ಎಲ್.ಐ.ಸಿ. ಶೇರು ಮಾರಾಟಕ್ಕಾಗಿ ಹಣಕಾಸು ಮಸೂದೆಯ ದಾರಿ ಸರಿಯಲ್ಲ ಲೋಕಸಭಾಧ್ಯಕ್ಷರಿಗೆ ಎಲ್.ಐ.ಸಿ. ನೌಕರರ, ಅಧಿಕಾರಿಗಳ ಪತ್ರ

ನವದೆಹಲಿ : ಎಲ್.ಐ.ಸಿ. ಯಲ್ಲಿ ಖಾಸಗಿಯವರು ಪಾಲು ಹೊಂದುವಂತೆ ಅನುವು ಮಾಡಿಕೊಡಬೇಕೆಂದು ನಿರ್ಧರಿಸಿರುವ ಸರಕಾರ ಇದಕ್ಕಾಗಿ ಎಲ್.ಐ.ಸಿ. ಕಾಯ್ದೆಯಲ್ಲಿ ತಿದ್ದುಪಡಿಗಳನ್ನು ತರಲು ಮುಂದಾಗಿದೆ. ಇದನ್ನು ಅದು ಹಣಕಾಸು ಮಸೂದೆಯ ಭಾಗವಾಗಿ ತರಬೇಕೆಂದಿದೆ.

ಹೀಗೆ ಮಾಡಬಾರದೆಂದು ಸರಕಾರಕ್ಕೆ ಸಲಹೆ ನೀಡಬೇಕು ಎಂದು ಎಲ್.ಐ.ಸಿ.ಯ ನೌಕರರ 2 ಸಂಘಟನೆಗಳು, ದರ್ಜೆ 1 ಅಧಿಕಾರಿಗಳ ಸಂಘಟನೆ ಹಾಗೂ ಅಭಿವೃದ್ಧಿ ಅಧಿಕಾರಿಗಳ ಸಂಘಟನೆ ಲೋಕಸಭಾಧ್ಯಕ್ಷರನ್ನು ಕೋರಿವೆ.

ಎಲ್.ಐ.ಸಿ.ಯನ್ನು ಶೇರು ಮಾರುಕಟ್ಟೆಗಳ ಪಟ್ಟಿಗೆ ಸೇರಿಸಿದರೆ ಅದು 40 ಕೋಟಿ ಪಾಲಿಸಿದಾರರು ಮತ್ತು ಒಟ್ಟು ರಾಷ್ಟ್ರೀಯ ಅರ್ಥವ್ಯವಸ್ಥೆಯ ಮೇಲೆ ಭಾರೀ ಪರಿಣಾಮಗಳನ್ನು ಬೀರಲಿದೆ ಎಂದು ಲೋಕಸಭಾಧ್ಯಕ್ಷರಿಗೆ ಸಲ್ಲಿಸಿರುವ ಪತ್ರದಲ್ಲಿ ಹೇಳಿದ್ದಾರೆ.
ಹಣಕಾಸು ಮಸೂದೆಯ ಭಾಗವಾಗಿ ಮಂಡಿಸದಿದ್ದರೆ, ಸರಕಾರ ಮಾಡಬೇಕೆಂದಿರುವ ತಿದ್ದುಪಡಿಗಳನ್ನು ಕುರಿತಂತೆ ಸಂಸದೀಯ ಸ್ಥಾಯೀ ಸಮಿತಿಯಲ್ಲಿ ಸಂಬಂಧಪಟ್ಟ ಎಲ್ಲರಿಗೆ ತಂತಮ್ಮ ಅಭಿಪ್ರಾಯಗಳನ್ನು ಸಲ್ಲಿಸಲು ಮತ್ತು ಈ ಮೂಲಕ ಸ್ಥಾಯೀ ಸಮಿತಿ ಈ ವಿಷಯವನ್ನು ಕೂಲಂಕುಷವಾಗಿ ಪರೀಕ್ಷಿಸಲು ಸಾಧ್ಯವಾಗುತ್ತದೆ.

ಎಲ್.ಐ.ಸಿ.ಯ ಎಲ್ಲ ವಿಭಾಗಗಳ ನೌಕರರನ್ನು ಪ್ರತಿನಿಧಿಸುವ ತಮ್ಮ ಸಂಘಟನೆಗಳಿಗೆ ಬಲವಾದ ಆಕ್ಷೇಪಗಳಿವೆ. ಇವು ಸರಿಯಾದ ತರ್ಕಗಳನ್ನು ಆಧರಿಸಿರುವ ಆಕ್ಷೇಪಗಳು. ಆದ್ದರಿಂದ ಲೋಕಸಭಾದ್ಯಕ್ಷರು ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂದು ಈ ನಾಲ್ಕು ಸಂಘಟನೆಗಳ ಮುಖಂಡರು ತಮ್ಮ ಪತ್ರದಲ್ಲಿ ಆಶಿಸಿದ್ದಾರೆ.

ಅಖಿಲ ಭಾರತ ವಿಮಾನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಮಿಶ್ರ, ಅಖಿಲ ಭಾರತ ಎಲ್‌.ಐ.ಸಿ. ನೌಕರರ ಫೆಡರೇಷನ್‌.ನ ಪ್ರಧಾನ ಕಾರ್ಯದರ್ಶಿ ರಾಜೇಶ್ ಕುಮಾರ್, ಎಲ್‌.ಐ.ಸಿ. ದರ್ಜೆ.1 ಅಧಿಕಾರಿಗಳ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಸ್.ರಾಜಕುಮಾರ್ ಮತ್ತು ಮತ್ತು ರಾಷ್ಟ್ರೀಯ ವಿಮಾ ಕ್ಷೇತ್ರ ಕಾರ್ಯಕರ್ತರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಿವೇಕ್ ಸಿಂಗ್ ಜಂಟಿಯಾಗಿ ಲೋಕಸಭಾಧ್ಯಕ್ಷರಿಗೆ ಈ ಪತ್ರವನ್ನು ಬರೆದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *