ದಾವಣಗೆರೆ: ಆಡಳಿತರೂಢ ಬಿಜೆಪಿ ರಾಜ್ಯ ಸರ್ಕಾರ ನೆನ್ನೆ (ಡಿಸೆಂಬರ್ 29) ರಂದು ಲಿಂಗಾಯತ ಪಂಚಮಸಾಲಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ 2ಡಿ ಪ್ರತ್ಯೇಕ ಕೆಟಗರಿ ಮಾಡಿತ್ತು. ವಿಧಾನ ಮಂಡಲ ಅಧಿವೇಶನ ಸಂದರ್ಭದಲ್ಲಿಯೇ ಗುರುವಾರ ನಡೆದ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಂಡಿತ್ತು.
ಈ ಕುರಿತು ಅಖಿಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷ, ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ರಾಜ್ಯ ಸರ್ಕಾರ ಲಿಂಗಾಯತರಿಗೆ ಮೀಸಲಾತಿ ನೀಡಿದ್ದು ಅರ್ಥವಾಗಿಲ್ಲ. ಎಲ್ಲ ತಿರುಗಾಮುರಗಾ ಮಾಡಿ ಇಟ್ಟಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ: ದಲಿತರ ಸಾಂಸ್ಕೃತಿಕ ಪ್ರತಿರೋಧ ಸಮಾವೇಶ: ಒಳ ಮೀಸಲಾತಿ ಜಾರಿ ಸೇರಿ 15 ನಿರ್ಣಯ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯತ ಪಂಚಮಸಾಲಿಗೆ ಮೀಸಲಾತಿ ವಿಚಾರಕ್ಕೆ ಪ್ರತ್ಯೇಕ ಕೆಟಗೆರಿ ರಚನೆ ಮಾಡಿದ ಕುರಿತು ಎಲ್ಲ ಮಾಹಿತಿಯನ್ನು ಪಡೆದುಕೊಂಡು ಪರಿಶೀಲಿಸಿ ಮಾತಾಡುವೆ. ನಾವು ಅಂದುಕೊಂಡಂತೆ ಮೀಸಲಾತಿ ನೀಡಿಲ್ಲ ಎಂದಿದ್ದಾರೆ.
ಇದು ಕೇವಲ ಚುನಾವಣಾ ತಂತ್ರ: ಸಿದ್ದರಾಮಯ್ಯ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಲಿಂಗಾಯತ, ಒಕ್ಕಲಿಗರಿಗೆ ಮೀಸಲಾತಿ ಹಂಚಿಕೆಯಲ್ಲಿ ಗೊಂದಲಗಳಿವೆ. ಇದು ಕೇವಲ ಚುನಾವಣಾ ತಂತ್ರವಾಗಿದ್ದು, ಇಂದಿರಾ ಸುಹಾನಿ ಪ್ರಕರಣದ ತೀರ್ಪಿನಂತೆ ಮೀಸಲಾತಿ ಶೇ. 50ರಷ್ಟು ಮೀರುವಂತಿಲ್ಲ. ಈಗ ಎಲ್ಲ ಮೀಸಲಾತಿ ಸೇರಿ ಶೇ. 65.9ರಷ್ಟಾಗುತ್ತದೆ, ಇದು ಹೇಗೆ? ಎಂದು ಪ್ರಶ್ನಿಸಿದರು.
ಇದನ್ನು ಓದಿ: ಇಡಬ್ಲ್ಯುಎಸ್ ಮೀಸಲಾತಿ ಕುರಿತು
ಕಳಸಾ ಬಂಡೂರಿ ಯೋಜನೆಯ ಡಿಪಿಆರ್ಗೆ ಒಪ್ಪಿಗೆ ನೀಡಿದ್ದು ಕೂಡ ಚುನಾವಣಾ ತಂತ್ರವಷ್ಟೇ. ಕೇಂದ್ರ ಸರ್ಕಾರ ಇದಕ್ಕೆ ಮೊದಲೇ ಏಕೆ ಅನುಮೋದನೆ ನೀಡಲಿಲ್ಲ ಎಂದು ಪ್ರಶ್ನಿಸಿದರು. ಅಮಿತ್ ಶಾ ರಾಜ್ಯ ಪ್ರವಾಸದಿಂದ ದೊಡ್ಡ ಬದಲಾವಣೆ ಏನೂ ಆಗಲ್ಲ ಎಂದು ಹೇಳಿದರು.
ಒಕ್ಕಲಿಗ ಮತ್ತು ಲಿಂಗಾಯತರಿಗೆ ಪ್ರತ್ಯೇಕ ಮೀಸಲಾತಿ ಪ್ರವರ್ಗ
ಕರ್ನಾಟಕ ರಾಜ್ಯದಲ್ಲಿ ಎರಡು ಪ್ರಬಲ ಸಮುದಾಯದವಾಗಿರುವ ಒಕ್ಕಲಿಗ ಹಾಗೂ ಲಿಂಗಾಯತ ಪಂಚಮಸಾಲಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎರಡು ಪ್ರತ್ಯೇಕ ಪ್ರವರ್ಗ 2ಎ ಹಾಗೂ 2ಬಿ ಜೊತೆಗೆ 2ಸಿ ಹಾಗೂ 2ಡಿ ಪ್ರವರ್ಗ ಸೃಷ್ಟಿ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದ್ದು, 3ಎ ನಲ್ಲಿ ಇರುವ ಒಕ್ಕಲಿಗರನ್ನು 2ಸಿ ಗೆ ಸೇರ್ಪಡೆ ಹಾಗೂ 3ಬಿ ಯಲ್ಲಿ ಇದ್ದ ಲಿಂಗಾಯತರನ್ನು 2ಡಿ ಗೆ ಸೇರ್ಪಡೆ ಮಾಡಲು ತೀರ್ಮಾನ ಮಾಡಲಾಗಿದೆ. ಆದರೆ ಎಷ್ಟು ಪ್ರಮಾಣದಲ್ಲಿ ಮೀಸಲಾತಿ ನೀಡಬೇಕು ಎಂಬುದನ್ನು ಹಿಂದುಳಿದ ಹಿಂದುಳಿದ ವರ್ಗಗಳ ಆಯೋಗದ ವರದಿ ಬಂದ ಬಳಿಕ ನಿರ್ಧಾರ ಮಾಡಲು ಸಂಪುಟ ಸಭೆ ತೀರ್ಮಾನ ಮಾಡಿದೆ.
ಇದನ್ನು ಓದಿ: ಇಡಬ್ಲ್ಯೂಎಸ್ ಮೀಸಲಾತಿಯಿಂದ ಎಸ್‌ಸಿ/ಎಸ್‌ಟಿ, ಒಬಿಸಿ ವರ್ಗ ಹೊರಗಿಟ್ಟರೆ ಹೊಸದಾಗಿ ಅನ್ಯಾಯ ಮಾಡಿದಂತೆ: ನ್ಯಾ. ಎಸ್ ರವೀಂದ್ರ ಭಟ್
2ಎ ಅಡಿಯಲ್ಲಿರುವ 102 ಪಂಗಡಗಳ ಮೀಸಲಾತಿಗೆ ಯಾವುದೇ ಧಕ್ಕೆ ಆಗಲ್ಲ. ಯಾವುದೇ ಸಮುದಾಯದ ಮೀಸಲಾತಿ ಬದಲಾಗಲ್ಲ. ಮೇಲ್ಜಾತಿಯಲ್ಲಿ ಆರ್ಥಿಕವಾಗಿ ದುರ್ಬಲರಾದ ವರ್ಗ(ಇಡಬ್ಲ್ಯೂಎಸ್) ದಲ್ಲಿರುವ ಶೇ.10ರಷ್ಟು ಮೀಸಲಾತಿಯಲ್ಲಿ ಹೆಚ್ಚುವರಿಯಾಗಿ ಉಳಿಯುವುದನ್ನು 2ಸಿ ಹಾಗೂ 2ಡಿಗೆ ಪ್ರವರ್ಗಕ್ಕೆ ವರ್ಗಾಯಿಸಲಾಗುವುದು ಎನ್ನಲಾಗುತ್ತಿದೆ.
3ಎ ಅಡಿಯಲ್ಲಿ ಒಕ್ಕಲಿಗ, ರೆಡ್ಡಿ, ಬಲಿಜ, ಬಂಟ, ಕೊಡವ ಸೇರಿ 12 ಜಾತಿಗಳಿವೆ 3ಬಿ ಅಡಿಯಲ್ಲಿ ವೀರಶೈವ ಮತ್ತು ಲಿಂಗಾಯತ ಸಮುದಾಯಗಳು ಮತ್ತು ಉಪಜಾತಿಗಳು ಇವೆ. ಈಗ ಹೊಸದಾಗಿ ಪ್ರತ್ಯೇಕ ಪ್ರವರ್ಗ ಸೃಷ್ಟಿ ಮಾಡುವ ಮೂಲಕ ಮೀಸಲಾತಿ ಮರುಹಂಚಿಕೆ ಮಾಡಲಾಗಿದೆ. 2ಎ ಗೆ ಸೇರ್ಪಡೆ ಮಾಡಬೇಕು ಎಂಬುದು ಪಂಚಮಸಾಲಿಗಳ ಬೇಡಿಕೆಯಾಗಿತ್ತು. ದೊಡ್ಡ ಮಟ್ಟದ ಹೋರಾಟ ಹಮ್ಮಿಕೊಳ್ಳಲಾಗಿತ್ತು. ಈ ನಡುವೆ ಒಕ್ಕಲಿಗರದ್ದು ಮೀಸಲಾತಿ ಪ್ರಮಾಣವನ್ನು 4 ರಿಂದ 12% ಗೆ ಏರಿಕೆ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದರು. ಇದೀಗ ಸರ್ಕಾರ ಎರಡು ಪ್ರತ್ಯೇಕ ಪ್ರವರ್ಗ ಸೃಷ್ಟಿ ಮಾಡಿ ಮೀಸಲಾತಿ ಮರುಹಂಚಿಕೆ ಮಾಡಿದೆ. ಈ ಎರಡು ಪ್ರವರ್ಗದಲ್ಲಿ 2ಎ ಗೆ ಸಿಗುವ ಸೌಲಭ್ಯಗಳು ಹೊಸದಾಗಿ ಸೃಷ್ಟಿ ಮಾಡಿರುವ ಪ್ರವರ್ಗಕ್ಕೆ ನೀಡುವ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರವಾಗಿಲ್ಲ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ