ಉಡುಪಿ: ಜಿಲ್ಲೆಯ ಶ್ರೀ ಮಹಾಲಕ್ಷ್ಮೀ ಬ್ಯಾಂಕಿನ ಮಲ್ಪೆ ಶಾಖೆಯಲ್ಲಿ ನಕಲಿ ಸಹಿ ಬಳಸಿ ನೀಡಿರುವ ಸಾಲಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಸಂತ್ರಸ್ತರು ಆಗ್ರಹಿಸಿದ್ದಾರೆ.
ನವೆಂಬರ್ 24ರಂದು ಶ್ರೀ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕಿನ ಉಡುಪಿ ತಾಲೂಕು ಸಂತ್ರಸ್ತರ ಸಮಿತಿಯ ನೇತೃತ್ವದಲ್ಲಿ ಉಡುಪಿ ಸಹಕಾರ ಇಲಾಖೆಯ ಉಪನಿಬಂಧಕಿಗೆ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ: ಆನೇಕಲ್| ಸೊಳ್ಳೆಪುರದಲ್ಲಿ ರೈತರ ಸಭೆ : ಕೆಐಎಡಿಬಿ ಭೂಸ್ವಾಧೀನ ಹೋರಾಟಕ್ಕೆ 138 ಪೂರ್ಣ
ಶ್ರೀಮಹಾಲಕ್ಷ್ಮೀ ಬ್ಯಾಂಕ್ ಮಲ್ಪೆ ಶಾಖೆಯಲ್ಲಿ ಕೋವಿಡ್ ಸಂದರ್ಭದಲ್ಲಿ ಕೋವಿಡ್ ಸಾಲಮೇಳ ಎಂಬ ಯೋಜನೆ ಅಡಿಯಲ್ಲಿ ಸಾರ್ವಜನಿಕರಿಗೆ ನಗದು ರೂಪದಲ್ಲಿ ಸಾಲಗಳನ್ನು ನೀಡಲಾಗಿದ್ದು, ಆ ಸಾಲವನ್ನು ಒಂದು ವರ್ಷದ ಬಳಿಕ ಮರು ಪಾವತಿಸಬೇಕಾಗಿತ್ತು. ಆದರೆ ಈ ಯೋಜನೆಯಲ್ಲಿ ಅಲ್ಪ ಪ್ರಮಾಣದ ಸಾಲವನ್ನು ಪಡೆದ ಸಾಲಗಾರರ ಸಾಲವನ್ನು 2ಲಕ್ಷ ರೂ. ಎಂದು ತಪ್ಪಾಗಿ ನಮೂದಿಸಿ ಈಗ ಅಸಲು ಮತ್ತು ಬಡ್ಡಿ ಸೇರಿಸಿ 3 ಲಕ್ಷಕ್ಕಿಂತ ಅಧಿಕ ಪಾವತಿಸುವಂತೆ ನೋಟಿಸು ನೀಡಲಾಗಿತ್ತು.
ಈ ಬಗ್ಗೆ ಬ್ಯಾಂಕಿನಲ್ಲಿ ವಿಚಾರಿಸಿ ಸಾಲ ಪತ್ರಗಳನ್ನು ಪರಿಶೀಲಿಸಿದಾಗ ಅದರಲ್ಲಿ ನಮ್ಮ ನಕಲಿ ಸಹಿ ಬಳಸಿ ಹೆಚ್ಚಿನ ಹಣ ನೀಡಿರುವುದನ್ನು ನಮೂದಿಸಿ ದುರುಪಯೋಗ ಮಾಡಿರುವುದು ಗಮನಕ್ಕೆ ಬಂತು. ಬಳಿಕ ಬ್ಯಾಂಕ್ ಸಾಲ ಪತ್ರದಲ್ಲಿನ ನಕಲಿ ಸಹಿಯಿಂದ ಅನ್ಯಾಯ ಕ್ಕೊಳಗಾದ ಸಂತ್ರಸ್ತರು ಒಟ್ಟಾಗಿ ಹೋರಾಟ ನಡೆಸಿ ನ್ಯಾಯ ಒದಗಿಸುವಂತೆ ಸರಕಾರದ ಗಮನಕ್ಕೆ ತಂದು ಒತ್ತಾಯ ಮಾಡಿದಾಗ ಸರಕಾರ ಈ ವಿಷಯದ ಬಗ್ಗೆ ನಿಯಮ 64ರ ಅಡಿಯಲ್ಲಿ ಸಹಕಾರ ಇಲಾಖೆ ಉಪನಿಬಂಧಕರು ಸೂಕ್ತ ತನಿಖೆಯನ್ನು ನಡೆಸುವಂತೆ ಆದೇಶ ಜಾರಿಗೊಳಿಸಿತು.
ಈ ತನಿಖೆಗೆ ಆದೇಶವಾಗಿ ಒಂದು ವರ್ಷ ಕಳೆದರೂ ಈವರೆಗೆ ನ್ಯಾಯ ಸಿಕ್ಕಿಲ್ಲ. ಈ ತನಿಖೆಯ ವರದಿ ಬಾಕಿಯಿದ್ದರೂ ಬ್ಯಾಂಕಿನವರು ವಸೂಲಾತಿಗೆ ಮನೆ ಜಪ್ತಿ, ಆಸ್ತಿ ಜಪ್ತಿ ಹಾಗೂ ಚೆಕ್ ಹಾಕುವುದಾಗಿ ಸಂತ್ರಸ್ತರನ್ನು ಕಾನೂನಿನ ನೆಪದ ಮೂಲಕ ಬೆದರಿಸುತ್ತಿದ್ದಾರೆ. ಈ ತನಿಖೆ ಪೂರ್ಣಗೊಂಡು ವರದಿ ಬರುವವರೆಗೆ ನಮಗೆ ಸಾಲ ಮರುಪಾವತಿಗೆ ಕಿರುಕುಳ ನೀಡದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಂತ್ರಸ್ಥರು ಆಗ್ರಹಿಸಿದ್ದಾರೆ. ಜೊತೆಗೆತನಿಖೆಗೆ ಆದೇಶವಾದ ದಿನದಿಂದಲೇ ನಮ್ಮ ಸಹಿಯ ನಕಲಿಯ ಬಗ್ಗೆ ಬ್ಯಾಂಕಿನಿಂದ ಸಾಲ ಪತ್ರವನ್ನು ತರಿಸಿ ನಮ್ಮ ಸಹಿಯ ಸತ್ಯಾಸತ್ಯತೆಯ ಬಗ್ಗೆ ವಿಧಿ ವಿಜ್ಞಾನ ಸಂಸ್ಥೆಯಿಂದ ತನಿಖೆ ನಡೆಸಬೇಕೆಂದು ತನಿಖಾಧಿಕಾರಿಯವರಿಗೆ ಮನವಿ ಸಲ್ಲಿಸಲಾಗಿದೆ.
ಇದನ್ನೂ ನೋಡಿ: ಸಂಪತ್ತಿಗೆ ಸವಾಲ್ ನಾಟಕ ‘ಸಿನಿಮಾ’ ಆಗಿದ್ದು ಹೇಗೆ?Janashakthi Media
