ಪಾಲಿಸಿದಾರರ ಹಿತಾಸಕ್ತಿಗಳನ್ನು ರಕ್ಷಿಸಲೆಂದೇ ರಚಿಸಿರುವ ವಿಮಾ ನಿಯಂತ್ರಣ ಅಭಿವೃದ್ಧಿ ಪ್ರಾಧಿಕಾರ(ಐ.ಆರ್.ಡಿ.ಎ.)ಕ್ಕೆ ಕಳೆದ 9 ತಿಂಗಳಿಂದ ಅಧ್ಯಕ್ಷರೇ ಇಲ್ಲ. ಹೀಗಿರುವಾಗ ಅದರ ಪರೀಕ್ಷಣೆ ಇಲ್ಲದೆ ಸರಕಾರ ಎಲ್‍ಐಸಿಯ ಶೇರುಗಳನ್ನು ಮಾರಾಟಕ್ಕೆ ಇಡುವ ಐಪಿಒ ಪ್ರಕ್ರಿಯೆಯನ್ನು ನಡೆಸಲು ಹೇಗೆ ತಾನೇ ಸಾಧ್ಯ ಎಂದು ನಾಗರಿಕ ಸಮಾಜ ರಚಿಸಿರುವ ‘ಜನತಾ ಆಯೋಗ’ ಹಣಕಾಸು ಸಚಿವಾಲಯವನ್ನು ಪ್ರಶ್ನಿಸಿದೆ. ದೇಶದಲ್ಲಿನ ಕೌಟುಂಬಿಕ ಉಳಿತಾಯದ ಅಗಾಧವಾದ ಸಂಪತ್ತಿನ ಮೇಲೆ ಸಾರ್ವಜನಿಕ ನಿಯಂತ್ರಣವನ್ನು ದುರ್ಬಲಗೊಳಿಸಲು ಮತ್ತು ಹಂತಹಂತವಾಗಿ ಅದನ್ನು ಬೆರಳೆಣಿಕೆಯಷ್ಟಿರುವ ಉಚ್ಚ ವರ್ಗದವರ ಕೈಗಳಿಗೆ ವರ್ಗಾಯಿಸಲು ಈ ಐಪಿಒ ಪ್ರಯತ್ನಿಸುತ್ತದೆ ಎಂದು ಅದು ಹೇಳಿದೆ.
ಸಾರ್ವಜನಿಕ ವಲಯದ ಬೃಹತ್ ಸಂಸ್ಥೆ ಭಾರತೀಯ ಜೀವ ವಿಮಾ ನಿಗಮ(ಎಲ್‌ಐಸಿ) ದಲ್ಲಿನ ತನ್ನ ಪಾಲನ್ನು ಸ್ಟಾಕ್ ಎಕ್ಸ್‌ಚೇಂಜ್‌ಗಳಲ್ಲಿ ಪಟ್ಟಿ ಮಾಡಿ ಕೇಂದ್ರ ಸರಕಾರ ತನ್ನ ಪಾಲನ್ನು ದುರ್ಬಲಗೊಳಿಸಲು ತರಾತುರಿಯ ಪ್ರಯತ್ನಗಳನ್ನು ನಡೆಸಿದೆ ಎಂದು ನಾಗರಿಕ ಸಮಾಜ ರಚಿಸಿರುವ ‘ಜನತಾ ಆಯೋಗ’ ಕಳವಳ ವ್ಯಕ್ತಪಡಿಸಿದೆ. ಅದು ಫೆಬ್ರವರಿ 14 ರಂದು ಭಾರತ ಸರಕಾರದ ಸಂಪುಟ ಕಾರ್ಯದರ್ಶಿ ರಾಜೀವ್ ಗೌಹಾ ಅವರಿಗೆ ಪತ್ರ ಬರೆದಿದೆ. ವಿಮಾ ನಿಯಂತ್ರಣ ಅಭಿವೃದ್ಧಿ ಪ್ರಾಧಿಕಾರ(ಐ.ಆರ್.ಡಿ.ಎ.)ಗೆ ಹೊಸ ಅಧ್ಯಕ್ಷರನ್ನು ನೇಮಿಸುವವರೆಗೆ ಈ ವಿಷಯದಲ್ಲಿ ಕಲಾಪಗಳಲ್ಲಿ ತರಾತುರಿ ಮಾಡದೆ ಅದನ್ನು ನಿಲ್ಲಿಸುವಂತೆ ಅದು ಹಣಕಾಸು ಸಚಿವಾಲಯವನ್ನು ಕೇಳಿದೆ.
ಸಾರ್ವಜನಿಕ ವಲಯದ ಉದ್ದಿಮೆಯೊಂದರ ಶೇರನ್ನು ಆರಂಭದ ಮಾರಾಟಕ್ಕೆ ಇಡುವಾಗ (ಐ.ಪಿ.ಒ.) ಐ.ಆರ್.ಡಿ.ಎ. ಮತ್ತು ಭಾರತದ ಶೇರು ವಿನಿಮಯ ಮಂಡಳಿ(ಸೆಬಿ)ಯ ಮಂಜೂರಾತಿ ಅಗತ್ಯವಾಗಿದೆ. ಅವಿಲ್ಲದೆಯೇ ‘ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ’(ಡಿಐಪಿಎಎಂ) ಐಪಿಒ ನೀಡುತ್ತಿರುವುದು ಹೇಗೆ ಸಾಧ್ಯ ಎಂದು ಜನತಾ ಆಯೋಗದ ಸದಸ್ಯರೂ, ಭಾರತ ಸರಕಾರದಲ್ಲಿ ಸೇವೆ ಸಲ್ಲಿಸಿರುವ ನಿವೃತ್ತ ಹಿರಿಯ ಐಎಎಸ್ ಅಧಿಕಾರಿಯೂ ಆಗಿದ್ದ ಇ.ಎ.ಎಸ್. ಶರ್ಮ ಈ ಪತ್ರದಲ್ಲಿ ಕೇಳಿದ್ದಾರೆ. ಐಆರ್‌ಡಿಎ ಅಧ್ಯಕ್ಷರಾಗಿದ್ದ ಎಸ್.ಸಿ.ಖುಂಟಿಯಾ ಮೇ 6, 2021 ರಂದು ನಿವೃತ್ತರಾದರು. ಅಂದಿನಿಂದ, ಈ ಸ್ಥಾನವು ಎಂಟು ತಿಂಗಳಿಗಿಂತ ಹೆಚ್ಚು ಕಾಲ ಖಾಲಿಯಿದೆ. ಆದಾಗ್ಯೂ ಖುಂಟಿಯಾ ಅವರ ನಿವೃತ್ತಿಯ ಬಹಳ ಮುಂಚೆಯೇ ಎಲ್‍ಐಸಿಯ ಐಪಿಒ ನ್ನು ಯೋಜಿಸಲಾಗಿತ್ತಾದರೂ, ಈ ಹುದ್ದೆ ಖಾಲಿಯಾಗಿಯೇ ಇದೆ.
ಅಂದರೆ, ಸರಕಾರ ತ್ವರಿತ ಪ್ರಕ್ರಿಯೆಗೆ ಅವಕಾಶ ನೀಡಲಿಕ್ಕಾಗಿ ಈ ಪ್ರಸ್ತಾಪದ ಮೇಲೆ ನಿಯಂತ್ರಕ ಮೇಲ್ವಿಚಾರಣೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಇದು ಸೂಚಿಸುತ್ತದೆ ಎಂದು ಆಯೋಗ ಹೇಳಿದೆ. ಅಂತೆಯೇ, ದೇಶದಲ್ಲಿನ ಕೌಟುಂಬಿಕ ಉಳಿತಾಯದ ಅಗಾಧವಾದ ಸಂಪತ್ತಿನ ಮೇಲೆ ಸಾರ್ವಜನಿಕ ನಿಯಂತ್ರಣವನ್ನು ದುರ್ಬಲಗೊಳಿಸಲು ಮತ್ತು ಹಂತಹಂತವಾಗಿ ಅದನ್ನು ಬೆರಳೆಣಿಕೆಯಷ್ಟಿರುವ ಉಚ್ಚ ವರ್ಗದವರ ಕೈಗಳಿಗೆ ವರ್ಗಾಯಿಸಲು ಈ ಐಪಿಒ ಪ್ರಯತ್ನಿಸುತ್ತದೆ.
“ಡಿಐಪಿಎಎಂ ಈ ಪ್ರಕ್ರಿಯೆಯನ್ನು ಬಹಳ ಆತುರದಿಂದ ನಡೆಸಲು ಪ್ರಯತ್ನಿಸುತ್ತಿದೆ, ಮಾರ್ಚ್, 2022 ರ ಅಂತ್ಯದ ಮೊದಲು ಐ.ಪಿ.ಒ.ಅನ್ನು ಅಂತಿಮಗೊಳಿಸಲು ಸಾಧ್ಯವಾಗಬೇಕೆಂಬ ಪ್ರಯತ್ನ ನಡೆಸಿದೆ. ಈ ವಿಷಯದ ಕಲಾಪಗಳಲ್ಲಿ ಡಿಐಪಿಎಎಂ, ಈ ಪ್ರಸ್ತಾವನೆಯ ದೀರ್ಘಕಾಲೀನ ಸಾಮಾಜಿಕ ಪರಿಣಾಮಗಳ ಗೊಡವೆಯೇ ಇಲ್ಲದೆ ಅನುಸರಿಸುತ್ತಿರುವ ಆತುರದ ವಿಧಾನದ ಬಗ್ಗೆ ನಮಗೆ ಆತಂಕವಾಗುತ್ತಿದೆ” ಎಂದು ಶರ್ಮ ಪತ್ರದಲ್ಲಿ ಹೇಳಿದ್ದಾರೆ.
ಎಲ್‌ಐಸಿಯು ಭಾರತದಲ್ಲಿ ಸಮಾಜದ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ಭದ್ರತೆ ಒದಗಿಸುವ ಏಕೈಕ ಅತಿದೊಡ್ಡ ಸಂಸ್ಥೆಯಾಗಿದೆ. ಕಳೆದ ಹಲವಾರು ದಶಕಗಳಲ್ಲಿ ಎಲ್‌ಐಸಿ ಯ ಬೆಳವಣಿಗೆಗೆ ಅಪಾರ ಕೊಡುಗೆ ನೀಡುವಲ್ಲಿ ಅದರ ಸಣ್ಣ ಪಾಲಿಸಿದಾರರು ವಿಶೇಷವಾಗಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಸರ್ಕಾರದಿಂದ ಯಾವುದೇ ಮಹತ್ವದ ಹಣಕಾಸಿನ ಬೆಂಬಲವನ್ನು ಪಡೆಯದೆ ಮತ್ತು ನಿಗಮದ ವ್ಯವಹಾರಗಳಲ್ಲಿ ಕಾನೂನುಬದ್ಧ ಪಾಲನ್ನು ಹೊಂದದೆಯೇ ಪಾಲಿಸಿದಾರರು ಎಲ್‌ಐಸಿಗೆ ಹಣಕಾಸು ಬೆಂಬಲ ನೀಡಲು ಏಕಾಂಗಿಯಾಗಿ ಕೊಡುಗೆ ನೀಡಿದ್ದಾರೆ . ಆದ್ದರಿಂದ ಅವರಿಗೆ ನಿಗಮದ ವ್ಯವಹಾರಗಳಲ್ಲಿ ನ್ಯಾಯಬದ್ಧ ಪಾತ್ರದ ಹಕ್ಕು ಇದೆ ಎಂದು ಜನತಾ ಆಯೋಗ ವಾದಿಸಿದೆ.
“ಎಲ್ಐಸಿಯ ಪಾಲಿಸಿದಾರರಿಗೆ ಸರ್ಕಾರವು ಒದಗಿಸಿದ ಸಾರ್ವಭೌಮ ಖಾತರಿಯನ್ನು ಸಾಂಕೇತಿಕಾಗಿ ಮೌಲ್ಯೀಕರಿಸಬಹುದು ಮತ್ತು ಈಕ್ವಿಟಿ ಬಂಡವಾಳದ ಭಾಗ ಎಂದಾದರೂ ಪರಿಗಣಿಸಬಹುದು” ಎಂದಿರುವ ಅದು ಎಲ್‌ಐಸಿಯ ಈಕ್ವಿಟಿ ಬಂಡವಾಳ ನೆಲೆಯಲ್ಲಿ ಇದು ಸೂಕ್ತವಾಗಿ ಪ್ರತಿಫಲಿಸಬೇಕು ಎಂದು ಎಚ್ಚರಿಸಿದೆ. ಇಲ್ಲದಿದ್ದರೆ, ಖಾಸಗಿ ಹೂಡಿಕೆದಾರರು ಎಲ್ಐಸಿ ವ್ಯವಹಾರಗಳ ಮೇಲೆ ಅನಗತ್ಯ ನಿಯಂತ್ರಣವನ್ನು ಪಡೆಯುತ್ತಾರೆ, ಇದು ಪಾಲಿಸಿದಾರರಿಗೆ ಹಾನಿಕಾರಕವಾಗುತ್ತದೆ, ಅವರಲ್ಲಿ ಹೆಚ್ಚಿನವರು ಸಣ್ಣ ಮಟ್ಟದ ಹೂಡಿಕೆದಾರರು, ಈಗಾಗಲೇ ತಮ್ಮ ಕೌಟುಂಬಿಕ ಉಳಿತಾಯಗಳನ್ನು ಹೂಡಿರುವವರು ಎಂದು ಜನತಾ ಆಯೋಗ ಸರಕಾರಕ್ಕೆ ನೆನಪಿಸಿದೆ.
“ಮುಖ್ಯಸ್ಥನೇ ಇಲ್ಲದ ಐಆರ್‌ಡಿಎ ಎಲ್‍ಐಸಿಯ ಕರಡು ಐಪಿಒ ಪ್ರಸ್ತಾವನೆಯನ್ನು ಪರಿಶೀಲಿಸುತ್ತದೆ ಎಂಬ ಅಂಶವು ಈ ಕಸರತ್ತಿನ ವಿಶ್ವಾಸಾರ್ಹತೆಯನ್ನು ನಾಶಪಡಿಸುತ್ತದೆ. ಸಂಪೂರ್ಣವಾಗಿ ರಚಿತವಾಗಿರುವ ಐಆರ್‌ಡಿಎ ಇದ್ದಿದ್ದರೆ ಅದು ಬಹುಮಟ್ಟಿಗೆ, ಪಾಲಿಸಿದಾರರಿಗೆ ನ್ಯಾಯಸಮ್ಮತವಾಗಿ ಸಿಗಬೇಕಾದದ್ದನ್ನು ಕಸಿದುಕೊಳ್ಳುವ ಈ ಕರಡು ಐಪಿಒ ಪ್ರಸ್ತಾವನೆಯನ್ನು ತಿರಸ್ಕರಿಸುತ್ತಿತ್ತು” ಎಂದು ಶರ್ಮಾ ತಮ್ಮ ಪತ್ರದಲ್ಲಿ ಹೇಳಿದ್ದಾರೆ. ದೇಶೀಯ ಮತ್ತು ವಿದೇಶಿ ಹೂಡಿಕೆದಾರಎಇಗೆ ಎಲ್ಐಸಿಯ ಈಕ್ವಿಟಿಯನ್ನು ಖರೀದಿಸಲು, ಮೊದಲ ಹಂತದಲ್ಲಿ ಸೀಮಿತವಾಗಿಯಾದರೂ, ಅವಕಾಶ ನೀಡುವ ಕೇಂದ್ರ ಸರಕಾರದ ಪ್ರಸ್ತಾವನೆ ಎಲ್‍ಐಸಿಯ ಈಕ್ವಿಟಿ ನೆಲೆಯಲ್ಲಿ ತಮ್ಮ ಕಾನೂನುಬದ್ಧ ಪಾಲಿನಿಂದ ಪಾಲಿಸಿದಾರರನ್ನು ವಂಚಿಸುವ ಅನ್ಯಾಯದ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಿದೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ.. ಇದು ಸಾಮಾಜಿಕ ಭದ್ರತೆ ಒದಗಿಸಲು ನಿರ್ಮಿಸಿದ ಭಾರತದ ಅತಿದೊಡ್ಡ ಸಂಸ್ಥೆ ಎಲ್‍ಐಸಿಯ ಧ್ಯೇಯೋದ್ದೇಶಗಳನ್ನು ಬದಲಾಯಿಸುತ್ತದೆ.
ಇದಲ್ಲದೆ, ಪಾಲಿಸಿದಾರರಿಗೆ ಎಲ್ಐಸಿಯ ಕೇವಲ 10% ಪಾಲನ್ನು ತೆರೆದಿಡುವ ಪ್ರಸ್ತಾವ ಅವರನ್ನು ‘ದಾರಿ ತಪ್ಪಿಸಿ ಮೌನವಾಗಿಸುವ’ ಸರ್ಕಾರದ ನಡೆ ಎಂದು ಶರ್ಮ ತಮ್ಮ ಪತ್ರದಲ್ಲಿ ಖಂಡಿಸಿದ್ದಾರೆ. ಎಲ್‌ಐಸಿಯ ಬೆಳವಣಿಗೆಯಲ್ಲಿ ಅತಿದೊಡ್ಡ ಪಾಲುದಾರರೆಂಬ ಜನರ ನ್ಯಾಯಬದ್ಧ ಸ್ಥಾನಮಾನಕ್ಕೂ ಈ ಈ 10% ಪಾಲಿಗೂ ಏನೇನೂ ಸಂಬಂಧವಿಲ್ಲ ಎಂದು ವಾದಿಸಿರುವ ಅವರು “ಎಲ್‌ಐಸಿಯಲ್ಲಿ ಅತಿದೊಡ್ಡ ಪಾಲುದಾರರಾಗಿರುವ ಪಾಲಿಸಿದಾರರನ್ನು ಅನ್ಯಾಯದ ಅನನುಕೂಲತೆಗೆ ಒಳಪಡಿಸುತ್ತದೆ. ಶೇರು ಮಾರುಕಟ್ಟೆಯ ಒಂದು ಸಣ್ಣ ಉಚ್ಚ ವರ್ಗದ ಹೂಡಿಕೆದಾರರ ವಿಭಾಗಕ್ಕೆ ಎದುರಾಗಿ ಅನ್ಯಾಯಪೂರ್ಣ ಅನನುಕೂಲತೆಗೆ ಒಡ್ಡುವ ಇಂತಹ ಪ್ರಸ್ತಾಪವು ಮೇಲ್ನೋಟಕ್ಕೇ ನೈಸರ್ಗಿಕ ನ್ಯಾಯದ ತತ್ವಗಳನ್ನು ಉಲ್ಲಂಘಿಸುತ್ತದೆ ಯಾದ್ದರಿಂದ ಅದು ಖಂಡಿತಾ ಕಾನೂನುಬಾಹಿರವಾಗಿದೆ” ಎಂದಿದ್ದಾರೆ.
ಐಆರ್‌ಡಿಎಗೆ ಸಂಬಂಧಿಸಿದಂತೆ, ವಿಮಾ ಪಾಲಿಸಿದಾರರ ಹಿತಾಸಕ್ತಿಗಳನ್ನು ಕಾಪಾಡಲೆಂದೇ ಸಂಸತ್ತು 1999 ರಲ್ಲಿ ಐಆರ್‌ಡಿಎ ಕಾಯಿದೆಯನ್ನು ವಿಶೇಷವಾಗಿ ಜಾರಿಗೆ ತಂದಿದೆ ಎಂದು ಜನತಾ ಆಯೋಗ ನೆನಪಿಸಿದೆ. ಅಂತೆಯೇ,ಆ ಕಾಯ್ದೆಯ ಮುನ್ನುಡಿಯು ಹೀಗೆ ಹೇಳುತ್ತದೆ, “ವಿಮಾ ಪಾಲಿಸಿಗಳನ್ನು ಹೊಂದಿರುವವರ ಹಿತಾಸಕ್ತಿಗಳನ್ನು ರಕ್ಷಿಸಲು, ವಿಮಾ ಉದ್ಯಮದ ಕ್ರಮಬದ್ಧ ಬೆಳವಣಿಗೆಯನ್ನು ನಿಯಂತ್ರಿಸಲು, ಉತ್ತೇಜಿಸಲು ಮತ್ತು ಖಚಿತಪಡಿಸಿಕೊಳ್ಳಲು ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳಿಗೆ ಮತ್ತು ಮುಂದೆ ವಿಮಾ ಕಾಯಿದೆ, 1938, ಜೀವ ವಿಮಾ ನಿಗಮ ಕಾಯಿದೆ, 1956 ಮತ್ತು ಸಾಮಾನ್ಯ ವಿಮಾ ವ್ಯವಹಾರ (ರಾಷ್ಟ್ರೀಕರಣ) ಕಾಯಿದೆ, 1972ಯನ್ನು ತಿದ್ದುಪಡಿ ಮಾಡಲು ಒಂದು ಪ್ರಾಧಿಕಾರದ ಸ್ಥಾಪನೆಗೆ ಅವಕಾಶ ಮಾಡಿಕೊಡಲು” ಎಂದು ಹೇಳುತ್ತದೆ.
ಇದರರ್ಥ ಎಲ್‌ಐಸಿ ಪಾಲಿಸಿದಾರರ ಹಿತಾಸಕ್ತಿಗಳನ್ನು ರಕ್ಷಿಸುವುದು ಐಆರ್‌ಡಿಎ ಯ ನಿಯಂತ್ರಣದ ಪ್ರಾಥಮಿಕ ಉದ್ದೇಶವಾಗಿದೆ. ಈ ಕಾರಣಕ್ಕಾಗಿ, ಸರ್ಕಾರದ ಪ್ರಸ್ತಾವನೆಯನ್ನು ಅತ್ಯಂತ ಶ್ರದ್ಧೆಯಿಂದ ಪರೀಕ್ಷಿಸಬೇಕು ಎಂದು ಈ ಸ್ವತಂತ್ರ ಶಾಸನಬದ್ಧ ಪ್ರಾಧಿಕಾರವನ್ನು ಜನತಾ ಆಯೋಗ ಒತ್ತಾಯಿಸಿದೆ.ಒಟ್ಟಾರೆಯಾಗಿ ಸಾರ್ವಜನಿಕರ ಮತ್ತು ವಿಶೇಷವಾಗಿ ಎಲ್‍ಐಸಿಯ ಪ್ರಧಾನ ಪಾಲುದಾರರಾಗಿರುವ ಪಾಲಿಸಿದಾರರ ಹಿತಾಸಕ್ತಿಗಳನ್ನು ರಕ್ಷಿಸಲು ಐಆರ್‌ಡಿಎ ಯ ಕರ್ತವ್ಯಬದ್ಧವಾಗಿದೆ ಎಂದು ಹಣಕಾಸು ಸಚಿವಾಲಯಕ್ಕೆ ಜನತಾ ಆಯೋಗದ ಪರವಾಗಿ ಬರೆದಿರುವ ಈ ಪತ್ರ ನೆನಪಿಸಿದೆ.