ಬೆಂಗಳೂರು: ಕೊರೋನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಮೇ 7ರವರೆಗೆ ಲಾಕ್‌ಡೌನ್ ಜಾರಿ ಮಾಡಿ. ಲಾಕ್‌ಡೌನ್ ಬಳಿಕ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ ತುಸು ತಗ್ಗಿದೆಯಾದರೂ ಸಂಪೂರ್ಣ ಹತೋಟಿಗೆ ಬಂದಿಲ್ಲ. ಈ ಹಿನ್ನಲೆಯಲ್ಲಿ ಲಾಕ್‌ಡೌನ್ ವಿಸ್ತರಣೆ ಮಾಡಬೇಕೋ ಬೇಡವೋ ಎಂಬುದರ ಕುರಿತು ಸಿಎಂ ಬಿಎಸ್ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ಸಭೆ ನಡೆಸಲಾಯಿತು. ಈ ಸಭೆಯ ಬಳಿಕ ಸಿಎಂ ಲಾಕ್‌ಡೌನ್ ಬಗ್ಗೆ ವಿಸ್ತರಣೆ ಬಗ್ಗೆ ಮಾತನಾಡಲಿದ್ದಾರೆ ಎಂದು ನಂಬಲಾಗಿತ್ತು. ಆದರೆ, ಈ ಬಗ್ಗೆ ಶನಿವಾರ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಸರ್ಕಾರ ತಿಳಿಸಿದೆ.
ಇಂದು ನಡೆದ ಸಭೆಯಲ್ಲಿ ಲಾಕ್‌ಡೌನ್ ವಿಸ್ತರಣೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗದ ಕಾರಣ ಈ ಬಗ್ಗೆ ಶನಿವಾರ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ. ಆ ಸಭೆಯಲ್ಲಿ ಲಾಕ್ ಡೌನ್ ವಿಸ್ತರಣೆ ಬಗ್ಗೆ ತೀರ್ಮಾನ ತೆಗೆದುಕೊಂಡು, ಅದೇ ದಿನ ಲಾಕ್ ಡೌನ್ ವಿಸ್ತರಣೆ ಬಗ್ಗೆ ಅಂತಿಮ ನಿರ್ಧಾರ ಪ್ರಕಟ ಮಾಡಲು ಸರ್ಕಾರ ನಿರ್ಧರಿಸಿದೆ.
ಸಭೆಯಲ್ಲಿ ಆಕ್ಸಿಜನ್ ಪೂರೈಕೆಗೆ ಸಿಎಂ ಬಿಎಸ್ವೈ ಸೂಚನೆ ನೀಡಿದರು. ಆಕ್ಸಿಜನ್ ಎಲ್ಲಿ ಹೆಚ್ಚಾಗಿದೆ ಎಲ್ಲಿ ಕಡಿಮೆ ಬೇಡಿಕೆ ಇದೆ ಅನ್ನೋದರ ಬಗ್ಗೆ ನಿಗಾ ಇಟ್ಟು ಆಕ್ಸಿಜನ್ ಜಿಲ್ಲಾವಾರು ಹಂಚಿಕೆ ಬಗ್ಗೆ ನಿಗಾ ವಹಿಸಿ. ಹಳ್ಳಿಗಳಲ್ಲಿ ಕೊರೋನಾ ನಿಯಂತ್ರಣ ಬಗ್ಗೆ ಹೆಚ್ಚು ಗಮನ ಹರಿಸಿ. ಬ್ಲಾಕ್ ಫಂಗಸ್ ಪೆಟಾಲಿಟಿ ಹೆಚ್ಚಾಗಿದ್ದು ಅದನ್ನು ನಿಯಂತ್ರಿಸಿ. ಕೇಂದ್ರ ಸರ್ಕಾರ ಮಾರ್ಗಸೂಚಿಯಂತೆ ಕೊರೋನಾ ಸೋಂಕನ್ನು ನಿಯಂತ್ರಿಸಲು ಸೂಕ್ತ ಕ್ರಮ ವಹಿಸಲು ಸಭೆಯಲ್ಲಿ ಅಧಿಕಾರಿಗಳಿಗೆ ಸಿಎಂ ಬಿಎಸ್ವೈ ಸೂಚನೆ ನೀಡಿದರು.
ರಫ್ತು ವಲಯಕ್ಕೆ ಲಾಕ್ ಡೌನ್ ಸಡಿಲಿಕೆ : ರಫ್ತು ವಲಯದ ಉದ್ಯಮಗಳಿಗೆ ನಾಳೆಯಿಂದ ಲಾಕ್ಡೌನ್ನಿಂದ ಶೇ. 100ರಷ್ಟು ಅನುಮತಿ ನೀಡಿ ಆದೇಶ ಹೊರಡಿಸಲಾಗಿದೆ. ರಫ್ತು ವಲಯದ ಉದ್ಯಮಗಳಿಗೆ ಶೇ. 100ರಷ್ಟು ಅವಕಾಶ ನೀಡಲಾಗಿದೆ. ರಫ್ತ ವಲಯದಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಶೇಕಡಾ 50 ರಷ್ಟು ಅವಕಾಶ ನೀಡಲಾಗಿದೆ. ರಫ್ತು ವಲಯ ಬಿಟ್ಟು ಉಳಿದ ವಲಯಗಳಿಗೆ ವಿನಾಯಿತಿ ನೀಡೋದು ಅನುಮಾನವಾಗಿದೆ.