ಲಿಂಗ ಸಮಾನತೆಗೆ ಚ್ಯುತಿ ತರುವ ವ್ಯವಸ್ಥಿತ ತಂತ್ರ ಪಠ್ಯಪುಸ್ತಕದಲ್ಲಿ ಸೇರಿಸಲಾಗಿದೆ: ಜನವಾದಿ ಮಹಿಳಾ ಸಂಘಟನೆ

ಬೆಂಗಳೂರು: ರಾಜ್ಯದ ಈ ಸಾಲಿನ ಪಠ್ಯ ಪುಸ್ತಕಗಳ ಮರು ಪರಿಷ್ಕರಣೆಯಲ್ಲಿ ಅವಾಂತರಗಳು ಬಹಳಷ್ಟು ಗಂಭೀರವಾಗಿವೆ. ಮಹಿಳೆಯರ ಕುರಿತು ಅತ್ಯಂತ ಕೀಳು ಅಭಿರುಚಿ ಬೆಳೆಸುವ ರೀತಿಯಲ್ಲಿ ಪಠ್ಯದಲ್ಲಿ ಪಾಠಗಳಿರುವುದು ಇನ್ನೂ ಗಂಭೀರವಾದ ವಿಷಯ. ಶಾಲಾ ಹಂತದಿಂದಲೇ ಲಿಂಗ ಅಸಮಾನತೆಯನ್ನು ತೊಡೆದು ಹಾಕಿ ಸಹವರ್ತಿತನವನ್ನು ಬೋಧಿಸುವ ಪಠ್ಯ ಬೇಕೆಂದು ಮಹಿಳಾ ಮತ್ತು ಮಹಿಳಾ ಪರ ಸಂಘಟನೆಗಳು ಆಗ್ರಹವಾಗಿದೆ.

ಈ ಬಗ್ಗೆ ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ(ಎಐಎಡಬ್ಲ್ಯೂಎ) ರಾಜ್ಯ ಸಮಿತಿಯು ಲಿಂಗ ಅಸಮಾನತೆಯನ್ನು ತೊಡೆದು ಹಾಕುವಂತಹ ಪಠ್ಯಗಳನ್ನು ಅಳವಡಿಸುವ ಬದಲು ಹತ್ತನೇ ತರಗತಿಯ ಎಂದರೆ ಪ್ರೌಢಾವಸ್ಥೆಗೆ ಬರುತ್ತಿರುವ ಮಕ್ಕಳ ತಲೆಯಲ್ಲಿ ಮಹಿಳೆಯರ ಕುರಿತು ಕೀಳು ಭಾವನೆ ಹುಟ್ಟುವ ರೀತಿಯಲ್ಲಿ ಪಾಠವನ್ನು ಸೇರಿಸಲಾಗಿದೆ. ಇಂಥಹ ಪಠ್ಯವನ್ನು ಬೋಧಿಸುವುದು ಸಂವಿಧಾನ ವಿರೋಧಿ ಮತ್ತು ಮಹಿಳಾ ವಿರೋಧಿ. ಇದನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯು ಖಂಡಿಸುತ್ತದೆ ಎಂದಿದ್ದಾರೆ.

ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಅಧ್ಯಕ್ಷೆ ದೇವಿ ಅವರು, ಪಠ್ಯ ಪುಸ್ತಕ ಪುನರ್ ಪರಿಷ್ಕರಣೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ತಮ್ಮ ಪರಿಶೀಲನೆಯ ಟಿಪ್ಪಣಿಯಲ್ಲಿ ಭಾಷಾ ಪಠ್ಯವಿರುವುದು ಅತ್ಯುತ್ತಮವಾದ ಪ್ರಾತಿನಿಧಿಕವನ್ನು ಕೊಡುವುದಕ್ಕಾಗಿಯೇ ಹೊರತೂ ಸಾಮಾಜಿಕ ನ್ಯಾಯ, ಲಿಂಗ ಸಮಾನತೆ ಇತ್ಯಾದಿಗಳನ್ನು ತುರುಕುವುದಕ್ಕಾಗಿ ಅಲ್ಲ’ ಎಂದೂ ಬರೆದುಕೊಂಡಿದ್ದಾರೆ. ಲಿಂಗ ಸಮಾನತೆ ಮತ್ತು ಸಾಮಾಜಿಕ ನ್ಯಾಯಗಳು ಇನ್ನೂ ಗಗನ ಕುಸುಮವಾಗಿರುವಾಗ ಕಲಿಕೆಯ ಮೂಲಕ ಅವುಗಳ ಅರಿವು ಮೂಡಿಸುವ ಬದಲು ತಮ್ಮ ಮಹಿಳಾ ವಿರೋಧಿ, ಸಾಮಾಜಿಕ ನ್ಯಾಯದ ಕಲ್ಪನೆಯ ವಿರೋಧೀತನವನ್ನು ಮಕ್ಕಳಲ್ಲಿ ತುರುಕುವುದು ದೂರ್ತತನವಲ್ಲದೇ ಮತ್ತೇನು? ಹಾಗೆಯೇ, ತಾವೇಕೆ ಕೆಲವು ಪಠ್ಯಗಳನ್ನು ತೆಗೆದು ಹಾಕಿದ್ದೇವೆ ಎಂದು ತಮ್ಮ ಮೂಗಿನ ನೇರಕ್ಕೆ ಸಮರ್ಥಿಸಿಕೊಳ್ಳುತ್ತಾರೆ. ಅಲ್ಲಿ ಅವರು ಮೂರನೇ  ಪ್ಯಾರಾದ ಐದನೇ ಸಾಲಿನಲ್ಲಿ “ಭಾಷಾ ಪಠ್ಯಗಳನ್ನು ಅಧ್ಯಯನ ಮಾಡಿದ ವಿದ್ಯಾರ್ಥಿಯಲ್ಲಿ ಭಾಷೆಯ ಬಗ್ಗೆ ಅಭಿಮಾನ ಮೂಡಬೇಕು. ಆತನ ಭಾಷಾ ಪ್ರೌಢಿಮೆ ಗುಣಾತ್ಮಕವಾಗಿ ಹೆಚ್ಚಬೇಕು” ಎಂದು ಬರೆಯುತ್ತಾರೆ.

ಸಮಗ್ರ ವಿದ್ಯಾರ್ಥಿ ಸಮುದಾಯವನ್ನು ಸಂಬೋಧಿಸುವಾಗಲೂ ಅವರು ಆತನ ಎಂಬ ಪುಲ್ಲಿಂಗವಾಚಿ ಪದಗಳನ್ನೆ ಬಳಸುತ್ತಾರೆ. ಹತ್ತನೆ ತರಗತಿಯಲ್ಲಿ ಕೇವಲ ಗಂಡುಮಕ್ಕಳೇ ಓದುತ್ತಾರೆಯೇ? ಅಲ್ಲಿ ಅಧ್ಯಯನ ಮಾಡುತ್ತಿರುವ ಹೆಣ್ಣುಮಕ್ಕಳು ಇವರಿಗೆ ಕಾಣುತ್ತಿಲ್ಲವೆ? ಅಂದರೆ ಅವರ ಇಡೀ ಪಠ್ಯದಲ್ಲಿ ಹೆಣ್ಣುಮಕ್ಕಳು ಗೈರು ಹಾಜರಾಗುತ್ತಾರೆ. ಇಂಥಲ್ಲಿ ಲಿಂಗ ನಿರಪೇಕ್ಷಿತ ಭಾಷಾ ಬಳಕೆ ಇರಬೇಕು ಎಂಬ ಕನಿಷ್ಟ ಸೂಕ್ಷ್ಮತೆಯು ಇರದ ಇಂಥವರಿಂದ ತಯಾರಾದ  ಪಠ್ಯಗಳು ಸ್ತ್ರೀವಿರೋಧಿಯಲ್ಲದೆ ಮತ್ತೇನು ಇರಲು ಸಾಧ್ಯ? ಅಷ್ಟಕ್ಕೂ ಇದು ವೈದಿಕರ ಸನಾತನ ಸ್ತ್ರೀವಿರೋಧಿ ವ್ಯಾಧಿಯೇ ಆಗಿದೆ. ಈಗ ಭಾರತದ ಮಹಿಳೆಯರು ಎಚ್ಚೆತ್ತು ಕೊಂಡಿದ್ದಾರೆ. ಇಂಥ ಸ್ತ್ರೀ ವಿರೋಧಿ ದೃಷ್ಟಿ, ಸೃಷ್ಟಿಗಳನ್ನು ಅವರು ಧಿಕ್ಕರಿಸುತ್ತಾರೆ. ದೇಶದ ಬಹು ದೊಡ್ಡ ಸಂಘಟನೆಯಾಗಿರುವ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯು ಇಂಥಹ ಪಠ್ಯಗಳನ್ನು ಖಂಡಿಸುತ್ತದೆ ಎಂದು ಹೇಳಿದ್ದಾರೆ.

ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಗೌರಮ್ಮ ಅವರು, ರಾಷ್ರೀಯ ಶಿಕ್ಷಣ ನೀತಿಯು ಜನವಿರೋಧಿ ಮಾತ್ರವಲ್ಲದೆ ಮಹಿಳಾ ವಿರೋಧಿಯು ಆಗಿದೆ ಎಂಬುದನ್ನು ಹತ್ತನೆ ತರಗತಿಯ(ಸಿರಿ ಕನ್ನಡ)  ಪಠ್ಯಪುಸ್ತಕದ ಪರಿಷ್ಕರಣೆ ನೆಪದಲ್ಲಿ ತುರುಕಿದ ಪಾಠಗಳೇ ಸಾಕ್ಷೀಕರಿಸುತ್ತವೆ. ಬನ್ನಂಜೆ ಗೋವಿಂದಾಚಾರ್ಯರು ಬರೆದ ಲೇಖನದಲ್ಲಿ ಹೆಣ್ಣನ್ನು ಸಂಪತ್ತಿಗೆ ಸಮೀಕರಿಸಿ “ಈ ಸಿರಿಯೆಂಬ ಹೊಸ ಹೆಣ್ಣನ್ನು ಕಂಡು ಮರುಳಾಗದವರನ್ನು ನಾನು ಕಂಡಿಲ್ಲ. ಎಲ್ಲರೂ ಆಕೆಯತ್ತ ಆಕರ್ಷಿತರಾದವರೆ. ಎಲ್ಲರೂ ಆಕೆಯಿಂದ ಮೋಸ ಹೋಗುವವರೇ. ಯಾವುದೇ ಒಬ್ಬನನ್ನು ನಿರ್ವಂಚನೆಯಿಂದ ಪ್ರೇಮಿಸುವುದು ಆಕೆಯ ಜಾಯಮಾನಕ್ಕೆ ಸಲ್ಲ” ‘ಕೆಟ್ಟ ನಡತೆಯ ಇಂಥ ಸಿರಿಯೆಂಬ ಹೆಣ್ಣು… ಎಂದು ಬರೆಯುತ್ತಾರೆ. ಇದೆಂಥ ಆಘಾತಕಾರಿ.

ಸನಾತನಿಗಳು ಯಾವತ್ತೂ ಹೆಣ್ಣನ್ನು ವಸ್ತುರೂಪವಾಗಿ ಅದರಲ್ಲಿಯೂ ಭೋಗದ ವಸ್ತುವಾಗಿಯೇ ಅಸ್ತಿತ್ವಗೊಳಿಸಿದ್ದಾರೆ ಎಂಬುದಕ್ಕೆ ಇದಕ್ಕಿಂತ ಬೇರೆ ಪುರಾವೆ ಬೇಕೆ? ಸಂಪತ್ತಿನ ಅನರ್ಥವನ್ನು ಪ್ರಮಾಣೀಕರಿಸಲು ಹೆಣ್ಣೇ ಆಗಬೇಕೆ? ಬೇರೆ ಉದಾಹರಣೆಗಳು ಅವರಿಗೆ ಹೊಳೆಯಲು ಸಾಧ್ಯವಿಲ್ಲ. ಕಾರಣ ವೈದಿಕರ ಹಿಂದೂತ್ವವು ಪುರುಷ ಪ್ರಧಾನ ದೃಷ್ಟಿಯ ಉತ್ಪನ್ನ. ಅದರಲ್ಲಿ ಸಮತೆ-ಮಮತೆಗಳನ್ನು ಕಾಣಲು ಸಾಧ್ಯವಿಲ್ಲ. ಹತ್ತನೆ ತರಗತಿಯ ಮಕ್ಕಳ ತಲೆಯಲ್ಲಿ ಈ ರೀತಿಯ ಮಹಿಳಾ ವಿರೋಧಿ ಧೋರಣೆಗಳನ್ನು ಬಿತ್ತಿದರೆ ಅವರು ಮುಂದೆ ಅದೆಷ್ಟು ಸ್ತ್ರೀ ವಿರೋಧಿಯಾಗಬಲ್ಲರು ಎಂಬುದನ್ನು ಗಮನಿಸಬೇಕು. ಈಗಾಗಲೇ ಇರುವ ಹಿಂಸ್ರಕ ವಾತಾವರಣಕ್ಕೆ ಇನ್ನಷ್ಟು ಪೂರಕವಾದ ಪಠ್ಯವನ್ನು ಎಳೆ ಮನಸ್ಸುಗಳ ಒಳಗೆ ಬಿತ್ತಿ ತಮ್ಮ ಮನುವಾದೀ ಸಿದ್ಧಾಂತವನ್ನು ಇನ್ನಷ್ಟು ಸ್ಥಿರೀಕರಿಸುವ ರಾಜ್ಯ ಸರಕಾರದ ಈ ನಡೆಯನ್ನು ಇಡೀ ರಾಜ್ಯದ ಜನರು ಅದರಲ್ಲಿಯೂ ಮಹಿಳೆಯರು ಸಾರಾಸಗಟಾಗಿ ತಿರಸ್ಕರಿಸಬೇಕು.

ಸರಕಾರ ಯಾವುದೇ ಮರ್ಜಿ ಮುಲಾಜಿಲ್ಲದೇ ಬನ್ನಂಜೆ ಗೋವಿಂದಾಚಾರ್ಯರ ‘ಶುಕನಾಸನ ಉಪದೇಶ’ ಪಠ್ಯವನ್ನು ಕೈ ಬಿಡಬೇಕೆಂದು ಒತ್ತಾಯಿಸುತ್ತೇವೆ. ಅಲ್ಲದೆಯೇ ಪರಿಷ್ಕೃತ ಪಠ್ಯಗಳಲ್ಲಿ ಲಿಂಗವಾಚಕಗಳು ಸಂಪೂರ್ಣವಾಗಿ ಪುರುಷ ಸಂಬೋಧಿಯಾಗಿದ್ದು ಮರು ಪರಿಷ್ಕರಣ ಸಮಿತಿ ಅದೆಷ್ಟು ಲಿಂಗ ಅಸಂವೇದನಾಶೀಲವಾಗಿದೆ ಎಂಬುದನ್ನು ತೋರಿಸುತ್ತಿದೆ. ಇಡೀ ವಿಶ್ವದಲ್ಲಿ ಈ ತೆರನ ವಿಷಯಗಳಿಗೆ ಹೆಚ್ಚು ಗಮನ ಕೊಡುತ್ತಿರುವ ಹೊತ್ತಿನಲ್ಲಿ ಪುರುಷ ಪ್ರಧಾನ ಪಾಳೆಯಗಾರಿ ಮೌಲ್ಯಗಳೊಳಗೆ ಹೂತು ಹೋದ ಮನಸ್ಸುಗಳೇ ವಿಜ್ರಂಭಿಸುತ್ತಿರುವುದು ನಮ್ಮ ಈ ಕಾಲದ ದುರಂತವೆಂದು ನಾವು ಅಭಿಪ್ರಾಯ ಪಡುತ್ತೇವೆ ಎಂದು ಹೇಳಿದರು.

ಬನ್ನಂಜೆಯವರ ಈ ಪಠ್ಯವನ್ನು ಯಾವ ಮುಲಾಜೂ ಇಲ್ಲದೆ ಕೈ ಬಿಡಬೇಕು. ಹೆಣ್ಣನ್ನು ತುಚ್ಛೀಕರಿಸುವ ತತ್ವ, ಭಾಷೆಗಳೆಲ್ಲವನ್ನು ಕೈ ಬಿಡಬೇಕು. ಭಾರತದ ಸಂವಿಧಾನವು ಸರ್ವ ಸಮಾನತೆಯನ್ನು ಎತ್ತಿ ಹಿಡಿದಿದೆ. ಈ ಹಿಂದೆ ಇದ್ದ ಪುರುಷ ಪ್ರಧಾನ ಭಾಷಿಕ ವಿನ್ಯಾಸಗಳನ್ನು ಬದಲಿಸಬೇಕು. ಲಿಂಗ ನಿರಪೇಕ್ಷಿತ ಭಾಷಿಕ ಲಯಗಳನ್ನೆ ಪ್ರಜ್ಞಾಪೂರ್ವಕವಾಗಿ ಬಳಸಬೇಕು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯು ಆಗ್ರಹಿಸಿದೆ.

Donate Janashakthi Media

Leave a Reply

Your email address will not be published. Required fields are marked *