ಬೆಂಗಳೂರು : ರಾಜ್ಯದ 5,728 ಗ್ರಾಮ ಪಂಚಾಯಿತಿಗಳ 82,616 ಸ್ಥಾನಗಳಿಗೆ ಫಲಿತಾಂಶ ಇಂದು ಪ್ರಕಟವಾಗುತ್ತಿದೆ. ಫಲಿತಾಂಶ ಭಾರೀ ಕೂತುಹಲ ಮೂಡಿಸುತ್ತಿದೆ. ಈವರೆಗೆ ಸಿಕ್ಕಿರುವ ಮಾಹಿತಿ ಪ್ರಕಾರ ಬಿಜೆಪಿ ಬೆಂಬಲಿತ 4752, ಕಾಂಗ್ರೆಸ್ ಬೆಂಬಲಿತ 2574 ಜೆಡಿಎಸ್ ಬೆಂಬಲಿತ 1343 , ಇತರರು 993 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಕಾರವಾರದ ಮುಡಿಗೇರಿ ಗ್ರಾ.ಪಂ ನಲ್ಲಿ 28 ವರ್ಷದ ಬಿ.ಇ ಪದವೀಧರೆ ಗೆಲುವು ಸಾಧಿಸಿದ್ದಾರೆ. ಹೊಸಪೇಟೆ ತಾಲ್ಲೂಕಿನ ಕಲ್ಲಳ್ಳಿ ಗ್ರಾ.ಪಂ ನ ರಾಜಾಪುರ ಕ್ಷೇತ್ರದಲ್ಲಿ 26 ವರ್ಷಗಳಿಂದ ಚುನಾವಣೆ ಕಂಡಿರಲಿಲ್ಲ. ಪ್ರತಿಬಾರಿ ಅಲ್ಲಿ ಅವಿರೋಧ ಆಯ್ಕೆ ನಡೆಯುತ್ತಿತ್ತು. ಲಿಂಗತ್ವ ಅಲ್ಪಸಂಖ್ಯಾತ ಮಹಿಳೆ ಸುಧಾ ಸ್ಪರ್ಧೆಯಿಂದಾಗಿ ಚುನಾವಣೆ ಏರ್ಪಟ್ಟಿತ್ತು. ಅಂತಿಮವಾಗಿ ಸುಧಾ ಗೆಲುವನ್ನು ಸಾಧಿಸಿದ್ದಾರೆ.
ಚಳ್ಳಕೆರೆ ತಾಲ್ಲೂಕಿನ ಪಗಡಲಬಂಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭ್ಯರ್ಥಿಯೊಬ್ಬರು ಮೀಸಲು ಕ್ಷೇತ್ರದಲ್ಲಿ ಸೋಲು ಕಂಡು ಸಾಮಾನ್ಯ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ವೃಂದವ್ವನಹಳ್ಳಿ ಗ್ರಾಮದ ಹಿಂದುಳಿದ ವರ್ಗದ “ಎ” ಮಹಿಳೆ ಮೀಸಲು ಕ್ಷೇತ್ರದಲ್ಲಿ ಗುರುಶಾಂತಮ್ಮ ಸೋಲು ಅನುಭವಿಸಿದ್ದರು. ಇವರು 323 ಮತಗಳನ್ನು ಪಡೆದಿದ್ದರು. ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಶಿವಮ್ಮ ಎಂಬುವರು 316 ಮತಗಳನ್ನು ಪಡೆದಿದ್ದರು. ಮೀಸಲು ಕ್ಷೇತ್ರದಲ್ಲಿ ಸೋಲು ಅನುಭವಿಸಿದ ಗುರುಶಾಂತಮ್ಮ ಅವರು ಸಾಮಾನ್ಯ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಣೆ ಮಾಡಿದರು. ಸಾಮಾನ್ಯ ಕ್ಷೇತ್ರದಲ್ಲಿ ಇವರಿಗೆ ಏಳು ಮತಗಳ ಅಂತರದಲ್ಲಿ ಗೆಲುವು ಸಿಕ್ಕಿತು.

ಚುನಾವಣೆ ನಡೆದ ನಂತರ ಹೃದಯಾಘಾತದಿಂದ ನಿಧನರಾಗಿದ್ದ ಖಾನಾಪುರ ತಾಲ್ಲೂಕಿನ ಕಕ್ಕೇರಿಯ ಸಿ.ಬಿ. ಅಂಬೋಜಿ (67) ಗೆಲುವು ಸಾಧಿಸಿದ್ದಾರೆ. ಅಲ್ಲಿ ಡಿ. 22ರಂದು ಮತದಾನ ನಡೆದಿತ್ತು. ಅವರು, ಡಿ. 27ರಂದು ನಿಧನರಾಗಿದ್ದರು. ಬುಧವಾರ ಫಲಿತಾಂಶ ಪ್ರಕಟವಾಗಿದ್ದು, ಅವರು 414 ಮತಗಳನ್ನು ಪಡೆದಿರುವುದು ತಿಳಿದುಬಂದಿದೆ.
ವಿರಾಜಪೇಟೆಯ ಪಾಲಿಬೆಟ್ಟ ಗ್ರಾಪಂ ಚುನಾವಣೆಗೆ ಜೈಲಿನಿಂದಲೇ ಸ್ಪರ್ಧಿಸಿದ್ದ ಗ್ರಾ.ಪಂ.ಯ ಎಮ್ಮೆಗುಂಡಿ ಕ್ಷೇತ್ರದಲ್ಲಿ ಪುಲಿಯಂಡ ಬೋಪಣ್ಣ ಗೆಲುವು ಸಾಧಿಸಿದ್ದಾರೆ. ಬೋಪಣ್ಣ ಸತತ ನಾಲ್ಕನೇ ಬಾರಿಗೆ ಜಯಗಳಿಸಿದ್ದಾರೆ. ಜಾಮೀನು ಸಿಗದ ಹಿನ್ನೆಲೆ ಜೈಲಿನಿಂದಲೇ ಚುನಾವಣೆಗೆ ಸ್ಪರ್ಧಿಸಿದ್ದರು. 61 ಮತಗಳ ಅಂತರದಿಂದ ಗೆಲುವಿನ ನಗೆಬೀರಿದ್ದಾರೆ. ಬೋಪಣ್ಣ ಕಳೆದ ಬಾರಿ ಪಂಚಾಯತಿ ಅಧ್ಯಕ್ಷರಾಗಿ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಿ ದೇಶದಲ್ಲಿ ಖ್ಯಾತಿಯನ್ನು ಪಡೆದಿದ್ದರು. ಜಾತಿನಿಂದನೆ ಆರೋಪದಲ್ಲಿ ಇತ್ತಿಚೆಗೆ ಅವರ ಮೇಲೆ ಪ್ರಕರಣ ದಾಖಲಾಗಿತ್ತು.