ಆನ್​ಲೈನ್​ ಸಾಲ ತೀರಿಸದ್ದಕ್ಕೆ ಅಶ್ಲೀಲ ಫೋಟೋ ಕಳುಹಿಸಿ ಅವಮಾನ : ಖಾಸಗಿ ನೌಕರ ಆತ್ಮಹತ್ಯೆ

ಬೆಂಗಳೂರು: ಆನ್ ಲೈನ್ ಸಾಲಗಾರರ ಕಿರುಕುಳಕ್ಕೆ ಮತ್ತೊಬ್ಬ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ನಾಗದೇವನಹಳ್ಳಿಯ ನಂದಕುಮಾರ್ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

ಮೃತ ನಂದಕುಮಾರ್ ಖಾಸಗಿ ಕೋಅಪರೇಟಿವ್ ಬ್ಯಾಂಕ್ ನಲ್ಲಿ ಕೆಲಸ ಮಾಡ್ತಿದ್ದು, ಆನ್ ಲೈನ್ ಆ್ಯಪ್ ಮೂಲಕ ಸಾಲ ಪಡೆದಿದ್ದ. ಸಾಲ ಹಿಂದಿರುಗಿಸುವುದು ಸ್ವಲ್ಪ ತಡವಾಗಿದ್ದರಿಂದ‌ ಆಯಪ್​ಗೆ ಸಂಬಂಧಿಸಿದ ವಿವಿಧ ನಂಬರುಗಳಿಂದ ಕರೆ ಮಾಡುತ್ತಿದ್ದವರು ಕಿರುಕುಳ ನೀಡುತ್ತಿದ್ದರು. ಮಾತ್ರವಲ್ಲ ನಂದಕುಮಾರ್ ಪೋಟೋವನ್ನು ಅಶ್ಲೀಲವಾಗಿ ಮಾರ್ಪಡಿಸಿ ಆತನ ಸ್ನೇಹಿತರು ಮತ್ತು ಸಂಬಂಧಿಕರಿಗೆ ಕಳುಹಿಸಲಾಗಿತ್ತು.

ಇದರಿಂದ ಮನನೊಂದಿದ್ದ ನಂದಕುಮಾರ್ ಆನ್‍ಲೈನ್ ಆಯಪ್​ಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಡೆತ್ ನೋಟ್ ಬರೆದಿಟ್ಟು ಜುಲೈ 24ರಂದು ಸಿಟಿ ರೈಲ್ವೇ ಠಾಣಾ ವ್ಯಾಪ್ತಿಯಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ಬೆಂಗಳೂರು ಸಿಟಿ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ ಎಂದು ರೈಲ್ವೆ ಎಸ್​ಪಿ ಸಿರಿಗೌರಿ ತಿಳಿಸಿದ್ದಾರೆ.

ಡೆತ್‌ನೋಟ್‌ನಲ್ಲಿ ಆ್ಯಪ್‌ಗಳ ಮಾಹಿತಿ :ಮೃತನ ಬಳಿ ಮರಣ ಪತ್ರ ಪತ್ತೆಯಾಗಿದ್ದು, ಇದರಲ್ಲಿ ಸಾಲ ನೀಡಿ ಆ್ಯಪ್‌ಗಳು ಕೊಟ್ಟ ಮಾನಸಿಕ ಕಿರುಕುಳದ ಬಗ್ಗೆ ಅವರು ಸವಿಸ್ತಾರವಾಗಿ ಬರೆದಿದ್ದಾರೆ. ಅಲ್ಲದೆ 40 ಆ್ಯಪ್‌ಗಳ ಹೆಸರು ಪ್ರಸ್ತಾಪಿಸಿ ಅವುಗಳ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಮೃತ ನಂದಕುಮಾರ್‌ ಆಗ್ರಹಿಸಿರುವುದಾಗಿ ತಿಳಿದು ಬಂದಿದೆ.

Donate Janashakthi Media

Leave a Reply

Your email address will not be published. Required fields are marked *