿವ ಅಮಿತ್ ಶಾ ಭಾರತೀಯರ ವಿರುದ್ಧ ಮತ್ತು ನಮ್ಮ ಸಂಸ್ಥೆಗಳ ವಿರುದ್ಧ ಬಳಸಿದ್ದಾರೆʼʼ ಎಂದು ಗಂಭೀರ ಆರೋಪ ಮಾಡಿದರು.
ಜುಲೈ 19ರಿಂದ 17ನೇ ಲೋಕಸಭೆಯ ಮುಂಗಾರು ಅಧಿವೇಶನ ಆರಂಭಗೊಂಡಿದ್ದು, ಆಗಸ್ಟ್ 13ರವರೆಗೂ ನಡೆಯಲಿದೆ.