ಮೂಲ: ವಿ.ಶ್ರೀಧರ್
ಸಂಗ್ರಹಾನುವಾದ: ಶೃಂಶನಾ
ಭಾರೀ ವಿರೋಧದ ನಡುವೆಯೂ ಎಲ್‌ಐಸಿಯ ಶೇರು ಮಾರಾಟದ ಪ್ರಕ್ರಿಯೆ ಆರಂಭವಾಗಿದೆ. ಇದಕ್ಕೆ ಭಾರೀ ಸ್ಪಂದನ ಸಿಕ್ಕಿದೆ, ಅತ್ಯಂತ ಯಶಸ್ವಿಯಾಗಿದೆ ಎಂದು ಸರಕಾರೀ ವಕ್ತಾರರು ಹೇಳುತ್ತಿದ್ದಾರೆ. ಇನ್ನೂ ಮುಂದೆ ಹೋಗಿ ಇದನ್ನು ‘ಆತ್ಮನಿರ್ಭರ ಭಾರತ’ದ ಒಂದು ಉದಾಹರಣೆಯಾಗಿ ಪರಿಗಣಿಸಬಹುದು ಎಂದೂ ಹೇಳಿದ್ದಾರೆ. ಆದರೆ ವಾಸ್ತವವಾಗಿ ಇದು ‘ಯಶಸ್ವಿ’ಯಾಗಿರುವುದು ಎಲ್‌ಐಸಿ ಶೇರುಗಳಿಗೆ ಅತೀ ಕಡಿಮೆ ಬೆಲೆ ನಿಗದಿ ಮಾಡಿದ್ದರಿಂದ. ಈ ನಿಗದಿ ಪ್ರಕ್ರಿಯೆಯೇ ಒಂದು ಬೃಹತ್ ಹಗರಣವಾಗಿ ಕಾಣುತ್ತದೆ ಎನ್ನುತ್ತಾರೆ ಆರ್ಥಿಕ ವಿಷಯಗಳ ವಿಶ್ಲೇಷಕರಾಗಿರುವ ವಿ.ಶ್ರೀಧರ್. ಬಹುಶಃ, ಮೋದಿ ಸರ್ಕಾರವು ಈ ಐಪಿಒದ ಪ್ರಯೋಜನ ಪಡೆದುಕೊಂಡು ನಿರ್ಗಮಿಸುವ ಸಟ್ಟಾಕೋರ ತಿಮಿಂಗಿಲಗಳು ಗಳಿಸುವ ಅಗಾಧ ಲಾಭದ ಲೆಕ್ಕಾಚಾರ ಮಾಡುತ್ತಿದೆಯಷ್ಟೇ. ಅವರ ಈ ಅಗಾಧ ಲಾಭ ಹೇಗೆ ನೇರವಾಗಿ ಸರ್ಕಾರಕ್ಕೆ ಮತ್ತು ಕೋಟ್ಯಂತರ ಪಾಲಿಸಿದಾರರಿಗೆ ನಷ್ಟ ಮಾಡುವ ಮೂಲಕವೇ ಬರುವಂತದ್ದು ಎಂಬುದನ್ನು ನ್ಯೂಸ್‌ಕ್ಲಿಕ್’ನಲ್ಲಿ ಪ್ರಕಟವಾಗಿರುವ ಈ ಲೇಖನ ವಿಶ್ಲೇಷಿಸಿದೆ.
ನರೇಂದ್ರ ಮೋದಿ ಸರ್ಕಾರವು ಅತ್ಯಂತ ತ್ವರಿತ ವೇಗದಲ್ಲಿ ಎಲ್‌ಐಸಿಯ ಆರಂಭಿಕ ಸಾರ್ವಜನಿಕ ನೀಡಿಕೆ(ಐಪಿಒ) ಆರಂಭಿಸಿಯೇ ಬಿಟ್ಟಿದೆ. ಜಾಗತಿಕ ಶೇರು ಹೂಡಿಕೆದಾರರು ಐಪಿಒ ಗೆ ಅತ್ಯಂತ ಕಡಿತಗೊಂಡ ಬೆಲೆ ನಿಗದಿ ಪಡಿಸುವಂತೆ ಹೇಳಿದ್ದಕ್ಕೆ ಒಪ್ಪಿಕೊಳ್ಳುವ ಮೂಲಕ ಮೋದಿ ಸರ್ಕಾರವು ಇವರ ತಾಳಕ್ಕೆ ಮೇಳ ಹಾಕಿದೆ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ದಿಗ್ಭ್ರಮೆಗೊಳಿಸುವ ರೀತಿಯಲ್ಲಿ ಕಡೆಗಣಿಸಿದೆ. ಕೇವಲ ಎಲ್‌ಐಸಿ ಮಾತ್ರವಲ್ಲ, ಭಾರತದಲ್ಲಿ ಜೀವ ವಿಮೆಯ ಹೊಸ ಸಂಸ್ಕೃತಿ ಬೆಳೆಸಿದ ಕೋಟ್ಯಂತರ ಪಾಲಿಸಿದಾರರ ಹೇಯಕರ ಕಡೆಗಣನೆ ಮತ್ತು ಬೆರಳೆಣಿಕೆಯ ಜಾಗತಿಕ ಶೇರು ಹೂಡಿಕೆದಾರರ ಹಿತಾಸಕ್ತಿಗೆ ಪೂರಕವಾಗಿ ವರ್ತಿಸಿರುವುದು, ಎಲ್‌ಐಸಿ ಐಪಿಒ ಪ್ರಕ್ರಿಯೆ ಒಂದು ಬೃಹದಾಕಾರದ, ಪ್ರಾಯಶ: ಭಾರತದಲ್ಲಿನ ಒಟ್ಟು ಖಾಸಗೀಕರಣದ ಚರಿತ್ರೆಯಲ್ಲಿಯೇ ದೊಡ್ಡದಾದ, ಹಗರಣದ ಎಲ್ಲ ಅಂಶಗಳಿವೆ ಎಂಬ ಅನುಮಾನವನ್ನು ಗಟ್ಟಿಗೊಳಿಸಿದೆ.
ಕೇಂದ್ರ ವಿತ್ತ ಸಚಿವಾಲಯದ ಒತ್ತಡದ ಮೇರೆಗೆ ಏಪ್ರಿಲ್ 23, 2022 ರಂದು ಸಭೆ ಸೇರಿದ ಎಲ್‌ಐಸಿ ಆಡಳಿತ ಮಂಡಳಿ ಉದ್ದೇಶಿತ ಬಂಡವಾಳ ಹಿಂತೆಗೆತದ ಪ್ರಮಾಣವನ್ನು ಶೇ. 5 ರಿಂದ ಶೇ. 3.5 ಕ್ಕೆ ಇಳಿಸಲು ನಿರ್ಧರಿಸಿತು. ಏಪ್ರಿಲ್ 26 ರಂದು ಔಪಚಾರಿಕವಾಗಿ ಸಭೆ ಸೇರಿದ ಮಂಡಳಿ, ಈ ಐಪಿಒ ದ ಬಿಡುಗಡೆ ದಿನಾಂಕ ಹಾಗೂ ಪಾಲಿಸಿದಾರರು ಮತ್ತು ನೌಕರರಿಗೆ ನೀಡಬಹುದಾದ ಕಡಿತ ಮತ್ತಿತರ ವಿವರಗಳನ್ನು ನಿರ್ಧರಿಸಿತು. ಏಪ್ರಿಲ್ 27 ರಂದು ಭಾರತದ ಸೆಕ್ಯುರಿಟಿಗಳ ವಿನಿಮಯ ಮಂಡಳಿ(ಸೆಬಿ)ಗೆ ಎಲ್‌ಐಸಿಯು ತನ್ನ ಔಪಚಾರಿಕ ‘ಪರಿಚಯ ಪತ್ರ(ಪ್ರಾಸ್ಪೆಕ್ಟಸ್)ವನ್ನು ನೀಡಿತು. ನಂತರದಲ್ಲಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ ವಿವರಗಳನ್ನು ನೀಡಿತು.
ಹಲವು ಅನಿರೀಕ್ಷಿತ ಸಂದರ್ಭಗಳು, ಮುಖ್ಯವಾಗಿ ಉಕ್ರೇನ್ ನಲ್ಲಿನ ಯುದ್ಧದಿಂದಾಗಿ ಜಾಗತಿಕ ಮಾರುಕಟ್ಟೆಗಳಲ್ಲಿ ಉಂಟಾದ ತಲ್ಲಣದಿಂದಾಗಿ ಹಿಂಜರಿದ ಸರ್ಕಾರಕ್ಕೆ ಮೇ 12 ರ ದಿನಾಂಕದೊಳಗೆ ಐಪಿಒ ಪ್ರಕ್ರಿಯೆಯನ್ನು ಆರಂಭಿಸಲೇಬೇಕು ಎನ್ನುವ ಸಮಯ ಪರಿಮಿತಿಗೆ ಒಳಪಡಲು ವೇಗವಾಗಿ ಸಾಗಬೇಕಿತ್ತು. ಫೆಬ್ರವರಿಯಲ್ಲಿ ‘ಸೆಬಿ’ಗೆ ‘ಕರಡು ಪ್ರಸ್ತಾಪ ಪರಿಚಯ ಪತ್ರ’ (ಡ್ರಾಫ್ಟ್ ರೆಡ್ ಹರ‍್ರಿಂಗ್ ಪ್ರಾಸ್ಪೆಕ್ಟಸ್-ಡಿಆರ್‌ಹೆಚ್‌ಪಿ) ಅನ್ನು ಸಲ್ಲಿಸುವ ಮೂಲಕ ಎಲ್‌ಐಸಿ ಯಲ್ಲಿನ ತನ್ನ ಒಡೆತನವನ್ನು ಸ್ವಲ್ಪ ಪ್ರಮಾಣದಲ್ಲಿ ಹಿಂಪಡೆಯುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ ಸರ್ಕಾರವು ಮೇ 12ರ ವರೆಗೂ ಈ ವಿವಾದಾತ್ಮಕ ಐಪಿಒ ಹೊರಡಿಸಲು ಮುಂದಾಗಲು ಸಮಯವಿತ್ತು. ಒಂದು ವೇಳೆ ಈ ದಿನಾಂಕ ದಾಟಿದ್ದರೆ, ಸರ್ಕಾರವು ಪರಿಷ್ಕೃತ ಸಾಧನೆಗಳೊಂದಿಗೆ ಹೊಸದಾಗಿ ಪುನಃ ಸಲ್ಲಿಸಬೇಕಿತ್ತು. ಈ ಸನ್ನಿವೇಶದಲ್ಲಿ ಎಲ್‌ಐಸಿ ಯಲ್ಲಿ ಬಂಡವಾಳ ಹಿಂತೆಗೆತ ಮಾಡಲು ಮುಂದಾದ ಈ ಹುಚ್ಚು ವೇಗವು ಸಮರ್ಥನೀಯವೇ ಎನ್ನುವ ಪ್ರಮುಖ ಪ್ರಶ್ನೆ ಈಗ ಮೂಡಿದೆ.
ಹೆಸರಿಲ್ಲದ ಕೇಂದ್ರ ಸಚಿವಾಲಯದ ಕೆಲವು ಅನಾಮಧೇಯ ಅಧಿಕಾರಿಗಳನ್ನು ಉಲ್ಲೇಖಿಸಿ ಬಂದಿರುವ ಮಾಧ್ಯಮ ವರದಿಗಳು ಸರ್ಕಾರವು ಐಪಿಒ ಗ್ರಾತ್ರವನ್ನು ಸುಮಾರು ರೂ. 70,000-ರೂ.75,000 ಕೋಟಿಯಿಂದ ಸುಮಾರು ರೂ. 21,000 ಕೋಟಿಗೆ ಇಳಿಸಬಹುದು ಎಂದು ಕೆಲ ದಿನಗಳಿಂದ ಸೂಚಿಸುತ್ತಿದ್ದವು. ಇದನ್ನು ಎರಡು ರೀತಿಯಲ್ಲಿ ಕಡಿತ ಮಾಡಬಹುದು. ಕಡಿಮೆ ಸಂಖ್ಯೆಯ ಶೇರುಗಳನ್ನು ಬಿಡುಗಡೆ ಮೂಲಕ, ಇಲ್ಲವೇ ಪ್ರತಿಯೊಂದು ಶೇರಿನ ಬೆಲೆಯನ್ನೂ ಇಳಿಸುವ ಮೂಲಕ. ಸರ್ಕಾರವು ಬಿಡುಗಡೆಗೊಳಿಸುವ ಶೇರುಗಳ ಸಂಖ್ಯೆಯಲ್ಲಿ ಶೇ. 30 ಕಡಿಮೆ ಮಾಡುವ ಮೂಲಕ ಸಂಖ್ಯಾ ಪರಿಣಾಮ ಮೂಡುತ್ತದೆ. ಮೊದಲ ಕರಡು ಪ್ರಸ್ತಾಪ (ಡಿಆರ್‌ಹೆಚ್‌ಪಿ) ದ ಪ್ರಕಾರ ಸರ್ಕಾರವು 31.625 ಕೋಟಿ ಶೇರುಗಳನ್ನು, ಅಂದರೆ ಎಲ್‌ಐಸಿಯ ಈಕ್ವಿಟಿ ಮೂಲವಾದ 632.50 ಕೋಟಿ ಶೇರುಗಳ ಶೇ.5 ಪ್ರಮಾಣವನ್ನು ಬಿಡುಗಡೆ ಮಾಡಲು ಯೋಜಿಸಿತ್ತು. ಈಗ ಬಿಡುಗಡೆ ಮಾಡಿರುವ ಶೇರುಗಳ ಸಂಖ್ಯೆಯನ್ನು 22.1375 ಕೋಟಿಗೆ ಇಳಿಸಲಾಗಿದ್ದು, ಇದು ಎಲ್‌ಐಸಿಯ ಈಕ್ವಿಟಿ ಮೂಲದ ಶೇ. 3.5 ಪ್ರಮಾಣವಾಗಿದೆ. ಭಾರತದ ಅತ್ಯಂತ ಯಶಸ್ವಿ ವಿಮಾ ಸಂಸ್ಥೆಯಾದ ಎಲ್‌ಐಸಿಯನ್ನು ಖಾಸಗೀಕರಣಗೊಳಿಸುವ ತರ್ಕವನ್ನೇ ಪ್ರಶ್ನಿಸದಿರುವವರಿಗೆ ಈ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಅಸಹಜತೆ ಕಾಣುವುದಿಲ್ಲ.
ಕುತಂತ್ರ ಬಯಲು
ಈ “ಬೆಲೆ ಪರಿಣಾಮ”ದಲ್ಲಿಯೇ ಹಣಕಾಸು ಮಂತ್ರಿಗಳ ಕುತಂತ್ರವು ಪ್ರಖರವಾಗಿ ಬಯಲಿಗೆ ಬಂದಿದೆ. ‘ಮಿಲಿಮನ್ ಅಡ್ವೈಸರ್ಸ್’ ಅಂದಾಜು ಮಾಡಿ, ಡಿಆರ್‌ಹೆಚ್‌ಪಿ ತಿಳಿಸಿರುವಂತೆ ಎಲ್‌ಐಸಿಯ ‘ಅಂತರ್ಗತ ಮೌಲ್ಯʼ (Inherent value)ದ ಇತ್ತೀಚಿನ ಅಂದಾಜು ರೂ. 5.40 ಲಕ್ಷ ಕೋಟಿ. ಅಂದರೆ ಪ್ರತಿ ಒಂದು ಶೇರಿನ ಮೂಲ ಬೆಲೆ ರೂ. 853 ರಷ್ಟಿರುತ್ತದೆ.
ಕೇವಲ ಎರಡು ತಿಂಗಳ ಹಿಂದೆ, ಎಲ್‌ಐಸಿಯ ಶೇರುಗಳ ನೈಜ ಮೌಲ್ಯವನ್ನು 2.5 ರಿಂದ 3 ರ ವರೆಗಿನ ಗುಣಾಕಾರಾಂಶವನ್ನು ಅಳವಡಿಸಿಕೊಂಡು ಅಳೆಯಬಹುದು ಎಂಬ ನಿರೀಕ್ಷೆ ಇತ್ತು. ಇದರ ಪ್ರಕಾರ ಪ್ರತಿ ಒಂದು ಶೇರಿನ ಬೆಲೆ ರೂ. 2133 ರಿಂದ ರೂ. 2559 ರ ನಡುವೆ ಇರಬೇಕಿತ್ತು. ಶೇ. 5 ರ ಪ್ರಮಾಣದ ಬಂಡವಾಳ ಹಿಂತೆಗೆತದಿಂದ ಸರ್ಕಾರಕ್ಕೆ ಅಂದಾಜು ರೂ. 67,456 ಕೋಟಿಯಿಂದ ರೂ. 80,928 ಕೋಟಿ ಬರುತ್ತಿತ್ತು. ಆದರೆ “ಪ್ರತಿಕೂಲ ಮಾರುಕಟ್ಟೆ” ಸ್ಥಿತಿಯನ್ನು ಉಲ್ಲೇಖಿಸಿ ಸರ್ಕಾರವನ್ನು ಅಂತರರಾಷ್ಟ್ರೀಯ ಹೂಡಿಕೆದಾರರು ನಿರಂತರವಾಗಿ ಒತ್ತಾಯಿಸುತ್ತಿದ್ದು, ಸರ್ಕಾರವು ಇದಕ್ಕೆ ಮಣಿದು ಈಗ ಗುಣಾಕಾರಾಂಶವನ್ನು ಗಣನೀಯವಾಗಿ ಇಳಿಸಿ, 1.1 ಕ್ಕೆ ತಂದಿದೆ. ಎಲ್‌ಐಸಿಯ ಅಂತರ್ಗತ ಮೌಲ್ಯವನ್ನೂ ಅತ್ಯಂತ ಅಸಮರ್ಪಕವಾಗಿ ನಿರ್ಧರಿಸಲಾಗಿದೆ. ಭಾರತದ ಅತ್ಯಂತ ದೊಡ್ಡ ಜೀವ ವಿಮಾ ಸಂಸ್ಥೆ ಮತ್ತು ವಿಶ್ವದ ಅತ್ಯಂತ ದೊಡ್ಡ ಸಂಸ್ಥೆಗಳಲ್ಲಿ ಒಂದಾದ ಎಲ್‌ಐಸಿಯಂತಹ ಸಂಸ್ಥೆಗೆ ಕಡಿಮೆ ಪ್ರಮಾಣದ ಗುಣಾಕಾರದ ಅಂಶವನ್ನು ನಿಗದಿ ಪಡಿಸಿರುವುದಕ್ಕೆ ಯಾವುದೇ ಸಮರ್ಥನೆ ಇಲ್ಲ. ಅತ್ಯಂತ ಸಣ್ಣ ಖಾಸಗಿ ಜೀವ ವಿಮಾ ಸಂಸ್ಥೆಗಳು ತಮ್ಮ ಅಂತರ್ಗತ ಮಟ್ಟಕ್ಕೆ 2.5 ರಿಂದ 3 ಪಟ್ಟಿನಷ್ಟು ಗುಣಾಕಾರಾಂಶವನ್ನು ಬಳಸಿಕೊಂಡಿವೆ. ಎಲ್‌ಐಸಿಗೆ ನಿಜವಾಗಲೂ ಇನ್ನಷ್ಟು ಹೆಚ್ಚಿನ ಗುಣಾಕಾರಾಂಶ ನೀಡಲೇಬೇಕಿತ್ತು.
1.1 ಪ್ರಮಾಣದ ಗುಣಾಕಾರಾಂಶವನ್ನು ಬಳಸಿದರೆ ಪ್ರತಿ ಒಂದು ಶೇರಿನ ಬೆಲೆ ರೂ. 938 ಆಗುತ್ತದೆ. ಹಿಂದಿನ ಮೌಲ್ಯಮಾಪನದ ಕೆಳಹಂತದ ಬ್ಯಾಂಡ್‌ಗೆ ಹೋಲಿಸಿದರೆ, ಇದು ಶೇ. 44 ರಷ್ಟು ಕಡಿತಗೊಂಡಿದೆ. ಮತ್ತು ಮೇಲ್ಮಟ್ಟದ ಬ್ಯಾಂಡ್‌ಗೆ ಹೋಲಿಸಿದರೆ ಶೇ. 63 ರಷ್ಟು ರಿಯಾಯಿತಿ ನೀಡಿದಂತಾಗಿದೆ.
ಇದನ್ನು ಗಮನಿಸಿ: ಫೆಬ್ರವರಿಯಲ್ಲಿ ಸಮರ್ಥಿಸಿಕೊಳ್ಳಲಾಗಿದ್ದ 2.5 ಮತ್ತು 3 ಗುಣಾಕಾರಾಂಶವನ್ನು ಬಳಸಿದ್ದರೆ ಸರ್ಕಾರಕ್ಕೆ ರೂ. 47,219 ಕೋಟಿ ಮತ್ತು ರೂ.56,650 ಕೋಟಿ ಬರುತ್ತಿತ್ತು. ಈಗ ಹೊರಡಿಸಲಾಗಿರುವ ಐಪಿಒ ಮೂಲಕ ಸರ್ಕಾರಕ್ಕೆ ಬರುತ್ತಿರುವುದು ಅಂದಾಜು ರೂ. 20,765 ಕೋಟಿ ಮಾತ್ರ. ಖಾಸಗೀಕರಣದ ಹೆಡ್ಡತನದ ಪ್ರಶ್ನೆಯನ್ನು ತಕ್ಷಣಕ್ಕೆ ಬದಿಗಿರಿಸಿ ನೋಡಿದರೂ ಕೂಡ, ಇದರಿಂದ ಸರ್ಕಾರಕ್ಕೆ ಆಗಿರುವ ನಷ್ಟ ಅಂದಾಜು ರೂ. 26,443 ರಿಂದ ರೂ. 35,885 ಕೋಟಿ.
ಹೀಗಿರುವಾಗ, ಎಲ್‌ಐಸಿ ಯಂತಹ ಪ್ರಧಾನ ಸಂಸ್ಥೆಯ ಐಪಿಒ ಮೌಲ್ಯ ಮಾಪನ ಪ್ರಕ್ರಿಯೆಯನ್ನು ಒಂದು ದೈತ್ಯಾಕಾರದ ಹಗರಣ ಎಂದಲ್ಲದೆ ಬೇರೇನು ಹೇಳಬೇಕು?
ʻಮೌಲ್ಯಮಾಪನʼವೆಂಬ ಆಟದಲ್ಲಿ
ಎಲ್‌ಐಸಿಯ ‘ಹುದುಗಿರುವ ಮೌಲ್ಯ’ (ಎಂಬೆಡ್ಡೆಡ್ ವ್ಯಾಲ್ಯು-ಇ.ವಿ.)ದ ಮಾಪನದಲ್ಲಿ ಕೂಡ ಅಂದಾಜು ಮಾಡಿರುವ ಮೂಲ ಬೆಲೆಯೇ ಎಲ್‌ಐಸಿಯ ನೈಜ ಮೌಲ್ಯವನ್ನು ಬಹಳ ಕಡಿಮೆ ಅಂದಾಜು ಮಾಡಿದೆ.
‘ಹುದುಗಿರುವ ಮೌಲ್ಯ’(ಇ.ವಿ.)ಎಂಬ ಪರಿಕಲ್ಪನೆಯಲ್ಲಿ ವಿಮಾ ನಿಯಂತ್ರಣ ಅಭಿವೃದ್ಧಿ ಪ್ರಾಧಿಕಾರದ ಅನುಮತಿಯೊಂದಿಗೆ ಕೈಗೊಂಡ ಈ ಮೌಲ್ಯ ಮಾಪನದ ಕಾರ್ಯದಿಂದಲೇ ಎಲ್‌ಐಸಿಯ ಮೌಲ್ಯ ಕೆಳಗಿಳಿದಿರುವುದು ಕಾಣುತ್ತದೆ. ಈ ಇ.ವಿ.ಯೇ ಅಸಮರ್ಪಕವಾಗಿದ್ದು ಎಲ್‌ಐಸಿ ಯಂತಹ ವಿಶಿಷ್ಟ ಹಣಕಾಸು ಸಂಸ್ಥೆಯ ಮೌಲ್ಯ ಅಳೆಯುವಲ್ಲಿ ವಿಫಲವಾಗಿದೆ. ಜಾಗತಿಕ ಹಣಕಾಸು ಬಿಕ್ಕಟ್ಟು ಪ್ರಾರಂಭವಾದ ನಂತರದ ಅವಧಿಯಲ್ಲಿ ಜೀವ ವಿಮಾ ಸಂಸ್ಥೆಗಳ ಇ.ವಿ. ಕಂಡು ಹಿಡಿಯುವ ಪರಿಕಲ್ಪನೆ ಪ್ರಾರಂಭವಾಗಿದ್ದು ಎನ್ನುವುದನ್ನು ಮನಗಾಣಬೇಕು.
ವಿಮಾ ವಹಿವಾಟನ್ನು ಕೊಳ್ಳುವವರಿಗೆ ತಾವು ಕೊಳ್ಳುವ ಜೀವ ವಿಮಾ ಸಂಸ್ಥೆಯ ಅಂತಸ್ಸತ್ವದ ಬೆಲೆಯೆಷ್ಟು ಎಂಬುದನ್ನು ಕಂಡು ಹಿಡಿಯುವ ಪ್ರಯತ್ನವನ್ನು ಈ ‘ಹುದುಗಿರುವ ಮೌಲ್ಯ’ ಮಾಡುತ್ತದೆ. ಇದೊಂದು ಸಂಕುಚಿತ ಆಧಾರದಲ್ಲಿ ನಿರ್ಧಾರವಾಗುವ ಮೌಲ್ಯ.
ವಾಸ್ತವವಾಗಿ, ಮತ್ತೊಂದು ಸಂದರ್ಭದಲ್ಲಿ ಮೌಲ್ಯಮಾಪನದ ಕುರಿತು ಮಾತನಾಡುತ್ತಾ, “ಮೌಲ್ಯಮಾಪನ ಗುರು” ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿರುವ ನ್ಯೂಯಾರ್ಕ್‌ನ ಸ್ಟರ್ನ್ ಸ್ಕೂಲ್ ಆಫ್ ಬ್ಯುಸಿನೆಸ್‌ನ ಹಣಕಾಸು ಪ್ರಾಧ್ಯಾಪಕ ಅಶ್ವಥ್ ದಾಮೋದರನ್, ಯಾವುದೇ ಮೌಲ್ಯಮಾಪನವು ಮೌಲ್ಯಮಾಪಕನ ಪಕ್ಷಪಾತವನ್ನು ಪ್ರತಿಬಿಂಬಿಸುವ ಆಧಾರಗಳ ಮೇಲೆ ಅವಲಂಬಿತವಾಗಿದೆ ಎಂದು ಪದೇ ಪದೇ ಒತ್ತಿಹೇಳಿದ್ದಾರೆ.
ಇದಲ್ಲದೆ, ಎರಡು ಜೆಕ್ ವಿದ್ವಾಂಸರ ಇತ್ತೀಚಿನ ಲೇಖನವು ಮೌಲ್ಯಮಾಪನಗಳನ್ನು ನಿರ್ಧರಿಸಲು ಈ ‘ಇ.ವಿ.’ ಮೇಲೆ ಅತಿಯಾದ ಅವಲಂಬನೆಯು ಅಪಾಯಕಾರಿ ಎಂದು ತೀರ್ಮಾನಿಸಿದೆ.
ಬದಲಾಗಿ, ವಿಮಾ ವ್ಯವಹಾರದ ಮೌಲ್ಯದ ಉತ್ತಮ ಅಂದಾಜನ್ನು ತಲುಪಲು ‘ಇ.ವಿ.’ ಜೊತೆಗೆ ಬೇರೆ ವಿಧಾನವನ್ನು ಬಳಸಬೇಕೆಂದು ಅವರು ಸೂಚಿಸುತ್ತಾರೆ.
ಎಲ್‌ಐಸಿಯ ಸಂದರ್ಭದಲ್ಲಿ ‘ಇ.ವಿ.’ ಲೆಕ್ಕಾಚಾರದಿಂದ ಮರೆಯಾದ ಅತ್ಯಂತ ಗಮನಾರ್ಹ ಅಂಶವೆಂದರೆ ಮಿಲಿಮನ್ ಎಲ್‌ಐಸಿಯ ಸ್ವಾಧೀನದಲ್ಲಿರುವ ಆಸ್ತಿಗಳ ಮೌಲ್ಯವನ್ನು ಸಂಪೂರ್ಣವಾಗಿ ತೆಗೆದುಹಾಕಿರುವುದು.
ಗಮನಾರ್ಹ ಲೋಪ
ಎಲ್ಲಾ ಭಾರತೀಯ ಮಹಾನಗರಗಳು ಮತ್ತು ದೊಡ್ಡ ನಗರಗಳಲ್ಲಿ ಮಾತ್ರವಲ್ಲದೆ ದೇಶದ ಉದ್ದಗಲದಲ್ಲಿ ಅವಿಭಾಜ್ಯ ಆಸ್ತಿಗಳನ್ನು ಹೊಂದಿರುವ ಎಲ್‌ಐಸಿ ಬಹುಶಃ ಭಾರತದ ಅತಿದೊಡ್ಡ ರಿಯಾಲ್ಟರ್ ಆಗಿದೆ ಎಂಬ ಅಂಶವನ್ನು ಗಮನಿಸಿದರೆ ಇದು ಗಮನಾರ್ಹ ಲೋಪವಾಗಿದೆ.
ಅದರ ರಿಯಲ್ ಎಸ್ಟೇಟ್ ಆಸ್ತಿಗಳ ಮೌಲ್ಯ ಏನು ಎಂಬುದರ ಬಗ್ಗೆ ಯಾವುದೇ ವಿಶ್ವಾಸಾರ್ಹ ಅಂದಾಜುಗಳಿಲ್ಲ, ಆದರೆ ಕೆಲವರು ಮಿಲಿಮನ್ ಅಂದಾಜು ಮಾಡಿದ ‘ಇ.ವಿ.’ಗಿಂತ ಹಲವಾರು ಲಕ್ಷ ಕೋಟಿ ರೂಪಾಯಿ ಹೆಚ್ಚಿನ ಮೌಲ್ಯ ಇರಬಹುದು ಎಂದು ಅಂದಾಜು ಮಾಡಿದ್ದಾರೆ. ಎಲ್‌ಐಸಿ ಯು ಅಗತ್ಯ ವಿಲ್ಲದ್ದರಿಂದ ಸ್ವತಃ ಈ ಸ್ವತ್ತುಗಳ ಮೌಲ್ಯದ ಅಂದಾಜನ್ನು ಎಂದಿಗೂ ಮಾಡಿಲ್ಲ.
ಆದರೆ ಖಾಸಗಿ ಸಂಸ್ಥೆಗಳ ಪರವಾಗಿ ಸರ್ಕಾರಿ ಪಾಲನ್ನು ಹಿಂಪಡೆಯುವುದರಿಂದ ಅದರ ಹೊಸ ಮಾಲೀಕರಾಗುವವರು ಈಗ ಎಲ್‌ಐಸಿಯ ಸ್ವಾಧೀನದಲ್ಲಿರುವ ಆಸ್ತಿಗಳ ಮೇಲೆ ಹಕ್ಕು ಹೊಂದುತ್ತಾರೆ ಮತ್ತು ಈ ಕಡಿಮೆ ಮೌಲ್ಯಮಾಪನವು ಈ ಸ್ವತ್ತುಗಳನ್ನು ಹೊಂದಲು ಯಾವುದೇ ಪಾತ್ರವನ್ನು ವಹಿಸದ ಹೊಸ ಮಾಲೀಕರಿಗೆ ನೇರವಾಗಿ ಪ್ರಯೋಜನವನ್ನು ನೀಡುತ್ತದೆ ಎಂಬುದನ್ನು ಗಮನಿಸಬೇಕು.
ಮೇಲೆ ಹೇಳಿದ ಡಿಆರ್‌ಹೆಚ್‌ಪಿ ಯಿಂದ ಹೊರ ಬಂದಿರುವ ಅತ್ಯಂತ ಸ್ಪಷ್ಟವಾದ ಸತ್ಯವೆಂದರೆ ಅಸ್ತಿತ್ವದಲ್ಲಿರುವ ಲಕ್ಷಾಂತರ ಪಾಲಿಸಿದಾರರನ್ನು ವಶಪಡಿಸಿಕೊಂಡಿರುವ ವಿಧಾನ. ವಾಸ್ತವವಾಗಿ, ಎಲ್‌ಐಸಿ ಕಾಯಿದೆಗೆ ಮಾಡಿದ ಬದಲಾವಣೆ ಗಳಿಂದಾಗಿ ಎಲ್‌ಐಸಿ ಯ ‘ಇ.ವಿ.’ ಮಾರ್ಚ್ 2021 ರಲ್ಲಿ ರೂ.0.96 ಲಕ್ಷ ಕೋಟಿ ಇದ್ದದ್ದು ಸೆಪ್ಟೆಂಬರ್ 2021 ರಲ್ಲಿ ರೂ.5.40 ಲಕ್ಷ ಕೋಟಿ (ಆರು ತಿಂಗಳೊಳಗೆ)ಗೆ ಗಣನೀಯವಾಗಿ ಹೆಚ್ಚಿದೆ.
ಈ ಬದಲಾವಣೆಗಳು ಒಂದೇ ಹೊಡೆತದಲ್ಲಿ, ಬೋನಸ್ ಪಡೆಯಲು ಅರ್ಹವಾಗುವ ಪಾಲಿಸಿಗಳನ್ನು ಹೊಂದಿರುವವರನ್ನು ವಂಚಿಸುತ್ತದೆ. ಈ ಮೊದಲು ಇವರು ಬೋನಸ್ ಗೆ ಅರ್ಹವಾಗದ ಪಾಲಿಸಿಗಳಿಗೆ ಸಂಬಂಧಿಸಿದ ರಿಸ್ಕ್ ನಲ್ಲಿ ಭಾಗವಹಿಸುವುದರಿಂದ ಈ ಪಾಲಿಸಿಗಳಿಂದ ಉಂಟಾಗುವ ಮಿಗುತಾಯ(ಸರ್‌ಪ್ಲಸ್)ದಲ್ಲಿ 95% ಗೆ ಅರ್ಹರಾಗಿದ್ದರು.
ಪಾಲಿಸಿದಾರರ ಹಕ್ಕುಗಳನ್ನು ಕಸಿದುಕೊಂಡು ಅದನ್ನು “ಷೇರುದಾರರಿಗೆ’’ ವರ್ಗಾಯಿಸುವ ಮೂಲಕ ‘ಇ.ವಿ.’ಯಲ್ಲಿ ಅದ್ಭುತವಾದ ಹೆಚ್ಚಳವನ್ನು ಮಾಡಲಾಗಿದೆ. ಷೇರುದಾರರ ವಶಕ್ಕೆ ಹೋಗುವ ‘ಇ.ವಿ.’ ಅಥವ ಹುದುಗಿರುವ ಮೌಲ್ಯ್ತವನ್ನು ಹೆಚ್ಚಿಸಿರುವುದು ತಮ್ಮ ಉಳಿತಾಯಗಳನ್ನು ಎಲ್‌ಐಸಿ ಯಲ್ಲಿ ನಿಯೋಜಿಸಿದ ಕೋಟ್ಯಂತರ ಪಾಲಿಸಿದಾರರ ಹಕ್ಕುಗಳನ್ನು ವಶಪಡಿಸಿಕೊಳ್ಳುವ ಮೂಲಕ ಎಂಬುದು ಸ್ಪಷ್ಟವಾಗಿ ಕಾಣುತ್ತದೆ.
ಈ ದೃಷಿಯಿಂದ ನೋಡಿದಾಗ, ಕಡಿಮೆ ಮೌಲ್ಯಮಾಪನವು ಎರಡು ವಿಧಗಳಲ್ಲಿ ಒಂದು ಹಗರಣವಾಗಿದೆ: ಒಂದು, ಇದು ಐಪಿಒ ನಿಂದ ಗಳಿಸಬಹುದಾಗಿದ್ದ “ಆದಾಯ”ಗಳು ಸರಕಾರಕ್ಕೆ ದಕ್ಕದಂತೆ ಮಾಡುತ್ತಿದೆ. ಅದಕ್ಕಿಂತ ಮುಖ್ಯವಾಗಿ, ಇದು ದಶಕಗಳಿಂದ ಎಲ್‌ಐಸಿಯನ್ನು ಪೋಷಿಸಿಕೊಂಡು ಬಂದಿರುವ ಪಾಲಿಸಿದಾರರ ಹಕ್ಕುಗಳನ್ನು ಕಸಿದುಕೊಂಡು, ಎಲ್‌ಐಸಿ ಯನ್ನು ಕಟ್ಟುವಲ್ಲಿ ಮತ್ತು ಪೋಷಿಸುವಲ್ಲಿ ಯಾವುದೇ ಪಾತ್ರವನ್ನು ವಹಿಸದ ಖಾಸಗಿ ಸಂಸ್ಥೆಗಳಿಗೆ ವರ್ಗಾಯಿಸುತ್ತದೆ.
ಮೋದಿ ಸರ್ಕಾರವು ಕೊಡಮಾಡುತ್ತಿರುವ ವಿಪರೀತ ರಿಯಾಯಿತಿಗಳ ಹಿಂದೆ ಅಂತರರಾಷ್ಟ್ರೀಯ “ಹೂಡಿಕೆದಾರರು” ಹೇಗೆ ಇದ್ದಾರೆ ಎಂಬುದನ್ನು ಕಳೆದ ಕೆಲವು ದಿನಗಳಲ್ಲಿ ಮಾಧ್ಯಮಗಳ “ಗಾಳಿಸುದ್ದಿ” ಹೇಳುತ್ತಿದೆ.
ಐಪಿಒನಲ್ಲಿರುವ ಎಲ್‌ಐಸಿ ಶೇರುಗಳ ಈ ಸಂಭಾವ್ಯ “ಖರೀದಿದಾರರು”, ವಿಶೇಷವಾಗಿ “ಆಂಕರ್”(ಲಂಗರು) ಹೂಡಿಕೆದಾರರು ಎಂದು ಕರೆಯಲ್ಪಡುವವರು, ಬೆಲೆ ಏನಾಗಿರಬೇಕು ಎಂದು ಸರ್ಕಾರಕ್ಕೆ ಹೇಳುತ್ತಿರುವುದು ಅಸಂಬದ್ಧ ಮತ್ತು ಆಘಾತಕಾರಿ ಅಲ್ಲವೇ? ಹಾಗಿದ್ದರೆ ಬೆಲೆಗಳು ಮಾರುಕಟ್ಟೆಯಲ್ಲಿ ಭಾಗವಹಿಸುವವರ “ಮುಕ್ತ” ಇಚ್ಛೆಯಿಂದ ನಿರ್ಧಾರವಾಗುತ್ತದೆ ಎನ್ನುವುದು ಹಾಸ್ಯಾಸ್ಪದವಾಗುವುದಿಲ್ಲವೇ?
ಎಲ್‌ಐಸಿಯ ನಿಜವಾದ ಒಡೆಯರು ಯಾರು?
ಎಲ್‌ಐಸಿ ಕಥೆಯಲ್ಲಿನ ಈ ದೊಡ್ಡ ಪ್ರಶ್ನೆಯನ್ನು ಮಾಧ್ಯಮಗಳಲ್ಲಿನ ಪಂಡಿತರು ಎಚ್ಚರಿಕೆಯಿಂದ ತಪ್ಪಿಸಿದ್ದಾರೆ. ಅಲ್ಲದೆ ಎಲ್‌ಐಸಿಯ ಶೇರುಗಳ ಈ ಕಡಿಮೆ ಮೌಲ್ಯಮಾಪನವು ಸಂಪೂರ್ಣವಾಗಿ ಸರ್ಕಾರದ ನಿಯಂತ್ರಣಕ್ಕೆ ಹೊರಗಿರುವ ಅಂಶಗಳ ಪರಿಣಾಮವಾಗಿದೆ ಎಂದು ಅವರು ಸರ್ಕಾರದ ಬಗ್ಗೆ ತುಂಬಾ ಸಹಾನುಭೂತಿ ವ್ಯಕ್ತಪಡಿಸಿ ವಾದಿಸುತ್ತಿದ್ದಾರೆ. ಇದನ್ನು ಜಾಣತನ ಎನ್ನಲೂ ಸಾಧ್ಯವಿಲ್ಲ.
ಎಲ್‌ಐಸಿ ಐಪಿಒ ದ ವಿಚಾರ ಅಸಂಬದ್ಧವಾಗಿದೆ ಎನ್ನುವುದು ಒತ್ತಟ್ಟಿಗಿರಲಿ. ಮೂರು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಭಾರೀ ರಿಯಾಯಿತಿಗಳನ್ನು ಹೊಂದಿರುವ ಒಂದು ಮೌಲ್ಯಮಾಪನವನ್ನು ಏಕೆ ಒಪ್ಪಬೇಕು? ನಾವು ವಿಶ್ವದ ಯಾವುದೇ ಸಂಸ್ಥೆಗಿಂತ ಭಿನ್ನವಾದ ವಿಶಿಷ್ಟವಾಗಿ ರಚನೆಯಾದ ಒಂದು ಪಥಪ್ರದರ್ಶಕ ವಿಮಾ ಕಂಪನಿಯ ಬಗ್ಗೆ ಮಾತನಾಡುತ್ತಿರುವುದರಿಂದ, ಸರ್ಕಾರವು ಶೇರು ಮಾರಾಟಕ್ಕೆಂದು ಮಾರುಕಟ್ಟೆಗೆ ಹೋಗಲು ಸೂಕ್ತ ಸಮಯಕ್ಕಾಗಿ ಕಾಯಬಹುದಿತ್ತಲ್ಲವೇ? ಮುಂದಿನ ದಿನಗಳಲ್ಲಿ ಯಾವಾಗಲಾದರೂ ಮಾರುಕಟ್ಟೆಯನ್ನು ಸಮೀಪಿಸಲು ಕಾಯಬಹುದಿತ್ತು, ಅಲ್ಲವೇ?-ಇವು ಐಪಿಒದ ವಿಚಾರವನ್ನು ಒಪ್ಪುವವರಲ್ಲಿ ಕೂಡಾ ಏಳುವ ಪ್ರಶ್ನೆಗಳು. ಕೆಲವು ಲೂಟಿಕೋರ ಹೂಡಿಕೆದಾರರು ತನ್ನನ್ನು ಮೂಲೆಗೊತ್ತಲಿ ಮೂಲೆಗುಂಪಾಗಲು ಸ್ವತಃ ಮೋದಿ ಸರ್ಕಾರವೇ ಬಯಸಿದಂತಿದೆ.
ಪಾಲಿಸಿದಾರರು ಐಪಿಒ ನಲ್ಲಿ ಷೇರುಗಳಿಗೆ ಅರ್ಹರು ಎಂಬ ವಾದವು ಸಹ ಜಾಣತನದಲ್ಲ, ಬದಲಾಗಿ ಪಕ್ಕಾ ವಿಕೃತ ವಾದ. ಮೊದಲನೆಯದಾಗಿ, ಪಾಲಿಸಿದಾರರನ್ನು ವೈಯಕ್ತಿಕವಾಗಿಯಲ್ಲ, ಬದಲು, ಒಂದು ವರ್ಗವಾಗಿ ಸಾಮೂಹಿಕವಾಗಿ ನಗಣ್ಯಗೊಳಿಸಲಾಗುತ್ತಿದೆ ಎಂಬುದರಲ್ಲಿ ಸಂದೇಹವಿಲ್ಲ.
ಎರಡನೆಯದಾಗಿ, ಐಪಿಒ ದಲ್ಲಿ ಭಾಗವಹಿಸಲು ಔಪಚಾರಿಕವಾಗಿ “ಅವಕಾಶ” ನೀಡುವ ಮೂಲಕ ಇದನ್ನು ಸರಿಪಡಿಸಲಾಗುತ್ತಿದೆ ಎಂಬುದೂ ಸರಿಯಲ್ಲ. ಏಕೆಂದರೆ ಲಕ್ಷ-ಲಕ್ಷ ಪಾಲಿಸಿದಾರರು, ವಿಶೇಷವಾಗಿ ಸಣ್ಣ ಮೊತ್ತದ ಪಾಲಿಸಿಗಳನ್ನು ಹೊಂದಿರುವವರು, ಷೇರು ಮಾರುಕಟ್ಟೆಯನ್ನು ಪ್ರವೇಶಿಸುವ ಸ್ಥಿತಿಯಲ್ಲಿಲ್ಲದಿರಬಹುದು ಅಥವಾ ಹಾಗೆ ಮಾಡುವ ಬಯಕೆಯನ್ನು ಹೊಂದಿರದಿರಬಹುದು. ಆದ್ದರಿಂದ ಈ ಐಪಿಒ ಲಾಟರಿಯಲ್ಲಿ ಅವರು ಒಂದು ವರ್ಗವಾಗಿ ವಂಚಿತರಾಗುತ್ತಿದ್ದಾರೆ ಎಂಬ ಸಂಗತಿ ಬದಲಾಗುವುದಿಲ್ಲ.
ಮೂರನೆಯದಾಗಿ, ಯಾವುದೇ ಪಾಲಿಸಿದಾರರು ಯಾವುದೇ ಮಾಲೀಕತ್ವದ ಹಕ್ಕುಗಳಿಲ್ಲದ ಎಲ್‌ಐಸಿಯ “ಗ್ರಾಹಕ”ರಷ್ಟೇ ಎಂದು “ಗ್ರಾಹಕರು” ಎಂದು ಸರ್ಕಾರವು ಈಗ ಪರಿಗಣಿಸಿ ಅವರಿಗೆ ಒಂದು ಭಾಗವನ್ನು ಮೀಸಲಿಡುವ ವಿಚಾರದ ಬಗ್ಗೆಯೇ ಮಾಧ್ಯಮಗಳಲ್ಲಿ ಗೊಣಗಾಟದ ದನಿಯಾದರೂ ಏಳಬೇಕಾಗಿತ್ತು. ಹಾಗಾಗಿಲ್ಲ ಎಂಬುದು ಕೂಡ ಗಮನಿಸಬೇಕಾದ ಸಂಗತಿಯಲ್ಲವೇ?
ಭಾರತೀಯ ಬಂಡವಾಳ ಮಾರುಕಟ್ಟೆಗಳ ಇತಿಹಾಸದಲ್ಲಿ ಒಂದು ಕಂಪನಿಯು ತನ್ನ “ಗ್ರಾಹಕರಿಗೆ” ಐಪಿಒ ದಲ್ಲಿ ಷೇರುಗಳನ್ನು ನೀಡಿದ ನಿದರ್ಶನ ಇದೆಯೇ? ಉದಾ: ಪೇಟಿಎಂ ತನ್ನ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಷೇರುಗಳನ್ನು ಮಾರಾಟ ಮಾಡಿದ್ದರೆ ಪ್ರತಿಕ್ರಿಯೆ ಹೇಗಿರುತ್ತಿತ್ತು?
ಎಲ್‌ಐಸಿಯ ಐಪಿಒ ವಿಷಯದಲ್ಲಿ ಮಾತ್ರ ಇದು ನಡೆದಿದ್ದರೆ, ಅದು ಬಹುಶ:, ಕೋಟ್ಯಂತರ ಪಾಲಿಸಿದಾರರು ತಾವು ಎಲ್‌ಐಸಿ ಎಂಬ ಈ ಬೃಹತ್ ಸಹಕಾರೀ ಉದ್ಯಮದ ಒಡೆಯರು ಎಂಬ ಸ್ಥಾನಮಾನವನ್ನು ಈ ಐಪಿಒದ ಮೂಲಕ ಕಳೆದುಕೊಳ್ಳುತ್ತಿರುವುದಕ್ಕೆ ಏಳಬಹುದಾಗಿದ್ದ ವಿರೋಧವನ್ನು ತಣ್ಣಗಾಗಿಸುವ ತಂತ್ರ ಎಂದೇ ಭಾವಿಸಬೇಕಾಗುತ್ತದೆ. ವಾಸ್ತವವಾಗಿ ಎಲ್‌ಐಸಿಯ ನಿರ್ಮಾಣವಾಗಿರುವುದು ಪಾಲಿಸಿದಾರರ ಒಂದು ಬೃಹತ್ ಉದ್ಯಮವಾಗಿ-ಇದರಲ್ಲಿ ಸರ್ಕಾರದ ಪಾತ್ರ ಕೇವಲ ಟ್ರಸ್ಟಿಯಾಗಿಯೇ ಹೊರತು ಸಂಪೂರ್ಣ ಮಾಲೀಕನಾಗಿ ಅಲ್ಲ. ಇಲ್ಲಿ ಟ್ರಸ್ಟಿಯೇ ಠಕ್ಕನಾಗಿದ್ದಾನೆ ಎಂಬುದನ್ನು ಈ ಐಪಿಒ ದೃಢೀಕರಿಸಿದೆ.
ಎಲ್‌ಐಸಿಯ ಧ್ವಂಸದ ಮೊದಲ ಹೆಜ್ಜೆ
ಈ ಐಪಿಒ ಎಲ್‌ಐಸಿಯ ಮೇಲೆ ದೀರ್ಘಾವಧಿ ದುಷ್ಪರಿಣಾಮಗಳ ಬೆದರಿಕೆಯೊಡ್ಡಿದೆ. ಈ ಐಪಿಒ ಗೆ ವಿಧಿಸುವ ನಿಯಮಗಳ ಪ್ರಕಾರ ಎರಡು ವರ್ಷಗಳೊಳಗೆ ಕನಿಷ್ಟ 10%, ಮತ್ತು ಐದು ವರ್ಷಗಳೊಳಗೆ ಕನಿಷ್ಟ 25% ಶೇರುಗಳ ಸಾರ್ವಜನಿಕ ಮಾರಾಟ ಮಾಡಬೇಕಾಗುತ್ತದೆ. ಈ ಐಪಿಒನಲ್ಲಿ ಶೇರು ಪಡೆಯುವವರಿಗೆ ಕೊಟ್ಟಿರುವ ಭಾರೀ ರಿಯಾಯಿತಿಯ ಕರಿನೆರಳು ಇನ್ನು ಮುಂದಿನ ಶೇರು ಮಾರಾಟಗಳ ಮೇಲೂ ಬೀರದಿರದು.
ಬಹುಶಃ ಸರಕಾರ ಭಾರೀ ರಿಯಾಯ್ತಿ ಉಂಟು ಮಾಡುವ ‘ಸದ್ಭಾವನೆ’ಯಿಂದ ತದ ನಂತರ ಶೀಘ್ರದಲ್ಲೇ ಷೇರು ಬೆಲೆಯಲ್ಲಿ “ಜಿಗಿತ” ಉಂಟಾಗಬಹುದು ಎಂದು ನಿರೀಕ್ಷಿಸುತ್ತಿರಬಹುದು. ಆದರೆ 2019 ರಲ್ಲಿ ಐಆರ್‌ಸಿಟಿಸಿ ಐಪಿಒನಲ್ಲಿ ಏನಾಯಿತು ಎಂದು ನೆನಪಿದೆಯೇ? ಅದರಲ್ಲಿ ಷೇರಿನ ನೀಡಿಕೆಯ ಬೆಲೆಯನ್ನು ನಿಗದಿ ಗೊಳಿಸಿದ್ದು ಪ್ರತಿ ಷೇರಿಗೆ ರೂ 315-320 ರಂತೆ. ಆದರೆ ಷೇರು ಮಾರಾಟದ ದಿನ ಇದು ತೆರೆದದ್ದು ರೂ. 644 ರಂತೆ. ಆದರೆ ಇಂತಹ “ಜಿಗಿತ ” ದಿಂದ ಸರ್ಕಾರಕ್ಕಾಗಲೀ ಅಥವಾ ಲಕ್ಷಾಂತರ ಎಲ್‌ಐಸಿ ಪಾಲಿಸಿದಾರರಿಗಾಗಲೀ ಚಿಕ್ಕಾಸೂ ಸಿಗುವುದಿಲ್ಲ. ಬದಲಿಗೆ, ಎಲ್ಲ ಗಳಿಕೆಯೂ ಇದು ‘ಜಾಣ’ ಹೂಡಿಕೆದಾರರ ಪಾಲಾಗುತ್ತದೆ.
ಬಹುಶಃ, ಮೋದಿ ಸರ್ಕಾರವು ಈ ಐಪಿಒದ ಪ್ರಯೋಜನ ಪಡೆದುಕೊಂಡು ನಿರ್ಗಮಿಸುವ ಸಟ್ಟಾಕೋರ ತಿಮಿಂಗಿಲಗಳು ಗಳಿಸುವ ಅಗಾಧ ಲಾಭದ ಲೆಕ್ಕಾಚಾರ ಮಾಡುತ್ತಿದೆಯಷ್ಟೇ. ಅವರ ಈ ಅಗಾಧ ಲಾಭ ನೇರವಾಗಿ ಸರ್ಕಾರಕ್ಕೆ ಮತ್ತು ಕೋಟ್ಯಂತರ ಪಾಲಿಸಿದಾರರಿಗೆ ನಷ್ಟ ಮಾಡುವ ಮೂಲಕವೇ ಬರುವಂತದ್ದು ಎಂಬುದರ ಪರಿವೆ ಅದಕ್ಕಿದ್ದಂತಿಲ್ಲ. ಸದಾ ‘ಸದ್ಭಾವನೆ’ ಮೂಡಿಸುವ ಕೆಲಸದಲ್ಲೇ ನಿರತವಾಗಿರುವ ಸರ್ಕಾರದ ಇಂತಹ ನಡೆಯಿಂದ ಆಶ್ಚರ್ಯ ಪಡಬೇಕಾಗಿಲ್ಲ. ಆದರೆ ಇದು ಸಂಪೂರ್ಣವಾಗಿ ಸರಿ ಹೋಗಬಹುದು. ಆದರೆ ಕೋಟ್ಯಂತರ ಭಾರತೀಯರಿಗೆ, ಮೇ 4 ರಂದು ಆರಂಭವಾಗಿರುವ ಐಪಿಒ ಭಾರತದ ಅತ್ಯಂತ ಜನಪ್ರಿಯ ಸಂಸ್ಥೆಗಳಲ್ಲಿ ಒಂದರ ಧ್ವಂಸಕ್ರಿಯೆಯ ಆರಂಭವನ್ನು ಸೂಚಿಸುತ್ತಿದೆ.