- ಶ್ರೀನಾಥ್ ದೋಸಾ ಕಾರ್ನರ್’ ಎಂದು ಹೆಸರಿಟ್ಟಿದ್ದಕ್ಕೆ ಇರ್ಫಾನ್ ಮೇಲೆ ಹಿಂದುಗಳಿಂದ ಹಲ್ಲೆ
- ಪವನ್ ಎಂಬಾತನಿಂದ ಕೃತ್ಯ
- ಘಟನೆಯ ಹೊಣೆ ಹೊತ್ತ ಎಎಚ್ಪಿ, ಆರ್ಥಿಕ ಜಿಹಾದ್ ಎಂದು ಆರೋಪ
ಮಥುರಾ : ಮುಸ್ಲಿಂ ಕುಟುಂಬವೊಂದು ತಮ್ಮ ಅಂಗಡಿಗೆ ಹಿಂದೂ ದೇವರ ಹೆಸರನ್ನು ಇರಿಸಿದೆ ಎಂದು ಆಕ್ಷೇಪಿಸಿ ಗುಂಪೊಂದು ದೋಸಾ ಮಾರಾಟಗಾರನಿಗೆ ಹಲ್ಲೆ ನಡೆಸಿ, ಬೆದರಿಕೆ ಹಾಕಿದ್ದಲ್ಲದೆ, ಆತನ ಅಂಗಡಿಗೆ ಹಾನಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.
ಆರೋಪಿಯನ್ನು ಚೌಕ ಬಝಾರ್ ಪ್ರದೇಶದ ನಿವಾಸಿ ಶ್ರೀಕಾಂತ್ ಎಂದು ಗುರುತಿಸಲಾಗಿದೆ. ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಕೊಟ್ವಾಲಿ ಇನ್ಸ್ಪೆಕ್ಟರ್ ಸೂರ್ಯ ಪ್ರಕಾಶ್ ಶರ್ಮಾ ಹೇಳಿದ್ದಾರೆ.
ಖಚಿತ ಮಾಹಿತಿಯ ಆಧಾರದಲ್ಲಿ ಶ್ರೀಕಾಂತ್ನನ್ನು ಇಲ್ಲಿನ ಹೊಸ ಬಸ್ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಆತ ತನ್ನ ಸಹವರ್ತಿಗಳ ಹೆಸರನ್ನು ಬಹಿರಂಗಪಡಿಸಿದ್ದಾನೆ ಎಂದು ಅವರು ತಿಳಿಸಿದ್ದಾರೆ. ಶ್ರೀಕಾಂತ್ನ ಸಹವರ್ತಿಗಳನ್ನು ಬಂಧಿಸಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ. ‘ಶ್ರೀನಾಥ್ ದೋಸಾ ಕಾರ್ನರ್’ ಎಂಬ ಹರಿದ ಬೋರ್ಡ್ ನ ಎದುರು ವ್ಯಕ್ತಿಯೋರ್ವ ದುಃಖಿಸುತ್ತಿರುವ ವೀಡಿಯೊ ತುಣುಕು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆದ ಬಳಿಕ ಪೊಲೀಸರು ರವಿವಾರ ಎಫ್ಐಆರ್ ದಾಖಲಿಸಿದ್ದರು.
ಘಟನೆಯ ಹಿನ್ನಲೆ : ವಿಕಾಸ್ ಬಜಾರ್ ಪ್ರದೇಶದಲ್ಲಿ ಆ.18ರಂದು ಈ ಘಟನೆ ನಡೆದಿದ್ದು, ‘ಶ್ರೀನಾಥ್ ದೋಸಾ ಕಾರ್ನರ್’ ಎಂದು ಬೋರ್ಡ್ ಹಾಕಿ ದೋಸೆ ಮಾರಾಟ ಮಾಡುತ್ತಿದ್ದ ಇರ್ಫಾನ್ ಎಂಬಾತನ ಮೇಲೆ ಜನರ ಗುಂಪು ಹಲ್ಲೆಗೆ ಯತ್ನಿಸಿತ್ತು. ಆದರೆ ಈ ಘಟನೆ ಬೆಳಕಿಗೆ ಬಂದಿರಲಿಲ್ಲ. ಒಂದಿಷ್ಟ ದಿನಗಳ ನಂತರ ವಿಡಿಯೊ ಹರಿಬಿಡಲಾಗಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಶ್ರೀನಾಥ್ ದೋಸಾ ಕಾರ್ನರ್ ಎಂದು ಬೋರ್ಡ್ ಇದ್ದ ತನ್ನ ಅಂಡಿಯ ಮುಂದೆ ಇರ್ಫಾನ್ ಕಣ್ಣೀರಿಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಹಿಂದೂ ವ್ಯಕ್ತಿಗಳು ಕೂಡ ತಪ್ಪು ಭಾವಿಸಿಕೊಂಡು ಈತನಿಂದ ತಿಂಡಿಯನ್ನು ತಿನ್ನುತ್ತಿದ್ದರು ಎಂದು ವ್ಯಕ್ತಿಯೊಬ್ಬ ಮಾತನಾಡಿರುವ ಮಾತುಗಳು ವಿಡಿಯೋದಲ್ಲಿವೆ. ಇನ್ನೊಬ್ಬ ವ್ಯಕ್ತಿ ದೋಸೆ ಕಾರ್ನರ್ಗೆ ಆತ ಮುಸ್ಲಿಂ ಹೆಸರನ್ನು ಬಿಟ್ಟು ಹಿಂದೂ ಹೆಸರನ್ನು ಇಟ್ಟಿದ್ದೇಕೆ ಎಂದು ಪ್ರಶ್ನಿಸಿದ್ದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಅಲ್ಲದೇ ಕೃಷ್ಣನ ಭಕ್ತರು ಮಥುರಾವನ್ನು ಶುದ್ಧಗೊಳಿಸಬೇಕು ಎಂದು ಜನರ ಗುಂಪು ಘೋಷಣೆಯನ್ನು ಕೂಗಿತ್ತು.
ಗಲಾಟಯ ಮಾಸ್ಟರ್ ಮೈಂಡ್ ಯಾರು? : ‘ಶ್ರೀನಾಥಜಿ ಸೌಥ್ ಇಂಡಿಯನ್ ದೋಸಾ ಕಾರ್ನರ್’ ಹೆಸರಿನಲ್ಲಿ ಇತ್ತೀಚಿಗಷ್ಟೇ ವಿಕಾಸ ಮಾರ್ಕೆಟ್ ನಲ್ಲಿ ಅಂಗಡಿಯನ್ನು ಆರಂಭಿಸಿರುವ ಪವನ್ ಯಾದವ್ ಹಿಂದುತ್ವ ಗುಂಪುಗಳಿಗೆ ಮಾಹಿತಿ ನೀಡಿದ್ದ ಎನ್ನುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಸ್ಲಿಂ ಕುಟುಂಬವು ನಡೆಸುತ್ತಿರುವ ದೋಸಾ ಅಂಗಡಿಯು ಜನಪ್ರಿಯವಾಗಿದೆ. ಹಿಂದುಗಳ ಅಂಗಡಿಗಿಂತ ಅಲ್ಲಿ ದೋಸೆಯು ಅಗ್ಗವಾಗಿದೆ. ಹೀಗಾಗಿ ಯಾದವ್ ಅದನ್ನು ಮುಚ್ಚಿಸಲು ಬಯಸಿದ್ದ ಎಂದೂ ಪೊಲೀಸರು ಹೇಳಿದ್ದಾರೆ.
ತಾವು ಐದು ವರ್ಷಗಳ ಹಿಂದೆ ಅಂಗಡಿಯನ್ನು ಖರೀದಿಸಿದ್ದೆವು. ಆದರೆ ಸಮಸ್ಯೆಗಳು ಎದುರಾಗಿದ್ದರಿಂದ ಎರಡು ತಿಂಗಳುಗಳ ಹಿಂದೆ ದಿನಕ್ಕೆ 400 ರೂ.ಗಳ ಬಾಡಿಗೆ ಆಧಾರದಲ್ಲಿ ನಡೆಸಲು ಅಂಗಡಿಯನ್ನು ರಾಹುಲ್ ಠಾಕೂರ್ ಎಂಬಾತನಿಗೆ ನೀಡಿದ್ದೇವೆ ಎಂದು ಇರ್ಫಾನ್ ದೂರಿನಲ್ಲಿ ತಿಳಿಸಿದ್ದಾರೆ. ತಮ್ಮ ಅಂಗಡಿಯು ಧ್ವಂಸಗೊಳ್ಳಲು ಯಾದವ್ ಕಾರಣವೆಂದು ಆರೋಪಿಸಿರುವ ಇರ್ಫಾನ್ ಸೋದರ ಅವೇದ್,’ನಾವು ಸೋದರರು ಐದು ವರ್ಷಗಳಿಂದಲೂ ಯಾವುದೇ ಸಮಸ್ಯೆಯಿಲ್ಲದೆ ಅಂಗಡಿಯನ್ನು ನಡೆಸುತ್ತಿದ್ದೇವೆ. ಆದರೆ ಕಳೆದ ಎರಡೂವರೆ ತಿಂಗಳುಗಳಿಂದ ಇಲ್ಲಿ ಅಂಗಡಿಯನ್ನು ಆರಂಭಿಸಿರುವ ಯಾದವನಿಂದಾಗಿ ತೊಂದರೆಯನ್ನು ಎದುರಿಸುತ್ತಿದ್ದೇವೆ ಎಂದು ಹೇಳಿದರು. ‘ಯಾರನ್ನೂ ದಾರಿ ತಪ್ಪಿಸುವುದು ನಮ್ಮ ಉದ್ದೇಶವಾಗಿರಲಿಲ್ಲ. ಇದು ಮಥುರಾ, ಕೃಷ್ಣನಗರಿ. ಕೃಷ್ಣ ನಮ್ಮ ಗುರುತು.ನೋಡಿ,ಇಲ್ಲಿ ಎಲ್ಲಿ ನೋಡಿದರೂ ಅಂಗಡಿಗಳಿಗೆ ಕೃಷ್ಣನ ಹೆಸರುಗಳೇ ಇವೆೆ. ನಾವು ಐದು ವರ್ಷಗಳ ಹಿಂದೆ ಅಂಗಡಿಯನ್ನು ಖರೀದಿಸಿದಾಗ ಇದ್ದ ‘ಶ್ರೀನಾಥ್ ದೋಸಾ’ಹೆಸರನ್ನೇ ನಾವು ಮುಂದುವರಿಸಿದ್ದೇವೆ ‘ ಎಂದು ಅವೇದ್ ಹೇಳಿದರು.
ಇದು ಆರ್ಥಿಕ ಜಿಹಾದ್ : ದಾಂಧಲೆಯ ಹೊಣೆಯನ್ನು ಹೊತ್ತುಕೊಂಡಿರುವ ಅಂತರರಾಷ್ಟ್ರೀಯ ಹಿಂದು ಪರಿಷದ್ (ಎಎಚ್ಪಿ) ಇದು ಆರ್ಥಿಕ ಜಿಹಾದ್ ಎಂದು ಆರೋಪಿಸಿದೆ. ಮಥುರಾ ನಗರಾಧ್ಯಕ್ಷ ಶ್ರೀಕಾಂತ ಶರ್ಮಾ, ಇದು ‘ಆರ್ಥಿಕ ಜಿಹಾದ್’ಆಗಿದೆ ಮತ್ತು ನಾವು ಇನ್ನು ಮುಂದೆ ಇದನ್ನು ಸಹಿಸುವುದಿಲ್ಲ ಎಂದು ಹೇಳಿದರು. ‘ಎಎಚ್ಪಿ ಇಂತಹ ಕ್ರಮಗಳನ್ನು ಮುಂದುವರಿಸಲಿದೆ, ಆದರೆ ಕಾನೂನು ಮೀರುವುದಿಲ್ಲ. ಮುಸ್ಲಿಮರು ತಮ್ಮ ವ್ಯವಹಾರಗಳಿಗೆ ಹಿಂದು ದೇವರ ಹೆಸರುಗಳನ್ನು ಬಳಸುವುದನ್ನು ನಿಲ್ಲಿಸಬೇಕು. ಅವರು ಹಾಗೆ ಬಯಸುತ್ತಿದ್ದರೆ ಮೊದಲು ‘ಘರ್ ವಾಪ್ಸಿ ‘ಆಗಬೇಕು. ಹಾಗೆ ಮಾಡಿದರೆ ಅವರಿಗೆ ಅಂಗಡಿಯನ್ನೂ ನಾವೇ ಕೊಡಿಸುತ್ತೇವೆ ‘ಎಂದು ಶರ್ಮಾ ಹೇಳಿದ್ದಾರೆ.
ಲವ್ ಜಿಹಾದ್ (Love jihad) ಬೆನ್ನಲೆ ಇದೀಗ ಮಥುರಾ ನಗರದಲ್ಲಿ ಆರ್ಥಿಕ ಜಿಹಾದ್ (Economic Jihad) ಹೆಸರು ಕೇಳಿ ಬಂದಿದೆ. ವ್ಯಾಪಾರದ ಉದ್ದೇಶಕ್ಕಾಗಿ ಮುಸ್ಲಿಂ ವ್ಯಕ್ತಿಗಳು ತಮ್ಮ ಅಂಗಡಿಗಳಿಗೆ ಹಿಂದೂ ಹೆಸರಿಟ್ಟು ಲಾಭಾಗಳಿಸುತ್ತಿದ್ದಾರೆ. ಇದು ಆರ್ಥಿಕ ಜಿಹಾದಿ ಎಂಬ ಆರೋಪಿಸಿ ಹಲ್ಲೆ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಅಂಗಡಿ ಬಾಡಿಗೆ ಪಡೆಯುವಾಗ ಇದ್ದ ʻಶ್ರೀನಾಥ್ ದೋಸೆ ಕಾರ್ನರ್” ಎಂಬ ಹೆಸರನ್ನು ಇರ್ಫಾನ್ ಉಳಿಸಿಕೊಂಡಿದ್ದನ್ನು ನಾವು ಗೌರವಿಸಬೇಕು ಎಂಬ ಅಭಿಪ್ರಯಾಯಗಳು ಸಾರ್ವಜನಿಕ ವಲಯದಲ್ಲಿದೆ. ನಿತ್ಯ ದುಡಿದು ಹೊಟ್ಟೆಪಾಡು ನಡೆಸುವ ಮುಸ್ಲಿಂ ವ್ಯಕ್ತಿಗಳ ಮೇಲೆ ಈ ರೀತಿ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಆರ್ಥಿಕ ಜಿಹಾದಿ ಎಂದು ಅಪಪ್ರಚಾರ ಮಾಡುತ್ತಿರುವುದು ಸರಿಯೆ? ಭಾರತೀಯನಾದ ಇರ್ಫಾನ್ ಒಂದು ಅಂಗಡಿಯನ್ನು ತೆರೆದು ಅದಕ್ಕೆ ತನಗೆ ಬೇಕಾದ ಹೆಸರನ್ನಿಡಲು ಸ್ವಾತಂತ್ರ್ಯವಿಲ್ಲವೆ. ಧರ್ಮದ ಅಮಲಿನಲ್ಲಿ ಸಂವಿಧಾನಿಕ ಹಕ್ಕುಗಳನ್ನು ನಾಶಮಾಡುವತ್ತ ಯುವಜನತೆ ಸಾಗುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಯೋಗಿ ಸರಕಾರ ಇಂತಹ ಧಾರ್ಮಿಕ ಭಾವನೆಗಳನ್ನು ಕದಲುವು ಕೋಮುಗಲೆಭೆ ಎಬ್ಬಿಸುವ ಘಟನೆಗಳನ್ನು ನಿಯಂತ್ರಿಸಬೇಕಿದೆ.